ಕಂಚುಗಾರನಹಳ್ಳಿ ಸತೀಶ್ ಅವರ ಲಲಿತ ಪ್ರಬಂಧ”ತೆಂಗಿನಕಾಯಿಯ ಅಳಲು”

ಪ್ರಬಂಧ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

“ತೆಂಗಿನಕಾಯಿಯ ಅಳಲು”

ಒಮ್ಮೊಮ್ಮೆ ನೀವು ಬಹಳ ಗೌರವ ಕೊಟ್ಟು ಪೂಜಿಸುವ ಮತ್ತು ದಿಢೀರನೆ ನಿರ್ದಾಕ್ಷಿಣ್ಯವಾಗಿ ಒಡೆದು ನೋವುಂಟು ಮಾಡುವ ನಿಮ್ಮ ನೆಚ್ಚಿನ ತೆಂಗಿನಕಾಯಿ. ನನಗೆ ಕೆಲವೊಮ್ಮೆ ನಿಮ್ಮೊಂದಿಗಿನ ಒಡನಾಟ ಬಹಳ ಖುಷಿ ಕೊಟ್ಟರೆ, ಏಕಾಏಕಿ ಕನಿಕರವಿಲ್ಲದೆ ಒಡೆದಾಗ ತುಂಬಾ ದುಃಖವಾಗುತ್ತದೆ. ಹೌದು ನಾನು ಹೇಳುವುದು ಅಪ್ಪಟ ಸತ್ಯ. ಹಬ್ಬ ಹರಿದಿನಗಳಲ್ಲಿ ನನ್ನ ಚರ್ಮವನ್ನೆಲ್ಲ ಸುಲಿದು ಅರಿಶಿಣ-ಕುಂಕುಮ, ವಿಭೂತಿಗಳಿಂದ ಅಲಂಕರಿಸಿದಾಗ ನೋವನ್ನು ಲೆಕ್ಕಿಸದೆ ಸಂತೋಷಪಡುತ್ತೇನೆ. ಆದರೇನು ಮಾಡಲಿ? ದೇವರನ್ನು ಪೂಜಿಸುವ ನೆಪದಲ್ಲಿ ಮಂಗಳಾರತಿ ಮಾಡಿ ದಿಢೀರನೆ ಒಂದು ಗಟ್ಟಿ ಕಲ್ಲಿಗೆ ಜಜ್ಜಿ ಬಿಡುತ್ತಾರೆ. ಎರಡು ಭಾಗವಾಗಿ ನೋವು ತಾಳಲಾರದೆ ಸ್ಥಳದಲ್ಲೇ ಮೂತ್ರ ಮಾಡಿಕೊಂಡು ಬಿಡುತ್ತೇನೆ. ಅಷ್ಟಕ್ಕೆ ಸುಮ್ಮನಾಗದ ಮನುಷ್ಯರು ಒಂದಿಷ್ಟು ನೆಲದಲ್ಲಿ ಚೆಲ್ಲಿ ಹೋದರೂ ಬಿಡದೆ ನನ್ನನ್ನು ಎರಡು ಕೈಗಳಿಂದ ಮೇಲೆ ಎತ್ತಿ ಹೀರಿಕೊಂಡು ಬಿಡುತ್ತಾರೆ. ಮತ್ತೆ ಕೆಲವರು ಒಂದು ಪುಟ್ಟ ಲೋಟದಲ್ಲಿ ತುಂಬಿಸಿಕೊಂಡು ತೀರ್ಥದ ರೂಪದಲ್ಲಿ ಎಲ್ಲರಿಗೂ ಹಂಚಿಬಿಡುತ್ತಾರೆ.


ಇನ್ನು ಮನೆಗಳಲ್ಲೂ ಪ್ರತಿನಿತ್ಯ ಹೇಳತೀರದ ನರಕ ಯಾತನೆ. ದಿನವೂ ನನ್ನ ಮೈ ಚರ್ಮ ಸುಲಿದು ನನ್ನನ್ನು ಎರಡು ಭಾಗ ಮಾಡಿ ಅತ್ತು ಕಣ್ಣೀರು ಸುರಿಸಿದರೂ ಬಿಡದೆ ತುರೆಮಣಿಯಿಂದತುರಿದುಬಿಡುತ್ತಾರೆ. ಸಾಲದು ಎಂಬಂತೆ ಬಿಸಿ ಬಾಣಲೆಗಳಲ್ಲಿ ಈರುಳ್ಳಿ, ಮೆಣಸಿನಕಾಯಿ, ಕರಿಬೇವಿನ ಸೊಪ್ಪಿನ ಜೊತೆ ಹುರಿದುಬಿಡುತ್ತಾರೆ. ಮೊದಲೇ ಬಿಸಿ ಕಾವಿಗೆ ಸತ್ತ ನನ್ನ ದೇಹದ ಚೂರುಗಳನ್ನು ಕುದಿಯುವ ಸಾರಿಗೆ ಹಾಕಿ ರುಚಿಯಾದ ಅಡುಗೆ ಮಾಡಿ ಸವಿದುಬಿಡುತ್ತಾರೆ. ಈ ಹಿಂದೆ ಎಲ್ಲರೂ ನನ್ನನ್ನು ಒಳಕಲ್ಲಿನಿಂದ ಅರೆದು ಚಟ್ನಿ ಮಾಡುತ್ತಿದ್ದರು. ಆಗ ನೋಡಲಾದರೂ ನನ್ನ ದೇಹದ ತುಣುಕುಗಳು ಅಲ್ಪಸಲ್ಪ ಸಿಗುತ್ತಿದ್ದವು. ಈಗಂತೂ ಮಿಕ್ಸಿಯಲ್ಲಿ ಹಾಕಿ ಮುಚ್ಚಿ ರುಬ್ಬಿಬಿಡುತ್ತಾರೆ. ಕೇವಲ ಎರಡೇ ನಿಮಿಷಗಳಲ್ಲಿ ನನ್ನ ಗುರುತೇ ಸಿಗದಂತೆ ನಾಪತ್ತೆಯಾಗಿ ಬಿಡುತ್ತೇನೆ. ಅಷ್ಟೇ ಅಲ್ಲ ಮನುಷ್ಯನ ಸ್ವಾರ್ಥಕ್ಕಾಗಿ ಹರಕೆ ಹೊತ್ತು ಹರಕೆ ತೀರಿಸುವ ನೆಪದಲ್ಲಿ ನನ್ನನ್ನು ಚೀಲದಲ್ಲಿ ತುಂಬಿಕೊಂಡು ಬಂದು ಒಂದರ ಹಿಂದೆ ಒಂದರಂತೆ ದೇವಾಲಯದ ಮುಂದೆ ದೊಡ್ಡ ಹಾಸು ಕಲ್ಲಿಗೆ ಅಪ್ಪಳಿಸುವಂತೆ ಈಡುಗಾಯಿ ಒಡೆಯುತ್ತಾರೆ. ಹೊಡೆದ ರಭಸಕ್ಕೆ ನಾನು ಪುಡಿಪುಡಿಯಾಗಿ ರಕ್ತಸಿಕ್ತವಾಗಿ ಒದ್ದಾಡುತ್ತಿದ್ದರೂ, ನನ್ನನ್ನು ಆಯ್ದುಕೊಂಡು ತಿಂದು ಖುಷಿ ಪಡುತ್ತಾರೆ. ಇನ್ನೂ ಕೆಲವೊಮ್ಮೆ ರಾಜಕಾರಣಿಗಳು, ಪ್ರತಿಷ್ಠಿತ ವ್ಯಕ್ತಿಗಳು, ಶ್ರೀಮಂತರು ಯಾವುದೇ ಕೆಲಸದಲ್ಲಿ ಜಯಗಳಿಸಿದರೆ ಸಂಭ್ರಮಾಚರಣೆಯ ನೆಪದಲ್ಲಿ ಸಾವಿರಾರು ತೆಂಗಿನಕಾಯಿಗಳನ್ನು ತಂದು ಕ್ಷಣಾರ್ಧದಲ್ಲಿ ಚಚ್ಚಿ ಪುಡಿ ಮಾಡಿಬಿಡುತ್ತಾರೆ. ಇನ್ನು ಮದುವೆ ಸಮಾರಂಭ ಮತ್ತಿತರ ದೊಡ್ಡ ಕಾರ್ಯಕ್ರಮಗಳು ನಡೆದಾಗ ನನ್ನ ಮಾರಣಹೋಮವೇ ಆಗಿ ಬಿಡುತ್ತದೆ. ಅಲ್ಲೂ ನೂರಾರು ಬಾಣಸಿಗರು ಸಾವಿರಾರು ತೆಂಗಿನ ಕಾಯಿಗಳನ್ನು ಹೆಚ್ಚಿ ತುರಿದು ನನ್ನನ್ನು ಘಾಸಿಗೊಳಿಸುತ್ತಾರೆ. ಹಳ್ಳಿಗಳಲ್ಲಿ ರೈತರು ಸಾವಿರಾರು ತೆಂಗಿನಕಾಯಿಗಳನ್ನು ತಂದು ಅಟ್ಟದ ಮೇಲೆ ತುಂಬಿಸಿಟ್ಟು ವರ್ಷಾನುಗಟ್ಟಲೆ ಅನ್ನ ನೀರನ್ನು ಕೊಡದೆ ದೇಹವೇ ಬತ್ತಿ ಬೆಂಡಾಗುವಂತೆ ಮಾಡಿ ಕೊಬ್ಬರಿ ಮಾಡಿಬಿಡುತ್ತಾರೆ. ಒಣಗಿದ ಗಟ್ಟಿ ಕೊಬ್ಬರಿಯನ್ನು ಬಿಡದೆ ತುರಿದು ತರತರದ ಸಿಹಿತಿಂಡಿಗಳನ್ನು ಮಾಡಿಕೊಂಡು ತಿಂದುಬಿಡುತ್ತಾರೆ. ಒಣಗಿದ ಕೊಬ್ಬರಿಯನ್ನು ಗಾಣಕ್ಕೆ ಹಾಕಿ ಎಣ್ಣೆ ತಯಾರಿಸಿಕೊಂಡು ತಲೆಗೆ, ಮೈ ಕೈಗಳಿಗೆ ಹಚ್ಚಿಕೊಳ್ಳುತ್ತಾರೆ. ಅಡಿಗೆ ಮತ್ತು ದೀಪಗಳನ್ನು ಉರಿಸಲು ಇದೇ ಎಣ್ಣೆ ಬಳಸುತ್ತಾರೆ.

ಇಷ್ಟಾದರೂ ಸಾಲದು ಎಂಬಂತೆ ಅಳಿದುಳಿದ ಕೊಬ್ಬರಿ ಹಿಂಡಿಯನ್ನು ದನಕರುಗಳಿಗೆ ಹಾಕಿ ತೃಪ್ತಿ ಪಡುತ್ತಾರೆ. ಬಲಿತ ತೆಂಗಿನ ಕಾಯಿ ಹೇಗೋ ನಾನು ಸಹಿಸಿಕೊಂಡುಬಿಡುತ್ತೇನೆ. ಆದರೆ ಮನುಷ್ಯ ತೆಂಗಿನ ತೋಟಗಳಿಗೆ ನುಗ್ಗಿ ಆಗ ತಾನೆ ಎಳೆಯ ಮಗುವಿನಂತೆ ಬೆಳೆಯತೊಡಗಿದ ನನ್ನನ್ನು ಮರದಿಂದ ಕೆಲವರು ಹತ್ತಿ ಕೆಡುವಿದರೆ ಮತ್ತೆ ಕೆಲವರು ದೊಡ್ಡ ಬಿದಿರಿನ ಗಣಕ್ಕೆ ಚೂಪಾದ ಕುಡುಗೋಲನ್ನು ಕಟ್ಟಿಕೊಂಡು ಸರಕ್ಕನೆ ಎಳೆದುಬಿಡುತ್ತಾರೆ. ಕಣ್ಣೀರು ಸುರಿಸುತ್ತಾ ಮೇಲಿಂದ ಕೆಳಗೆ ಬಿದ್ದ ನಾನು ಭಯದಲ್ಲೇ ಮೂತ್ರ ಮಾಡಿಕೊಳ್ಳುತ್ತೇನೆ. ಆದರೂ ಬಿಡದೆ ಬಾಯಿಂದ ಕಚ್ಚಿ ಹೀರಿ ಕುಡಿದು ಬಿಡುತ್ತಾರೆ. ಸ್ವಲ್ಪ ಬಲಿತಿದ್ದರೆ ಹೇಗೋ ತಡೆದುಕೊಂಡು ಬಚಾವಾಗಿ ಬಿಡುತ್ತೇನೆ. ಇಷ್ಟಾದರೂ ಬಿಡದೆ ನನ್ನನ್ನು ಸಂತೆ ಬಜಾರಗಳಲ್ಲಿ 30, 40 ರೂಪಾಯಿಗಳಿಗೆ ಹರಾಜು ಹಾಕುತ್ತಾ ಬಂದ ಗಿರಾಕಿಗಳಿಗೆ ನನ್ನ ಕುಂಡಿಯನ್ನು ಕೆತ್ತುತ್ತ ಪಳಾರನೇ ಒಡೆದುಕೊಟ್ಟುಬಿಡುತ್ತಾರೆ. ಮತ್ತೆ ಕೆಲವರು ನನ್ನ ತಲೆಯ ತೂತುಕುಟ್ಟಿ ರಕ್ತ ಸೋರಿಸಿದ್ದು ಉಂಟು. ಇಷ್ಟೆಲ್ಲಾ ಆದರೂ ಕೊನೆಗೆ ನನ್ನ ಚರ್ಮವನ್ನು ಬಿಡದೆ ಒಣಗಿಸಿ, ನೀರು ಕಾಯಿಸುವ ಒಲೆಗೆ ತುಂಬಿ ಧಗಧಗ ಉರಿಸಿಬಿಡುತ್ತಾರೆ. ಇಷ್ಟೆಲ್ಲಾ ನೋವುಗಳ ನಡುವೆಯೂ ನಾನು ಬದುಕಿರುವಷ್ಟು ದಿನ ಸಂತೋಷದಿಂದ ಬದುಕಿ ನನ್ನನ್ನು ನಾನು ಪರರಿಗಾಗಿ ಸಮರ್ಪಿಸಿಕೊಳ್ಳುತ್ತಿದ್ದೇನೆ.

ಇಂತಿ ನಿಮ್ಮ ಪ್ರೀತಿಯ
ತೆಂಗಿನಕಾಯಿ


ಕಂಚುಗಾರನಹಳ್ಳಿ ಸತೀಶ್

Leave a Reply

Back To Top