ಕಾರ್ಮಿಕ ದಿನದ ವಿಶೇಷ-ಲೇಖನ

ನಾವು ಬಾಲ ಕಾರ್ಮಿಕರು.

 ಗೌರಿ.ಚಂದ್ರಕೇಸರಿ

ನಾವು ಬಾಲ ಕಾರ್ಮಿಕರು.

Say not to child labour – Mysuru Today

 ಹೌದು. ನಾವು ಕೂಲಿ ಮಾಡುವ ಮಕ್ಕಳು. ನಮ್ಮನ್ನು ಬಾಲ ಕಾರ್ಮಿಕರು ಎಂದು ಕರೆಯುತ್ತಾರೆ. ನಮ್ಮೆಲ್ಲರ ಕನಸುಗಳು ಹೆಚ್ಚೂ ಕಮ್ಮಿ ಒಂದೇ ತೆರನಾಗಿರುತ್ತವೆ. ಬೇರೆ ಬೇರೆ ಬಣ್ಣದ ಬಟ್ಟೆ ತೊಟ್ಟಿರುತ್ತವೆ. ಆದರೆ ಕನಸಿನ ಪರಿಧಿ ಭಿನ್ನ. ಅವು ಕೈಗೂಡಲಾರದ ಕನಸುಗಳೆಂದು ನಮಗೆ ಗೊತ್ತು. ಆದರೆ ಕನಸುಕಾಣಲು ಹಣವನ್ನೇನೂ ಕೊಡಬೇಕಿಲ್ಲವಲ್ಲ.ಸೈಕಲ್ ಶಾಪ್ ಒಂದರಲ್ಲಿ ಪಂಕ್ಚರ್ ಹಾಕುತ್ತ ನಾನೊಬ್ಬಸೈಕ್ಲಿಸ್ಟ್ ಆಗಬೇಕೆಂದೋ, ಹೋಟೆಲ್ ಒಂದರಲ್ಲಿ ಎಂಜಲುಹೊದ್ದು ಮಲಗಿದ ಟೇಬಲ್‌ನ್ನು ಶುಚಿಗೊಳಿಸುತ್ತ, ಗ್ರಾಹಕರ ಜೊತೆ ಬರುವ ಅವರ ಮಕ್ಕಳು ಮಾತನಾಡುವ ಇಂಗ್ಲೀಷನ್ನು ಮಾತನಾಡಲು ನನಗೂ ಬರುವಂತಿದ್ದರೆ? ಕಟ್ಟಡ ಕಟ್ಟುವಲ್ಲಿ ಇಟ್ಟಿಗೆಯನ್ನು ಹೊರುವ ತಲೆಯ ಮೇಲೆ ಹಾರುವ ವಿಮಾನವನ್ನುಕಂಡು ಆ ವಿಮಾನವನ್ನು ನಾನೇ ಓಡಿಸುವ ಕನಸು. ಆದರೆ ಮನೆಯ ಪರಿಸ್ಥಿತಿ ನಮ್ಮೆಲ್ಲ ಕನಸುಗಳಿಗೆ ಬರೆ ಹಾಕಿದೆ.ಅಪ್ಪನ ಬೇಜವಾಬ್ದಾರಿತನ, ಕುಡಿತ, ತಮ್ಮ ತಂಗಿಯರನ್ನು ನನ್ನ ಉಡಿಗೆ ಹಾಕಿ ಯಾರದೋ ಬೆನ್ನು ಹತ್ತಿ ಹೋದ ಅವ್ವ.ಸಿರಿವಂತರು ನೀಡಿದ ಋಣ ಭಾರ, ಅತಿವೃಷ್ಠಿ, ಅನಾವೃಷ್ಠಿಗಳುತಂದಿಟ್ಟ ಅನಾಹುತಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ

ನಮ್ಮ ದುಡಿಮೆಗೆ. ಇನ್ನೂ ತೀರದ ನಿದ್ದೆಯಲ್ಲಿಯೇ ಎದ್ದು, ಬರಿಮೈಗೆ ತೇಪೆ ಹಾಕಿದ ಅಂಗಿಯನ್ನು ಸಿಕ್ಕಿಸಿ, ಹಸಿದು ಚುರುಗುಟ್ಟುವ ಹೊಟ್ಟೆಯನ್ನು ಹೊತ್ತು ಕೆಲಸದ ದಾರಿಯನ್ನು ಸವೆಸಬೇಕು. ನಿತ್ಯ ಮಾಲೀಕರ ನಿಂದನೆಗೆ ಕಿವಿಯಾಗಬೇಕು.ಅವನ ಕ್ರೂರ ನೋಟವನ್ನು ಎದುರಿಸಿ ಮೈ ಎಲ್ಲಾ ಹಿಡಿಯಾಗಿಸಿಕೊಳ್ಳಬೇಕು. ಅಮ್ಮ ಅಕ್ಕಂದಿರನ್ನೆಲ್ಲ ಬೈಗುಳಗಳಲ್ಲಿ ಬಳಸಿಕೊಳ್ಳುವ ಇವರ ಬಗ್ಗೆ ಕುದಿ ಹತ್ತಿ ರಕ್ತ ಕಣ್ಣಿಗೆ ಬರುತ್ತದೆ.

ಇಲ್ಲಿ ಹೆಡೆ ಬಿಚ್ಚಿಕೊಳ್ಳುವ ಛಲದಿಂದಲೇ ನಮ್ಮಂತಹ ಮಕ್ಕಳು ತಮ್ಮ ಕನಸಿಗೆ ಜೀವ ಬರಿಸಿದ್ದಾರೆ. ಮೆತ್ತನೆಯ ಆಸನಗಳಲ್ಲಿ ಕುಳಿತು ತಮ್ಮ ಸಾಧನೆಗಳ ಹಿಂದೆ ಇರುವ ತಮ್ಮನ್ನು ತುಳಿದವರ ನೆನಪುಗಳನ್ನು ಮೆಲುಕು ಹಾಕುತ್ತಾರೆ.

 ಹೌದು. ಇಂದು ನಾವು ಬಾಲ ಕಾರ್ಮಿಕರಿರಬಹುದು.ಮುಂದೊಂದು ದಿನ ಆಳಿಸಿಕೊಂಡವರನ್ನೇ ನಾವು ಆಳಬಹುದು.ನಮಗೂ ಕೆಚ್ಚಿದೆ, ರೊಚ್ಚಿದೆ. ಮೂಗರಂತೆ ಸುಮ್ಮನಿದ್ದರ ಆಂತರ್ಯದಲ್ಲಿ ನಿಗಿ ನಿಗಿಸುವ ಜ್ವಾಲಾಗ್ನಿ ಇದೆ. ಅವಮಾನ, ಹಸಿವು,ಬಡತನಗಳನ್ನು ಹಾಸಿ ಹೊದ್ದವರೇ ಮುಂದೊಂದು ದಿನ ಮಥನಲ್ಲಿ ಹುಟ್ಟಿದ ಅಮೃತದಂತೆ ಮೇಲೇಳುತ್ತಾರೆ.

ಹೌದು ನಾವು ಬಾಲ ಕಾರ್ಮಿಕರು.

**********

One thought on “ಕಾರ್ಮಿಕ ದಿನದ ವಿಶೇಷ-ಲೇಖನ

  1. Good article, let it go ahead , indeed the day will arrive then your works start reflecting as a a boon and you will be recognised as a good thinker.May God bless you.

Leave a Reply

Back To Top