ಕಾವ್ಯ ಸಂಗಾತಿ
ಶೃತಿ ಮಧುಸೂಧನ್ ರುದ್ರಾಗ್ನಿ
“ದೊರೆಯ ಪ್ರೇಯಸಿ ಚೆಲುವೆಯ ಅಥವಾ ಕಲ್ಪನೆಯ…?”
ಮತಿಗೆಟ್ಟ ಆಸೆಗಳೇ ಹಾಗೆ
ಹುಚ್ಚಿನ ಪರಮಾವಧಿ
ಜೀಕುವ ನೆನಪಿನ ಉಯ್ಯಾಲೆಯ
ಕಾವ್ಯ ಕಲ್ಪನೆಯ ಹಾವಳಿ.
ಕೊಟ್ಟು ಕೊಡುವ ಆಟವೇ ಅಲ್ಲಿಲ್ಲ .
ಕೇವಲ ಬಿಟ್ಟುಕೊಡುವ ವಿಷಾದನೀಯ .
ನಿನ್ನದಲ್ಲದ ಪ್ರೀತಿಗೆ ರುಜು ಹಾಕಿ,
ಎತ್ತಿಟ್ಟಿರುವ ಕಡತಕ್ಕೆ ಇಂದು ಮುಕ್ತಿ.
ದೀವಾಳಿ ಆಗುವ ಕ್ಷಣಕ್ಕೆ ಹೂತು ಬಿಡು.
ನಿನ್ನಲ್ಲೇ ಸಾವು . ನಿನ್ನಲ್ಲೇ ಹುಟ್ಟು.
ಗತಿಗೆಟ್ಟವನ ಶ್ರೀಮಂತಿಕೆ
ಹೃದಯದ ಅರಸಿ ಅವಳು
ಕೊಟ್ಟುಕೊಡುವಿಕೆ ಇರದ
ಪರಿಶುದ್ದ ಪ್ರೇಮಕ್ಕೆ ಖಾಲಿ ಭೇಟಿ.
ಏಕಾಂತವೇ ಸವಿ.
ಪ್ರೀತಿ ನನ್ನ ಗಹನದ ನಿಶಬ್ದ ಏಕಾಂತದಲ್ಲಿ
ಹಾರಿ ಬರುವ ನೆನಪು
ಕಾಡಿ ಬೆಂಡಾಗಿಸುವ
ಮುನ್ನ ಒಂಟಿ ಪಯಣಕ್ಕೆ ಪೂರ್ಣವಿರಾಮ
ಒಣಗಿದ ಗಂಟಲಿಗೆ ತುಸು ಕವಿತೆ ಸಾಲು ಶರಬತ್ತು ಬೇಕಿತ್ತು.
ಸಂಚಿಯ ಮೂಲೆಯಲ್ಲಿ
ಆರು ಕಾಸಿತ್ತು
ಮೂರು ಬಟ್ಟಲು ಮಧುಗೆ ಸಾಕಾಗುತಿತ್ತು.
ದೂರದಲಿ ದೊರೆ ನೆರಳು
ನನ್ನಂತಹ ಬಿಕ್ಷುಕಿ ಮೇಲೆ ಇಣುಕಿತ್ತು…..!
ನೂಪುರದ ಬಿಡಿಗೆಜ್ಜೆ
ಲೊಳಕ್ಕೆನ್ನುತ ಬಿತ್ತು
ಮಧು ಬಟ್ಟಲೊಳಗೆ.
“ಮೊದಲನೇ ಜಾವಕ್ಕೆ
ಗೆಜ್ಜೆ ತೋರಿಸಿದಳು
ಕವಿತೆ ಅವಳು.
ಜೋಡಿ ಹಕ್ಕಿಯ ಹಾಗೆ ಅದ್ಭುತ ಮೌನ ಸಂಗಮ …..!
ಸಾವಿರ ಹೆಣ್ಣುಗಳು
ಅಸೂಯೇ ಪಡುವ
ಮುದ್ದು ಮನಸಿನ ಹೆಣ್ಣು ಅವಳು.
ಸರಿ ಕಾಣದು ಅಂದದ ಪ್ರತಿಮೆ
ಚಿತ್ರಿಸಿದ ದೊರೆಗೆ
ಬಿಗುಮಾನ ಎಂದಿಗೂ .
ಮನಸು ಹಾಡುವ ಸುಂದರ
ಸ್ವರಧಾರೆ.
ನಿನ್ನ ಕಂಡ
ನವಿಲು ನಿಂತಲೇ ಕುಣಿಯುವಷ್ಟು
ಕವಿಯ ಕಲ್ಪನೆಗೂ ಸಿಗದ
ಕುಸುಮ ಬಾಲೆ.
ಬೀಸೋ ಗಾಳಿಯನ್ನು
ನೊಟದಲ್ಲೆ ಕಟ್ಟಿಹಾಕಿ
ಮುದ್ದಿಸುವ ಚೆಲುವೇ
ಸಾಹಿತಿ ಚೆಲುವನ ಆ ಚೆಲುವೆ ಬಿಕಾರಿಯ ಸಾಲುಗಳಲ್ಲಿ
ಇದ್ದವಳೆಂಬ ನೋವು ಕಾಡಿದೆ.
ಕಾಡಿದ ನೋವಿಗೆ
ತನ್ನಲ್ಲಿದ್ದ ಬಂಗಾರ ಬಳೆದರೂ
ಲೋಕ ಒಪ್ಪದ್ದು
ಪ್ರೇಮ ಪುರಾಣ.
ಕವಿ ಕೂತಿದ್ದಾನೆ ಈಗ
ಶೂನ್ಯಭಾವದಲಿ
ಖಾಲಿ ಅಂಗೈಗಳ ಕಾಣುತ್ತಾ
ಸುಮ್ಮನೆ ಬಯಲಲಿ
ಕವಿಯ ಮೌನ
ಸಾವಿರ ಕವಿತೆಗಳ ಬರೆಯಿತಾದರೂ
ಅರ್ಥಮಾಡಿಕೊಂಡಿದ್ದು ಕವಿತೆಯ ಬಾವಕ್ಕೆ ಇಳಿದವರೇ
ಶರೀರದರಿವೆಯ ಕಳಚಿ
ಸರ್ವಸ್ವತಂತ್ರನಾಗಿ
ಕವಿ ನಕ್ಕು ನುಡಿದ
ಸುಳ್ಳು ಕಲ್ಪನೆ
ದೊರೆಯ ಚೆಲುವೆ
ಕವಿತೆ ನಕ್ಕು ನುಡಿದಳು
ಕವಿತೆ ಸುಳ್ಳಾಗಲಿಲ್ಲ…….
ಶೃತಿ ಮಧುಸೂಧನ್ ರುದ್ರಾಗ್ನಿ.
ತುಂಬಾ ಸುಂದರ ಕವನ ಶೃತಿ
❤️❤️❤️
ಚೆಂದದ ಭಾವನಾತ್ಮಕವಾದ ಸಾಲುಗಳು