ಮೀನಾಕ್ಷಿ, ಸೂಡಿ-ಕನ್ನಡಾಂಬೆಯ ಅಂತರಾಳ

ಕಾವ್ಯ ಸಂಗಾತಿ

ಮೀನಾಕ್ಷಿ, ಸೂಡಿ-

ಕನ್ನಡಾಂಬೆಯ ಅಂತರಾಳ

ನಾನು ಕನ್ನಡದ ಅವ್ವ ಮಾತಾಡಕತ್ತೀನಿ

ನನ್ನ ಮಡಿಲ ಕೂಸುಗಳಿರಾ,
ಎತ್ತ ಹೊಂಟೀರಿ ಸ್ವಲ್ಪ ನಿಲ್ರಿ ನಿಂತ ಕೇಳ್ರಿ
ನಿಮ್ಮವ್ವನ ಒಡಲಾಳದ ಸಂಕಟಾನ
ಶತ ಶತಮಾನಗಳಿಂದಲೂ
ಬಂಗಾರದ ಬಿಂದಿಗೆ ಹಿಡಿದು
ಬಿಂಕದಲಿ ಬದುಕಿದಾಕಿ ನಾ
ನನ್ನ ನೆಲ, ನನ್ನ ಜಲ,
ನನ್ನ ಜನ ,ನನ್ನ ಮನ ಅಂತ
ಬಂಗಾರದಂತ ಬದುಕನ್ನ ಕಟಗೊಂಡಾಕಿ
ನಾ ಜ್ಞಾನಪೀಠಗಳೆಂಬ ಅಷ್ಟ ವಜ್ರಗಳ
ಮೂಗಬಟ್ಟ ಇಟಗೊಂಡ ಮೆರದಾಕಿ ನಾ
ಹಂಚಿ ಹರಿದ ಸೀರೆ ಬಿಡಿಸಿ
ಏಕೀಕರಣದ ರೇಷ್ಮಿ ಉಡಿಸಿ
ಶ್ರೀಗಂಧದ ಬಟ್ಟ ಇಟ್ಟಂತಾ
ಶ್ಯಾನ್ಯಾ ಮಕ್ಕಳನ ಪಡೆದಾಕಿ ನಾ

ಎಲ್ಲಿ ಹ್ವಾದವು ಆ ಬಂಗಾರದಂತ
ದಿನಗೊಳು???
ಕೇಳ್ರಿ ಮಕ್ಕಳಿರಾ ಒಂತಟಗ ನನ್ನ ಸಂಕಟಾನ ನಾನು ನಿಮ್ಮವ್ವ ಕನ್ನಡದ ಅವ್ವ
ಮೌನವಾಗಿ ಬಿಕ್ಕಾಕತ್ತಿನಿ
ತಮಿಳು ತೆಲುಗು ಮರಾಠಿ ಆಂಗ್ಲ
ಈ ಸವತ್ಯಾರು ಸದ್ದಿಲ್ಲದ
ನನಗ ಗೋರಿ ಕಟ್ಯಾರು
ಇನ್ನೂ ಕಟ್ಟಾಕತ್ಯಾರು!!!

ಇವರ ದರ್ಪದ ಬೆಂಕಿ
ಉಡ್ಯಾಗ ಕಟಗೊಂಡ
ದಿನಕ್ಕ ದಿನಾ ನಾ
ಸಾಯಾಕತ್ತೆನು !

ನನ್ನ ಕರುಳಿನ ಕುಡಿಗಳಿರಾ
ಒಂದ ನೆಪ್ಪ ಇಡ್ರಿ
ನೂರ ನದಿ ಕೂಡಿ ಹರದರೂ
ಅದಕ್ಕ ಸಮುದ್ರ ಅನ್ನುದಿಲ್ಲ
ಸಾವಿರ ಸವತ್ಯಾರ ಕೂಡಿ ನಿಂತ್ರು
ಹಡೆದವ್ವನ ಸಮ ಯಾರಿಲ್ಲ !

ನನ್ನ ಮಡಿಲ ಮಕ್ಕಳಿರಾ
ಆಂಗ್ಲ ಆಂಟಿ ಅಬ್ಬರದಾಗ
ನನ್ನ ಮರತರ ಹ್ಯಾಂಗ???
ಇಂಗ್ಲೀಷ್ ಎಂಬ ಬಿಸಿಲ್ಗುದರಿ ಬೆನ್ನೇರಿ
ನನ್ನ ಮೂಲಿ ಸೇರಿಸಿ ಮೆರದರ ಹೆಂಗ
ಬರ್ರಿ ಎಲ್ಲಾರೂ
ನನ್ನ ಒಡಲ ಅಗ್ನಿಗೆ ನಿಮ್ಮರುವಿನ
ಎಣ್ಣೆ ಏರಿಯುತ
ಸ್ವಾಭಿಮಾನದ ದೀಪ ಹಚ್ಚೋನು
ಜಗಕೆಲ್ಲ ಕನ್ನಡದ ಹಿರಿಮೆ ಸಾರುತಾ

ಬರ್ರಿಬರ್ರೀ ಎಲ್ಲಾರೂ
ಸೊಕ್ಕಿನ ಸವತ್ಯಾರ ಹೆಡಮುರಗಿ ಕಟ್ಟಿ ನಿಮ್ಮವ್ವನ ಬಂಗಾರದ ತೆರ ಏರಸಾಕ
ಮುಗಿಲು ಮುಟ್ಟೋ ಕೂಗಿನ್ಯಾಗ
ಕನ್ನಡದ ದೀಪ ತೇಲಿ ಬಿಡಾಕ

ಒಂದಾಗಿ ಚಂದಾಗಿ ಮುಂದಾಗಿ ಬರ್ರಿ
ನಾ ನಿಮ್ಮವ್ವ ಕನ್ನಡದ
ಅವ್ವ ಕರಿಯಾಕತ್ತೀನಿ
ನೀವು ಒಟ್ಟಾಗಿ ಬರೋ
ದಾರಿನ ಕಾಯಾಕತ್ತೇನೆ..


ಮೀನಾಕ್ಷಿ ಸೂಡಿ

Leave a Reply

Back To Top