ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ

ಕಾವಲಿಯಿಂದ_ಕೆಂಡಕ್ಕೆ

ಲಕ್ಷ್ಮಿಕಾಂತಮಿರಜಕರ

ಕಾವಲಿಯಿಂದ_ಕೆಂಡಕ್ಕೆ

Indians Clap, Ring Bells to Cheer Emergency Workers During ...

ಚರಂಡಿ ಬದಿಯ ಮುರುಕಲು ಶೆಡ್ ಗಳಲ್ಲಿ
ಸಹಿಸುತ್ತ ಕಚ್ಚುವ ಸೊಳ್ಳೆಗಳ ನೋವು
ನಾಳೆಯೂ ಕೆಲಸಕ್ಕೆ ಹೋಗದಿದ್ದರೆ
ಹೊಟ್ಟೆಗೇನೂ ಸಬೂಬು ಹೇಳುವುದೆಂದು
ಚಿಂತಾಮಗ್ನದಲ್ಲಿ ನಾವಿರುವಾಗ
ನೀವಾಗಲೇ ಚಪ್ಪಾಳೆ ತಟ್ಟುವ
ಸಂತೋಷದಲ್ಲಿ ಮೈಮರೆತು ಮೀಯುತ್ತಿದ್ದಿರಿ
ನಿಮ್ಮ ನಿಮ್ಮ ಅರಮನೆಗಳ
ಬಾಲ್ಕನಿಗಳಲ್ಲಿ ನಿಂತು

ನಿಮ್ಮ ಚಪ್ಪಾಳೆಯ ಲಯಬದ್ಧ ಸದ್ದಿಗೆ
ಸಮವಲ್ಲ ಬಿಡಿ
ನಮ್ಮ ಹಸಿದ ಹೊಟ್ಟೆಗಳ ತಾಳ

ತಿಂಗಳಪೂರ್ತಿ ಸಾಕಾಗುವಷ್ಟು
ದಿನಸಿಗೋದಾಮು ಪೇರಿಸಿಡಲು ನೀವು
ನಗುತ್ತಲೇ ಹೆಣಗಾಡುತ್ತಿದ್ದ ಸಮಯದಲ್ಲಿ
ನಮ್ಮ ಬದುಕು ಪೇರಿಕಿತ್ತಿತ್ತು
ಬಿಸಿಲಿಗೆ ಕಾದು ಬೆಂಕಿಯಾಗಿದ್ದ ರಸ್ತೆ ಮೇಲೆ

ಹೊತ್ತು ತಲೆಮೇಲೊಂದು
ಕೈಯಲ್ಲೊಂದು ಗಂಟುಮೂಟೆ
ಸೋತಕಾಲುಗಳಿಗೆ ಸಾಂತ್ವನ ಹೇಳುತ್ತ
ಭಾರವಾದ ಹೆಜ್ಜೆಗಳನ್ನು ಕಿತ್ತಿಡುತ್ತ
ಹಲ್ಲಿಯ ಬಾಯಿಯ ಸಿಕ್ಕಿ ಬಿದ್ದಿದ್ದ ಕೀಟದಂತೆ

ತಲೆಮೇಲಿಂದ ಆಗಷ್ಟೇ ಹಾರಿಹೋಗಿತ್ತು
ದೂರದೇಶಗಳಿಂದ ರಾಜರಾಣಿಯರನ್ನು
ಹೊತ್ತು ತಂದಿದ್ದ ವಿಶೇಷ ವಿಮಾನ
ನಮ್ಮ ಬರಿಗಾಲುಗಳ ಮೆರವಣಿಗೆಯನ್ನು
ಅಣುಕಿಸುತ್ತ

ಇಡಿ ದೇಶಕ್ಕೆ ದೇಶವೇ
ಮನೆ ಮುಂದೆ ದೀಪ ಬೆಳಗಿಸಿ
ಸೆಲ್ಫಿ ತೆಗೆಸಿಕೊಳ್ಳುವ ಸಂಭ್ರಮದ ಮುಂದೆ
ಹಸಿವಿನಿಂದ ರಸ್ತೆಬದಿಯಲ್ಲಿ ನಂದಿಹೋದ
ಎಷ್ಟೋ ಬಡಜ್ಯೋತಿಗಳ ಪ್ರಾಣ ಯಾರಿಗೂ
ಮಹತ್ವವೆನಿಸಲೇ ಇಲ್ಲ

ಬೆನ್ನಿಗಂಟಿದ ಬಡತನದ ಶಾಪಕ್ಕೆ
ಉಳ್ಳವರ ದೌರ್ಜನ್ಯ, ಅತ್ಯಾಚಾರದ ಕಾಟಕ್ಕೆ
ಜಾತಿ ಶೋಷಣೆಯ ಅವಮಾನಕ್ಕೆ
ಬೇಸತ್ತು
ನಗರಕ್ಕೆ ಗುಳೆ ಬಂದಿದ್ದು ನಮ್ಮದೇ ತಪ್ಪು

ಪುರಾತನ ಕಾಲದಿಂದಲೇ
ನಮ್ಮಿಂದ ಅಂತರ ಕಾಪಾಡಿಕೊಂಡೇ ಬದುಕಿದ್ದ
ದೇವಾನುದೇವತೆಗಳ ಮಕ್ಕಳು ನೀವು
ಅಗೋಚರ ವೈರಾಣು ಕೃಪೆಯಿಂದ
ನಮ್ಮ ನಡುವಿನ ಅಂತರಕ್ಕೆ ಈಗಂತೂ
ಅಜಗಜಾಂತರ ವ್ಯತ್ಯಾಸ

ನಿಮಗಷ್ಟೇ ಸಿಗಲಿ ಚಂದಿರನೂರಿನ ದಾರಿ
ಜೊತೆಗೆ ಹರುಷ,ಸಂತೃಪ್ತಿ
ಖುಷಿ,ಸುಗ್ಗಿ,ಸುಖದ ಸಂತೆಯೂ
ನಮ್ಮೂರಿನ ಬತ್ತಿದ ಹೊಳೆಬದಿಯ
ಮುಳ್ಳು ಕಂಟಿಗಳ ಜಾಗವೇ ನಮಗಿರಲಿ
ಇದ್ದೇಇರುತ್ತವೆ ಜೊತೆಗೆ ಬೇಡವೆಂದರೂ
ಕಷ್ಟ,ದುಃಖ, ನಿರಾಸೆ
ನಿಲ್ಲದ ನಿಟ್ಟುಸಿರು,ಬಿಕ್ಕಳಿಕೆಯೂ

ನಮಗೀಗ ಖಾತರಿಯಾಗಿದೆ
ಬಡವರ ಬದುಕು
ಕಾವಲಿಯಿಂದ ಕೆಂಡಕ್ಕೆ ಬಿದ್ದಿರುವುದು

********

Leave a Reply

Back To Top