ವಿದ್ಯಾಶ್ರೀ ಅಡೂರ್ ಅವರ ಕವಿತೆ ‘ಅಂದುಕೊಂಡಂತೆ ಸಾಗದ ಮೋಡಿಗಾರ ಬದುಕು..’

ಕಾವ್ಯ ಸಂಗಾತಿ

ವಿದ್ಯಾಶ್ರೀ ಅಡೂರ್

‘ಅಂದುಕೊಂಡಂತೆ ಸಾಗದ ಮೋಡಿಗಾರ ಬದುಕು..’

ಅಂದುಕೊಂಡಂತೆ ನನಸಾಗುವುದಿಲ್ಲ ಕನಸುಗಳು….
ಇನ್ನೇನೇನೋ ಆಗುವವು,ಹಾದಿ ಸಾಗಿದಂತೆ.. ಗಾದಿ ಮಾಗಿದಂತೆ..
ಚಕ್ಕಡಿಗೆ ಕಟ್ಟಿದ ಹೋರಿ ಬೇಕಾದ ಕಡೆ ಹೋಗದಿದ್ದಾಗ
ಅದು ಹೋದ ಕಡೆಗೇ ಚಕ್ಕಡಿಯೂ ಸಾಗಿದಂತೆ..

ಕನಸುಗಳು ಅವಶ್ಯ,ನನಸ ಭ್ರಾoತಿಗಲ್ಲ..ಮನಸ ಜೀವಂತಿಕೆಗೆ..
ವಯಸು ಕೂಡುತ್ತಲೇ ಕಳೆಯುತ್ತ ಹೋಗುವ ಆಯಸ್ಸಿನ ಲವಲವಿಕೆಗೆ..
ಮರಮರಳಿ ಸತ್ತು ಹುಟ್ಟುವ ನಿರ್ದಯಿ ಬದುಕಿನಲಿ
ಗಂಟಲ ಪಸೆ, ಕಣ್ಣಿನ ನಸೆ ಆರದೇ ಇರುವ ಮೋಡಿಗೆ..

ಅಂದುಕೊಂಡಂತೆ ಎಲ್ಲವೂ ಆದರೆ ವಿಧಿಗೇನು ಕಿಮ್ಮತ್ತು??
ಸುಖದ ನಟನೆಯ ಜೊತೆಗೆ ನಗುವಿನದೊಂದು ಮುಖವಾಡ ಇರದಿರೆ??
ಗತ್ತು ಶರಣಾಗಿ, ಮತ್ತು ಹೈರಾಣಾಗಿ, ಕಣ್ಣೊಳಗಿನ ಜಾತ್ರೆಗಳ
ಕನಲುವಿಕೆಯೊಂದು ನೋವ ಬೆಚ್ಚಗಿನ ನಿಟ್ಟುಸಿರಾಗಿ ಬಾರದಿರೆ??


ವಿದ್ಯಾಶ್ರೀ ಅಡೂರ್

Leave a Reply

Back To Top