ವಿಶೇಷ ಲೇಖನ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮೊಬೈಲ್ ನೊಂದಿಗೆ ನನ್ನ
ಜೀವನದ ಬದಲಾವಣೆ..
ಒಂದು ಕಾಲವಿತ್ತು. ಜನ ಸಂಪರ್ಕ ಸಾಧಿಸಬೇಕೆಂದರೆ ಸಾಕಷ್ಟು ಪರಿಶ್ರಮಪಡಬೇಕಾಗಿತ್ತು. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವುದಾಗಲಿ, ಒಬ್ಬರು ಇನ್ನೊಬ್ಬರನ್ನು ಸಂಪರ್ಕಿಸುವುದಾಗಲಿ ಮಾಡಬೇಕಾದರೆ, ಕೆಲವು ಸಲ ದಿವಸಗಳು, ವಾರಗಳಾಗುತ್ತಿದ್ದವು. ಅದು ಪತ್ರಗಳ ಮೂಲಕ ಅಥವಾ ಹೇಳಿ ಕಳಿಸುವುದರ ಮೂಲಕ ವಿಷಯವನ್ನು ಮುಟ್ಟಿಸುತ್ತಿದ್ದೆವು.
ಬರು ಬರುತ್ತಾ ಸಂಪರ್ಕ ಕ್ರಾಂತಿ ಹೆಚ್ಚಿಸಿದಂತೆ ಸಂಶೋಧನಾ ಕ್ಷೇತ್ರದಲ್ಲಿ ದೂರವಾಣಿ, ಪೇಜರ್, ಹಾಗೂ ಹೊಸ ಆವಿಷ್ಕಾರವಾದ ಆಂಡ್ರಾಯ್ಡ್ ಮೊಬೈಲ್ ತನ್ನ ಸಂಪರ್ಕದ ವಿಸ್ತಾರತೆಯನ್ನು ಹೆಚ್ಚಿಸಿಕೊಂಡು ವಿಶ್ವವನ್ನು ಅಂಗೈಯಲ್ಲಿ ಇರುವಂತೆ ಮಾಡಿದೆ. ಆಂಡ್ರಾಯ್ಡ್ ಮೊಬೈಲ್ ಅಂದಾಕ್ಷಣ ಬಗೆ ಬಗೆಯ ಪಿಚ್ಚರ್ ಗಳು, ಸುದ್ದಿಗಳು, ಮ್ಯಾಗಜಿನ್ ಗಳು, ಚಾನಲ್ ಗಳು, ಹತ್ತು ಹಲವು ಬಗೆಯ ವಿವಿಧ ವೈವಿಧ್ಯಮಯವಾದ ಸರಕುಗಳನ್ನು ಕೆಲವೇ ಕ್ಷಣಗಳಲ್ಲಿ ನಮ್ಮ ಅಂಗೈಗೆ ತೆಗೆದುಕೊಂಡು ಬಂದು ಬಿಡುತ್ತದೆ.
ನಾನು ಮೊದಲು ಕವಿತೆಗಳನ್ನು ಬರೆಯುವುದು, ಅವುಗಳನ್ನು ಕೈಗೊಷ್ಠಿಯಲ್ಲಿ ಓದುವುದು, ಸಾಹಿತ್ಯದ ವಿವಿಧ ಮಜಲುಗಳನ್ನು, ಪೆನ್ನು ಬಳಸಿಕೊಂಡು ಬರೆಯುತ್ತಿದ್ದೆ. ನಂತರ ಅದನ್ನು ಯಾರಿಗೋ ಕೊಟ್ಟು ಟೈಪಿಸಿ, ಪುಸ್ತಕ ರೂಪಕ್ಕೆ ತರಲು ಪ್ರಯತ್ನಿಸುತಿದ್ದೆವೆ.
ಆದರೆ ಇವತ್ತು ಅಂತಹ ಪರಿಶ್ರಮ ಇಲ್ಲವೇ ಇಲ್ಲ..!!
ಇಂದು ಆಂಡ್ರಾಯ್ಡ್ ಮೊಬೈಲ್ ನನ್ನ ಬದುಕಿನಲ್ಲಿ ಧನಾತ್ಮಕವಾದ ಬದಲಾವಣೆಗಳನ್ನು ತಂದಿದೆ. ನನ್ನ ಲೇಖನಗಳಾಗಲಿ, ಅಂಕಣ ಬರಹಗಳಾಗಲಿ, ಕವಿತೆಗಳನ್ನಾಗಲಿ ನೇರವಾಗಿ ಮೊಬೈಲ್ ಮೂಲಕ ಟೈಪಿಸಿ ನಂತರ ಅದನ್ನು ಲ್ಯಾಪ್ಟಾಪ್ ಗೆ ಹಾಕಿಕೊಂಡು ಲೇಖನವನ್ನು ಸಿದ್ಧ ಮಾಡಿ ವಿವಿಧ ಪತ್ರಿಕೆಗಳಿಗೆ ಕಳಿಸುವುದು ಸಾಮಾನ್ಯವಾಗಿದೆ.
ತಾಸುಗಟ್ಟಲೆ ಕುಳಿತುಕೊಂಡು ಲೇಖನಗಳನ್ನು ಬರೆಯುತ್ತಾ, ಬರೆಯುತ್ತಾ ಸಮಯ ವ್ಯರ್ಥವಾಗುತ್ತಿತ್ತು. ಬರೆದಿದ್ದನ್ನು ಮತ್ತೆ ಪುನಃ ಅದನ್ನು ಟೈಪಿಸಿ ನಂತರ ಅದನ್ನು ತಿದ್ದುಪಡಿ ಮಾಡಿ ಹೈರಾಣಾಗುವ ಕಾಲವೊಂದಿತ್ತು. ಆದರೆ ಇಂದು ಆಂಡ್ರಾಯ್ಡ್ ಮೊಬೈಲ್ ಗಳಿಂದನಮಗೆ ಸಾಕಷ್ಟು ಸೌಲಭ್ಯಗಳು ಸಿಕ್ಕಿವೆ.
ನನ್ನ ಬಹುತೇಕ ಪುಸ್ತಕಗಳು ಆಂಡ್ರಾಯ್ಡ್ ಮೊಬೈಲ್ ಮೂಲಕ ಟೈಪ್ಸಿದ ಅಕ್ಷರಗಳೇ ಆಗಿವೆ. ಒಂದೊಂದು ಅಕ್ಷರಗಳು ಮುತ್ತಿನಂತೆ ಅಚ್ಚೋತ್ತಿವೆ. ಆಗ ನನಗೆ ಖುಷಿಯೋ ಖುಷಿ.
ನಮ್ಮ ಸಮಾಜದಲ್ಲಿ ಬದುಕಿನಲ್ಲಿ ಅನೇಕ ಸಲ ಬೇರೆ ಬೇರೆ ಒತ್ತಡಗಳಲ್ಲಿ ಮುಳುಗಿದಾಗ, ಈ ಮೊಬೈಲ್ ನಮ್ಮ ಕೈ ಹಿಡಿದು, ಮುನ್ನಡೆಸಿದೆ. ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದು ನನ್ನ ಹವ್ಯಾಸ. ‘ಸಂಗಾತಿ’ ಪತ್ರಿಕೆಗೆ ಪ್ರತಿಸಲ ವಾರಕ್ಕೊಂದು ‘ಒಲವಧಾರೆ’ ಅಂಕಣ ಬರೆಯುತ್ತಿದ್ದೇನೆ. ಇದಕ್ಕೆಲ್ಲ ಮುಖ್ಯ ಕಾರಣ ನನ್ನ ಅನುಭವ, ಅಧ್ಯಯನದ ಜೊತೆ ಜೊತೆಗೆ ಎಂತಹ ಒತ್ತಡದ ಕೆಲಸವಿದ್ದರೂ ಆಂಡ್ರಾಯ್ಡ್ ಮೊಬೈಲ್ ನನಗೆ ಸಹಾಯ ಮಾಡಿ ಅಲ್ಲಿಯೇ ಲೇಖನವನ್ನು ಬರೆಯಿಸಿ ಬಿಡುತ್ತದೆ. ಬರೆದಿದ್ದನ್ನು ಹಾಗೆಯೇ ತಿದ್ದುಪಡಿ, ಮಾಡುತ್ತಾ ಸಂಪಾದಕರಿಗೆ ಕಳಿಸಿದಾಗ ಎಂತಹದೋ ಒಂದು ನಿಟ್ಟುಸಿರಿನ ಉತ್ಸಾಹ…!! ಒಂದು ಕಾಲಮಿತಿಯಲ್ಲಿ ಇಂತಹದೇ ಬರಹವನ್ನು ಬರೆಯಬೇಕೆಂದು ನಾವು ಅಂದುಕೊಂಡಾಗ, ನಮಗೆ ಸಹಾಯಕ್ಕೆ ಬರುವ ಮುಖ್ಯ ಪರಿಕರವೆಂದರೆ ಆಂಡ್ರಾಯ್ಡ್ ಮೊಬೈಲ್..!!
ಇದು ಸಾಹಿತ್ಯಕ್ಕೆ ಸಹಾಯಕವಾದ ಧನಾತ್ಮಕ ಅಂಶವಾದರೆ, ಇನ್ನೂ ವಿವಿಧ ಪ್ರದೇಶಗಳಲ್ಲಿ ಹಂಚಿಹೋದ ಗೆಳೆಯರನ್ನ ನಮ್ಮ ಸಂಪರ್ಕಕ್ಕೆ ತರುವ ಬಹುದೊಡ್ಡ ಕೆಲಸ ಮಾಡುವ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ , ಟ್ವಿಟರ್ ಗಳಾಗಿವೆ.
ಅಲ್ಲದೇ ಇವು ವಿವಿಧ ಸಾಹಿತ್ಯದ ವಲಯಗಳ ಗೆಳೆಯರನ್ನ ಹತ್ತಿರ ತರಿಸಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಂತೂ ಕವಿಗೋಷ್ಠಿ , ಪುಸ್ತಕ ಚರ್ಚೆ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನನ್ನ ಸಾಹಿತ್ಯದ ಬದುಕಿಗೆ ಧನಾತ್ಮಕವಾದ ಬದಲಾವಣೆಯಾಗಿದೆ ಎಂದು ಕರೆಯಬಹುದು.
ನನ್ನ ವೃತ್ತಿ ಅಧ್ಯಾಪಕ ವೃತ್ತಿ. ನನ್ನ ಅಧ್ಯಾಪಕ ವೃತ್ತಿಯಲ್ಲಿ ನನ್ನ ವಿದ್ಯಾರ್ಥಿ ಮಕ್ಕಳಿಗೆ ಬೋಧಿಸುವ ಸಂದರ್ಭದಲ್ಲಿ ಅನೇಕ ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸುತ್ತೇವೆ. ಭಾಷಾ ವಿಷಯಗಳಾಗಿರಬಹುದು, ಕೋರ್ ವಿಷಯಗಳಾಗಿರಬಹುದು ಅವುಗಳ ವಿಶ್ಲೇಷಣೆಗೆ ಆಂಡ್ರಾಯ್ಡ್ ಮೊಬೈಲ್ ಸಹಾಯ ಮಾಡುತ್ತದೆ. ಗೂಗಲ್ ಮೂಲಕ ಕೆಲವೇ ಕ್ಷಣಗಳಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಈ ಮೊಬೈಲ್ ಒದಗಿಸುತ್ತಿರುವುದು ನಮಗೆ ಧನಾತ್ಮಕವಾದ ಅಂಶವಾಗಿದೆ. ಉದಾಹರಣೆಗಳು, ದೃಷ್ಟಾಂತಗಳು , ಸೂತ್ರಗಳು, ಘಟನೆಗಳು, ವ್ಯಕ್ತಿ ಚಿತ್ರಗಳು, ಹಾಗೂ ಪಾಠಕ್ಕೆ ಸಂಬಂಧಿಸಿದಂತಹ ರಚನಾತ್ಮಕ ವಿಡಿಯೋಗಳು, ಹಾಡುಗಳು, ಕಥೆಗಳು…ಇವು ಮಕ್ಕಳ ಬೋಧನೆಗೆ ಪೂರಕವಾಗಬಲ್ಲ ಪಾಠೋಪಕರಣಗಳನ್ನು ಒದಗಿಸುತ್ತದೆ. ನನ್ನ ಬೋಧನಾ ಕೌಶಲ್ಯವನ್ನು ಕೂಡ ಹಿಗ್ಗಿಸಿದೆ ಎಂದರೆ ತಪ್ಪಾಗಲಾರದು.
ಇತ್ತೀಚಿನ ದಿನಗಳಲ್ಲಿ ಯಾವುದೇ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಮುಂತಾದ ಕಾರ್ಯಕ್ರಮಗಳನ್ನು ನೇರವಾಗಿ ಸೋತ್ರುಗಳಿಗೆ, ನೋಡುಗರಿಗೆ ತಲುಪಿಸುವ ಪರ್ಯಾಯ ಆಲೋಚನೆ ಯೂಟ್ಯೂಬ್ ಚಾನೆಲ್ ಅಥವಾ ಫೇಸ್ಬುಕ್ ಲೈವ್.. ಮುಂತಾದ ಪರಿಕರ ಗಳಿಂದ ಆಂಡ್ರಾಯ್ಡ್ ಮೊಬೈಲ್ ನಮ್ಮ ಕಾರ್ಯಕ್ರಮಗಳಿಗೆ ತುಂಬಾ ಉಪಕಾರಿಯಾಗಿದೆ. ಹಾಗೆಯೇ ಕೋರೋನಾದಂತಹ ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ಒಬ್ಬರನ್ನೊಬ್ಬರು ನೋಡಲಾರದ, ಮುಟ್ಟಲಾರದ ಪರಿಸ್ಥಿತಿಯಲ್ಲಿರುವಾಗ ಮಕ್ಕಳ ಶೈಕ್ಷಣಿಕ ಬೋಧನೆಗೆ ತುಂಬಾ ಸಹಾಯಕವಾದ ಹಲವು ಪಾಠೋಪಕರಣಗಳನ್ನು, ಬೋಧನಾ ವಿಷಯಗಳನ್ನು ನೇರವಾಗಿ ಆನ್ಲೈನ್ ಕ್ಲಾಸ್ ಮೂಲಕ ಬೋಧಿಸಿರುವುದು ಮಕ್ಕಳ ಮೇಲಿನ ಶೈಕ್ಷಣಿಕ ಕಾಳಜಿಗೆ ಮೊಬೈಲ್ ತುಂಬಾ ಸಹಾಯಕವಾಗಿದೆ. ಹಾಗೆಯೇ ಮೊಬೈಲ್ ಅನ್ನು ಬಳಸಿಕೊಂಡು ಅನೇಕ ಗೂಗಲ್ ಮೀಟಿಂಗ್ ನಂತಹ ನೇರ ಸಂವಾದಕ್ಕೆ ಕಾರಣವಾಗಿರುವ ಈ ಮೊಬೈಲ್ ನಮ್ಮೊಂದಿಗಿನ ಒಡನಾಟ ಯಾವತ್ತೂ ಮರೆಯಲಾರದಂತದ್ದು. ನಮ್ಮ ಬದುಕಿನಲ್ಲಿ ಒಂದು ಹೊತ್ತು ಊಟವಿಲ್ಲದಿದ್ದರೂ ಜೀವಿಸಬಹುದು ಆದರೆ ಆ್ಯಂಡ್ರೈಡ್ ಮೊಬೈಲ್ ಇಲ್ಲದೆ ಬದುಕುವುದು ಇವತ್ತು ತುಂಬಾ ಕಷ್ಟವಾಗಿದೆ. ಹಾಗೆಯೇ ನಮ್ಮ ಮನೋರಂಜನಾತ್ಮಕ ಅಂಶಗಳನ್ನು ವಿವಿಧ ಬಗೆಯ ರಚನಾತ್ಮಕ ನಾಟಕಗಳು, ಸಿನಿಮಾಗಳು, ಧಾರವಾಹಿಗಳು ಹಾಗೂ ವಿವಿಧ ಸಾಂಸ್ಕೃತಿಕ, ಐತಿಹಾಸಿಕ ಸ್ಥಳಗಳನ್ನು ನಾವು ನೇರವಾಗಿ ನೋಡಲು ಹೋಗಲು ಆಗದಿದ್ದರೂ ಕೂಡ ಮೊಬೈಲ್ ಮೂಲಕ ಅಲ್ಲಿಗೆ ಹೋಗಿ ನೋಡಿದಷ್ಟು ಖುಷಿಯಾಗುತ್ತದೆ.
ದೂರದ ಊರಿನಲ್ಲಿರುವ ಬಂಧುಗಳನ್ನು, ನೆಂಟಸ್ಥರನ್ನು, ಗೆಳೆಯರನ್ನು ಕೆಲವು ಸಲ ಕೆಲಸದ ಒತ್ತಡಗಳಲ್ಲಿ ನೇರವಾಗಿ ಭೇಟಿಯಾಗದೆ ಹೋಗುವ ಸಂದರ್ಭಗಳು ಬರಬಹುದು. ಆದರೆ ವಾಟ್ಸಾಪ್ ವಿಡಿಯೋ ಕಾಲ್ಗಳ ಮೂಲಕ ಬೇರೆ ಬೇರೆ ವಿವಿಧ ಕಾಲ್ಗಳ ಮೂಲಕ ಆಂಡ್ರಾಯ್ಡ್ ಮೊಬೈಲ್ ಅನ್ನು ಬಳಸಿಕೊಂಡು ಅವರನ್ನು ದಿನಾಲು ನೇರವಾಗಿ ಮುಖ:ತಹ ಸಂದರ್ಶನ ಮಾತನಾಡುವ, ಕಷ್ಟ ಸುಖಗಳನ್ನ ಹಂಚಿಕೊಳ್ಳುವ ಅನೇಕ ಧನಾತ್ಮಕ ಅಂಶಗಳು ಆಂಡ್ರಾಯ್ಡ್ ಆಂಡ್ರಾಯ್ಡ್ ಮೊಬೈಲ್ ಗಳ ಮೂಲಕವಾಗಿರುವುದು ನಮ್ಮ ಬದುಕಿನ ಉನ್ನತಿಕರಣಕ್ಕೆ ಸಾಕ್ಷಿಯಾಗಿದೆ.
ಗೆಳೆಯರೇ,
ಒಂದು ವಿಷಯ…
ಮೊಬೈಲನ್ನು ನಾವು ಧನಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ಅದು ನಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬಲ್ಲದು..!! ಆದರೆ ಕೆಲವು ಸಲ ಋಣಾತ್ಮಕ ಅಂಶಗಳನ್ನು ಬಳಸಿದರೆ, ಇಡೀ ನಮ್ಮ ಬದುಕನ್ನೇ ಹಾಳು ಮಾಡುತ್ತದೆ. ಹಾಗಾಗಿ ನಾನು ಧನಾತ್ಮಕ ವಿಷಯಗಳಿಗಾಗಿ ಮೊಬೈಲ್ ಫೋನ್ ಅನ್ನು ಬಳಸಿಕೊಂಡು, ಅನೇಕ ಧನಾತ್ಮಕ ಬದಲಾವಣೆಗಳನ್ನು ಕಂಡುಕೊಂಡಿರುವೆನೆಂದು ಪ್ರೀತಿಯಿಂದ ಈ ವಿಷಯವನ್ನು ಹಂಚಿಕೊಳ್ಳುವೆ. ನಿಮ್ಮ ಬದುಕು ಮೊಬೈಲ್ ನಂತಹ ಪರಿಕರಗಳಿಂದ ಧನಾತ್ಮಕವಾಗಿ ಬದಲಾಗಲೆಂದು ಆಶಿಸುವೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸೊಗಸಾದ ಉಪಯುಕ್ತ ಲೇಖನ. ಅಭಿನಂದನೆಗಳು.
Super article sir ji