ವಿಜಯಪ್ರಕಾಶ್ ಕಣಕ್ಕೂರು-ಗಝಲ್

ಕಾವ್ಯ ಸಂಗಾತಿ

ವಿಜಯಪ್ರಕಾಶ್ ಕಣಕ್ಕೂರು

ಗಝಲ್

ಹಾಲ್ಗೆನ್ನೆಯಲಿ ಗುಳಿ ಬೀಳುವುದನು ನೆನೆದಾಗ ಮನವರಳಬೇಕಿತ್ತು ಆದರೆ ಹಾಗಾಗಲಿಲ್ಲ
ಎದೆಯೊಳಗೆ ಮುದ್ದಾದ ನಗುವು ಅರಳಿದಾಗ ಮನವರಳಬೇಕಿತ್ತು ಆದರೆ ಹಾಗಾಗಲಿಲ್ಲ

ತಂಟೆ ಮಾಡದಿರೆಂದು ಹುಸಿ ಮುನಿಸನು ತೋರುತ್ತಿದ್ದೆ ತುಂಟ ತನಕ್ಕೆ ಹರುಷಗೊಳ್ಳುತಾ
ಬಿದ್ದು ಛಲದಿಂದೆದ್ದ ನೆನಪು ಮರುಕಳಿಸಿದಾಗ ಮನವರಳಬೇಕಿತ್ತು ಆದರೆ ಹಾಗಾಗಲಿಲ್ಲ

ಮುಂಜಾನೆಯ ಎಳೆ ಬಿಸಿಲಿನಲ್ಲಿ ಜೊತೆಯಾಗಿ ಕಳೆದಿದ್ದೆ ಬದುಕಿನ ಸುಂದರ ಕ್ಷಣಗಳನ್ನು
ಮುಸ್ಸಂಜೆಯಲಿ ಕೈ ಹಿಡಿವುದನು ಕಲ್ಪಿಸಿದಾಗ ಮನವರಳಬೇಕಿತ್ತು ಆದರೆ ಹಾಗಾಗಲಿಲ್ಲ

ಕುಟಿಲ ಭಾವದಲಿ ಇಹವನು ಮರೆತು ಹರಡುತಿಹ ವಿಷವು ಕದಡುತ್ತಿದೆ ಮನಸುಗಳನು
ರಕ್ತ ಸಂಬಂಧದ ಬೆಸುಗೆ ಅನವರತವೆಂದಾಗ ಮನವರಳಬೇಕಿತ್ತು ಆದರೆ ಹಾಗಾಗಲಿಲ್ಲ

ಮರೀಚಿಕೆಯಾಗಿ ಉಳಿಯುವುದೇ ಮರಣವನ್ನಪುವ ತನಕ ನಲಿವು ಕ್ಷಣಿಕ ಬದುಕಿನಲ್ಲಿ
ಕವಿದ ಕಾರ್ಮೋಡ ಮರೆಯಾಗುವುದೆಂದಾಗ ಮನವರಳಬೇಕಿತ್ತು ಆದರೆ ಹಾಗಾಗಲಿಲ್ಲ

ವಿಜಯಪ್ರಕಾಶ್ ಕಣಕ್ಕೂರು

2 thoughts on “ವಿಜಯಪ್ರಕಾಶ್ ಕಣಕ್ಕೂರು-ಗಝಲ್

Leave a Reply

Back To Top