“ಪ್ರತ್ಯಕ್ಷ ದೇವತೆ”ಮಕ್ಕಳ ನೀತಿ ಕಥೆ ದೇವಿದಾಸ ಬಿ ನಾಯಕ

ಮಕ್ಕಳ ಸಂಗಾತಿ

ಪ್ರತ್ಯಕ್ಷ ದೇವತೆ”ಮಕ್ಕಳ ನೀತಿ ಕಥೆ

ದೇವಿದಾಸ ಬಿ ನಾಯಕ

ಅಮ್ಮನ ಹತ್ತಿರ ವಾದ ಮಾಡಿ ಓಡಿ ಬಂದ ರಂಗನು ಅಳುತ್ತ ಕುಳಿತ ತನ್ನ ಮಿತ್ರ ರವಿಯನ್ನು ಕಂಡು “ರವಿ ಯಾಕೆ ಅಳ್ತಿದ್ದೀಯಾ”? ಎಂದು ಕೇಳಿದ.” ಒಂಬತ್ತು ತಿಂಗಳು ನೋವನ್ನು ಹೊತ್ತು ನನಗೆ ಜನ್ಮ ನೀಡಿದ ತಾಯಿಯ ಸೇವೆಯನ್ನು ಮಾಡುವ ಭಾಗ್ಯ ದೇವರು ಕಸಿದುಕೊಂಡು ಅವಳನ್ನು ಚಿಕ್ಕ ವಯಸ್ಸಿನಲ್ಲಿ ಕರೆದುಕೊಂಡ ಆ ದುಃಖವನ್ನು ಇನ್ನೂ ನನ್ನಿಂದ ಮರೆಯಲಾಗುತ್ತಿಲ್ಲ” ಎಂದು ರವಿ ಹೇಳಿದ.ಅವನ ಮಾತು ಕೇಳಿ ನಾಚಿ ರಂಗ ತಲೆತಗ್ಗಿಸಿ ನಿಂತು ಕೊಂಡ.ಇದನ್ನು ಗಮನಿಸಿದ ರವಿ “ಏನಾಯ್ತೊ? ಯಾಕೆ ಬೇಸರದಲ್ಲಿದ್ದೀಯಾ” ಎಂದು ಕೇಳಿದ.”‌ ಆಗ ಗೆಳೆಯ ರಂಗ “ಅಮ್ಮ ಯಾವುದೇ ವಿಷಯ ಹೇಳಿದ್ರು ನಾನು ಕೂಗಾಡಿ,ವಾದ ಮಾಡಿ ಸಿಡಿಸಿಡಿಯಾಗಿ‌ ಹೀಗೆ ಓಡಿ ಬಂದಬಿಡ್ತಿನಿ” ಎಂದನು.”ನೋಡು ಕಣ್ಣಿಗೆ ಕಾಣುವ ದೇವರೆಂದರೆ ನಮಗೆ ಧರೆಗೆ ತಂದ ಅಮ್ಮ..ಅಪ್ಪ.ಅವರನ್ನೇ ಕಡೆಗಣಿಸಿದರೆ ನಮ್ಮಂತಹ ಮೂರ್ಖರು ಇನ್ನೊಬ್ಬರಿರಲಾರರು.ಅವಳ ಮನಸ್ಸಿಗೆ ನೋವು ಕೊಡದೆ,”ತಾಯಿಗಿಂತ ಬಂಧುವಿಲ್ಲ,ಉಪ್ಪಿಗಿಂತ ರುಚಿಯಿಲ್ಲವೆಂಬ ಮಾತು ನೆನಪಿನಲ್ಲಿಟ್ಟುಕೊಂಡು ಅಮ್ಮನನ್ನು ಚೆನ್ನಾಗಿ ನೋಡಿಕೊ ಎಂದನು.ಆತನ ಮಾತನ್ನು ಆಲಿಸಿದ ರಂಗ ಅಂದಿನಿಂದ ಬದಲಾಗಿ ‌ಉತ್ತಮ ಮಗನಾಗಿ ದಿನಕಳೆಯುತ್ತ,ಗೆಳೆಯ ರವಿಯೊಂದಿಗೆ ಗೆಳೆತನ ಇಟ್ಟುಕೊಂಡ.ಹೀಗೆ ತುಂಬಾ ದಿನಗಳು ಉರುಳಿದರೂ ಆಗಾಗ ಸ್ನೇಹಿತರ ಭೇಟಿ ಆಗುತ್ತಿತ್ತು.ರವಿ ಎಷ್ಟೇ ಬುದ್ಧಿವಂತನಾದರೂ ತಾಯಿಯಿಲ್ಲದ ಆ ಸಂಕಟ,ಆ ನೆನಪು,ಅವಳ ಅಕ್ಕರೆಯ ಪಾಲನೆ,ಅವಳ ನಗು,ಅವಳ ಮಾತು,ಆಕೆಯ ಕೈತುತ್ತು ಅವನನ್ನು ದಿನಾಲು ಶರವೇಗದ ಶರದಂತೆ ಹೃದಯಕ್ಕೆ ನಾಟಿ ಕೊಲ್ಲುತ್ತಿತ್ತು.ಅದೇ ನೆನಪಿನಲ್ಲಿ ಒಮ್ಮೆ ಹೊರಗಡೆ ಹೊರಟ ರವಿಗೆ ಸೂರ್ಯನ ಬಿಸಿಲಿನ ಝಳ ಸುಸ್ತಾಗುವಂತೆ ಮಾಡಿ ನೆಲಕ್ಕುರುಳಿದ್ದ.ಆಶ್ಚರ್ಯವೆಂದರೆ ಅದೇ ಸಮಯಕ್ಕೆ,ಅದೇ ಮಾರ್ಗವಾಗಿ ನಡೆದು ಬರುತ್ತಿದ್ದ ರಂಗನ ತಾಯಿ ಬಿದ್ದ ಹುಡುಗನನ್ನು ಕಂಡು ಬೇಸತ್ತು ಅವನನ್ನು ಮೆಲ್ಲನೆ ಎಬ್ಬಿಸಿ ನೇರವಾಗಿ ಮನೆಗೆ ಕರೆದೊಯ್ದಳು.

ಹತ್ತು ನಿಮಿಷ ಕಳೆಯುವುದರೊಳಗೆ ಹೊರಗೆ ಹೋದ ರಂಗನು ಬಂದವನೇ ನೋಡುತ್ತ ರವಿಯ ಸಪ್ಪೆ ಮೋರೆ ನೋಡಿ “ರವಿ ಯಾಕೆ ಹೀಗಿದ್ದೀಯಾ”? ಎಂದು ಕೇಳಿದನು. ಕುಳಿತಲ್ಲಿಂದ ಏನೂ ಇಲ್ಲವೆಂದು ಸನ್ನೆಯಲ್ಲೇ ಸ್ನೇಹಿತ ಉತ್ತರಿಸಿದ.ಒಳಗಿನಿಂದ ಬಂದ ರಂಗನ ಅಮ್ಮ ” ರಂಗಾ ನಿನಗೆ ಇವ್ನ ಪರಿಚಯವಿದೆಯಾ?” ಎಂದು ಕೇಳುತ್ತಿದ್ದಂತೆ, “ಇಂದಲ್ಲ ನಾಳೆ ಕರ್ಕೊಂಡು ಬಂದೇ ಬರ್ತಿನಿ,ನನಗೆ ಮಾರ್ಗದರ್ಶನ ಮಾಡಿದ ಗೆಳೆಯನಿಗೆ ಅಂದಿದ್ನಲ್ಲ,ಅವ್ನು ಬೇರೆ ಯಾರು ಅಲ್ಲ ಅಮ್ಮಾ ಇವ್ನೆ ಆ ರವಿ” ಎಂದನು.”ಓ ಹೌದಾ ಮಗಾ ನಿನ್ನ ನೋಡಿ,ನಿನ್ನನ್ನು ಕರ್ಕೊಂಡು ಬಂದಿದ್ದಕ್ಕೆ ನನಗೆ ತುಂಬಾನೆ ಖುಷಿ ಆಯ್ತು.ಇನ್ಮುಂದೆ ನೀ ಬೇರೆ ಅಲ್ಲ,ನನ್ನ ಮಗ ಬೇರೆ ಅಲ್ಲ ಆಗಾಗ ಮನೆಗೆ ಬರ್ತಾ ಇರು ಎಂದಳು.ಅವಳ ಮಾತು ಕೇಳಿದ ರವಿ ಸಂತೋಷದಿಂದ ಅಮ್ಮ ಎಂದು ಕರೆಯುತ್ತ ಆಕೆಯ ಕಾಲಿಗೆ ಬಿದ್ದು ನಮಸ್ಕರಿಸಿದ.”ನಾವೆಷ್ಟೇ ವಿದ್ಯೆ ಗಳಿಸಿ,ಸಂಪತ್ತು ಸಂಪಾದಿಸಿದರೂ ಅಮ್ಮನೆಂಬ ಸಂಪತ್ತು ಕಳೆದುಕೊಳ್ಳುವ ಮುನ್ನ ಕಳೆದು ಹೋಗದಂತೆ ನೋಡಿಕೊಳ್ಳಬೇಕೆಂದು ಇಬ್ಬರೂ ಹೇಳುತ್ತ,ಅವ್ವ ನಮ್ಮ ಪಾಲಿನ ಪ್ರತ್ಯಕ್ಷ ದೇವತೆ ನೀನು ಎನ್ನುತ್ತ ಅಪ್ಪಿಕೊಂಡರು.ಅದಕ್ಕವ್ವಾ..”ನೀವು ನನ್ನೆರಡು ಕಣ್ಣುಗಳು” ಎಂದಾಗ ಅವಳ ಕಣ್ಣಿನಿಂದ ಅಶ್ರು ಜಾರಿತು.ಕೊನೆಗೂ ಈ ಮಿತ್ರರಿಬ್ಬರೂ” ಹತ್ತು ದೇವರನ್ನು ಪೂಜಿಸುವುದಕ್ಕಿಂತ,ಹೆತ್ತತಾಯಿಯನ್ನು ಪೂಜಿಸಬೇಕೆಂಬ ನೀತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು


ದೇವಿದಾಸ ಬಿ ನಾಯಕ ಅಗಸೂರು 

3 thoughts on ““ಪ್ರತ್ಯಕ್ಷ ದೇವತೆ”ಮಕ್ಕಳ ನೀತಿ ಕಥೆ ದೇವಿದಾಸ ಬಿ ನಾಯಕ

  1. ಒಂದು ಉತ್ತಮ ಕುಟುಂಬ ಉಂಟಾಗಬೇಕಾದರೆ ಇಂತಹ ನೀತಿ ಕಥೆಗಳು ತುಂಬಾ ಮುಖ್ಯವಾಗುತ್ತದೆ. ಈ ವ್ಯವಸ್ಥೆಯ ಕುರಿತು ಮೇಲಿಂದ ಮೇಲೆ ಮಕ್ಕಳ ಅರಿವಿಗೆ ತಂದರೆ ತಂದೆ ತಾಯಿಯ ಗೌರವ ಉತ್ತಮ ಸಂಬಂಧಗಳು ಮತ್ತೂ ಗಟ್ಟಿಯಾಗುತ್ತದೆ. ಆ ಮೂಲಕ ಒಂದು ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಬರಿಯ ಓದಿನಿಂದ ಉತ್ತಮ ನೌಕರಿ ಸಿಗಬಹುದು ಉತ್ತಮ ಕುಟುಂಬ ಅಲ್ಲ.
    ಉತ್ತಮ ಭೋದಕ ಕಥೆ.
    ಧನ್ಯವಾದಗಳು ಸರ್

  2. ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ..ಅದರ ಮಹತ್ವದ ಸಂದೇಶ ಚೆನ್ನಾಗಿದೆ…

Leave a Reply

Back To Top