ಎ.ಎನ್.ರಮೇಶ್.ಗುಬ್ಬಿ ಕವಿತೆ-ನಿದರ್ಶನ.!

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ ಕವಿತೆ-

ನಿದರ್ಶನ.!

ಏನೆಲ್ಲ ಜ್ವಲಿಸಿದರೂ ದೇಹ
ಬೀಳಲೇಬೇಕು ಮರಳಿ ಮಣ್ಣಿಗೆ
ಎಷ್ಟೆಲ್ಲ ಪ್ರಜ್ವಲಿಸಿದರೂ ಆತ್ಮ
ಸೇರಲೇಬೇಕು ಮರಳಿ ಗಾಳಿಗೆ.!

ಎಷ್ಟು ದಿನವಿದ್ದರೂ ಜೊತೆಗೆ
ಹೇಗೆಲ್ಲ ಮೆರೆದರೂ ಕಟ್ಟಕಡೆಗೆ
ತೊರೆದು ಹೋಗುವುದು ಚೈತನ್ಯ
ಕೊಳೆಯುವುದು ನಶ್ವರ ಕಾಯ.!

ಉರಿದ ಹೋದ ಕರ್ಪೂರದಂತೆ
ಕುರುಹೂ ಇಲ್ಲದೆ ಆತ್ಮ ಮಾಯ
ಸುಟ್ಟು ಕರಕಲಾದ ಬತ್ತಿಯಂತೆ
ಉಳಿವುದಷ್ಟೇ ನಿಶ್ಚಲ ಕಾಯ.!

ನಾಲ್ಕುದಿನದ ಬಾಳು ಮುಗಿದರೆ
ಜೊತೆಗಿದ್ದ ಆತ್ಮದೇಹಗಳೇ ಬೇರೆ
ಜೀವದಾಯಸ್ಸಿನ ತೈಲ ತೀರಿದರೆ
ಹೃದಯದೊಳಿದ್ದ ಉಸಿರೂ ದೂರ.!

ಮತ್ತೇಕೆ ಮೋಹದಾಹದ ಬದುಕು
ಭ್ರಮೆಯ ಕಾಮನಬಿಲ್ಲಿನ ಬೆಳಕು
ನಾನು ನನದೆಂಬ ಹುಚ್ಚು ಭ್ರಾಂತಿ
ಅಸೂಯೆ ಮತ್ಸರ ಕಿಚ್ಚು ಅಶಾಂತಿ?

ಗೋರಿ ಮೇಲೊಮ್ಮೆ ಕುಳಿತುಬಿಡು
ಕೊಳೆವ ಶವ ಸತ್ಯ ಮಾರ್ದನಿಸೀತು
ಉರಿವ ಚಿತೆಯಲೊಮ್ಮೆ ಕಣ್ಣುನೆಡು
ಹಾರುವ ಆತ್ಮ ಭ್ರಾಂತಿ ಕಳೆಸೀತು.!


ಎ.ಎನ್.ರಮೇಶ್.ಗುಬ್ಬಿ.

Leave a Reply

Back To Top