ಕವಿತೆ
ಬಿಸಿಲ ಹೂಗಳ ಬದುಕು
ಲಕ್ಷ್ಮಿ ಪಾಟೀಲ್

ಬಿಸಿಲ ಹೂಗಳ ಬದುಕು

ನನಗೆ ನೆರಳಿಗಿಂತಲೂ ಬಿಸಿಲೇ ಇಷ್ಟ
ಒಳಗಿನ ಬೆಂಕಿ ಹೊರಗೆ
ನೀರಾಗಿ ಹರಿಯುವ ವಿಸ್ಮಯಕ್ಕೆ
ಕಾವುಗಳನ್ನೆಲ್ಲ ಕರಗಿಸಿ ನೀರಾಗುವುದನ್ನು ಕಲಿಸುತ್ತವಲ್ಲ ಅದೆಷ್ಟು ಸಲೀಸು…
ಬಿಸಿಲನ್ನು ಹಾಸಿ ಹೊದೆದು,
ಶ್ರಮದಲ್ಲಿ ಬೆವರಿಳಿಸಿ
ಬಿಸಿಲ ಹಾಡುಗಳನ್ನು ಕಟ್ಟಿ
ಜೀವನೋತ್ಸಾಹ ಹೇರಿಕೊಂಡು
ಹೊರಟವರನ್ನು ಕಂಡು
ನಾನೀಗ ದುಃಖಿಸುವುದಿಲ್ಲ
ಭಾವಕೋಶಗಳನು ಅರಳಿಸಿ ಬಿಡುವ
ಬಾಡದ ಹೂವಾಗಿ ಉಳಿದು ಬಿಡುವ
ಬದುಕಿನರ್ಥಗಳನ್ನು ಹಿಗ್ಗಿಸುವ
ಇವರನ್ನು ಕಂಡು ಹಿಗ್ಗುತ್ತೇನೆ
ಬೆವೆರಿಳಿಸುವ ಕಸಬಿಗೆ
ಜೀವ ತುಂಬುತ್ತೇನೆ…
ತಮ್ಮಷ್ಟಕ್ಕೆ ತಾವು ತಣ್ಣಗೆ ಬದುಕುವ ಇವರು ಥೇಟ್ ಮಣ್ಣಿನ ಬಣ್ಣದವರು
ನೋವುಗಳನ್ನೆಲ್ಲ ಧಗೆಯಲ್ಲಿ ಆವಿಯಾಗಿಸಲು ಅವರು
ಬಿಸಿಲ್ಲನ್ನೇ ಪ್ರೀತಿಸುವರು
ಉಪ್ಪು ನೀರಿನ ಕಡಲಾಗುವರು ಬೆವರುಬಸಿದು, ತಮ್ಮ ದಣಿವಿಗೆ
ತಮ್ಮ ಸೋಲಿಗೆ ತಮ್ಮ ಉಪವಾಸಗಳಿಗೆ
ತಣಿಸುವ ಪಾಠ ಕಲಿತುಕೊಂಡವರು…
ಅನ್ಯರ ಹೊರೆ ಹೊತ್ತು
ಭಾರವೆಂದು ನರಳದವರು
ಹಡಗು ಕಟ್ಟಿಕೊಂಡು
ಹಾಯಾಗಿರುವವರಿಗೆ
ನಿತ್ಯ ತುತ್ತಾಗುವವರು
ಈ ಪೊರೆವ ಜನಗಳೇ
ಭೂಮಿಯ ತುಂಬಾ ಬಿಸಿಲ ಹೂವಾಗಿ
ಅರಳಿ ನಿಲ್ಲುವರು…..
ಇವರ ವಡಲ ವಡಬಾಗ್ನಿಯಲ್ಲಿ
ತಮ್ಮ ಹಡಗು ತೇಲಿಸಿಕೊಂಡು
ಅವರಲ್ಲಿ ಹಾಯಾಗಿ ಬದುಕುವರು
ನೆರಳನ್ನೇ ಪ್ರೀತಿಸುವರು
ನೆರಳಾದವರನ್ನು ಮರೆಯುವರು….
ಪಾಪಕ್ಕೆ ಪಕ್ಕಾಗಿ ಬಿಸಿಲಿಗೆ ಬಿದ್ದರೆ
ಸತ್ತೇ ಹೋಗುವರು…
ಅರಳದೆ ಅರಳಿಸದೆ
ಮಣ್ಣಿನಲ್ಲಿ ಮಣ್ಣಾಗದೆ ಚಿತಾಗಾರದಲ್ಲಿ
ಬೂದಿಯಾಗುತ್ತವೆ ಈ ಶವಗಳು
ಹುಡುಕಿದರಲ್ಲಿಲ್ಲ ಜೀವಾಮೃತದ ಕಣಗಳು, ಬಿಸಿಲ ಹೂಗಳ ತಳಕೆ
ಗೊಬ್ಬರವೆಂದು ಚೆಲ್ಲಲು….
*********