ಹಮೀದಾ ಬೇಗಂ ದೇಸಾಯಿ ನನ್ನ ಮಕ್ಕಳಿವರೇನಮ್ಮ …

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ನನ್ನ ಮಕ್ಕಳಿವರೇನಮ್ಮ …

[ಕೇಳು ನನ್ನಳಲು ಭೂಮಾತೆ….
ನನ್ನೊಡಲ ಕುಡಿಗಳೇ
ಬೆಂಕಿಯ ಕಿಡಿಗಳಾಗಿರಲಿಂದು
ಸುಡುತಿರುವ  ನನ್ನೆದೆಗೆ ತಂಪು ಸಿಂಪರಿಸಿ
ಸಾಂತ್ವನವ ನೀಡು ಬಾ ತಾಯೇ..

ಹಡೆದೊಡಲಿಗೇ ಬೆಂಕಿ ಇಟ್ಟು
ಅದರೊಳೇ  ಆಸೆ ತೆನೆಯ ಸುಟ್ಟು
ಗೀರಿ ತಿನ್ನುವ  ಪಿಶಾಚಿಗಳಿವು
ನನ್ನ ಹೊಟ್ಟೆಯ  ಮಕ್ಕಳಿವರೇನಮ್ಮ…?

ಬಡವರ  ಬಾಯ್ತುತ್ತು ಕಸಿದು
ಕಾಳಸಂತೆಯ ಹೆಬ್ಬಾಯಿಗೆ ಸುರಿದು
ತಮ್ಮ ಬಸುರನು  ಮೆರೆವ
ಕಟುಕರಿವರು ಕರುಳ ಕುಡಿಗಳೇನಮ್ಮ…?

ನಾಡ ಮಣ್ಣಲಿ ಬೆಳೆದು
ನಾಡ ಉಸಿರಲಿ ಉಳಿದು
ನಾಡ ನಾಡಿಯನೇ ಚಿವುಟುವೀ
ರಕ್ಕಸರು  ನನ್ನ ಕಂದರೇನಮ್ಮ…?

ಕನ್ನಡದ ಕೈಗಳಿಗೆ ತೊಡಿಸಿ ಬೇಡಿ
ಪರಭಾಷೆಗೆ  ಭಾರಿ ಬೆಲೆಯ ನೀಡಿ
ನನ್ನನ್ನೇ ಮಾರುತಿಹ ಮಕ್ಕಳಿವರೇನಮ್ಮ…?

ಅಧಿಕಾರ ಅಂತಸ್ತಿಗೆ
ಹಲ್ಲು ಗಿಂಜುವರಿವರು
ಸತ್ಯ ಸತ್ತರೂ ಸರಿಯೇ
ಸ್ವಾರ್ಥವೊಂದೇ ಉಸಿರು
ಹಸಿದ ಹಾಲ್ಗೂಸುಗಳ
ಕತ್ತು ಹಿಸುಕಿಹರು
ಮಕ್ಕಳಿವರೇನಮ್ಮ…ಮಕ್ಕಳಿವರೇನಮ್ಮ..?

ಅಭಿಮಾನ ಮರೆತಿವರು
ಗಬ್ಬು ನಾರುತಲಿಹರು
ಲಂಚಾಸುರನ  ತಾಳಕೆ
ಹೆಜ್ಜೆ ಹಾಕುತಿಹರು
ನೀತಿ ಚಾರಿತ್ರ್ಯಗಳ
ಗಾಳಿಗೆ ತೂರಿಹರು
ನನ್ನ ಬಸಿರಲಿ  ಬೆಳೆದು
ನನ್ನ ಕರುಳನೇ  ಬಗಿವ
ಮಕ್ಕಳಿವರೇನಮ್ಮ..ಮಕ್ಕಳಿವರೇನಮ್ಮ…?

———————————————

ಹಮೀದಾ ಬೇಗಂ ದೇಸಾಯಿ

2 thoughts on “ಹಮೀದಾ ಬೇಗಂ ದೇಸಾಯಿ ನನ್ನ ಮಕ್ಕಳಿವರೇನಮ್ಮ …

  1. ಅತ್ಯದ್ಭುತ ರಚನೆ ಚೆಲ್ಲಿಹ ಪದಗಳ ಮೋಡಿ ಅಭಿನಂದನೆಗಳು ಮೇಡಂ ಮಹಾ ನಂದಾ

Leave a Reply

Back To Top