ಇಂದಿರಾ ಮೋಟೆಬೆನ್ನೂರ ಕವಿತೆ- ಏಕೆ..?

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಏಕೆ..?

ಸಾವಿರಾರು ನಕ್ಷತ್ರ
ಮಿನುಗುವ ನಿನ್ನ
ನೀಲಿಯಾಕಾಶಕ್ಕೇ
ಒಂದು ನಕ್ಷತ್ರ
ಭಾರವಾಯಿತೇಕೆ…?

ನೂರಾರು ಹೂವುಗಳು
ಅರಳಿ ಪರಿಮಳಿಸುವ
ನಿನ್ನ ಹೂ ತೋಟದಿ
ಒಂದು ದುಂಡು ಮಲ್ಲಿಗೆಗೆ
ಜಾಗವಿಲ್ಲವಾಯಿತೇಕೆ…?

ಕಡುಕಪ್ಪು ಇರುಳ
ಒಡಲ ಕಡೆದು
ತೇಲಿ ಬರುವ
ಬೆಳಕ ಬೆಣ್ಣೆ…
ರಾತ್ರಿ ಕಣ್ಣೆ …

ಕತ್ತಲ ಬೆಳಗುವ
ಶಶಿಯು ನೀನು..
ಕಿರು ಹಣತೆಗೆ
ಬೆಳಕ ಮುಡಿಸದೆ
ಹೋದೆಯೇಕೆ…?

ವಿಶಾಲ ಸಾಮ್ರಾಜ್ಯದ
ಅಧಿಪತಿಯ ಮನಸಲಿ
ಕಡಲ ಪ್ರೀತಿಯಲಿ…
ಕವಿ ಹೃದಯಿ
ಭಾವ ಜೀವಿಗೆ
ಕಿರು ಬೆರಳ ಜಾಗವಿಲ್ಲವೇಕೆ…?

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
ನಿನ್ನ ರೀತಿ ನೀತಿ
ನಿನಗೇ ಪ್ರೀತಿ…
ಏಕಿಷ್ಟು ಹಿಂಸೆ ನೋವು
ನೀಡುತ್ತಿರುವೆ ನೀನು
ನಾನರಿಯೆ….
ನಿನ್ನ ನ್ಯಾಯ ನಿನಗೇ ಸರಿ…

ಇಷ್ಟು ಕಾಡಿಸಬೇಡ
ಇಷ್ಟು ನೋಯಿಸಬೇಡ
ಜೋಡಿಸಲಾರದಂತೆ
ಹೃದಯ ಒಡೆಯುವಂತೆ
ನುಡಿಯಬೇಡ…
ಬಿರಿದು ಚೂರಾದಂತೆ..
ಹೊರೆಯಾಯಿತೇಕೆ..?

ಮಧು ಮಕರಂದ ಸ್ನೇಹ
ತುಂಬಿ ತುಳುಕುವ
ಹೂ ಹೃದಯದಲಿ
ಹನಿ ಪ್ರೀತಿಯ
ಹನಿಸಲಾರದೇ ಜಾರಿದೆಯಲ್ಲ ಏಕೆ..?

ನೂರಾರು ಕಾಯಿ ಹಣ್ಣು
ಹೊತ್ತು ಪೊರೆವ ಮರಕೆ
ಪುಟ್ಟ ಕಾಯೊಂದು
ಭಾರವಾಯಿತೇಕೆ…?

ಅಪರಿಮಿತ ಪ್ರೀತಿ
ಅಮೃತ ಸಿಂಧು ಬಟ್ಟಲಲ್ಲಿ
ಬಿಂದು ಪ್ರೀತಿ ಉಣಿಸಲು
ಕೊರತೆ ಕಾಡಿತೇಕೆ…?

ಹೃದಯ ಭಾಷೆಗೆ
ಹೊಸ ಭಾಷ್ಯ ಬರೆದು
ದನಿಯಾಗದೆ ಹೋದೆಯೇಕೆ?
ಸ್ನೇಹ ಪ್ರೀತಿಯ ಹಾಡಿಗೆ
ಮನಸೋತು ಹೊಸ ರಾಗ
ಮಿಡಿದು ಮೌನವಾದೆಯೇಕೇ…?

ಅಂತರಂಗದ ಆರ್ತನಾದ
ಕೂಗಿಗೆ ಕಿವುಡಾದೆಯೇಕೆ….?
ಮೌನ ಮಾತಾಗದೇ
ಕಲ್ಲಾದೆಯೇಕೆ..?

ಊರಿಗೆ ಊರನ್ನೇ
ಕರೆದು ಕವನ ದವನದ
ಪರಿಮಳ ಮೇಳದಿ
ಮೀಯಿಸುವ ಕವಿ ಹೃದಯ
ಮಿಡಿವ ಪುಟ್ಟ ಎದೆ
ದನಿಯ ಆಲಿಸದೇ
ದೂರ ತಳ್ಳಿತೇಕೆ…?

ತೊರೆದು ಹೋದಲ್ಲೇ
ಇಂದಿಗೂ ಕಾದಿರುವೆ…
ಪ್ರೀತಿ ಮುತ್ತಾಗಲು
ಸ್ವಾತಿ ಮಳೆ ಹನಿಯ
ತುತ್ತಿಗೆ ಬಾಯ್ದೆರೆದ
ಸಿಂಪಿಯಂತೆ….

ಕರೆದೊಡನೆ ಓಡೋಡಿ
ಮತ್ತೆ ಬರುವೆ….
ಉಸಿರಿರುವವರೆಗೆ
ಪ್ರೀತಿ ಸ್ನೇಹ
ಹಣತೆ ಹಚ್ಚಿ ಕಾಯುತಿರುವೆ….


ಇಂದಿರಾ ಮೋಟೆಬೆನ್ನೂರ.

2 thoughts on “ಇಂದಿರಾ ಮೋಟೆಬೆನ್ನೂರ ಕವಿತೆ- ಏಕೆ..?

Leave a Reply

Back To Top