ಕವಿತೆ
ಕಾರ್ಮಿಕರ ದಿನದಂದು ಹಾಲು ಉಕ್ಕಿದ್ದು

ಅಂಜನಾ ಹೆಗಡೆ
ಕಾರ್ಮಿಕರ ದಿನದಂದು ಹಾಲು ಉಕ್ಕಿದ್ದು

ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ
ಕಾರ್ಮಿಕ ದಿನದ ಶುಭಾಶಯ!
“ಕಾಯಕವೇ ಕೈಲಾಸ”
ನೆನಪಾಗಿ ಮೈ ನಡುಗಿತು
ಕೈಲಾಸ ಕೈತಪ್ಪಿದ ನೋವು ಬಾಧಿಸಿ
ಬಾತ್ ರೂಮನ್ನಾದರೂ ತೊಳೆಯಲಿಕ್ಕೆಂದು
ಟೊಂಕಕಟ್ಟಿ ನಿಂತೆ
ಎಲ್ಲ ಬ್ರ್ಯಾಂಡ್ ಗಳ ಕ್ಲೀನರುಗಳ ಒಂದುಗೂಡಿಸಿ
ಬ್ರಶ್ ಗಳನ್ನೆಲ್ಲ ಗುಡ್ಡೆ ಹಾಕಿ
ತಲೆಗೊಂದು ಷವರ್ ಕ್ಯಾಪ್ ಹಾಕಿ
ಸೈನಿಕಳಾದೆ
ಹೊಳೆವ ಟೈಲ್ಸು ಕಾಮೋಡುಗಳೆಲ್ಲ
ಜೈಕಾರ ಕೂಗಿದಂತಾಗಿ
ಒಳಗೊಳಗೇ ಸಂಭ್ರಮಿಸಿದೆ
ವಾಷಿಂಗ್ ಮಷಿನ್ನಿನ
ಹೊಟ್ಟೆಗಷ್ಟು ಬಟ್ಟೆ ತುರುಕಿ
ಮೇಲಷ್ಟು ನೀಲಿಬಣ್ಣದ ಲಿಕ್ವಿಡ್ ಹಾಕಿ
ತಿರುಗಲು ಬಿಟ್ಟೆ
ಒಲೆಮೇಲಿಟ್ಟ
ಹಾಲು ಮರೆತೆ
ಮೊಬೈಲ್ ತೆರೆದರೆ
ಮತ್ತಷ್ಟು ಸ್ಟೇಟಸ್ ಅಪ್ ಡೇಟ್ ಗಳು;
ಕೈಲಾಸದ ಹೊರೆ ಹೊತ್ತವರೆಲ್ಲ
ಸೋಷಿಯಲ್ ಆದಂತೆನ್ನಿಸಿ
ಪೊರಕೆ ಹಿಡಿದೆ
ಕಸ ಗುಡಿಸಿ ನೆಲ ಒರೆಸಿದೆ
ದೇವರನ್ನೂ ಬಿಡಲಿಲ್ಲ
ಸಿಲ್ವರ್ ಡಿಪ್ ಇದೆಯಲ್ಲ!
ಸ್ವರ್ಗ ನರಕದ ಹೊಣೆ ಹೊತ್ತ
ದೇವರು
ಅಂಗೈ ಮೇಲೆ ಹೊಳೆಯುತ್ತಿದ್ದಾನೆ
ಒಲೆಮೇಲೆ ಮರೆತ ಹಾಲು
ಉಕ್ಕಿ ಹರಿಯುತ್ತಿದೆ
********