ಕಾವ್ಯ ಸಂಗಾತಿ
ವಾಣಿ ಭಂಡಾರಿ ಕವಿತೆ-
ಅಳೆದು ತೂಗುವುದು
ಅಳೆದು ತೂಗುವುದೆಂದರೆ
ಅಷ್ಟು ಸುಲಭ ಎಂದುಕೊಂಡಿರಾ?.
ಹೌದೌದು ಸುಲಭವೇ!,,
ಏ!,,, ಇಲ್ಲ ಇಲ್ಲ
ಅಷ್ಟೊಂದು ಸುಲಭವೇನಲ್ಲ
ಆದರೂ ಅಳತೆ!
ಅವರವರ ಭಾವ ಚಿತ್ತಕೆ ತಕ್ಕಂತೆ.
ಅಳತೆಗೋಲಿಗೆ ಸಿಕ್ಕ ಬೀಜ
ಸಸಿ ಗಿಡ ಹೂ ಕಾಯಿ ಹಣ್ಣು
ನಜ್ಜು ಗುಜ್ಜು ತಕ್ಕಡಿಯಲಿ.
ಕರುಳು ಹೆಗಲಿಗಷ್ಟೆ ಗೊತ್ತು
ಭೂಮಿಯಾಳಕ್ಕಿಳಿಸಲು
ಪಟ್ಟ ಪಾಡು
ನೋವುಂಡ ಇರುಳ ಕಣ್ಣೀರು
ಅಲ್ಲಲ್ಲೆ ಒತ್ತೊ ಕುರುಚಲು
ಮುಳ್ಳು ಮೈ ಸುತ್ತಿ ಕೆಡವೊ ಬಳ್ಳಿ
ತುಡುಗು ದನಕರುಗಳ ಕಾಟ
ಹಳದಿ ಕಣ್ಣಿನಬ್ಬರ
ಹದ್ದಿನ ಮೊನಚು ನೋಟ
ಅಬ್ಬಬ್ಬ!! ಎಷ್ಟೊಂದು
ಪರದಾಟ ಪೇಚಾಟ.
ಮೊಳಕೆಯೊಡೆದೆದ್ದ ಬೀಜ
ಸಸಿ ಬಿರುಬೇಸಿಗೆಯ
ತಾಪ ತಡೆದುಂಡು
ಬಾಗಿ ಬಳುಕಿ ಮಳೆಗಾಳಿಗೆ
ಕಾಯಾಗಿ ಹೂವಾಗಿ
ಎಷ್ಟೊಂದು ಪರಿಪಾಟಲು.
ಹೂವು ತೆನೆದೂಗತಿರಲು
ಸರತಿ ಸಾಲು ತೂಗಲು
ತಕ್ಕಡಿಗೇನು ಗೊತ್ತು?.
ಉದ್ದ ಅಗಲ ಗಿಡ್ಡ ದಪ್ಪ ತ್ವಾರ
ನಾನಾ ತರ ಅವರವರ
ಭಾವ ಬಿನ್ನಾಣದಲಿ
ಅಳತೆಯ ಭರಾಟೆ.
ಐಮೂಲೆಗೆ ಸಿಗದ ಗುಂಡು
ಕಳೆದುಕೂಡೊ ಲೆಕ್ಕಚಾರಕೆ
ಅಗಸೆ ಬಾಗಿಲಲಿ ದಂಡೊ ದಂಡು.
ಕೂಡಿ ಕಳೆದು ಗುಣಿಸಿ ಭಾಗಿಸಿ
ಶೇಷ ಸೊನ್ನೆಯೆಂದೆ ಗುಲ್ಲು.
ತೂಗಿದ ತಕ್ಕಡಿಗೆ ತಿಳಿದಿಲ್ಲ
ಸೊನ್ನೆಯೆ ಆರಂಭ ಅಂತ್ಯವೆಂದು!.
ವಾಣಿ ಭಂಡಾರಿ
good poetr
ಅಳತೆಗೆ ಸಿಕ್ಕದ ಕವಿತೆ
ಅಳತೆಗೋಲು ಯಾವ ತರಹ ?
ಇಂಚು ಪಟ್ಟಿಯಾ, ಮಣ ತೂಕವಾ,
ಪಾವು ಸೇರಾ ಯಾವುದು
ನವೀನ ಭಾವ , ಪ್ರಕೃತಿಯ ಮಡಿಲಲ್ಲಿ ಬೆಳೆಯುವ ವನರಾಜಿ, ಯಾವ ಅಳತೆಗೋಲಿಗೆ ಸಿಕ್ಕದು, ಹೇಗೋ ಅಳೆದು ಲೆಕ್ಕ ಹಾಕಿಯಾಯಿತೆನ್ನಿ,
ಕೊನೆಗೆ ಉಳಿದಿದ್ದೇನು?
ಶೂನ್ಯ!!!!
ಜೀವನದ ಸಾರ
ಬರುವಾಗ ಬರಿಗೈ
ಹೋಗುವಾಗ ಬರಿಗೈ
ಮಧ್ಯದಲ್ಲಿ ಅಳೆದು ತೂಗಿ ನಡೆ ಸುವ ಬಾಳು
ಒಮ್ಮೆ ಏರಿ ಒಮ್ಮೆ ಇಳಿಯುವ
ಅಳತೆಗೆ ಸಿಗದ ಜೀವನ