ಕಾವ್ಯಸಂಗಾತಿ
ರೇಷ್ಮಾ ಕಂದಕೂರ
ಯುದ್ಧ ಪಿಪಾಸು
ಹೊತ್ತಿ ಉರಿಯುತಿದೆ ದ್ವೇಷಾಸೂಹೆ
ಬಿತ್ತಿ ಬೆಳೆವ ಶಾಂತಿ ಬೀಜ ಹೂತು ಹೋಯಿತೆ
ಗೋಳಾಟ ನರಳಾಟ
ಮಾರಣ ಹೋಮದ ಓಕುಳಿಯಲಿ.
ಸ್ವಾರ್ಥ ಪೀಪಾಸಿಗೆ ಬಲಿಯಾಗಿ
ಕತೃ ಕರ್ಮದ ಅರಿವಿಲ್ಲದೆ
ಭಾತೃ ಜಗಕೇಕೆ ಇಲ್ಲ ಜಾಗೃತಿ
ಉಸಿರಿಗೇಕೇ ಸಂಚಕಾರ.
ಸಮಪಾಲಿನ ಮಾತು ವಿಷವಾಗಿ
ದುಸ್ತರ ಬದುಕಲಿ ಆವೇಗದ ಛಾಯೆ
ಆರ್ಭಟ ಅಟ್ಟಹಾಸ ಜಗಮಗಿಸಿ
ಮೂಕ ರೋಧನೆ ತೆರೆಮರೆಯಲಿ.
ಅಪ್ಪುಗೆಗೆ ಧಾವಂತಕೆ
ಮದ್ದು ಗುಂಡುಗಳ ಹಾವಳಿ
ಮುಗ್ಧ ಮನಕೆ ಕೊಡಲಿ ಏಟು
ಯುದ್ಧವೆಂಬ ಡಂಬಾಚಾರದಿ.
ಹುಂಬುತನದ ಆಟಕೆ
ಬಲಿಯಾದ ಅರಿಯದ ಜೀವಿಗಳು
ಕೇಳುವವರಿಲ್ಲದ ಸ್ಥಿತಿಗೆ
ಬರೆಎಳೆದ ಕರಿನೆರಳು.
ಬುದ್ಧಿ ವಂತ ಮನುಜ ನೀ ಸಿದ್ಧಿಸದ್ದೇನು
ಗದ್ದುಗೆಗೆ ಗುದ್ದಾಟ ಕಿರೀಟವೆ
ಭದ್ಧತೆಯ ಜೀವನಕೆ ವೈರಸ್ ಕಾಟವೇ
ಬಿಟ್ಟು ಬಿಡು ಇನ್ನದರೂ ಬಡಜೀವಕೆ.
ರೇಷ್ಮಾ ಕಂದಕೂರ