ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಕನ್ನಡಪರ ಹೋರಾಟಗಾರರ
ಅನನ್ಯ ಹೋರಾಟ
ಅವನು ಕನ್ನಡದ ಶಾಲು ಹಾಕಿಕೊಂಡು ಕನ್ನಡಕ್ಕಾಗಿ ಮತ್ತು ಕನ್ನಡ ಭಾಷೆಗಾಗಿ ಅನ್ಯಭಾಷಿಕರು ದಬ್ಬಾಳಿಕೆ ಮಾಡಿದಾಗ ಅವರ ವಿರುದ್ಧ ರಸ್ತೆರೋಖೋ ಚಳುವಳಿಯ ಹೋರಾಟದಲ್ಲಿ ಪಾಲ್ಗೊಂಡು ಪೊಲೀಸ್ ಕೇಸ್ ನಲ್ಲಿ ಜೈಲು ಸೇರಿದ್ದಾನೆ….
ಕರ್ನಾಟಕದ ಗಡಿ ಭಾಷೆಯ ಅನ್ಯ ಭಾಷಿಕರು ಕರ್ನಾಟಕದ ಅಸ್ಮಿಯತೆಗೆ ಧಕ್ಕೆ ತಂದಾಗ ಅನ್ಯ ಭಾಷಿಕರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿ, ಈ ನಾಡು-ನುಡಿಗೆ ಸೇವೆ ಸಲ್ಲಿಸುವ ಕನ್ನಡ ನಾಡಿನ ಹೋರಾಟಗಾರರ ಬದುಕು ಅನನ್ಯವಾದುದು…
ಈ ಮೇಲಿನ ಎರಡು ಸನ್ನಿವೇಶಗಳು ಒಂದು ನಾಡಿನ, ನುಡಿಯ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ತನ್ನ ಭಾಷೆಯ ಸಂಸ್ಕೃತಿಯನ್ನು ಬೆಳೆಸುವ, ಉಳಿಸುವ ಎಲ್ಲರನ್ನೂ ಗೌರವಿಸುವ ಹೊಣೆಗಾರಿಕೆ ನಮ್ಮೆಲ್ಲರ ಕನ್ನಡ ನಾಡಿನ ಕನ್ನಡಿಗರಿಗೆ ಸೇರಿದೆ.
ಕರ್ನಾಟಕದಲ್ಲಿ ಕನ್ನಡವೇ ನಮ್ಮ ಆಸ್ಮೀಯತೆ ಎಂದು ಕರೆಯಬಹುದು. ಕೇವಲ ನವೆಂಬರ್ ಕನ್ನಡಿಗರಾಗದೆ ಸದಾ ಕಾಲವು ಕನ್ನಡಕ್ಕಾಗಿ ಹೋರಾಟ ಮಾಡುವ
ನಮ್ಮತನ ಬರಬೇಕಾಗಿದೆ.
ನಮ್ಮ ದೇಶ ಸ್ವಾತಂತ್ರ್ಯವಾದ ನಂತರ ಅನೇಕ ಸ್ಥಿತ್ಯಂತರಗಳನ್ನು ಕಂಡಿತು. ರಾಜ ಮಹಾರಾಜರು ಆಡಳಿತವನ್ನು ಬಿಟ್ಟುಕೊಟ್ಟು, ಪ್ರಜಾಸತ್ತಾತ್ಮಕ ಸರ್ಕಾರಕ್ಕೆ ಒಪ್ಪಿಸಿದರು. ಅಲ್ಲದೇ ತಮ್ಮ ಪ್ರದೇಶವನ್ನು ಬಿಟ್ಟುಕೊಟ್ಟರು ನಂತರ ಭಾಷಾವಾರು ಪ್ರಾಂತ್ಯದ ಮೂಲಕ ಅನೇಕ ರಾಜ್ಯಗಳು ಉದಯವಾದವು. ಕನ್ನಡವನ್ನು ಮಾತನಾಡುವ ಕನ್ನಡತನವನ್ನು ತಮ್ಮ ಸಂಸ್ಕೃತಿಯಾಗಿ ಬಿಂಬಿಸುವ ಪ್ರದೇಶಗಳನ್ನು ಸೇರಿಸಿ ಮೈಸೂರು ರಾಜ್ಯವೆಂದು ನಾಮಕರಣ ಮಾಡಲಾಯಿತು.
ನಂತರ ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸು ಅವರ ಆಡಳಿತದಲ್ಲಿ ಮೈಸೂರ್ ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದು ಅದಕ್ಕೆ 50 ವರ್ಷಗಳ ತುಂಬು ಸಡಗರದ ಸಂಭ್ರಮ. ಈ ಸಡಗರ ಸಂಭ್ರಮದ ಸಮಯದಲ್ಲಿಯೇ ಅನೇಕ ಸವಾಲುಗಳನ್ನು ಕನ್ನಡಿಗರಾದ ನಾವುಗಳು ಎದುರಿಸುತ್ತಿದ್ದೇವೆ.
ಗಡಿನಾಡ ಪ್ರದೇಶದ ಅನೇಕ ಕನ್ನಡಿಗರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಪರಭಾಷಿಕರ ದಬ್ಬಾಳಿಕೆ ಅಸಹಕಾರ, ಈ ನೆಲದ ಭಾಷೆಯಲ್ಲದ ಇನ್ನೊಂದು ಭಾಷೆಯ ವಿಜೃಂಭಣೆ. ಅದಕ್ಕಾಗಿ ಟೊಂಕ್ ಕಟ್ಟಿ ನಿಂತು ನಮ್ಮ ನೆಲದ ಭಾಷೆಯ ನಮ್ಮ ನೆಲದ ಅಸ್ಮೀಯತೆಯ ಬಗ್ಗೆ ಸದಾ ದ್ವೇಷ ಕಾರುತ್ತಾ ಸಮಾಜವನ್ನು ವಿಘಟನೆಯತ್ತ ಕೊಂಡೊಯ್ಯುವುದನ್ನು ನಾವು ಕಾಣುತ್ತೇವೆ. ಕನ್ನಡ ಭಾಷೆಯ ಸಾಂಸ್ಕೃತಿಕ ಶ್ರೀಮಂತಿಕೆ ಅತ್ಯಂತ ಉನ್ನತವಾದದ್ದು. ನಮ್ಮ ದೇಶದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಎಂದರೆ ನಮ್ಮ ಹೆಮ್ಮೆಯ ಕನ್ನಡವೆಂದು ಹೇಳಬಹುದು. ಇಂತಹ ಕನ್ನಡ ಭಾಷೆಯಲ್ಲಿ ಅನೇಕ ಕೃತಿಗಳನ್ನು ಬರೆಯುವ ಕವಿಗಳು, ಸಾಹಿತಿಗಳು, ಕೃತಿಕಾರರು ಅಲ್ಲದೆ ಸಂಗೀತಗಾರರು ಕಲಾವಿದರು ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
ಅವರ ಅನೇಕ ಕೃತಿಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಬದುಕಿನ ಅನೇಕ ಮಜಲುಗಳನ್ನು ಸ್ಥಾಪಿಸಿದ್ದಾರೆ. ಹೆಜ್ಜೆ ಗುರುತುಗಳನ್ನು ಗುರುತಿಸಿದ್ದಾರೆ. ಸಾಧಕರ ಸಾಧನೆಗಳನ್ನು ಅನಾವರಣ ಮಾಡಿದ್ದಾರೆ.
ಆದರೆ ಒಂದು ಭಾಷೆಗೆ ಭಾಷಾ ಪರಂಪರೆಯ ಕೊಡುಗೆಯ ಜೊತೆ ಜೊತೆಗೆ ಈ ನಾಡಿನ ಗಡಿಯನ್ನು ಕಾಯಬೇಕಾಗಿ ಬಂದಿರುವುದು ದುರಂತವೇ ಸರಿ. ಈ ನಾಡಿನ ಅಸ್ಮೀಯತೆಯನ್ನು ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ.
ಅಂತಹ ಅನೇಕ ನಿಸ್ವಾರ್ಥಪರ ಕನ್ನಡ ಹೋರಾಟಗಾರರ ದೊಡ್ಡ ಪಡೆಯೇ ನಮ್ಮ ನಾಡಿನಲ್ಲಿರುವುದು ನಮ್ಮ ಹೆಮ್ಮೆಯ ವಿಷಯ. ಕನ್ನಡ ಪರ ಅನೇಕ ಸಂಘಟನೆಗಳು ನಾಡು ನುಡಿಗಾಗಿ ತೊಂದರೆಯಾದಾಗ, ಧಕ್ಕೆಯಾದಾಗ ತೀವ್ರವಾಗಿ ಪ್ರತಿಕ್ರಿಯೆ ನೀಡುತ್ತಿರುವುದು ನಮಗೆ ಹೆಮ್ಮೆಯಾಗಿದೆ.
ಈ ನಾಡಿನ ಒಳಿತಿಗಾಗಿ ಸದಾ ಹೋರಾಟದ ಮುಂಚೂಣಿಯಲ್ಲಿ ಅನೇಕ ರಾಜ್ಯ ಮಟ್ಟದ ಕನ್ನಡಪರ ಸಂಘಟನೆಗಳು, ಜಿಲ್ಲಾಮಟ್ಟದ ಸಂಘಟನೆಗಳು ತಾಲೂಕ ಮಟ್ಟದ ಶಾಖೆಗಳು, ಹೋಬಳಿ ಮಟ್ಟದ ಶಾಖೆಗಳು ಅಸ್ತಿತ್ವಕ್ಕೆ ಬಂದಿರುವುದು ಕನ್ನಡಿಗರು ಜಾಗೃತಿಯಾಗಿರುವುದಕ್ಕೆ ಸಾಕ್ಷಿ ಎನ್ನಬಹುದು.
“ನಾವು ಯಾರ ವಿರುದ್ಧವೂ ಅಲ್ಲ : ನಮ್ಮ ಭಾಷೆ ನಮ್ಮ ನಾಡಿನ ಒಳಿತಿಗಾಗಿ ಮಾತ್ರ” ಎನ್ನುವ ಉದ್ದೇಶದೊಂದಿಗೆ ಸ್ಥಾಪಿತವಾದ ಕನ್ನಡಪರ ಸಂಘಟನೆಗಳು “ನಾವು ಪ್ರೀತಿಯಿಂದ ಬಂದರೆ ಪ್ರೀತಿಯನ್ನು ಕೊಡಲು ಸಿದ್ಧ, ನಮ್ಮ ನಾಡಿನ ವಿರುದ್ಧ, ನಮ್ಮ ನೆಲದ ಅಸ್ಮಿತೆಯ ವಿರುದ್ಧ ಬಂದರೆ ನಾವು ಹೋರಾಡಲು ಸಿದ್ದ”
ಎನ್ನುವ ಘೋಷಣೆಯ ವಾಕ್ಯದೊಂದಿಗೆ ಕನ್ನಡಪರ ಸಂಘಟನೆಗಳು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ವಿಶೇಷವಾಗಿ ಯುವಕರ ದೊಡ್ಡ ಪಡೆಯೇ ಹೋರಾಟದಲ್ಲಿ ತೊಡಗಿದಾಗ, ತಮ್ಮ ಮನೆಯ ಸದಸ್ಯರು, ತಂದೆ ತಾಯಿ, ಬಂಧುಬಳಗ ಎಲ್ಲರನ್ನೂ ಮರೆತು ಸೆರೆವಾಸವನ್ನು ಅನುಭವಿಸಿದ್ದಾರೆ.
ಅನೇಕ ಸಂದರ್ಭದಲ್ಲಿ ಪೊಲೀಸ್ ಕೇಸ್ ಗಳಾಗಿ ಕೋರ್ಟುಗಳಿಗೆ ಅಲೆಯುವ ದುರಂತ ಪರಿಸ್ಥಿತಿಗಳನ್ನು ನಾವು ಕಾಣುತ್ತೇವೆ. ನಮ್ಮ ನೆಲ, ಜಲ, ಭಾಷೆ ಗಡಿ ಮುಂತಾದ ವಿಷಯಗಳಲ್ಲಿ ಮೂಗುತೂರಿಸಿ ಕಾಲುಕೆದರಿ ಜಗಳಕ್ಕೆ ಬಂದರೆ, ನಮ್ಮತನವನ್ನು ಕೆಣಕಿದರೇ ಸುಮ್ಮನಿರಲು ಸಾಧ್ಯವೇ..?? ಸಾಧ್ಯವೇ ಇಲ್ಲ..!!
ಕೆಲವರು ಸಾಹಿತ್ಯಿಕವಾಗಿ ಪ್ರತಿರೋಧವನ್ನು ಒಡ್ಡಿದರೆ, ಇನ್ನು ಕೆಲವರು ಹೋರಾಟದ ಮೂಲಕ ಪ್ರತಿರೋಧವನ್ನು ಒಡ್ಡಿ ಹೋರಾಟ ಮಾಡುತ್ತಾರೆ.
ಯಾವಾಗ ನಮ್ಮ ಹಕ್ಕುಗಳಿಗೆ ಧಕ್ಕೆಯಾಗುತ್ತದೆಯೋ ಆಗ ನಾವು ಸುಮ್ಮನೆ ಕುಳಿತರೆ ನಮ್ಮ ನಾಡನ್ನು ರಕ್ಷಿಸಲು ಸಾಧ್ಯವಿಲ್ಲ. ನಮ್ಮ ನಾಡಿಗಾಗಿ ನಾವು ಬೆರೆಯಬೇಕು, ಬರೆಯಬೇಕು, ಹೋರಾಟ ಮಾಡಬೇಕು, ಅದಕ್ಕಾಗಿ ಬದುಕಬೇಕು ಎನ್ನುವ ಛಲ ನಮ್ಮೊಳಗೆ ಮೂಡಬೇಕು.
ನಮ್ಮ ಅನೇಕ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡಿಗರು ಅನಾಥಭಾವದಿಂದ ಬದುಕುತ್ತಿರುವುದನ್ನು ನಾವು ನೋಡುತ್ತೇವೆ. ಅಂತಹ ಗಡಿನಾಡ ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ, ಮೂಲಭೂತ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಅವರು ಅಭಿವೃದ್ಧಿಯಾಗಲು ಸಾಧ್ಯ. ಎರಡು ರಾಜ್ಯಗಳ ಮಧ್ಯದ ಅವರು ಎರಡು ರಾಜ್ಯಗಳ ಸರಕಾರಗಳು ನಿರ್ಲಕ್ಷ್ಯವಹಿಸುವ ಅನೇಕ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಇದು ನಮ್ಮ ವಿಘಟನೆಗೆ ದಾರಿ ಮಾಡಿಕೊಡುತ್ತದೆ. ಇಂತಹ ವಿಘಟನೆಗೆ ದಾರಿ ಮಾಡಿಕೊಡದೆ, ಅನೇಕ ಸೌಲಭ್ಯಗಳನ್ನು ನೀಡಬೇಕಾದದ್ದು ಪ್ರಜಾಸತ್ತಾತ್ಮಕ ಸರ್ಕಾರಗಳ ಆದ್ಯ ಕರ್ತವ್ಯ. ಅಂತಹ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸದಾ ಹೋರಾಟದ ಮುಂಚೂಣಿಯಲ್ಲಿರುವ ಕನ್ನಡಪರ ಹೋರಾಟಗಾರರ ತ್ಯಾಗ ಅಪರಮಿತವಾದದ್ದು. ಸಾಧ್ಯವಾದರೆ… ಅವರೊಂದಿಗೆ ನಾವು ಕೈಜೋಡಿಸೋಣ. ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲೋಣ. ಅದು ನಮ್ಮ ಕರ್ತವ್ಯವೂ ಕೂಡ ಹೌದು..!! ಅವರು ತಮ್ಮದನ್ನೆಲ್ಲವನ್ನು ತೊರೆದು ಈ ನಾಡಿಗಾಗಿ ಹೋರಾಟ ಮಾಡುವ ದೊಡ್ಡ ಮನಸ್ಸು ಅವರದ್ದಾಗಿರುವುದರಿಂದ ಅವರೊಡನೆ ಬೆರೆಯಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ.
ಹಾಗೆಯೇ ಬೇರೆ ರಾಜ್ಯಗಳಿಂದ ಬಂದು ಇಲ್ಲಿಯೇ ನೆಲೆಸಿ ಇಲ್ಲಿಯ ಜಲ, ನೆಲ, ಗಾಳಿ ಆಹಾರವನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳುತ್ತಿರುವ ಅನ್ಯ ಭಾಷೆಯ ಸಹೋದರರು ಕೂಡ ಈ ಭಾಷೆಯ, ಈ ನೆಲದ ಸಂಸ್ಕೃತಿಯನ್ನು ಪ್ರೀತಿಸಬೇಕಾಗಿರುವುದು ಅವರ ಆದ್ಯ ಕರ್ತವ್ಯ. ನಾವು ಕೂಡ ಅವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ಒಂದು ಭಾಷೆ ಇನ್ನೊಂದು ಭಾಷೆಯೊಂದಿಗೆ ಹಾಗೇಯೇ ಒಂದು ಭಾಷೆ ಜನರು ಇನ್ನೊಂದು ಭಾಷೆಯ ಜನರೊಂದಿಗೆ ಬೆರೆಯಬೇಕಾದರೆ ಸೌಹಾರ್ದ ವಾತಾವರಣ ಬೇಕು. ಅಂತಹ ಸೌಹಾರ್ದ ವಾತಾವರಣಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಅಂತಹ ನಾಡು ನುಡಿಗೆ ಧಕ್ಕೆಯಾದಾಗ ಇಂತಹ ಕನ್ನಡಿಗ ಹೋರಾಟಗಾರರ ಹೋರಾಟ ನೆನಪಿಸಬೇಕಾಗಿರುವುದು, ಹಾಗೆ ಅವರಿಗೆ ಬೆಂಬಲಿಸಬೇಕಾಗಿರುವುದು ನಮ್ಮ ಕರ್ತವ್ಯ. ಅವರ ಕನ್ನಡ ಪರ ಒಲವು, ಪ್ರೀತಿ ನಮಗೆ ಕೂಡ ಧಾರೆಯಾಗಿ ಮೂಡಲಿ.
ಕನ್ನಡ ನವೆಂಬರ್ ಬಂತಂದರೆ ನೆನಪಾಗಬಾರದು. ಅದು ಸದಾ ನಮ್ಮ ಉಸಿರಿನೊಡನೆ ಉಸಿರಾಗಿರಬೇಕು. ವರ್ಷದ ಹನ್ನೆರಡು ತಿಂಗಳು ಸದಾ ನಮ್ಮ ಹೃದಯದೊಳಗೆ ಅಚ್ಚಳಿಯದೆ ಕನ್ನಡ ಉಳಿಯಬೇಕು. ಅಂತಹ ಅಚ್ಚಳಿಯದೆ ಉಳಿಯುವ ಕೆಲಸವಾಗಬೇಕಾದರೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರನ್ನು ಗೌರವಿಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.
ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಜನ ಮೆಚ್ಚುಗೆ ಗಳಿಸುವ ಒಳ್ಳೆಯ ಲೇಖನ. ಅಭಿನಂದನೆಗಳು.