ಇಂದಿರಾ ಮೋಟೆಬೆನ್ನೂರ ಸ್ನೇಹ ಸಂಬಂಧ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸ್ನೇಹ ಸಂಬಂಧ

ಕಾಡಿಯೂ ಇಲ್ಲ
ನಿನ್ನ ನಾ ಬೇಡಿಯೂ ಇಲ್ಲ
ತಾನಾಗಿಯೇ ಹಾಡುತಾಡುತ
ಬಂದು ಎದೆಗೂಡೊಳು ನಿಂದೆಯಲ್ಲ
ನೀನಾಗಿಯೆ ಬಿತ್ತಿದ ಭಾವ
ಬೀಜವದು ಇಂದು
ಮೊಳಕೆಯೊಡೆದು
ಹಸಿರಾಗಿ ಉಸಿರಾಗಿಹುದು…
ಈಗ ಉಸಿರಬೇಡವೆಂದರೇ ….

ಸ್ನೇಹ ಪ್ರೀತಿಯೆಂದರೆ
ನಿತ್ಯ ಬದಲಿಸುವ
ಉಡುಗೆ ತೊಡುಗೆಯಲ್ಲ…
ಒಮ್ಮೆ ತೊಟ್ಟು ಮಲಗಿದ
ಸತ್ಯ ಕರಿ ಬಟ್ಟೆಯಂತೆ…
ತೊಟ್ಟ ಬಟ್ಟೆಯ ಕಳಚಿ
ದೂರ ಬಿಸುಟಿ ಒಗೆದಂತಲ್ಲ..
ಬದುಕಿರುವವರೆಗೂ ಎದೆಯ
ಗೋರಿಯೊಳಗೆ ಜೀವ ಬೆಂದಂತೆಲ್ಲ…

ನೀನು ಕೈ ಬೀಸಿ ಕರೆದೊಡನೇ
ಎದೆ ಕದವ ತೆರೆದೊಡನೆ
ತನ್ನ ಪುಟ್ಟ ಗೂಡು ತೊರೆದ ಹಕ್ಕಿ
ನಿನ್ನ ವಿಶಾಲ ಸಾಮ್ರಾಜ್ಯಕೆ
ನಸು ನಗುತ್ತ ತುಸು ಹೆದರುತಲೇ
ಅಡಿಯಿರಿಸಿತಲ್ಲ…
ಗುಟುಕು ನೀರು ಒಂದು ಕಾಳು
ಪ್ರೀತಿ ಸವಿಯ ಛವಿಗೆ ಅಲೆದು ಬಳಲಿತಲ್ಲ…
ನಿನಗಿದು ಅರ್ಥವಾದಾಗ ಅರಸುತ್ತ
ನೀನಲೆಯುವೆಯೆಲ್ಲ…

ಯಾವುದು ಶಾಶ್ವತವಲ್ಲ ಇಲ್ಲಿ
ಹುಟ್ಟಿದೆಲ್ಲವೂ ಅಳಿಯಲೇಬೇಕು ಬಲ್ಲೆ …
ಜೊತೆ ನಡೆದ ಹೆಜ್ಜೆ ಧ್ಯಾನ
ಮಿಡಿದ ಹೃದಯ ಗೆಜ್ಜೆ ನಾದ
ಬಿತ್ತಿದ ಭಾವ ಬುತ್ತಿ ಯಾನ
ಮಧುರ ನೆನಪೊಂದೇ ಅಮೃತ ಪಾನ…


ಇಂದಿರಾ ಮೋಟೆಬೆನ್ನೂರ

One thought on “ಇಂದಿರಾ ಮೋಟೆಬೆನ್ನೂರ ಸ್ನೇಹ ಸಂಬಂಧ

Leave a Reply

Back To Top