ಸುಮ ಯು. ಕೆ ಅವರ ಕೃತಿ ‘ಮನಸುಗಳ ಮಿಲನ’ ಅವಲೋಕನ ವರದೇಂದ್ರ ಕೆ ಮಸ್ಕಿ

ಪುಸ್ತಕ ಸಂಗಾತಿ

ಸುಮ ಯು. ಕೆ

‘ಮನಸುಗಳ ಮಿಲನ’

ವರದೇಂದ್ರ ಕೆ ಮಸ್ಕಿ

ಪ್ರೇಮದ ಸಿಂಚನ ‌ಹರಿಸುವ ಮನಸುಗಳ ಮಿಲನ
 
      ಮನಸಿನ ಭಾವಗಳ ಕೊಂಡಿ ಮಿಲನವಾದರೆ ಅಲ್ಲಿ ಪ್ರೇಮೋದ್ಭವ ಆಗುತ್ತದೆ. ಈ ಪ್ರೇಮೋದ್ಭವಕ್ಕೆ ಸಾಕ್ಷಿಯೇ ಮದುವೆ. ಈ ಮದುವೆ ಎನ್ನುವುದೇ ಹಾಗೆ, ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ ಎನ್ನುವಂತೆ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಎರಡು ವಿಭಿನ್ನ ಸ್ವಭಾವದ ವಿರುದ್ಧ ಲಿಂಗದ ಜೀವಿಗಳನ್ನು ಬೆಸೆಯುವ ಋಣಾನುಬಂಧ.    
     ಈ ಋಣಾನುಬಂಧಕ್ಕೆ ನಾಂದಿ ಹಾಡಬೇಕೆಂದರೆ ಎರಡು “ಮನಸುಗಳು ಮಿಲನ”ವಾಗಬೇಕು. ನನ್ನದು ಹೋಗಿ ನಮ್ಮದು ಆಗಬೇಕು. ನಾನು ಹೋಗಿ ನಾವು ಆಗಬೇಕು. ಒಬ್ಬರಿಗೊಬ್ಬರು ತಮ್ಮ ಮನಸುಗಳನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು.  
        ಅಂತೆಯೇ ಬಾಲ್ಯದಿಂದಲೇ ಮನಸುಗಳನ್ನು ಬೆಸೆದುಕೊಂಡು ನನ್ನವ, ನನ್ನವಳು ಎಂಬ ಭಾವ ಇದ್ದರೂ ಅಚಾನಕ್ ಆಗಿ ದಾಂಪತ್ಯ ಬದುಕಿಗೆ ಪಾದರ್ಪಣೆ ಮಾಡಿದ ಉಷಾ ಮತ್ತು ಕಿರಣ್ ರ ಮನಸುಗಳ ಮಿಲನಕ್ಕೆ ಬಂದ ಅಡೆತಡೆ ಮತ್ತು ಅದನ್ನು ಮೀರಿ, ಗೆದ್ದು ಮತ್ತೆ ಒಂದಾದ ನವ ದಂಪತಿಗಳ ನವಿರಾದ ಜಗಳದ ಸವಿಯಾದ ಕಥೆ ತಂಗಿ ಸುಮಾ ಉಮೇಶ್ ಗೌಡ ಅವರ ಕಾದಂಬರಿ ಈ “ಮನಸುಗಳ ಮಿಲನ”.
         ಈ ಉಷಾ ಮತ್ತು ಕಿರಣ್ ಪ್ರೇಮಿಗಳಿಗೆ ಮದುವೆ ನಂತರ ಅದು ಮೊದಲ ರಾತ್ರಿಯಲ್ಲೇ ಮುನಿಸು ಪ್ರಾರಂಭವಾಗುತ್ತದೆ. ಈ ಮುನಿಸಿಗೆ ಕಾರಣ ಏನಂತೀರಾ? ಡಿಗ್ರಿ ಸರ್ಟಿಫಿಕೇಟ್. ತನ್ನ ಹೆಂಡತಿ ಆಗುವವಳು ತನ್ನಷ್ಟು ಓದದಿದ್ದರೂ ಪರವಾಗಿಲ್ಲ, ಡಬಲ್ ಡಿಗ್ರಿ ಆಗದಿದ್ದರೂ ಸರಿ ಕನಿಷ್ಠ ಪಕ್ಷ ಸಿಂಗಲ್ ಡಿಗ್ರಿಯಾದರೂ ಓದಿರಲೇಬೇಕು ಎನ್ನುವ ಇಂಜಿನಿಯರ್ ಕಿರಣ್ ಗೆ ಉಷಾಳ ಪರಿಚಯವಿರಲಿಲ್ಲ ಎಂದೇನಿಲ್ಲ.      
      ಚಿಕ್ಕ ವಯಸ್ಸಿನಲ್ಲೇ ಕಿರಣ್ ತಾಯಿ ಸುನಂದಾ ತನ್ನ ಆಪ್ತ, ಆಪತ್ಭಾಂದವ ಗೆಳತಿ ಶೈಲಜಾಳ ಮರಣದ ತರುವಾಯ ಅವಳ ಮಗಳು ಉಷಾಳೇ ನನ್ನ ಮನೆ ಸೊಸೆ ಎಂದು ಪ್ರಮಾಣಿಸಿದ್ದಳು‌. ಇದು ಕ್ರಮೇಣ ಕಿರಣ್ಗೂ ಗೊತ್ತಾಗಿ ತನ್ನ ಹೃದಯದ ಕೋಣೆಯಲ್ಲಿ ಪ್ರೇಮದ ಆಲಾಪ ಶುರು ಹಚ್ಚಿಕೊಂಡಿದ್ದ. ಅಂತೆಯೇ ಉಷೆಯ ಆಶಾ ಕಿರಣದಲ್ಲಿ ಕಿರಣನೂ ಸೇರಿಕೊಂಡಿದ್ದ. ಪಿ.ಯು ಪರೀಕ್ಷೆಗೆ ಹೊರಟಿದ್ದ ಉಷಾಗೆ ದೇವಸ್ಥಾನದಲ್ಲಿ ಪ್ರೀತಿಯಿಂದ ಲೇಖನಿ ಉಡುಗೊರೆಯನ್ನೂ ನೀಡಿದ್ದ ಆದರ್ಶವಾದಿ ನಮ್ಮ ಚೆಲುವ ಕಿರಣ್. ಆ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದಾಗ ಹಿಗ್ಗಿದ್ದ ಈ ಕಿರಣ್ಗೆ ಉಷಾ ಮುಂದೆ ಓದು ನಿಲ್ಲಿಸಿದ ವಿಷಯ ತಿಳಿದದ್ದು ಮದುವೆ ನಂತರದ ಮೊದಲ ರಾತ್ರಿಯಂದೇ.
    ಉಷಾ ಓದು ನಿಲ್ಲಿಸಿದ್ದಕ್ಕೆ ಬಡತನ ಕಾರಣವಿರಬಹುದು, ಅಥವಾ ಆಕೆಯಲ್ಲಿ ಓದಿನ ಆಸಕ್ತಿ ಕುಂದಿರಬಹುದು, ದುಡಿದು ಮನೆ ನಡೆಸುವ ಅನಿವಾರ್ಯತೆ ಒದಗಿರಬಹುದು ಎಂದು ನಾವು ಯೋಚಿಸಿದರೆ ಅದು ತಪ್ಪಾಗುತ್ತದೆ. ರಾಜ್ಯಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡ ಉಷಾಳ ಹಿಂದೆ ಒಂದು ಮಾತ್ಸರ್ಯ ತುಂಬಿದ ಬಳಗವೇ ಇತ್ತು. ಅದೂ ತನ್ನ ಮನೆಯಲ್ಲಿಯೇ!
      ಉಷಾಳ ತಾಯಿ  ಶೈಲಜಾ ಊರ ಗೌಡನ ಮಗಳು. ಗೌಡ ಸಿರಿವಂತ. ಅವರ ಮನೆಯ ಕೂಲಿಕಾರನ ಮಗಳು ಸುನಂದಾ(ಕಿರಣ್ ನ ತಾಯಿ). ಸುನಂದಾ, ಶೈಲಜಾಳ ಸ್ನೇಹ ಮುರಿಯಲು ಗೌಡ ಸುನಂದಾಳ ಓದಿಗೆ ತಿಲಾಂಜಲಿ ಇಡಲು ಪ್ರಯತ್ನಿಸಿದರೂ ಶೈಲಜಾ ಮತ್ತು ಅವಳ ತಾಯಿ ರುಕ್ಮಿಣಿಯ ಸಹಾಯದಿಂದ ಹತ್ತನೇ ತರಗತಿ ಉತ್ತೀರ್ಣಳಾದ ಸುನಂದಾ ಒಳ್ಳೆಯ ಮನೆ ಸೇರಿದ್ದಳು. ಗಂಡ ಜಗನ್ನಾಥ ವಕೀಲನಾಗಿದ್ದು ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಿದ್ದ. ಇದನ್ನು ನೋಡಿ ಅಸೂಯೆಪಡುತ್ತಲೇ ಗೌಡ ಸ್ಮಶಾನದ ಹಾದಿ ಹಿಡಿದಿದ್ದ. ಆಸ್ತಿಗಾಗಿ ತಂಗಿಯ ಮದುವೆ ಮಾಡದೇ ಇದ್ದ ಶೈಲಜಾಳ ಅಣ್ಣಂದಿರು ಮರ್ಯಾದೆಗೆ ಅಂಜಿ ಎರಡನೇ ಸಂಬಂಧವಾಗಿ ಹೇಮಯ್ಯನಿಗೆ ಮದುವೆ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ವಿಧಿ ಎಲ್ಲವನ್ನು ತನಗೆ ಬೇಕಾದಾಗ ಹೀಗೆ ತಿರುಗಿಸಿಬಿಡುತ್ತದೆ ನೋಡಿ. ಊರ ಗೌಡನ ಮಗಳು ಈಗ ಬಡವಿ, ಗೌಡನ ಮನೆಯ ಆಳಿನ ಮಗಳು ಈಗ ಸಿರಿವಂತೆ.
     ಎಲ್ಲರಿಗೂ ಮಲತಾಯಿಯಾಗಿ ಚಿಕ್ಕಮ್ಮ ಇದ್ದರೆ ಉಷಾಗೆ ಮಲತಾಯಿ ಎಂದರೆ ಅವಳ ದೊಡ್ಡಮ್ಮ. ಮೊದಲನೇ ಹೆಂಡತಿಗೆ ಗಂಡು ಸಂತಾನ ಆಗಲಿಲ್ಲ ಎಂದು ಶೈಲಜಾಳನ್ನು ಮದುವೆ ಆದ ಹೆಮಯ್ಯಗೆ ಶೈಲಜಾಳಿಂದನೂ ಹೆಣ್ಣು ಸಂತಾನ ಆದದ್ದು ಅಸಹನೀಯವಾಯಿತು. ಮೊದಲೇ ತಂದೆ ತಾಯಿಯನ್ನು ಕಳೆದುಕೊಂಡು ಅಣ್ಣ ಅತ್ತಿಗೆಯರ ತಾತ್ಸಾರದಿಂದ ಬಳಲಿದ್ದ ಶೈಲಜಾಗೆ ಗಂಡನ ಮನೆಯಲ್ಲೂ ಬೇಕಾದ ಪ್ರೀತಿ ಸಿಗಲಿಲ್ಲ. ಗಂಡ ಮತ್ತು ಸವತಿಯ ಕಿರುಕುಳದಿಂದ ಮಗಳನ್ನು ಅನಾಥವಾಗಿಸಿ ಶೈಲಜಾ ಇಹಲೋಕ ತ್ಯಜಿಸುತ್ತಾಳೆ.
   
    ಅಸುನೀಗಿದ ಶೈಲಜಾಳ ಮಗಳು ಉಷಾಳನ್ನು ಕಂಡು ಮರುಗಿದ ಸುನಂದಾ ಅಂದೇ ತನ್ನ ಮಗನಿಗೆ ಉಷಾಳನ್ನು ತಂದುಕೊಳ್ಳುವ ನಿರ್ಧಾರ ಮಾಡುತ್ತಾಳೆ. ಸಹೃದಯಿ ವಕೀಲ ಶೈಲಜಾಳ ಗಂಡ ಜಗನ್ನಾಥ ಕೂಡ ಇದಕ್ಕೆ ಅಸ್ತು ಎಂದಿದ್ದರು. ಬೆಳೆದಂತೆ ಕಿರಣ್ಗೂ ಉಷಾಳ ಮೇಲೆ ಪ್ರೇಮ ಚಿಗುರಿತ್ತು.
    ಕಿರಣ್ ಗೆ ಹೆಂಡತಿ ಆಗೋಳು ಡಿಗ್ರಿ ಮುಗಿಸಿರಬೇಕು ಎಂಬ ವಿಷಯ ಉಷಾ ತಂದೆ ಮತ್ತು ಮಲತಾಯಿಗೆ ತಿಳಿದ ಮೇಲೆ ಉಷಾಳ ಮೇಲೆ ಮಲತಾಯಿ ಧೋರಣೆ ಹೆಚ್ಚಾಯಿತು. ಹೇಮಯ್ಯ ಕೂಡ ಹೆಂಡತಿ ಅಣತಿಯಂತೆ ಕುಣಿದು ಕುಣಿದು ಉಷಾಳನ್ನು ಮುಂದೆ ಓದದಂತೆ ನೋಡಿಕೊಳ್ಳುತ್ತಾನೆ. ಇವರ್ಯಾಕೆ ಉಷಾಳ ಓದನ್ನು ಮೊಟಕುಗೊಳಿಸಿದರು, ಇವರ ಕು-ಉದ್ದೇಶ ಏನಿತ್ತು ಎಂಬುದೇ ಕಥೆಯ ಅಂತರಾಳ. ಇಷ್ಟಕ್ಕೇ ಇವರ ಕತಂತ್ರ ನಿಲ್ಲದೆ, ಉಷಾಳನ್ನು ಒಬ್ಬ ೪೫ ದಾಟಿದ ಮುದುಕನೊಂದಿಗೆ ಮದುವೆಯನ್ನೂ ಅಣಿಗೊಳಿಸುತ್ತಾರೆ. ಈ ಮದುವೆಯ ದಿನವೇ ಸಮಯೋಚಿತವಾಗಿ ಬಂದು ಮದುವೆ ಮುರಿದ ಕೀರ್ತಿ ಜಗನ್ನಾಥ ಅವರಿಗೆ ಸಲ್ಲುತ್ತದೆ. ಆಗಲೇ ನೋಡಿ ಅವಸರವಸರವಾಗಿ ಕಿರಣನಿಂದ ಸುನಂದ ಉಷಾಳ ಕೊರಳಿಗೆ ತಾಳಿ ಕಟ್ಟಿಸಿಬಿಡುತ್ತಾರೆ. ಈ ಸಂದರ್ಭದಲ್ಲೇ ಉಷಾ ಓದನ್ನು ಮೊಟಕುಗೊಳಿಸಿದ ವಿಷಯ ಅವನಿಂದ ಮುಚ್ಚಿಡಲಾಗುತ್ತದೆ. ನಂತರ ಮೊದಲ ರಾತ್ರಿಯ ಸಂಭಾಷಣೆಯಲ್ಲಿ ಈ ವಿಷಯ ಕಿರಣಗೆ ತಿಳಿದು ಮೊದಲ ರಾತ್ರಿ ಮಧುರ ರಾತ್ರಿ ಆಗದೆ ಅವರಿಬ್ಬರಿಗೂ ಅನುಭವಿಸಲಾರದ ನೋವಿನ ರಾತ್ರಿ ಆಗುತ್ತದೆ.
      ಮರುದಿನವೇ ಉಷಾ ಮನೆಬಿಟ್ಟು ಹೋಗುತ್ತಾಳೆ. ಮುಂದೆ ಇರೋದೆಲ್ಲ ಉಷಾ ಪರ್ವ-ನೆ. ವಧುಗಳನ್ನು ಅಲಂಕರಿಸುವ ಬ್ಯೂಟೀಷಿಯನ್ ಆಗಿ, ಮಣ್ಣಿನ ಆಭರಣ ತಯಾರಕಿಯಾಗಿ ಕಿರಣನ ಕಣ್ಣು ಕುಕ್ಕುವಂತೆ ಉಷಾ ಬೆಳೆಯುತ್ತಾಳೆ. ತವರು ಮನೆಗೆ ದುಡಿದು ಹಣ ನಿಡುವ ಒಂದು ಯಂತ್ರವಾಗುತ್ತಾ, ಮನದಲ್ಲೇ ಗಂಡನನ್ನು ಆರಾಧಿಸುತ್ತಾ, ಅಗಲಿಕೆಯ ನೋವನ್ನು ನುಂಗುತ್ತಾ ಬದುಕು ಸಾಗಿಸುತ್ತಾಳೆ.
     ಇದರ ಜೊತೆಗೆ ತಂದೆ, ಮಲತಾಯಿಯ ಮೋಸದ ಜಾಲ ಉಷಾ ಮತ್ತು ಕಿರಣನಿಗೆ ತಿಳಿಯುತ್ತದೆ. ಬಾಲ್ಯದಿಂದಲೇ ಉಷಾಳನ್ನು ಆರಾಧಿಸುತ್ತಿದ್ದ ಕಿರಣನ ಮನಸು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಅವಳನ್ನು ದೂರ ಮಾಡಿಕೊಳ್ಳಲು ಮುಂದುವರೆಯುವುದಿಲ್ಲ. ಉಷಾಳ ನೇರ ಮಾತು, ತಂದೆ ಜಗನ್ನಾಥ ಅವರ ಚತುರತನದ ಮಾತು, ತಾಯಿ ಸುನಂದಾಳ ಮನಮಿಡಿಯುವ ಮಾತು, ತಂಗಿ ಪಲ್ಲವಿಯ ಸತ್ಯದ ಮಾತು ಕಿರಣನ ಮನ ಉಷಾಳ ಕಡೆ ವಾಲಿ, “ಓದು ಒಕ್ಕಾಲು ಬುದ್ಧಿ ಮುಕ್ಕಾಲು”, ಬದುಕಿಗೆ ಬೇಕಾದ ಈ ಬುದ್ಧಿ, ಚಾತುರ್ಯತೆ ಉಷಾಳಲ್ಲಿದೆ, ಡಿಗ್ರಿಗಳಿಗಿಂತ, ಸರ್ಟೀಫಿಕೇಟ್ಗಳಿಗಿಂತ ಬದುಕನ್ನು ಕಟ್ಟಿಕೊಳ್ಳಲು ಛಲ, ಶ್ರಮ ಪಡುವ ಮನ ಬೇಕು. ಅದು ಉಷಾಳಲ್ಲಿ ತುಸು ಹೆಚ್ಚೇ ಇದೆ ಎಂಬ ಅರಿವು ಕಿರಣನಿಗಾಗುತ್ತದೆ.
   
    ಲೇಖಕಿ, ಸಹೋದರಿ ಸುಮಾ ಅವರು ಕಥಾ ನಾಯಕಿ ಉಷಾ ಕಿರಣ ಕೊಟ್ಟ ಕಾಲ್ ಗೆಜ್ಜೆ ಕಳೆದುಕೊಂಡದ್ದು, ಅದು ಕಿರಣ್ ಗೆ ಸಿಕ್ಕು ಅದನ್ನು ನೀಡಲು ಉಷಾ ಮನೆಗೆ ಹೋದಾಗ ಅಲ್ಲಿ ಉಷಾ ಮತ್ತು ಅವಳ ತಂದೆ ತಾಯಿ ಮಧ್ಯೆ ನಡೆದ ಮಾತುಗಳನ್ನು ಕೇಳಿದ್ದು, ಕಿರಣ್ ತಪ್ಪೊಪ್ಪಿಕೊಂಡು ಒಲವಿನ ಓಲೆ ಬರೆದದ್ದು, ಅದು ಉಷಾ ಕೈಗೆ ಸಿಗದಂತೆ ತವರು ಮನೆಯವರು ಯೋಜಿಸಿದ್ದು, ಈ ಎಲ್ಲ ಸಂದರ್ಭಗಳನ್ನು ಉತ್ತಮವಾಗಿ ನಿರೂಪಿಸಿದ್ದಾರೆ. ಈ ಎಲ್ಲಾ ಘಟನಾವಳಿಗಳ ತರುವಾಯ ಮತ್ತೆ ಗಂಡನ ಮನೆ, ಮನ ತುಂಬುವ ಹಂತಕ್ಕೆ ಉಷಾ ಬಂದಾಗ ಓದುಗನು ಕಾದಂಬರಿಯಲ್ಲಿ ಕಳೆದು ಹೋಗಿರುತ್ತಾನೆ.
     ಆಯ್ತಲ್ವಾ, ಮತ್ತೆ ಉಷಾ ಕಿರಣನನ್ನು ಸೇರಿದಳು, ತನು ಮನಸುಗಳ ಮಿಲನ ಆಯ್ತು, ಇಲ್ಲಿಗೇ ಕಥೆ ಅಂತ್ಯ ಆಯ್ತು ಅನ್ಕೊಂಡ್ರಾ! ಖಂಡಿತ ಇಲ್ಲ. ಈಗ ಮಹತ್ತರವಾದ, ಮಹತ್ವವಾದ ಜಿವನ ಪಾಠವನ್ನು ಲೇಖಕಿ ಪಾತ್ರಗಳ ಮೂಲಕ ಬೋಧಿಸಿದ್ದಾರೆ. ಕು. ಉಷಾ, ಶ್ರೀಮತಿ ಉಷಾ ಕಿರಣ್ ಆಗಿ ಮಾಡಿದ ಸಾಧನೆ ಅನುಕರಣನೀಯ, ಅಭಿನಂದನೀಯ, ಮಾದರಿಯೂ ಆಗಿದೆ. ಕೇವಲ ಡಿಗ್ರಿ ಅಲ್ಲ ಅದಕ್ಕೂ ಮಿಗಿಲಾದ ಉನ್ನತ ವ್ಯಾಸಂಗ ಮಾಡಿ, ಉನ್ನತ ಹುದ್ದೆ ಪಡೆಯುವುದರ ಜೊತೆಗೆ ಸಮಾಜಕ್ಕೆ ತನ್ನ ಕಲೆಯನ್ನೂ ಪಸರಿಸುತ್ತಾಳೆ. ದಂಪತಿಗಳಿಬ್ಬರೂ ಅನೇಕ ಬಡವರ ಆಶಾಕಿರಣವಾಗಿ, ಸಮಾಜಮುಖಿಗಳಾಗಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳುತ್ತಾರೆ. ಉಷಾ ಮದುವೆಯ ಬಳಿಕವೂ ಹೇಗೆ ಸಾಧನೆಯ ಹಾದಿ ಹಿಡಿದಳು? ಕೊನೆಗೆ ಯಾವ ಹುದ್ದೆ ಗಳಿಸಿದಳು? ತವರಿನವರಿಗೆ ತಮ್ಮ ತಪ್ಪಿನ ಅರಿವಾಯಿತಾ? ಆದಾಯದ ಮೂಲವಾಗಿದ್ದ ಉಷಾ ದೂರವಾದ ನಂತರದ ತವರಿನ ಮನೆ ಹೇಗೆ ವಿನಾಶವಾಗುತ್ತಾ ಹೋಯಿತು? ಅನೇಕ ಬಡವರ ಕೈ ಹಿಡಿದ ಉಷಾ, ತನಗೆ ಮೋಸ ಮಾಡಿದ ತವರಿಗೆ ಆಸರೆಯಾಗುತ್ತಾಳಾ? ಎಲ್ಲದಕ್ಕೂ ಉತ್ತರಗಳನ್ನು
ಈ ಕಾದಂಬರಿಯನ್ನು ಓದಿ ಕಂಡುಕೊಳ್ಳಬೇಕು.
     ಲೇಖಕಿ ಕಾದಂಬರಿಯ ಪ್ರಾರಂಭದಲ್ಲಿ ‘ಮೊದಲ ರಾತ್ರಿ’ ಎಂಬ ಅಧ್ಯಾಯದಿಂದ ಪ್ರಾರಂಭಿಸುತ್ತಾರೆ. ಆದರೆ ಮೊದಲ ರಾತ್ರಿಯಲ್ಲಿ ಉಷಾ, ಕಿರಣ್ಗೆ ನೆನಪಿನಲ್ಲುಳಿಯಂವತದ್ದೇನು ಸಿಹಿ ಅನುಭವ ಜರಗುವುದಿಲ್ಲ. ಮುಂದೆ ಕೊನೆಯಲ್ಲಿ ‘ಎರಡನೇ ರಾತ್ರಿ’ ಎಂಬ ಶೀರ್ಷಿಕೆಯಡಿ ಇಬ್ಬರ ದೇಹ, ಮನಸುಗಳನ್ನು ಮಿಲನಿಸುತ್ತಾರೆ.
      ಇದು ಒಲವಿನ ಮಿಲನ, ಇಬ್ಬರೂ ಒಬ್ಬರಿಗೊಬ್ಬರು ಸೋತು ಗೆದ್ದ ಖುಷಿಯ ಮಿಲನ, ಬದುಕಿಗೆ ವಿದ್ಯೆ ಬೇಕು ಮತ್ತು ಬದುಕಲು ಶ್ರದ್ಧೆ ಇರಬೇಕು ಎಂದ ಎರಡು ಜೀವಗಳ ಮಿಲನ ಜೊತೆಗೆ ಸಾಹಿತ್ಯದೊಂದಿಗಿನ ಓದುಗರ ತನ್ಮಯದ ಮಿಲನ.
     ಈ ಕೃತಿಯಲ್ಲಿ  ಕೃತಿಕಾರರು ಸಂದರ್ಭೋಚಿತವಾಗಿ ಸಂಗತಿಗಳನ್ನು ಅಚ್ಚುಕಟ್ಟಾಗಿ ಪೋಣಿಸಿದ್ದಾರೆ, ಸಂಭಾಷಣೆಗಳಲ್ಲಿ ಆಪ್ತ ಭಾವ ಮೂಡುವಂತ ಭಾಷೆ ಬಳಸಿದ್ದಾರೆ. ಪಾತ್ರಗಳ ಸೃಷ್ಟಿ, ಅವರನ್ನು ಎಲ್ಲಿ, ಎಷ್ಟು ಬೇಕೋ ಅಷ್ಟಕ್ಕೆ ಸೀಮಿತಗೊಳಿಸಿ ಅವುಗಳಿಗೂ ನ್ಯಾಯ ಒದಗಿಸಿದ್ದಾರೆ. ಓದುಗುನನ್ನು ಸೆರೆ ಹಿಡಿಯಲು ಎಷ್ಟು ಬೇಕೋ ಅಷ್ಟು ತಿಳಿ ಹಾಸ್ಯ, ದಂಪತಿಗಳು ಒಬ್ಬರಿಗೊಬ್ಬರನ್ನು ರೇಗಿಸುವುದು, ಹುಸಿ ಕೋಪ ನಂತರದ ಪ್ರೇಮ, ಬದುಕಲ್ಲಿ ನವರಸಗಳು ಬೇಕೇ ಬೇಕು ಎಂಬುದನ್ನು ಕಾದಂಬರಿ ಪೂರ್ತಿಯಾಗಿ ತಿಳಿಸುತ್ತಾ ಹೋಗುತ್ತಾರೆ.
   ಈ ಕಾದಂಬರಿಯನ್ನು ಓದಲು ಪ್ರಾರಂಭಿಸಿದರೆ ನಿಲ್ಲಿಸಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಕಾದಂಬರಿ ಓದಿ ಮುಗಿಸಿದ ಮೇಲೆಯೇ ಉಸಿರು ಸರಾಗವಾಗುತ್ತದೆ. ಅಲ್ಲಿಯವರೆಗೆ ಕೃತಿಕಾರರು ಓದುಗನ ಧ್ಯಾನವನ್ನು ಕೇಂದ್ರೀಕರಿಸುತ್ತಾರೆ. ಆಗೆಲ್ಲಾ ಸಂಸಾರ ಸಮ್ಮೇತವಾಗಿ ಕುಳಿತು ನೋಡುವಂತಹ ಚಲನಚಿತ್ರ ಹೇಗೆ ಇಷ್ಟಪಡುತ್ತಿದ್ದೆವೋ, ಹಾಗೆ ಯುವಕರಾದಿಯಾಗಿ ಎಲ್ಲರಿಗೂ ಈ ಕೃತಿ ರುಚಿಸುತ್ತದೆ.
     ಈ ಕಾದಂಬರಿಯ ನಾಯಕಿ ಉಷಾ ಸ್ವಾಭಿಮಾನಿಯಾಗಿ, ದಿಟ್ಟೆಯಾಗಿ, ಛಲಗಾತಿಯಾಗಿ, ಸಹನಾ ಮೂರ್ತಿಯಾಗಿ ಜೊತೆಗೆ ಪ್ರೇಮಮಯಿಯಾಗಿ ಕಾಡುತ್ತಾಳೆ, ಹೃದಯದಲ್ಲಿ ಶಾಶ್ವತವಾಗಿ ಸ್ಥಾಪಿತವಾಗುತ್ತಾಳೆ. ಈ ಕೃತಿಯ ಸ್ತ್ರೀ ಓದುಗರು ತಮ್ಮಲ್ಲಿ ಉಷಾಳನ್ನು ಆವರಿಸಿಕೊಳ್ಳುತ್ತಾರೆ, ವಿವಾಹಿತ ಪುರುಷ ಓದುಗರು ತಮ್ಮ ಸಂಗಾತಿಯಲ್ಲಿ ಉಷಾಳಂತಹ ದಿಟ್ಟತನ, ಪ್ರೇಮತನವನ್ನು ಕಾಣಲು ಹವಣಿಸುತ್ತಾರೆ, ಈ ಹವಣಿಕೆಯಲ್ಲಿ ಖಂಡಿತವಾಗಿ ಈ ಕೃತಿಯನ್ನು ನನ್ನೊಡತಿಗೆ ಓದಲು ಪ್ರೇರೇಪಿಸುತ್ತೇನೆ.
     ಕೇವಲ ನಾಯಕಿಯಲ್ಲ, ನಾಯಕ ಕಿರಣ್ ಮತ್ತು ಅವನ ತಂದೆ ತಾಯಿ ಪ್ರತಿ ನಿತ್ಯ ನೆನಪಾಗುತ್ತಾರೆ. ಹೆತ್ತ ಮಗಳಿಗೇ ಮೋಸ ಮಾಡುವ ತಂದೆ ಹೇಮಯ್ಯ ನೆನೆವಿಗೆ ಬಂದು, ತಂದೆಯಾದವನು  ಹೀಗೂ ಇರ್ತಾನಾ!ಅನಿಸುತ್ತದೆ. ಒಟ್ಟಾರೆ “ಮನಸುಗಳ ಮಿಲನ” ಕಾದಂಬರಿ ಓದುಗನಿಂದ ಓದುಗನಿಗೆ ಹೇಳಲ್ಪಡುವಷ್ಟು ಚೆನ್ನಾಗಿ ಮೂಡಿಬಂದಿದೆ. ಭಾವನಾತ್ಮಕವಾದ, ಸಂಸಾರಕ್ಕೆ ಸಂಬಂಧಿಸಿದ ಇಂತಹ ಕಾದಂಬರಿಗಳು, ಸಂಬಂಧಗಳು ನಶಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಅವಶ್ಯಕವಾಗಿ ಓದುಗರಿಗೆ ತಲುಪಬೇಕಿದೆ.
    ಇಂತಹ ಒಂದು ಕಾದಂಬರಿ ಹತ್ತು ಯುವ ಜನರ ಬದುಕನ್ನು ಬದಲಿಸಿದರೆ ಸಹೋದರಿ ಸುಮಾ ಅವರ ಬರವಣಿಗೆ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಸಹೃದಯ ಓದುಗರು ಕೃತಿಯನ್ನು ಕೊಂಡು ಓದಬೇಕೆಂದು ಪ್ರಾರ್ಥಿಸುತ್ತೇನೆ.

ಕೃತಿಗಾಗಿ ಸಂಪರ್ಕಿಸಿ
——– ಸುಮಾ ಉಮೇಶ್ ಗೌಡ
9538533963

—————————————

ವರದೇಂದ್ರ ಕೆ ಮಸ್ಕಿ


           
        

2 thoughts on “ಸುಮ ಯು. ಕೆ ಅವರ ಕೃತಿ ‘ಮನಸುಗಳ ಮಿಲನ’ ಅವಲೋಕನ ವರದೇಂದ್ರ ಕೆ ಮಸ್ಕಿ

  1. ತುಂಬಾ ಧನ್ಯವಾದಗಳು ಅಣ್ಣಾ, ಈ ಮೊದಲು ಕೆಲವರು ಈ ಕಾದಂಬರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿಪ್ರಾಯ ತಿಳಿಸಿದ್ದರು ನೀವು ಅಭಿಪ್ರಾಯ ವ್ಯಕ್ತಪಡಿಸಿದ ರೀತಿ ಭಿನ್ನವಾಗಿ ಮನ ಮುಟ್ಟುವಂತೆ ಇದೆ. ತುಂಬಾ ಇಷ್ಟವಾಯಿತು. Thanks a lot….

Leave a Reply

Back To Top