ಶ್ರೀವಲ್ಲಿ ಶೇಷಾದ್ರಿ ಕವಿತೆ ಕಲಾ ತಪಸ್ಸು

ಕಾವ್ಯ ಸಂಗಾತಿ

ಶ್ರೀವಲ್ಲಿ ಶೇಷಾದ್ರಿ

ಕಲಾ ತಪಸ್ಸು

 ಹೊಸ್ತಿಲಾಚೆ ನಿಂತು ಕೈಬೀಸಿ ಒಮ್ಮೆ
ಕಣ್ಸನ್ನೆ ಬಾ ಬಾರೆಂದು ಕರೆಯುತ್ತಾಳೆ
ಪಕ್ಕದ ಹೂ ಬನಕೆ ಹಾಗೆ ಸುಮ್ಮನೆ
ಹ್ಞೂ ಎಂದು ಕೊಂಚ ಮನಸೋತರೆ ಸಾಕು
ಮೆಲ್ಲನೆ ಕೈ ಹಿಡಿಯುತ್ತಾಳೆ
ಹೂವಿನಷ್ಟೆ ಸುಕೋಮಲವಾಗಿ

ಅಲ್ಲೊಂದು ಮೌನ ಧ್ಯಾನವೇ ಸರಿ
ಮುಖಾ ಮುಖಿಯಾಗುತ್ತಾಳೆ ದಿಟ್ಟಿಸಿ
ಮುಂದೆ ಹೊಳೆದದ್ದೆಲ್ಲ ಗೌಪ್ಯ
ಸಂವೇದನೆಯುಕ್ಕಿ  ಸುಂದರ ಕಾವ್ಯ
ತಿದ್ದುವುದಲ್ಲ ಕಲಾಧಾರೆ ತಪಸ್ಸು
ತೊರೆದು ಹಗುರಾಗಬೇಕಿಲ್ಲಿ ಎಲ್ಲ ಚಿಂತೆ

ಸೀರೆ ಕುಪ್ಪಸಕೆ ಚಿತ್ತಾರದ ಕುಸುರಿ
ಹವಳ ಮುತ್ತು ಚಿನ್ನದ ಪದಕ
ಕಾಡಿಗೆ ಕುಂಕುಮ ಸಿರಿ ಗಂಧಲೇಪ
ಗೆಜ್ಜೆ ಕಾಪು ವಂಕಿವಡ್ಯಾಣ ಓಲೆ
ಇಟ್ಟು ತೊಟ್ಟರೆ ತಾನೆ ಪುಟ್ಟಕ್ಕ ಚೆಂದ
ಬಣ ಬಣವಿದ್ದರೆ ಎಲ್ಲಿಯ ಅಂದ


ಒಂಟಿ ಕಡಗ  ಕೈಬಳೆಯೆ
ಗೆಜ್ಜೆ ಬಿಚ್ಚಿಟ್ಟರದು ನಡೆಯೆ
ಶಬ್ದವಿರದರದು ಎದೆಯೆ
ಹನಿಗೆ ಹನಿ ಸೇರದೆ ನದಿಯೇ
ಪ್ರೀತಿ ಸುರಿಯದಿರೆ ಸುಧೆಯೆ
ಪದಕೆ ಪದ ಸೇರದೆ ನುಡಿಯೇ

ತುಸು ಅಲಂಕಾರ ಪ್ರಾಸ ಗ್ರಾಸ
ಛಂದ ಲಯ ಬದ್ಧ ವಿನ್ಯಾಸ
ಲಾಲಿತ್ಯದ ಒಲವು ಚೆಲುವು
ಹೊಂದಿಸಬೇಕು ಕಾಣದೆ ದಣಿವು
ಕೈಜಾರದ ಹಾಗೆ ಕಟ್ಟಿದ ದಿಂಡು
ಸರದಿ ಸಾಲಲ್ಲಿರಲಿ ಭಾವದ ಹಿಂಡು.

—————————

ಶ್ರೀವಲ್ಲಿ ಶೇಷಾದ್ರಿ .

Leave a Reply

Back To Top