ವಿಜಯಪುರ ಜಿಲ್ಲೆಯಲ್ಲೊಬ್ಬರು ಬಾಪೂ ಭಕ್ತ : ನೇತಾಜಿ ಗಾಂಧಿ..ಡಾ. ಮೀನಾಕ್ಷಿ ಪಾಟೀಲ್ ಅವರ ಲೇಖನ

ವಿಶೇಷ ಲೇಖನ

ವಿಜಯಪುರ ಜಿಲ್ಲೆಯಲ್ಲೊಬ್ಬರು ಬಾಪೂ ಭಕ್ತ : ನೇತಾಜಿ ಗಾಂಧಿ.

ಡಾ. ಮೀನಾಕ್ಷಿ ಪಾಟೀಲ್

ಪ್ರಸ್ತುತ ದಿನಮಾನಗಳಲ್ಲಿ ಮರೆಯಾಗುತ್ತಿರುವ ಮಹತ್ವದ ಮೌಲ್ಯಗಳು ಮನುಷ್ಯತ್ವ, ಸಮಾನತೆ,ರಾಷ್ಟ್ರಾಭಿಮಾನ ಪರಸ್ಪರರಲ್ಲಿಯ ಗೌರವ, ಸತ್ಯ,ಅಹಿಂಸೆ, ಪ್ರಾಮಾಣಿಕತೆ. ಪಾರದರ್ಶಕತೆ, ನೈತಿಕತೆ, ಸರಳತೆ, ಮಾನವೀಯತೆ
ವೈಯಕ್ತಿಕ ಬದುಕನ್ನು ಶುದ್ಧವಾಗಿಟ್ಟುಕೊಂಡು ಜೊತೆಗೆ ಸಾಮಾಜಿಕ ಬದುಕಿನಲ್ಲಿಯೂ ಶುದ್ಧತೆಯನ್ನು ಆಚರಿಸುವಲ್ಲಿ ಪರಿಶ್ರಮಿಸುವುದು ಸಾರ್ವಜನಿಕ ಬದುಕಿನಲ್ಲಿ ಅತಿ ಮುಖ್ಯವಾಗುತ್ತದೆ.
ಅಂತಹ ಅತ್ಯಮೂಲ್ಯವಾದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಂತರ ಸಮಾಜದಲ್ಲಿ ಆ ಮೌಲ್ಯಗಳನ್ನು ಬಿತ್ತರಿಸುವಲ್ಲಿ ವಿಶ್ವವಂದ್ಯ ಮಹಾತ್ಮ ಗಾಂಧೀಜಿಯವರು ಪಟ್ಟ ಪರಿಶ್ರಮ ಕಷ್ಟಕರವಾದದ್ದು.
ಅವರ ಎತ್ತರ – ಬಿತ್ತರಗಳು ಮಾನವ ಪ್ರಪಂಚದಾದ್ಯಂತ ಪಸರಿಸಿವೆ.
ಅಂತಹ ಮಹಾತ್ಮನ ಸತ್ಯಶೋಧನೆಯ ಬದುಕು, ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಂಘರ್ಷದ ಹೋರಾಟ,
ಆ ಮಾರ್ಗದಲ್ಲಿ ಬಂದ ಎಡರು- ತೊಡರುಗಳು ಲೆಕ್ಕವಿಲ್ಲದಷ್ಟು. ತಮ್ಮ ಜೀವನವನ್ನೇ ‘ ಸತ್ಯದೊಂದಿಗೆ ಪ್ರಯೋಗ’ ಮಾಡಿಕೊಂಡು
‘ ಮೈ ಲೈಫ್ ಈಸ್ ಮೈ ಮೆಸೇಜ್ ‘ ಎಂದು ಹೇಳಿದವರು ರಾಷ್ಟ್ರಪಿತ ಮಹಾತ್ಮ  ಗಾಂಧೀಜಿಯವರು.

ಅಂತಹ ಮಹಾತ್ಮನ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ ಗಾಂಧಿ ಭಕ್ತರೊಬ್ಬರು ನಮ್ಮ ವಿಜಯಪುರ ಜಿಲ್ಲೆಯಲ್ಲಿದ್ದಾರೆ.
ಅವರೇ ಗಾಂಧಿ ಉಪಾಸಕ ಬೇನಾಳದ ಪತ್ರಕರ್ತ ನೇತಾಜಿ ಗಾಂಧಿ.

ಭಾರತ ಸ್ವಾತಂತ್ರ್ಯ ಸಂಗ್ರಾಮದ ‘ಸುತ-ಪಿತ’ ರಾದ ಬಾಪೂ- ಬೋಸ್ ರು ಇವರಲ್ಲಿ ನೇತಾಜಿ ಗಾಂಧಿಯಾಗಿ ಸಮ್ಮಿಳಿತ ಗೊಂಡಿದ್ದಾರೆ.

ಇವರ ಮೊದಲ ಹೆಸರು ಬೇರೆ ಇದ್ದು ( ನೀಲೇಶ್ ಬೇನಾಳ್ ) ಬಾಪೂ- ಬೋಸ್ ರ ಪ್ರಭಾವಕ್ಕೊಳಗಾಗಿ  ನೇತಾಜಿ ಗಾಂಧಿ ಎಂದು ದಾಖಲೆ ಸಮೇತ ಹೆಸರು ಬದಲಾಯಿಸಿಕೊಂಡಿದ್ದಾರೆ. ಈಗವರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ವೋಟ್ ರ್ ಕಾರ್ಡ್ ಹೀಗೆ ಎಲ್ಲವೂ ನೇತಾಜಿ ಗಾಂಧಿಮಯವೇ.

1992 ರಿಂದ ಫ್ರೀಲ್ಯಾನ್ಸ್ ಪತ್ರಕರ್ತನಾಗಿರುವ ನೇತಾಜಿ ವೃತ್ತಿಯ ಜೊತೆಗೆ  ಸುಮಾರು 20 ವರ್ಷಗಳಿಂದ ರಾಜ್ಯದ ನೂರಾರು ಶಾಲಾ – ಕಾಲೇಜುಗಳಲ್ಲಿ ಬೋಸ್-ಬಾಪೂಜಿಯ
ತತ್ವ  ಪ್ರಚಾರ ಮಾಡುತ್ತಿದ್ದಾರೆ.
ಆ ಮಹಾತ್ಮನ ನಿಸ್ವಾರ್ಥ ಸೇವೆಯ ನೆಲೆಯಲ್ಲಿ ಎಲೆ ಮರೆಯ ಕಾಯಿಯಂತೆ ಸದ್ದಿಲ್ಲದೆ ಮಾಡುತ್ತಿರುವ ನೇತಾಜಿಯವರ ಸೇವೆ ಶ್ಲಾಘನೀಯವಾಗಿದೆ.

ಸಂಕೀರ್ಣತೆಯಿಂದ ಕೂಡಿರುವ 21 ಶತಮಾನದ ಸಮಾಜದಲ್ಲಿ  ಮಹಾತ್ಮನ ಹೆಸರನ್ನು ಎಲ್ಲೋ ಒಂದು ಕಡೆ ನಾವಿಂದು ಅಪಮೌಲ್ಯಗೊಳಿಸಿಕೊಳ್ಳುತ್ತ. ನೈತಿಕ ಬದುಕಿನ ಮೌಲ್ಯಗಳಿಗೆ, ಉತ್ತಮ ಆದರ್ಶಕ್ಕೆ ಪ್ರತಿರೂಪವಾದ ಗಾಂಧೀಜಿಯವರನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೇನೋ ? ಎನ್ನುವಂತೆ ಭಾಸವಾಗುತ್ತದೆ.
ಇದರ ನಡುವೆ,
ಗಾಂಧೀಜಿಯವರ ಹೆಸರಿಗೆ ಅವರ ಸರಳ ಬದುಕಿಗೆ ಉನ್ನತ ಆದರ್ಶಗಳಿಗಾಗಿರುವ ಅವ್ಯವಸ್ಥೆಯನ್ನು ಭಾರತವಿಂದು ಸರಿಪಡಿಸಿ ಕೊಳ್ಳಬೇಕಿದೆ. ಗಾಂಧೀಜಿಯವರ ಚಿಂತನಾ ಧಾರೆಯಿಂದ ಪ್ರಭಾವಿತರಾದ ನೇತಾಜಿ,
ರಾಷ್ಟ್ರಪಿತನ ತತ್ವ – ಚಿಂತನೆಗಳನ್ನು ಇಂದಿನ ಯುವ ಪೀಳಿಗೆಯವರಿಗೆ ತಿಳಿಸಿಕೊಡಬೇಕೆಂಬ ಬಲವಾದ ಆಶಯವನ್ನು ಇಟ್ಟುಕೊಂಡು ರಾಜ್ಯದ ಹಾಗೂ ಜಿಲ್ಲೆಯ ವಿವಿಧ ಶಾಲಾ – ಕಾಲೇಜುಗಳಿಗೆ ಭೇಟಿ ನೀಡುತ್ತ ಪ್ರಾಥಮಿಕ ಹಂತದಿಂದ ಹಿಡಿದು ಡಿಗ್ರಿ ಕಾಲೇಜಿನ ವರೆಗೆ
ಸಾವಿರಾರು ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಿದ್ದಾರೆ.

ಭಾರತ ಸ್ವಾತಂತ್ರ್ಯ ಹೋರಾಟದ ಸ್ವರೂಪ, ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ ,ಅಹಿಂಸೆ, ಮಾನವ ಪ್ರೀತಿ, ಅಸ್ಪೃಶ್ಯತಾ ನಿವಾರಣೆ, ಮತೀಯ ಐಕ್ಯತೆ, ವಿಶ್ವಬ್ರಾತೃತ್ವ, ಸರ್ವೋದಯ ಇವುಗಳ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ
ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿಯ ಗಾಂಧೀಜಿಯವರ ಅಂದಿನ ಚಿತ್ರಪಟಗಳು,
ಆ ಕುರಿತಾದ ಸಾಂಧರ್ಭಿಕ ಸಾಹಿತ್ಯ ಇವೆಲ್ಲವುಗಳ ಪ್ರದರ್ಶನ ಕೂಡ ಆಯೋಜಿಸುತ್ತಾರೆ.
ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಗಾಂಧೀಜಿಯವರ ಕುರಿತಾದ ಅಭಿಮಾನ, ಪ್ರೇರಣೆ ಮೂಡುತ್ತದೆ.

ಬಾಲ್ಯ ಜೀವನ :
ನೇತಾಜಿಯವರು ಆಲಮಟ್ಟಿ ಜಲಾಶಯದಿಂದ ಮುಳುಗಡೆ ಗೊಂಡ ಹಳೆಯ ಬೇನಾಳ ಗ್ರಾಮದಲ್ಲಿ ಮಧ್ಯಮ ವರ್ಗದ ಬಸವ ಪ್ರಣೀತ ಕುಟುಂಬದಲ್ಲಿ 1975 ಜೂನ್ 15ನೇ ತಾರೀಖಿನಂದು ಜನಿಸಿದರು. ತಾಯಿ ಕಾಶೀಬಾಯಿ ತಂದೆ ಉಮೇಶಪ್ಪ.
ಈ ದಂಪತಿಗಳ 11 ಜನ ಮಕ್ಕಳಲ್ಲಿ ಕೊನೆಯವರು ನೇತಾಜಿ.
ಪ್ರಾಥಮಿಕ ಶಿಕ್ಷಣವನ್ನು ಹಳೆಯ ಬೇನಾಳ ಗ್ರಾಮದಲ್ಲಿ ಓದಿದರು. ಹೈಸ್ಕೂಲು ಮತ್ತು ಕಾಲೇಜು ಶಿಕ್ಷಣವನ್ನು ಆಲಮಟ್ಟಿ ಡ್ಯಾಮ್ ಸೈಟಿನ ಮಂಜಪ್ಪ ಹರ್ಡೇಕರ್ ಮೆಮೋರಿಯಲ್ ಜ್ಯುನಿಯರ್ ಕಾಲೇಜು ಹಾಗೂ  ಮುದ್ದೇಬಿಹಾಳದ ಎಂ.ಜಿ.ವಿ.ಸಿ. ಕಾಲೇಜಿನಲ್ಲಿ ಬಿ.ಎ. ಓದಿದರು. ಮುಂದೆ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾವನ್ನು ಮಾನಸ ಗಂಗೋತ್ರಿ ಹಾಗೂ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿವಿಯಲ್ಲಿ ಮುಗಿಸಿದರು.

ಬರವಣಿಗೆ ಬದುಕು :
ಮೊದ ಮೊದಲು ಫ್ರೀ ಲ್ಯಾನ್ಸರ್ ಆಗಿದ್ದ ನೇತಾಜಿ
ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ಮೂಲಕ ವರದಿಗಾರರಾಗಿ ಬರವಣಿಗೆಯ ಬದುಕಿಗೆ ಮುನ್ನುಡಿ ಬರೆಯುತ್ತಾರೆ.
ನಂತರದಲ್ಲಿ ಉಷಾ ಕಿರಣ ಕನ್ನಡ ದಿನಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ.
ಹೀಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ನೂರಾರು ಲೇಖನಗಳು ಪ್ರಕಟವಾಗಿವೆ.
ಈ ನಡುವೆ
2003ರಲ್ಲಿ ವಿಜಯಪುರ ಆಕಾಶವಾಣಿ ಕೇಂದ್ರದಲ್ಲಿ ನಿವೇದಕರಾಗಿ ಕೆಲಸ ಶುರು ಮಾಡುತ್ತಾರೆ.
ಜರ್ನಲಿಸಂನಲ್ಲಿ ಸಾಕಷ್ಟು ಅನುಭವ ಹೊಂದಿರುವ ನೇತಾಜಿ ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರು ಪ್ರಕಟಿಸುತ್ತಿದ್ದ ‘ ಯಂಗ್ ಇಂಡಿಯಾ ‘ ಜರ್ನಲ್  ಶೀರ್ಷಿಕೆಯನ್ನು 68 ವರುಷಗಳ ನಂತರ ಪಡೆದುಕೊಂಡು
ಅದೇ ಪತ್ರಿಕೆಯನ್ನು ಈಗ ಪ್ರಕಟಿಸುತ್ತಿದ್ದಾರೆ .
ಆ ಮೂಲಕ ಗಾಂಧೀಜಿಯವರ ವಿಚಾರಗಳನ್ನು ಪ್ರಚುರ ಪಡಿಸುತ್ತಿದ್ದಾರೆ.

ಈ ನಡುವೆ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯ ವಾರ್ತೆಗಳ ವಿಭಾಗದಲ್ಲಿ 5 ವರ್ಷ  ಹಂಗಾಮಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸುಮಾರು 15 ವರ್ಷಗಳ ಹಿಂದೆ ಸಮಾನ ಮನಸ್ಕರನ್ನು ಒಟ್ಟುಗೂಡಿಸಿಕೊಂಡು ಸ್ವಗ್ರಾಮ ಹೊಸ ಬೇನಾಳದಲ್ಲಿ” ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ “ಎಂಬ ಸಂಸ್ಥೆಯನ್ನು ಹುಟ್ಟು ಹಾಕಿಕೊಂಡು ಗಾಂಧಿ ತತ್ವ ಪ್ರಚಾರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ.ಅದೇ
ಗ್ರಾಮದಲ್ಲಿ
ನೇತಾಜಿ ಯುವಕರ ಸಂಘವು ಇವರ ಅಧ್ಯಕ್ಷತೆಯಲ್ಲಿ ಸಕ್ರಿಯ ವಾಗಿದೆ.
ಈ ಎರಡೂ ಸಂಸ್ಥೆಗಳ ಮೂಲಕ ರಾಜ್ಯದ ಸಾವಿರಾರು ಶಿಕ್ಷಣ ಸಂಸ್ಥೆಯ ಸುಮಾರು 60,000 ಮಕ್ಕಳಿಗೆ ಗಾಂಧೀಜಿ ಮತ್ತು ನೇತಾಜಿ ಚಿಂತನೆಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ,
ಅಷ್ಟೇ ಅಲ್ಲದೆ
ಬ್ರಿಟಿಷ್ ರೂಲ್ಡ್ ಭಾರತ ಸಂದರ್ಭದ ಛಾಯಾಚಿತ್ರಗಳನ್ನು ಮತ್ತೂ ಅದಕ್ಕೆ ಸಂಬಂಧಿಸಿದ ಸಾಹಿತ್ಯ ಪ್ರದರ್ಶನದ ಭಾವಚಿತ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು  ಕಾರ್ಯಕ್ರಮಗಳಲ್ಲಿ ಮತ್ತಷ್ಟು ಮೆರಗು ತುಂಬುತ್ತಾರೆ.
ಸಾತ್ವಿಕತೆಯ ನುಡಿ, ಸರಳ ನಡೆ ಇವರ ವೇಷ ಭೂಷಣ ಕೂಡಾ ಸರಳವಾಗಿರುತ್ತವೆ. ಬಾಪೂಜಿಯಂತೆ ಬೋಳು ತಲೆ, ಖಾದಿ ಅಂಗಿ, ಒಂದು ಲುಂಗಿ, ಅಪರೂಪಕ್ಕೆ ಗಾಂಧಿ ಟೋಪಿ ಧರಿಸಿ ಗಾಂಧಿ ಅಭಿಮಾನಿಗಳ ಗಮನ ಸೆಳೆಯುತ್ತಾರೆ.

ಇವರ ಹೆಸರಷ್ಟೇ ಅಲ್ಲ ಮಹಾತ್ಮರ ಹೆಸರುಗಳು ಮಕ್ಕಳಿಗೂ ಇವೆ.
ಮೊದಲ ಮಗ ತಿಲಕ್ ಗಾಂಧಿ ಎರಡನೇ ಮಗ ಗೋಖಲೆ ಗಾಂಧಿ ಎಂದು ಹೆಸರಿಟ್ಟಿದ್ದಾರೆ
ಗಾಂಧಿ ಭವನ :
ವಿಜಯಪುರ ನಗರದಲ್ಲಿ ವರುಷದ ಹಿಂದೆ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ  ಆಕರ್ಷಕವಾದ ಗಾಂಧಿ ಭವನವನ್ನು ನಿರ್ಮಿಸಲಾಗಿದೆ ಅಲ್ಲಿ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಸವಿನೆನಪಿನ ನೂರಾರು ಛಾಯಾಚಿತ್ರಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾಹಿತ್ಯದ ಚಿತ್ರಪಟಗಳನ್ನು ಜೋಡಿಸಲಾಗಿದೆ.
ಅಲ್ಲಿ ಗಾಂಧಿ ಸಾಹಿತ್ಯ ಕುರಿತಾದ ಗ್ರಂಥಾಲಯವಿದೆ
ಒಳ ಹಾಗೂ ಹೊರ ಆವರಣದಲ್ಲಿ ಗಾಂಧೀಜಿಯವರ ಪ್ರತಿಮೆಗಳನ್ನು ಜಿಲ್ಲಾಡಳಿತದಿಂದ ನಿರ್ಮಿಸಲಾಗಿದೆ .
ಅದರ ನಿರ್ವಹಣಾ ಸಮಿತಿಯ ಸದಸ್ಯರಲ್ಲಿ ನೇತಾಜಿಯೂ ಒಬ್ಬರಾಗಿದ್ದಾರೆ.
ಇವರ ಗಾಂಧಿ ಸೇವಾ ಕಾರ್ಯವನ್ನು ಗುರುತಿಸಿ
‘ ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ ಆರ್ಗನೈಸೇಷನ್ ‘ ನವರು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆಸಿದ ಸಮಾರಂಭದಲ್ಲಿ ‘ ಗಾಂಧಿ ಫಿಲಾಸಫಿ ಅಂಡ್ ನ್ಯಾಷನಲ್ ಇಂಟಿಗ್ರಿಟಿ ಸರ್ವಿಸ್ ‘ ಗಾಗಿ  ಅಚೀವ್ಮೆಂಟ್ ಅವಾರ್ಡ್ ನ್ನು ನೀಡಿ ಗೌರವಿಸಿದ್ದಾರೆ.
ಇದು ಅವರ ಸೇವಾ ಕಾರ್ಯಕ್ಕೆ ಸಂದ ಗೌರವ ಎನ್ನಬೇಕು.
ಅಲ್ಲದೆ ಮಹಾತ್ಮ ಗಾಂಧಿ ಸದ್ಭಾವನಾ ರಾಜ್ಯ ಪ್ರಶಸ್ತಿ,
ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ,
ಧಾರವಾಡದ ‘  ಅಪ್ನಾ ದೇಶ್  ಫೌಂಡೇಶನ್ ‘ ದಿಂದ ‘ ಶ್ರಮಿಕ್ ರತ್ನ ‘ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಜೊತೆಗೆ ರಾಜ್ಯದ ನೂರಾರು ಸಂಘ – ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ.

ದೇಶ ಸಂಚಾರ :
ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು 1915 ಮತ್ತು 1933ರಲ್ಲಿ ಒಟ್ಟು ಎರಡು ಸಲ ಇಡೀ ದೇಶವನ್ನು ಪರ್ಯಟನೆ ಮಾಡಿದರು.
ಅವರು ಸಂಚರಿಸಿದ ಸಾವಿರಾರು ಸ್ಥಳಗಳಲ್ಲಿ
ಈ ನೇತಾಜಿ ಹತ್ತಾರು ಸ್ಥಳಗಳಿಗೆ ಭೇಟಿ ನೀಡಿದ್ದಾರೆ,
ಅವುಗಳ ಸಂಕ್ಷಿಪ್ತ  ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿರುವ ಹತ್ತಾರು ವಾಟ್ಸಪ್ ಗುಂಪುಗಳು ಹಾಗೂ ಫೇಸ್ಬುಕ್ ಮೂಲಕ ಹಂಚಿಕೊಳ್ಳುತ್ತಾರೆ,
ಇದು ಅವರ ಹತ್ತಾರು ವರುಷ ಗಳ ಹವ್ಯಾಸವೂ ಆಗಿದೆ,
ಇಲ್ಲಿಯ ತನಕ  ಮಹಾತ್ಮನ ಹುಟ್ಟೂರಾದ ಗುಜರಾತ್ ಪೋರ್ ಬಂದರ್ ಮನೆ, ಮಹಾರಾಷ್ಟ್ರ ಜಳಗಾಂವ್ ದ ಗಾಂಧಿ ತೀರ್ಥ, ಬಾಪೂ ಹತ್ಯೆಯಾದ ದಿಲ್ಲಿಯ ಬಿರ್ಲಾ ಹೌಸ್, ಅವರ ಸಮಾಧಿ ಸ್ಥಳ ರಾಜಘಾಟ್,
ಅಹಮದಾಬಾದ್  
ಸತ್ಯಾಗ್ರಹ ಸಾಬರಮತಿ ಆಶ್ರಮ, ಮಹಾರಾಷ್ಟ್ರದ ವಾರ್ಧಾ- ಸೇವಾಗ್ರಾಮ ಆಶ್ರಮ, ಪುಣೆಯ ಸಸೂನ್ ಆಸ್ಪತ್ರೆ,
ವಿನೋಬಾಜಿ ಆಶ್ರಮ, ಪೌನಾರ್  ಬ್ರಹ್ಮ ವಿದ್ಯಾ ಮಂದಿರ, 1942ರ ಐತಿಹಾಸಿಕ ಕ್ವಿಟ್ ಇಂಡಿಯಾ ಮೂವ್ಮೆಂಟ್ ಲಾಂಚ್ ಮಾಡಿದ
ಮುಂಬೈ ಗೋವಾಲಿಯಾ ಟ್ಯಾಂಕ್ ಮೈದಾನ್, 1919ರ ರೌಲೆಟ್ ಆಕ್ಟ್ ವಿರುದ್ಧ ‘ ಸ್ಟ್ರೈಕ್ ಡೇ ‘ ಗೆ ಕರೆಕೊಟ್ಟ ಮಣಿ ಭವನ್,
1933ರ ಅಸ್ಪೃಶ್ಯತಾ ನಿವಾರಣಾ ಯಾತ್ರೆಯ ಸಂದರ್ಭದಲ್ಲಿ ಭೇಟಿ ನೀಡಿದ ಮಧುರೈ ಮೀನಾಕ್ಷಿ ಟೆಂಪಲ್,
1921ರಲ್ಲಿ
ಸತ್ಯಾಗ್ರಹಿ ಗಾಂಧಿ ತಾವುಟ್ಟ
ಪೂರ್ತಿ ಬಟ್ಟೆ ಕಳಚಿ ಅರೆ ಬೆತ್ತಲೆ ಫಕೀರನಾದ ಮಧುರೈ ಮನೆ, 1930ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಐತಿಹಾಸಿಕ ದಾಂಡಿ ಸಮುದ್ರ ತೀರ, ಅವರನ್ನು ಅರೆಸ್ಟ್ ಮಾಡಿದ ನವಸಾರಿ- ಕರಾಡಿಯ ಗುಡಿಸಲು,
ಗಾಂಧಿ ಘಾಟ್,
ಪುಣೆಯ ಜೈಲು ಹಾಗೂ ಯರವಾಡಾ ಸೆಂಟ್ರಲ್ ಜೈಲು, ಕರ್ನಾಟಕ ಅಂಕೋಲಾದ ಬಾಸಗೋಡು ಸಮುದ್ರ ತೀರ ಸೇರಿದಂತೆ ಭಾರತದಲ್ಲಿ
ಬಾಪೂಜಿ ಇಟ್ಟ ಹೆಜ್ಜೆ ಗುರುತುಗಳನ್ನು ಈ ನೇತಾಜಿ ಸ್ಪರ್ಶಿಸಿ ಬಂದಿದ್ದಾರೆ.
ಬದುಕಿನ ಕಡೆಯವರೆಗೂ ಬಾಪೂಜಿ ಸೇವಾ ಕಾರ್ಯ, ಈ ಗಾಂಧಿ ಪಯಣ ಮುಂದುವರೆಯಲಿದೆ ಎನ್ನುತ್ತಾರೆ ಈ ತರುಣ ಗಾಂಧಿ.

ಶುಭಾಶಯಗಳು:
ಗಾಂಧಿ ತತ್ವ ಸಿದ್ದಾಂತಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ
ಸಮರ್ಪಿಸಿಕೊಂಡು ಉಸಿರಿರುವ ತನಕ ಮಹಾತ್ಮನ ಕಾರ್ಯಕ್ಕೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ,
‘ ಮಹಾತ್ಮ ನನ್ನ ಆತ್ಮವಾದರೆ, ನೇತಾಜಿ ನನ್ನ ರಕ್ತ ಮಾಂಸ ವಾಗಿದ್ದಾರೆ ‘ ಎಂದು ಹೆಮ್ಮೆಯಿಂದ ಹೇಳುವ ನೇತಾಜಿಯವರಿಗೆ
‘ ವಿಶ್ವ ಅಹಿಂಸಾ ದಿನ ‘ ದ ಈ ಶುಭ ಸಂದರ್ಭದಲ್ಲಿ ಹೃದಯಪೂರ್ವಕ ಅಭಿನಂದನೆಗಳನ್ನು ಹೇಳೋಣ.
ನಮಸ್ಕಾರಗಳು.


ಡಾ. ಮೀನಾಕ್ಷಿ ಪಾಟೀಲ್

Leave a Reply

Back To Top