ಕಾವ್ಯ ಸಂಗಾತಿ
ಹಾ ಮ ಸತೀಶ
ನನ್ನ ಹಳ್ಳಿಯ ಜನರ ಒಡಲು
ನನ್ನ ಹಳ್ಳಿಯ ಜನರ ಒಡಲಿದೊ
ಬರಿದೆ ಅಗ್ನಿ ಕುಂಡ
ಅಲ್ಲಿ ಬರದ ಕಾರ್ಮೋಡದಲ್ಲಿ
ನೇತಾರ ಇದ್ದು ದಂಡ
ಕೂಳು ಕೂಳಿಗು ಗತಿಯು ಇಲ್ಲದೆ
ಜನರ ವಲಸೆ ಹಾಡು
ಹವಾ ರೂಮಲೆ ಕುಳಿತ ನಾಯಕನ
ಹೊಟ್ಟೆ ಬಿರಿಯೆ ನೋಡು
ಡಿ. ಸಿ ಕುಳಿತ ಕಾರಲ್ಲಿ ಎ. ಸಿಯ
ಕಾರುಬಾರು ನೋಡು
ಹಳ್ಳಿ ಜನರ ಜೋಪಡಿಯ ತುಂಬಾ
ಬರಿದೆ ಗಾಳಿ ನೋಡು
ಜಲವು ಬತ್ತಿದ ಕೆರೆಯ ಮಣ್ಣಲಿ
ಸತ್ತ ದನದ ಕೊಂಬು
ನೀರು ಇಲ್ಲದೆ ಒಣಗಿ ಕರಟಿದ
ಭತ್ತ , ರಾಗಿ ಕಬ್ಬು
ಎಲುಬುಗೂಡಿನ ಹರೆಯ ಹೆಣ್ಣಿನ
ಮನದಿ ಆಸೆ ಇಲ್ಲ
ಜಲವು ಸಿಕ್ಕರೆ ಸಾಕು ಎನ್ನುತ
ಕೊಡದಿ ನಡೆವಳಲ್ಲ
ತುತ್ತು ಅನ್ನಕು ಗತಿಯು ಇಲ್ಲದೆ
ಸಾಯ್ವ ಮಕ್ಕಳೆಲ್ಲ
ಅದನು ನೋಡದೆ ಮುಂದೆ ಸಾಗುವ
ನಾಯಕರೆ ನಿಲ್ಲಿ
ಜೀವ ಹಂದರದ ಎತ್ತಿನೊಡಲೊಡನೆ
ಸಾಗುತಿಹನು ರೈತ
ಬಿಗಿದ ಭೂಮಿಯ ನೋಡಿದಾಗಲೆ
ಪ್ರಾಣ ಬಿಟ್ಟನಾತ
ಯಾರ ಕಣ್ಣಿಗೂ ಬೀಳಲಿಲ್ಲವೆ
ಹಳ್ಳಿ ಜನರ ನೋವು
ಅವರ ಶಾಪ ತಟ್ಟಿಯಿಂದು
ಸರಕಾರ ನುಚ್ಚು ನೂರು
ಹಸಿದ ಒಡಲಿಗೆ ಅನ್ನ ನೀಡಿರೊ
ಎ.ಸಿ ಜನರೆ ನೀವು
ಬೀರು ಕೊಡುವುದನು ತಳ್ಳಿ ಆಚೆಗೆ
ನೀರು ಕೊಡಿರಿ ನೀವು
ಪಕ್ಷ ಪಕ್ಷದೊಳು ದೊಂಬರಾಟವ
ಸಾಕು ಮಾಡಿ ನೀವು
ಒಂದೇ ತಾಯ ಹಾಲ್ ಕುಡಿದ ಮಕ್ಕಳು
ಒಂದುಗೂಡಿ ಸಾಕು
ಭೂಮಿ ಅದುರಿದೆ ಮಹಡಿ ಬೀಳುತಿದೆ
ಕುಲದ ನಾಶ ಸಾಕು
ದೇವ ಮೆಚ್ಚನು ಜನತೆ ಮೆಚ್ಚದು
ನಿಮ್ಮ ಜಗಳ ಸಾಕು
ಮತಿಯ ಭ್ರಾಂತಿಯ ದೂರ ಮಾಡುತ
ಮುಂದೆ ಸಾಗ ಬನ್ನಿ
ಅನ್ನ ನೀರು ಸೂರಿಲ್ಲದ ಜನಕೆ
ದಾರಿ ದೀಪವಾಗಿ
ಮತ್ತೆ ಹಳ್ಳಿಯ ಜನರ ಬದುಕಲಿ
ನಲಿವು ಹಚ್ಚ ಬನ್ನಿ
ಬೆಳೆದ ಬೆಳೆಗದು ಸರಿಯ ರೊಕ್ಕವ
ನೀಡಿ ಗೆಲುವ ತನ್ನಿ
ಹಾ ಮ ಸತೀಶ ಬೆಂಗಳೂರು
Nice sir
ತುಂಬಾ ಇಷ್ಟವಾಯಿತು