ಹಮೀದಾ ಬೇಗಂ ದೇಸಾಯಿ-ವಿಜಯದಶಮಿ…

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ವಿಜಯದಶಮಿ…

ಬಂತು ನವರಾತ್ರಿ
ಕಳೆಯೆ ಕಾಳರಾತ್ರಿ…
ಬೆಳಗುತಿದೆ ಶಾಂತ ಹಣತೆ
ಉರಿಸುತಲಿ ದುಗುಡ ಚಿಂತೆ..

ಅಂದು…
ಮನೆ ಮನೆಯಲಿ ಹರುಷ
ನೆರೆಹೊರೆಯ ಸ್ನೇಹ-ಸರಸ
ಮತಭೇದವಿರದ ಮನಸು
ನಿರ್ಭೀತ ನಿರಾಳ ಬದುಕಿನ ನನಸು…

ಇಂದು…
ಬಾಗಿಲಿಕ್ಕಿದ ಮನೆಯೊಳಗೆ
ಅಳುಕಿ ಉರಿಯುತಿದೆ ದೀಪ
ಯಾವ ಚಣದಿ ಎಂಥ ರೂಪ
ನಂದಿಸಬಹುದೆಂಬ ಪರಿತಾಪ…

ಜಾತಿ ಅಂತಸ್ತುಗಳ ನಡುವೆ
ಕೃತಕ ನಗುವಿನ ಲೇಪ..
ಭಯದ ನೆರಳಲಿ ಬದುಕ
ನೂಕುವ ಅಂಧಕೂಪ…

ಎಂದು ಕಳೆಯುವುದೋ
ಭೂಮಿತಾಯೊಡಲಿನ ತಾಪ
ಎಂದು ತೊಳೆಯುವುದೋ
ಮಲಿನ ಮನಸುಗಳ ಪಾಪ…

ಎಂದು ಹತರಾಗುವರೋ
ನಯವಂಚಕ ರಕ್ಕಸರು..
ಎಂದು ದಹಿಸುವರೋ
ದೇಶದ್ರೋಹಿ ದಾನವರು…

ಎಂದು ಭಸ್ಮವಾಗುವರೋ
ಕಳ್ಳ ಭಸ್ಮಾಸುರರು ;
ಎಂದು ಬೆಳಗುವದೋ
ಮಾನವತೆಯ ಉಜ್ವಲ ದೀಪ…
….ಅಂದೇ ಮಹಾನವಮಿ
….ಅಂದೇ ವಿಜಯದಶಮಿ…!


ಹಮೀದಾ ಬೇಗಂ ದೇಸಾಯಿ

Leave a Reply

Back To Top