ಡಾ ಅನ್ನಪೂರ್ಣ ಹಿರೇಮಠ-ಗಜಲ್

hiremtt

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ-

ಗಜಲ್

ಹೊನ್ನಾಸೆಯ ಬಣ್ಣ ಕರಗಿ ಕಣ್ಣು ಮಂಜಾಗದ ಮುನ್ನ ಒಮ್ಮೆ ಬಾರೋ
ಚಿನ್ನಾಸೆಯ ಭರವಸೆ ಸೊರಗಿ ತನು ಮುಪ್ಪಾಗದ ಮುನ್ನ ಒಮ್ಮೆ ಬಾರೋ

ಕಾದು ಸೋತು ಹೋದ ಕಾತರವಿಂದು ಕೊರಗಿ ಕೊರಗಿ ಕಂಗಾಲಾಗಿದೆ
ತಂಗಾಳಿಯ ತಂಪಿಗೆ ನಡುಗಿ ಮನ ಬೆಪ್ಪಾಗದ ಮುನ್ನ ಒಮ್ಮೆ ಬಾರೋ

ಅನವರತ ನಿನ್ನ ನೆನಪಿನಲಿ ಜೀವವಿಂದು ಮರುಗಿ ಮರುಗಿ ಮಂಕಾಗಿದೆ
ಸುಳಿಗಾಳಿಯ ಸುಳಿಗೆ ಬೆಪ್ಪಾಗಿ ಕರ್ಣ ಕಿವುಡಾಗದ ಮುನ್ನ ಒಮ್ಮೆ ಬಾರೋ

ಎಲ್ಲವೂ ಸತ್ಯವೆಂಬ ಬರವಸೆಯಲಿ ಭಾವವಿಂದು ಬಳಲಿ ಬಳಲಿ ಸುಕ್ಕಾಗಿದೆ
ಸ್ವಾತಿಮಳೆಯ ಸದ್ದಿಗೆ ಬೆರಗಾಗಿ ಬಾನು ಅಪ್ಪಳಿಸದ ಮುನ್ನ ಒಮ್ಮೆ ಬಾರೋ

ತಾವರೆಯ ಹೂವಂತೆ ಕೆಸರಲ್ಲಿ ಕುಸಿದು ಮುಳುಗಿ ಮುಳುಗಿ ಭಯವಾಗಿದೆ
ಮಂಜಿನನಿಯ ಪಿಸುಮಾತಿಗೆ ನಲುಗಿ ಕಾನು ಕಳವಳಿಸದ ಮುನ್ನ ಒಮ್ಮೆ ಬಾರೋ

ಹಕ್ಕಿಯಿಂಚರದ ಇಂಪಿನಾ ಸದ್ದು ಗದ್ದಲಕೆ ಕಂಪಿಸಿ ಕಂಪಿಸಿ ಕುಸಿದೋಗಿದೆ
ಆಸರೆಯ ಮರದ ಬಡ್ಡೆಗೆ ಒರಗಿ ಮೈಮರೆಯದ ಮುನ್ನ ಒಮ್ಮೆ ಬಾರೋ

ಅನುಳ ಹಂಬಲದ ಒಡಲಲಿ ಪ್ರೀತಿ ತುಳುಕಿ ತುಳುಕಿ ಖಾಲಿಯಾಗುತಿದೆ
ಹರಕೆಯ ಕುಡಿಗೆ ಆರದ ಕಿಡಿ ಸೋಕಿ ಕರಕಲಾಗದ ಮುನ್ನ ಒಮ್ಮೆ ಬಾರೋ


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top