ಕಾವ್ಯ ಸಂಗಾತಿ
ರೇಖಾ ಗಜಾನನ –
ಸಮಾಧಾನ
ಬಸ್ಸಿನ ಅಕ್ಕ ಪಕ್ಕ ಕುಳಿತ
ಅವರ ನಡುವೆ
ಮೌನದ ಅಂತರವಿದೆ
ಸಣ್ಣ ಮಾತಿನ ಎಳೆ
ತಾಕದಂತ ಜಾಗ್ರತೆ
ಇಬ್ಬರಲ್ಲೂ
ಡ್ರೈವರ್ ಬ್ರೇಕ್ ಒತ್ತಿದ ಕ್ಷಣ
ನಗುವೊಂದು ವಿನಿಮಯವಾಗಿ
ಕುತೂಹಲ ಗರಿಗೆದರಿ
ದಿಟ್ಟಿಸತೊಡಗಿದರು
ಪರಸ್ಪರ ಕಣ್ತಪ್ಪಿಸಿ
ಪರದೆಯೊಳಗೆ ಕತ್ತಲಿದ್ದರೂ
ಅವಳು ಹೇಗೆ ನಗುತ್ತಾಳೆಂದು
ಇವಳು
ಜಗದ ತಾಪಗಳಿಗೆ
ಮೈಯೊಡ್ಡಿಯೂ
ಹೇಗೆ ಅರಳುತ್ತಾಳೆ ಎಂದು ಅವಳು
ಅಚ್ಚರಿಯಲ್ಲಿ ಪಯಣ ಸಾಗುತ್ತದೆ
ಇಬ್ಬರ ಸಮಾಧಾನ ಕಂಡ
ಬಸ್ಸು ನಸುನಗುತ್ತ ಉರುಳುತ್ತದೆ
ರೇಖಾ ಗಜಾನನ
Very nice
Captured feelings in words… Indeed… What a art of saying feelings…