ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ-
ಗಜಲ್
ಕಣ್ಣ ರೆಪ್ಪೆ ಯಾಗಿ ನಯನವ ಗೆದ್ದ ಚೆಲುವಿನ ಸಖಿ
ಪೌರ್ಣಮಿ ಚಂದಿರನ ಚೆಲುವ ಕದ್ದ ಒಲವಿನ ಸಖಿ
ಮೇಲಾಗಸದಲಿ ಸಾವಿರದ ತಾರೆಗಳ ಮಿಣುಕಿರಲಿ
ಏಕಮೇವಾದ್ವಿತೀಯ ಅಧರವ ಮೆದ್ದ ನಲುವಿನ ಸಖಿ
ರಹದಾರಿಯಿರಲೇಕೆ ಬೇಕು ವಕ್ರದ ಚಲನೆ ಸಾಗುವಾಗ
ಹಗಲಿರುಳು ಸಹವರ್ತಿಯಾಗಿದ್ದ ಗೆಲುವಿನ ಸಖಿ
ತೊಂಡೆ ತುಟಿಗಳು ಅಣಕಿಸ ತೊಡಗಿವೆ ಪ್ರಕೃತಿಯ
ಬಿಂಬದಲಿ ಜಂಭ ಮೆರೆಯುತಲಿದ್ದ ಬಲುಹಿನ ಸಖಿ
ಕದಳಿ ಕಾಂಡವು ವಸನಧಾರಿಯಾಯಿತೇ ಸೊಬಗೇರಿ
ಮೋದದ ನಿತಂಬ ಕುಣಿಸುತಲಿದ್ದ ಬೆಡಗಿನ ಸಖಿ
ಸಂಪಿಗೆಯ ಘಮಲೂ ಮೈ ಮರೆವ ನಾಸಿಕದ ರಾಣಿ
ಹಗಲಿರುಳು ಸುವಾಸನೆಯ ಹೊದ್ದ ಅಮಲಿನ ಸಖಿ
ಕಂಧರದಿ ಹೊರಡುತಿರೆ ಶಂಖ ನಾದ ಕರ್ಣಮಾಧುರ್ಯ
ಸುರೇಶನಿಗೆ ಶಚಿಯಾಗಿ ನಾಕದೊಲಿದ್ದ ಸೆಡವಿನ ಸಖಿ
ಡಾ ಸುರೇಶ ನೆಗಳಗುಳಿ