ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ-
ಗಜಲ್
ಕಡೆಗೀಲಿಲ್ಲದ ಬಂಡಿಯಂತೆ ಈ ಮನಸು ಮರುಳೆ
ಬಿರುಕು ಬಿಟ್ಟ ಗೋಡೆಯಂತೆ ಈ ಮನಸು ಮರುಳೆ
ಎಚ್ಚರ ಇರಬೇಕು ಮೈಯೆಲ್ಲ ಕಣ್ಣಾಗಿ ನೀನು
ತೂತು ಬಿದ್ದ ದೋಣಿಯಂತೆ ಈ ಮನಸು ಮರುಳೆ
ಹಸಿ ಬಿಸಿ ಬಯಕೆಗಳು ರಂಗೇರಿ ಕುಣಿದಿವೆ
ರೆಕ್ಕೆ ಬಲಿತ ಚಿಟ್ಟೆಯಂತೆ ಈ ಮನಸು ಮರುಳೆ
ಮುಗಿಲಿಗೇ ಕೈಯಿಡುವ ಚಪಲ ಏಕೆ ನಿನಗೆ
ಸೀಳಿ ಹೋದ ಕನ್ನಡಿಯಂತೆ ಈ ಮನಸು ಮರುಳೆ
ಹುಡುಕಬೇಕು ಅರಿವಿನ ಲಗಾಮು ಹೇಳಿಹಳು ಬೇಗಂ
ಕಡಿವಾಣವಿಲ್ಲದ ಕುದುರೆಯಂತೆ ಈ ಮನಸು ಮರುಳೆ
ಹಮೀದಾ ಬೇಗಂ ದೇಸಾಯಿ
ಮರುಳ ಮನಸಿನ ಬಯಕೆಗಳ ಅಧೋಗತಿಯನ್ನ ಕಂಡಂತಾಯ್ತು ಮೆಡಂ
ಚೆಂದದ ಗಜಲ್