ಧಾರಾವಾಹಿ-ಅಧ್ಯಾಯ –5
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಹೊಸ ತೋಟಕ್ಕೆ ಮರುಳಾದ ನಾರಾಯಣ್
ಸರ್ಪಕಾವಿಗೆ ಹೋದ ಅಕ್ಕ ತಂಗಿಯರು ಇಬ್ಬರೂ ಭಕ್ತಿ ಶ್ರದ್ಧೆಯಿಂದ ದೀಪ ಹಚ್ಚಿ ನಾಗದೇವತೆಯನ್ನು ಮನಸಾರೆ ವಂದಿಸಿ ಸಂಜೆಗತ್ತಲು ಆವರಿಸುವ ಮೊದಲೇ ಅಲ್ಲಿಂದ ಹೊರಟರು. ಇತ್ತ ಮನೆಯಲ್ಲಿ ಕಲ್ಯಾಣಿಯವರು ದೇವರ ಕೋಣೆಗೆ ಹೋಗಿ ಶ್ರೀ ಕೃಷ್ಣ ಹಾಗೂ ದೇವಿ ಭಗವತಿಗೆ ಕೈ ಮುಗಿದು ಪ್ರಾರ್ಥಿಸಿ ನಿಲವಿಳಕ್ಕು (ನಂದಾದೀಪ) ಕೈಯಲ್ಲಿ ಹಿಡಿದುಕೊಂಡು ದೀಪಂ ದೀಪಂ ದೀಪಂ ಎಂದು ಉಚ್ಚರಿಸುತ್ತಾ ಮನೆಯ ವರಾಂಡದಲ್ಲಿ ತಂದು ಇಟ್ಟರು.
ನಂತರ ದೇವರ ನಾಮವನ್ನು ಹಾಡುತ್ತಲೇ ಮನೆಯ ಕೆಲಸದಲ್ಲಿ ನಿರತರಾದರು. ಹೆಣ್ಣುಮಕ್ಕಳು ಇಬ್ಬರೂ ಅಷ್ಟು ಹೊತ್ತಿಗೆ ಮನೆ ತಲುಪಿದರು. ತಮ್ಮಂದಿರನ್ನು ಜೊತೆಗೆ ಕರೆದು ಅಮ್ಮ ತಂದಿಟ್ಟ ಸಂಧ್ಯಾ ದೀಪಕ್ಕೆ ನಮಿಸಿ ದೀಪದ ಮುಂದೆ ಕುಳಿತು ನಾಲ್ವರೂ ಒಟ್ಟಿಗೆ ದೇವರ ಶ್ಲೋಕಗಳನ್ನು ಹೇಳಲು ಪ್ರಾರಂಭಿಸಿದರು…. ” ಗಜಾನನಂ ಭೂತ ಗಣಾದಿ ಸೇವಿತಂ ಕಪಿತ್ತ ಜಂಬೂ ಫಲ ಸಾರ ಭಕ್ಷಿತಂ ಉಮಾ ಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ”….ಎಂದು ಮೊದಲಿಗೆ ಗಜಾನನ ಸ್ಮರಣೆಯ ಶ್ಲೋಕದೊಂದಿಗೆ ಪ್ರಾರಂಭಿಸಿ ಶಿವ,ಕೃಷ್ಣ,ದೇವಿ ಹಾಗೂ ಇನ್ನಿತರ ದೇವರುಗಳ ಶ್ಲೋಕಗಳನ್ನು ಎಡೆಬಿಡದೆ ಪಠಿಸಿದರು. ನಾಲ್ವರೂ ಭಕ್ತಿ ಭಾವದಿಂದ ಹೇಳುತ್ತಿದ್ದ ಈ ಶ್ಲೋಕಗಳು ಮನೆಯ ವಾತಾವರಣವನ್ನು ದೈವೀಕವಾಗಿಸಿದವು. ಮಕ್ಕಳು ದೇವರ ನಾಮವನ್ನು ಹೇಳಿ ಮುಗಿಸುದುವುದನ್ನೇ ಕಾಯುತ್ತಾ ನಾರಾಯಣನ್ ಪಡಸಾಲೆಯಲ್ಲಿ ಕುಳಿತರು. ಇಂದು ತಾನು ಮಕ್ಕಳಿಗೆ ಹೇಳುವ ವಿಷಯವು ಅವರಿಗೆ ಅರ್ಥ ಆಗುವುದೋ ಇಲ್ಲವೋ ಎಂದು ಯೋಚಿಸುತ್ತಾ ಹಾಗೇ ಸ್ವಲ್ಪ ಹೊತ್ತು ಕುಳಿತರು. ಪ್ರಾರ್ಥನೆ ಮುಗಿದದ್ದೇ ತಡ ಗಂಡು ಮಕ್ಕಳು ಇಬ್ಬರೂ ಅಪ್ಪನ ಬಳಿ ಓಡಿ ಬಂದರು ಜೊತೆಗೆ ಹೆಣ್ಣುಮಕ್ಕಳು ಇಬ್ಬರೂ ಬಂದು ಅನತಿ ದೂರದಲ್ಲಿ ನಿಂತರು. ದಿನವೂ ಪ್ರಾರ್ಥನೆಯ ನಂತರ ಅಪ್ಪನ ಜೊತೆ ಕಾಲ ಕಳೆಯುವುದು ಮಕ್ಕಳಿಗೂ ಅಭ್ಯಾಸ. ಅಪ್ಪನ ಬಳಿ ಬಂದ ಮಕ್ಕಳು ಈ ದಿನ ಅಪ್ಪ ಯಾವುದೋ ಹೊಸ ವಿಷಯವನ್ನು ಹೇಳುತ್ತೇನೆ ಎಂದು ಬೆಳಗ್ಗೆ ಪಂಚಾಯತಿ ಕಛೇರಿಗೆ ಹೋಗುವ ಮೊದಲು ಹೇಳಿದ ನೆನಪು. ಏನಿರಬಹುದು ಎಂಬ ಕುತೂಹಲ ಬೇರೆ. ಗಂಡು ಮಕ್ಕಳನ್ನು ಬಳಿಗೆ ಕರೆದು ನಾರಾಯಣನ್ ಅವರ ತಲೆ ನೇವರಿಸುತ್ತಾ…. “ಇಂದು ಏನೆಲ್ಲಾ ಮಾಡಿದಿರಿ ಮಕ್ಕಳೇ? ಅಕ್ಕಂದಿರ ಜೊತೆ ಕುಳಿತು ಪಠ್ಯದ ಪುನರಾವರ್ತನೆ ಮಾಡಿದಿರಾ? ಏನು ಕಲಿತಿರಿ? ಶಾಲೆ ಪ್ರಾರಂಭ ಆಗಲು ಇನ್ನು ಸ್ವಲ್ಪ ದಿನಗಳು ಅಷ್ಟೇ ಇರುವುದು.” ಎಂದು ಹೇಳುತ್ತಾ ಹೆಣ್ಣು ಮಕ್ಕಳ ಕಡೆಗೆ ನೋಡಿದರು.
ಅಕ್ಕ ತಂಗಿಯರಿಬ್ಬರೂ ತಮ್ಮಂದಿರು ಅಭ್ಯಾಸ ಮಾಡಿದರು ಎನ್ನುವಂತೆ ಗೋಣು ಆಡಿಸಿದರು….” ಮಕ್ಕಳೇ ಇಂದು ನಾನು ಒಂದು ಮುಖ್ಯವಾದ ವಿಷಯ ನಿಮ್ಮೊಂದಿಗೆ ಹೇಳುವೆ ಗಮನವಿಟ್ಟು ಕೇಳಿ”…. ಎಂದು ಹೇಳುತ್ತಾ ಎಲ್ಲರ ಮುಖವನ್ನೊಮ್ಮೆ ವೀಕ್ಷಿಸಿ ಮೌನವಾದರು. ಅಪ್ಪ ಯಾವ ಹೊಸ ವಿಷಯವನ್ನು ಈಗ ಹೇಳುವರೋ ಎಂಬ ಕಾತರ ಮಕ್ಕಳಲ್ಲಿ. ಸುಮತಿ ಕುತೂಹಲ ತಡೆಯಲಾರದೆ ಕೇಳಿದಳು….” ಅಪ್ಪಾ ಏನು ವಿಷಯ ಕೇಳಲು ಕಾತುರರಾಗಿದ್ದೇವೆ ಹೇಳಿ” ಎಂದು ಕೌತುಕದಿಂದ ಅಪ್ಪನನ್ನು ಗಮನಿಸುತ್ತಾ ಅಕ್ಕನ ಮುಖವನ್ನೊಮ್ಮೆ ನೋಡಿದಳು. ಅಕ್ಕ ಸುಮ್ಮನಿರುವಂತೆ ತಂಗಿಗೆ ಕಣ್ಣಿನಲ್ಲೇ ಸೂಚಿಸಿದಳು. ನಾರಾಯಣನ್ ಗಂಟಲು ಸರಿಪಡಿಸಿಕೊಳ್ಳುತ್ತಾ…. “ಮಕ್ಕಳೇ ನಿಮ್ಮ ಅತ್ತೆ ಮಾವ ಹಾಗೂ ಅವರ ಮಗಳು ಮೈಸೂರಿನಲ್ಲಿ ಇದ್ದಾರೆ ಅಲ್ಲವೇ? ನಾನು ಈ ತಿಂಗಳು ಅವರ ಮನೆಗೆ ಹೋಗಿ ಬರುತ್ತೇನೆ ಅವರನ್ನು ನೋಡಬೇಕು ಅನ್ನುವ ಆಸೆ ಆಗಿದೆ. ಹಾಗೆಯೇ ಅಲ್ಲಿ ಸ್ವಲ್ಪ ಜಮೀನನ್ನು ನೋಡಿ ಬರುವೆ ಇಷ್ಟ ಆದರೆ ಕೊಂಡುಕೊಳ್ಳೋಣ. ಏನು ಹೇಳುವಿರಿ ಮಕ್ಕಳೇ”… ಎಂದು ಮಕ್ಕಳೆಲ್ಲರನ್ನೂ ಒಮ್ಮೆ ನೋಡಿದರು. ಗಂಡು ಮಕ್ಕಳು ಅಪ್ಪ ಹೇಳುತ್ತಾ ಇರುವುದು ಏನು ಎಂದು ಅರ್ಥವಾಗದೇ ಪಿಳಿ ಪಿಳಿ ನೋಡುತ್ತಾ ನಿಂತರು ಅವರಿಗೆ ಈ ಜಮೀನು ಆಸ್ತಿ ಏನು ಎಂದು ತಿಳಿಯುವ ವಯಸ್ಸು ಆಗಿರಲಿಲ್ಲ. ಅಪ್ಪ ಅಮ್ಮ ತೋರಿಸುವ ಪ್ರೀತಿ, ಮಾಡುವ ಮುದ್ದು, ಅಕ್ಕಂದಿರ ಜೊತೆ ಆಟ, ಶಾಲೆಗೆ ಹೋಗುವುದು ಇದು ಬಿಟ್ಟರೆ ಬೇರೆ ಏನೂ ತಿಳಿಯದು. ಹೆಣ್ಣು ಮಕ್ಕಳು ಅಲ್ಪ ಸ್ವಲ್ಪ ವಿಷಯ ಬಲ್ಲವಾರಾದರೂ ಅವರಿಗೂ ಇದರ ಬಗ್ಗೆ ಹೆಚ್ಚು ವ್ಯವಹಾರ ಜ್ಞಾನ ಇಲ್ಲ. ಅವರಿಗೆ ಈಗ ತಾವಿರುವ ಮನೆ ತೋಟ ಗದ್ದೆ ಬಿಟ್ಟರೆ ಇದಕ್ಕಿಂತ ಬೇರೆ ಲೋಕ ಗೊತ್ತಿಲ್ಲ. ಇನ್ನು ಕರ್ನಾಟಕದಲ್ಲಿ ಅಪ್ಪ ನೋಡಬೇಕು ಎಂದು ಇರುವ ಜಮೀನಿನ ಬಗ್ಗೆ ಏನು ತಾನೇ ಹೇಳಲು ಸಾಧ್ಯ? ಹೆಣ್ಣುಮಕ್ಕಳಿಬ್ಬರೂ ಒಕ್ಕೊರಲಿನಿಂದ ….” ನಿಮ್ಮ ಇಷ್ಟ ಅಪ್ಪ”…. ಎಂದು ಹೇಳಿ ಅಮ್ಮನ ಕೆಲಸದಲ್ಲಿ ಸಹಾಯ ಮಾಡಲು ಒಳಗೆ ಹೋದರು.
ನಾರಾಯಣನ್ ರವರ ಅಕ್ಕ ಹಾಗೂ ಅವರ ಕುಟುಂಬ ಇರುವುದು ಇಂದಿನ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ. ಇನ್ನೇನು ನಾರಾಯಣನ್ ಹೊರಡುವ ದಿನಗಳು ಹತ್ತಿರವಾಗುತ್ತಾ ಬಂದಿತು. ಕಲ್ಯಾಣಿಯವರಿಗೆ ಏಕೋ ಮನದಲ್ಲಿ ತಳಮಳ. ಆದರೂ ಅದನ್ನು ಹೊರಗೆ ತೋರಗೊಡದೆ ಪತಿಯ ಪ್ರಯಾಣಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿದರು. ನಾರಾಯಣನ್ ಕರ್ನಾಟಕಕ್ಕೆ ಹೊರಡುವ ದಿನ ಬಂತು. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವುದು ಇಂದಿನಂತೆ ಅಂದು ಸುಗಮವಾಗಿ ಇರಲಿಲ್ಲ. ಸಾರಿಗೆ ಸೌಲಭ್ಯಗಳು ತುಂಬಾ ಕಡಿಮೆ ಇದ್ದವು.
ಕಚ್ಚಾ ರಸ್ತೆಗಳು ಕಡಿದಾದ ದಾರಿಗಳು ಅಪರೂಪಕ್ಕೆ ಸಂಚರಿಸುವ ಬಸ್ಸುಗಳು, ಎಷ್ಟೋ ದೂರ ನಡೆದೇ ಕ್ರಮಿಸಬೇಕು. ಹಾಗಿರುವಾಗ ನಾರಾಯಣನ್ ದೂರ ಪ್ರಯಾಣಕ್ಕೆ ಹೊರಟೇ ಬಿಟ್ಟರು. ಅವರ ಮನಸ್ಸಿನಲ್ಲಿ ಮೂಡಿದ ಹೊಸದೊಂದು ಆಸೆಯು ಅವರನ್ನು ಪಕ್ಕದ ರಾಜ್ಯಕ್ಕೆ ಹೋಗುವಂತೆ ಪ್ರೇರೇಪಿಸಿತು. ಅವರು ಅಕ್ಕನ ಮನೆಗೆ ಬಂದರು. ಆಗೆಲ್ಲಾ ಸಕಲೇಶಪುರದ ಸುತ್ತಮುತ್ತ ದಟ್ಟ ಅರಣ್ಯಗಳು ತುಂಬಿದ್ದವು. ಅಲ್ಲಲ್ಲಿ ಬ್ರಿಟಿಷರಿಂದ ಮಾಡಿದ ಕಾಫಿ ತೋಟಗಳು ಹಾಗೂ ಕೆಲವು ರೈತರ ಗದ್ದೆ ತೋಟಗಳು ಇದ್ದವು. ಹಾಗೆಯೇ ಬ್ರಿಟಿಷರ ಒಂದು ಕಾಫಿ ತೋಟ ನಾರಾಯಣನ್ ರವರ ಮನ ಸೆಳೆಯಿತು. ಅದು ಸಕಲೇಶಪುರ ಹಾಗೂ ಮಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ಇದೆ. ಸಕಲೇಶಪುರದಿಂದ ಸುಮಾರು ಹದಿಮೂರು ಕಿಲೋಮೀಟರ್ಗಳಷ್ಟು ಕ್ರಮಿಸಬೇಕು. ಆ ತೋಟವು ಮಾರಾಟಕ್ಕೆ ಇದೆ ಎಂದು ಒಬ್ಬ ಮಧ್ಯವರ್ತಿಯಿಂದ ನಾಣುವಿಗೆ ತಿಳಿಯಿತು. ಸರಿ ಒಮ್ಮೆ ಹೋಗಿ ನೋಡಿಯೇ ಬಿಡುವ ಎಂದು ತಮ್ಮ ಸಂಬಂಧಿಕರ ಜೊತೆ ಹೊರಟರು. ಮಧ್ಯವರ್ತಿಯು ಅವರನ್ನು ಬ್ರಿಟಿಷರ ಆ ತೋಟಕ್ಕೆ ಕರೆದುಕೊಂಡು ಹೋದರು.
ಸುತ್ತಮುತ್ತ ದಟ್ಟ ಅರಣ್ಯಗಳು ಸುತ್ತುವರೆದಿದ್ದರೂ ಆ ತೋಟವು ತುಂಬಾ ಸೊಗಸಾಗಿದೆ ಅನ್ನಿಸಿತು ನಾಣುವಿಗೆ. ಬೆಲೆಬಾಳುವ ಮರಗಳು, ಉತ್ತಮವಾದ ಇಳುವರಿ ಕೊಡುವ ವಿವಿಧ ತಳಿಯ ಕಾಫೀ ಗಿಡಗಳು, ಕಿತ್ತಳೆ, ಮಾವು, ಹಲಸು, ಜೊತೆಗೆ ಕರಿ ಮೆಣಸು, ಏಲಕ್ಕಿ, ಚೆಕ್ಕೆ ಲವಂಗ ಮುಂತಾದ ವಾಣಿಜ್ಯ ಬೆಳೆಗಳು ಇರುವುದನ್ನು ಕಂಡು ತೋಟವು ಸಂಪದ್ಭರಿತವಾಗಿದೆ ಎಂದು ಖುಷಿ ಪಟ್ಟರು.
ಆ ತೋಟವು ಅಷ್ಟು ಆಕರ್ಷಕವಾಗಿತ್ತು. ತೋಟವನ್ನು ಮಾಲೀಕರ ಜೀಪಿನಲ್ಲಿ ಸುತ್ತಾಡಿ ಕಂಡ ನಾಣುವಿಗೆ ಸಂತೋಷ ಹೇಳತೀರದು. ಆರೋಗ್ಯಪೂರ್ಣವಾಗಿ ಬೆಳೆದಿರುವ ತೋಟದ ಬೆಳೆಗಳು ಕಣ್ಣು ಹಾಯಿಸಿದಷ್ಟೂ ಹಸುರಿನ ಸಿರಿ, ನಡುವೆ ಹರಿಯುವ ನೀರಿನ ತೊರೆಗಳು, ಹಕ್ಕಿ ಪಕ್ಷಿಗಳ ಕಲರವ ಸಹಜ ಪ್ರಕೃತಿ ಸೌಂದರ್ಯ ಹೊಂದಿರುವ ಅಲ್ಲಿನ ಪರಿಸರ ತಂಪು ವಾತವರಣ ಅವರಿಗೆ ತುಂಬಾ ಹಿಡಿಸಿತು. ಸಾವಿರ ಎಕರೆಯಷ್ಟು ದೊಡ್ಡದಾದ ವಿಸ್ತೀರ್ಣ ಹೊಂದಿದ ತೋಟವಾಗಿತ್ತು ಅದು. ತೋಟದ ನಡುವೆ ವಾಸಕ್ಕೆ ಒಂದು ಸುಸಜ್ಜಿತ ಬಂಗಲೆಯೂ ಇತ್ತು. ಸಕಲೇಶಪುರ ಪಟ್ಟಣಕ್ಕೆ ಹೆಚ್ಚೇನೂ ದೂರ ಇರದ ಕಾರಣ ಎಲ್ಲಾ ರೀತಿಯಲ್ಲಿ ಸೌಕರ್ಯವೂ ಇರುವಂತೆ ಅನಿಸಿತು ಅವರಿಗೆ. ಮೊದಲೇ ಕೃಷಿಯಲ್ಲಿ ಪರಿಣಿತರಾದರೂ ಇಲ್ಲಿನ ವ್ಯವಸಾಯ ಪದ್ಧತಿ ರೀತಿಗಳನ್ನು ಅವರು ಅರಿಯಬೇಕಿತ್ತು. ಕಾಫಿ ಕಿತ್ತಳೆ ಹಾಗೂ ಇನ್ನೂ ಹಲವು ಬೆಳೆಗಳು ಅವರಿಗೆ ಹೊಸತು ಆಗಿದ್ದವು. ತೋಟದ ಮಾಲಿಕರೊಡನೆ ಕುಳಿತು ಚರ್ಚಿಸಿ ಉಪಯುಕ್ತವಾದ ಕೆಲವು ಮಾಹಿತಿಗಳನ್ನು ಪಡೆದುಕೊಂಡು ಮನಸ್ಸು ತಣಿಯುವಷ್ಟು ತೋಟವನ್ನು ನೋಡಿ ಕಣ್ಣು ತುಂಬಿಕೊಂಡು ಯಾವಾಗ ಮಾರಾಟ ಆಗುವುದೆಂದು ವಿಶಾರಿಸಿದರು. ಸಧ್ಯದಲ್ಲೇ ಮಾರುವ ಅಭಿಪ್ರಾಯ ಇದೆ. ಆದಷ್ಟೂ ಬೇಗ ನೀವು ತಿಳಿಸಿದರೆ ಎಲ್ಲದಕ್ಕೂ ಏರ್ಪಾಡು ಮಾಡಬಹುದು ಎಂದು ಮಾಲೀಕರು ತಿಳಿಸಿದರು. ಹೊರಡುವ ಮೊದಲು ಮಾಲೀಕರು ಕಾಫಿಬೀಜ, ಕಿತ್ತಳೆ ಹಣ್ಣು, ಏಲಕ್ಕಿ,ಕರಿಮೆಣಸು ನಾರಾಯಣನ್ ರವರಿಗೆ ಉಡುಗೊರೆಯಾಗಿ ಕೊಟ್ಟು ಆದಷ್ಟು ಬೇಗ ತಮ್ಮ ತೋಟವನ್ನು ಕೊಂಡುಕೊಳ್ಳುವಂತೆ ಮನವಿ ಮಾಡಿದರು.
ರುಕ್ಮಿಣಿ ನಾಯರ್
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು