ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಮಾಗಣಿಯ ಮಣ್ಣಿನ ಒಲವಿನ ಋಣ ಮರೆಯುವುದುಂಟೇ…?

ಅವನು ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು, ಗದ್ದೆಯಲ್ಲಿ ಶೇಂಗಾವನ್ನು ಕೀಳುತ್ತಾ, ಬೆವರು ಹರಿಸುತ್ತಿದ್ದನು. ಅಷ್ಟೇ ಅಲ್ಲದೆ ತನ್ನ ಜೊತೆಗಾರರ ಶೇಂಗಾ ಬಳ್ಳಿಯ ಸಾಲುಗಳನ್ನು ಕೀಳಲು ಮುಂದೆಯಾಗುತ್ತಿದ್ದನು.‌..!!

 ಆಕೆ ಕಬ್ಬಿನ ಗದ್ದೆಯ ಸಾಲುಗಳಲ್ಲಿ ಕಳೆಯ ಕಸವನ್ನು ತೆಗೆಯುತ್ತಾ, ತೆಗೆಯುತ್ತಾ ಕಬ್ಬಿನ ಜಲ್ಲಿಯ ಎಲೆಯ ಮುಳ್ಳನ್ನು ಚುಚ್ಚಿಸಿಕೊಳ್ಳುತ್ತಾ, ಮೃದುವಾದ ಚರ್ಮಕ್ಕೆ ಬಿದ್ದ ಬರೆಗಳ ನೋವನ್ನು ಮೌನದಲ್ಲೇ ನುಂಗಿಕೊಳ್ಳುತ್ತಾಳೆ..!!

ಈ ಮೇಲಿನ ಸನ್ನಿವೇಶಗಳು

ಬಹುತೇಕ ನದಿಗಳ ಅಣೆಕಟ್ಟುಗಳ ಅಚ್ಚುಪ್ರದೇಶಗಳಲ್ಲಿ ಮತ್ತು ನೀರಾವರಿಯ ಪ್ರದೇಶಗಳಲ್ಲಿ  ನೋಡುತ್ತೇವೆ. ಈ ಪ್ರದೇಶಗಳಲ್ಲಿ ಕಬ್ಬು ಶೇಂಗಾ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಹಿಂದೆ ಹಲವು ಬಗೆಯ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದರು. ನೂರಾರು ಎಕ್ಕರೆ ಗದ್ದೆಗಳನ್ನು ಹೊಂದಿರುವ, ಶ್ರೀಮಂತರ ಹೊಲ – ಗದ್ದೆಗಳಲ್ಲಿ ಕೆಲಸ ಮಾಡುತ್ತಾ, ಬೆವರ ಹನಿಗಳನ್ನು ಭೂಮಿ ತಾಯಿಗೆ ಬಸಿದು ತಮ್ಮನ್ನು ತಾವು ಮಣ್ಣಿಗೆ ಅರ್ಪಿಸಿಕೊಳ್ಳುವ ಕೂಲಿ ಜನರ ಹಾಡು ಪಾಡು ಹೇಳುತೀರದು..!!

 ಇದನ್ನು ನೆನದಾಗ… ನನ್ನ ಬಾಲ್ಯದ ದಿನಗಳ ನೆನಪುಗಳು ಉಕ್ಕಿ ಬರುತ್ತವೆ.

ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬೆಂದ ನಾವು. ಬಹುತೇಕವಾಗಿ ನಮ್ಮ ಊರಿನಲ್ಲಿ ಜಾತಿ, ಧರ್ಮ ಮೀರಿದ ಎಲ್ಲಾ ಬಡತನದ ತಾಯಂದಿರು ತಮ್ಮ ಮಕ್ಕಳನ್ನು ಕಟ್ಟಿಕೊಂಡು ಲೋಕಲ್ ಟ್ರೈನಿನ ಮೂಲಕ ಮಾಗಣಿಯ ಅಗಳಕೇರಿ, ಶಿವಪುರ, ಹುಲಿಗಿ, ಹಿಟ್ನಾಳ, ಕಂಪಸಾಗರ, ಮುನಿರಾಬಾದ್ ಮುಂತಾದ  ಮಾಗಣಿ ಪ್ರದೇಶಕ್ಕೆ ದುಡಿಯಲು ದಿನಾಲು ಹೋಗುತ್ತಿದ್ದಿದ್ದು ಸಾಮಾನ್ಯವಾಗಿತ್ತು.

 ಲೋಕಲ್ ಟ್ರೈನಿನಲ್ಲಿ ಟಿಕೆಟ್ ಕಲೆಕ್ಟರಿಗೆ ಗೋಗೆರೆಯುತ್ತಾ, “ನಾವು ದುಡಿಯುವ ಜನ. ಕೂಲಿ ಮಾಡುತ್ತೇವೆ. ಎಲ್ಲಿಂದ ತರೋಣ ಟಿಕೆಟ್.. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎನ್ನುತ್ತಿದ್ದರು”.  ನನಗೆ ನೆನಪಿರುವಂತೆ ಒಬ್ಬ ಟಿ.ಸಿ ಕೆಂಪಗೆ, ಗಿಡ್ಡಕ ಇದ್ದ ಆತನನ್ನು “ಕೆಂಪಣ್ಣ” ಎಂದು ಕರೆಯುತಿದ್ದರು. ಆತ ಬಂದರೆ ಅಲ್ಲಲ್ಲಿ ಅವಿತುಕೊಳ್ಳುವ ನನ್ನ ವಾರಿಗೆಯ ಮಕ್ಕಳು, ತಾಯಂದಿರರ ಕಷ್ಟ ಹೇಳುತೀರದು.

 ಇನ್ನೊಬ್ಬರ ಹೆಸರು ನೆನಪಿಲ್ಲ. ದುಂಡನೆಯ ಮುಖ. ಎತ್ತರದ ನಿಲುವು, ಟಿಕ್ ಟಾಕ್ ಡ್ರೆಸ್ ಗಳೊಂದಿಗೆ ಟಿಕೆಟ್ ಕಲೆಕ್ಟಿಗೆ ಬರುತ್ತಿದ್ದ ಆ ವ್ಯಕ್ತಿ ಬಂದರೆ ಆತನಿಗೆ “ಗುಂಡಣ್ಣ” ಎಂದು ಕರೆಯುತಿದ್ದರು. ಆತ ಬಂದರೆ ಯಾರು ಹೆದರುತಿರಲಿಲ್ಲ. ಆತ ಎಲ್ಲಾ ಕೂಲಿ ಜನಗಳ ಜೊತೆಗೆ ತಮಾಷೆ ಮಾಡುತ್ತಾ, ಟಿಕೇಟುಗಳನ್ನು ಕೇಳದೆ ಅವರನ್ನು ನಕ್ಕು ನಗಿಸುತ್ತಿದ್ದನು. ಅಲ್ಲದೆ “ಹುಷಾರ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಬಾಲ್ಯದಲ್ಲಿ ನಮಗೆ ಅದಾವುದು ಗೊತ್ತಾಗುತ್ತಿರಲಿಲ್ಲ. ಸುಮನ್ನೆ ತದೇಕ ಚಿತ್ತದಿಂದ ನೋಡುತ್ತಿದೆವು. ಇದನ್ನು ನೆನೆದಾಗ, ಇಂದಿಗೂ ಕಣ್ಣುಗಳು ಒದ್ದೆಯಾಗುತ್ತವೆ.

 ಇಂದಿನ ಮಾಗಾಣಿ ಪ್ರದೇಶದಲ್ಲಿ ಕಬ್ಬು ಬೆಳೆಯುವುದನ್ನು ಬಿಟ್ಟು, ಗದ್ದೆಗಳ ತುಂಬಾ ನೆಲ್ಲು  ಬೆಳೆಯುತ್ತಿದ್ದಾರೆ. ಹೀಗೆ ದುಡಿಯಲು ಬಯಲು ಪ್ರದೇಶದಿಂದ ಬಂದ ಹತ್ತು ಹಲವರು ಕುಟುಂಬಗಳು ಕಾಲುವೆಯ ದಂಡೆಯ ಪ್ರದೇಶಗಳಲ್ಲಿ ಗುಡಿಸಲುಗಳನ್ನು, ಶೆಡ್ಡುಗಳನ್ನು ಹಾಕಿಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ. ಬಾಲ್ಯದಲ್ಲಿ ಶಿವಪುರದ ಮಾರುತಿ ದೇವಸ್ಥಾನದ ಆವರಣ, ಅಗಳಕೇರಿಯ ಗದ್ದೆಗಳಲ್ಲಿ, ಕಂಪಸಾಗರದ ಗದ್ದೆಗಳಲ್ಲಿ ಎಷ್ಟೋ ರಾತ್ರಿಗಳನ್ನು ಅಲ್ಲಿಯೇ ಕಳೆದ ನೆನಪುಗಳು ಮರೆಯಲಾಗದು.

 ಇತ್ತೀಚೆಗೆ ಬದಲಾದ ಸಂದರ್ಭದಲ್ಲಿ.. ನಮ್ಮ ಕೂಲಿ ಬಂಧುಗಳು ಆಂಧ್ರಪ್ರದೇಶದಿಂದ ವಲಸೆ ಬಂದು ತಮ್ಮದೇ ಆದ ಸಾಂಸ್ಕೃತಿಕ ಪರಂಪರೆಯೊಂದಿಗೆ ನೆಲೆಯೂರಿದ ಶ್ರೀಮಂತ ರೈತರ ಹೊಲ ಗದ್ದೆಗಳಲ್ಲಿಯ ಸಮೀಪ ವಾಸಿಸುತ್ತಾ, ಕ್ಯಾಂಪು ಪ್ರದೇಶದಲ್ಲಿ ನೆಲೆಯೂರಿದ್ದಾರೆ.

 ಹೀಗೆ ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು, ಬದುಕು ಕಟ್ಟಿಕೊಳ್ಳುವ ಈ ಮಾಗಾಣಿ ಅಂದರೆ ವಸಾಹಾತುಶಾಹಿಯಂತಿರುವ  ಅಣೆಕಟ್ಟಿನ ನೀರಾವರಿ ಪ್ರದೇಶಗಳು…!! ಜಿಲ್ಲೆ, ರಾಜ್ಯ ಮೀರಿ ಬದುಕನ್ನು ಕಟ್ಟಿ ಕಂಡುಕೊಂಡಿರುವುದು ಬಾಳಿನ ಅನಿವಾರ್ಯತೆ.

 ನಮ್ಮ ಜಿಲ್ಲೆಯ ತುಂಗಭದ್ರೆಯ ನೀರಾವರಿ ಪ್ರದೇಶವಾಗಿರಬಹುದು,  ಅದೇ ರೀತಿ  ಕಾವೇರಿಯ ನೀರಾವರಿ ಪ್ರದೇಶವಾಗಿರಬಹುದು,  ಕೃಷ್ಣಾ, ಭೀಮ, ಮಲಪ್ರಭಾ, ಘಟಪ್ರಭಾ… ಯಾವುದೇ ನೀರಿನ ಮಾಗಾಣಿ ಪ್ರದೇಶಗಳು ನನ್ನಂತಹ ಕೂಲಿ ಮಕ್ಕಳ ಬದುಕನ್ನು ಅರಳಿಸುವ ಜೀವಸ್ಪೂರ್ತಿಯ ಸೆಲೆಗಳಾಗಿವೆ. ಬಡತನದ ಬದುಕಿಗೆ ಆಸರಾಗಿವೆ.

 ಇಂತಹ ಕೂಲಿ ಮಕ್ಕಳನ್ನು ಗಮನಿಸಿದರೆ, ಮುಂಜಾನೆ ದುಡಿಯಲು ಹೊರಡುವ ಕೂಲಿ ತಂದೆ ತಾಯಂದಿರರು ಲಗುಬಗೆಯಿಂದ ಅಡುಗೆ ಮಾಡಿಕೊಂಡು, ಮಕ್ಕಳ ಬಗ್ಗೆ, ಅವರ ಶಿಕ್ಷಣದ ಚಿಂತನೆ ಮಾಡದೆ ಕಾಳಜಿವಹಿಸಲಾಗದಷ್ಟು ಅಸಹಾಯಕತನ ಅವರದು.  ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಅವರಿಗೆ.

ಅಂದಿನ ದಿನಗಳಲ್ಲಿ…

 ಶೈಕ್ಷಣಿಕ ಅರಿವು ಮೂಡಿಸುವ ಕಾರ್ಯಕ್ರಮಗಳು ಅಷ್ಟೊಂದು ವಿಸ್ತಾರವಾಗಿರಲಿಲ್ಲ. ಕೂಲಿಯ ಮಕ್ಕಳ ಬಗ್ಗೆ ಕಾಳಜಿಯು ಅಷ್ಟೊಂದು ಇರಲಿಲ್ಲ. ಶಿಕ್ಷಣ ಇಲಾಖೆಯು ಅತ್ತ ಗಮನಹರಿಸುತ್ತಿರಲಿಲ್ಲ‌. ನನ್ನಂತ ಕೂಲಿ ಮಾಡುವ ಮಕ್ಕಳ ಹಿಂಡು ಹಿಂಡು  ಶೇಂಗಾ ಹರಿಯುವ ಗದ್ದೆಗಳಲ್ಲಿ ಇರುತ್ತಿತ್ತು.  ತಾಯಂದಿರ ಜೊತೆಗೆ ನಾವು ಶೇಂಗಾ ಹರಿಯುವುದು ಸಾಮಾನ್ಯವಾಗಿತ್ತು.

 ಮಾವಿನ ಗಿಡಗಳಿಗೆ ಹೋಗಿ ಕಲ್ಲು ಎಸೆದು ಮಾವಿನಕಾಯಿ ತಿನ್ನುವುದು. ಅಲ್ಲಿಯೇ ಜುಳು ಜುಳು ಹರಿಯುತ್ತಿದ್ದ ನೀರಿನ ಕಾಲುವೆಯಲ್ಲಿ ಈಜಾಡುತ್ತಿದ್ದಿದ್ದು, ನಾವು ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಅಡ್ಡಾಡುವಾಗ ನಮ್ಮ ತಾಯಂದಿರರು ಅದರ ಬಗ್ಗೆ ಗಮನಹರಿಸುತ್ತಿರಲಿಲ್ಲ “ಎಲ್ಲಿಯಾದರೂ ಬೆಳೆದು ದೊಡ್ಡವರಾಗಲಿ” ಎನ್ನುವ ಅವರ ವಿಶಾಲವಾದ ಮತ್ತು ಅನಿವಾರ್ಯವಾದ ಆಶೀರ್ವಾದದ ನುಡಿಗಳು ನಮ್ಮನ್ನು ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಬೆಳೆಯಲು ಕಾರಣವಾಗಿದ್ದವು.

ಇಂದು ವಾತಾವರಣ ಬದಲಾಗಿದೆ…ಎಷ್ಟೋ ಕುಟುಂಬಗಳಿಗೆ ಕೂಲಿ ಸಿಗಲಾರದಷ್ಟು ಅಸಹಾಯಕತೆಯೂ ಇದೆ.  ಕೂಲಿಗಳ ಜಾಗದಲ್ಲಿ ಯಂತ್ರಗಳು ಬಂದಿವೆ. ಕೂಲಿ ಜನರ ಬಂಧುಗಳಿಗೂ ಸರ್ಕಾರದಿಂದ ಒಂದಿಷ್ಟು ಸೌಲಭ್ಯಗಳು ದೊರಕಿವೆ. ಮಕ್ಕಳ ಶಿಕ್ಷಣಕ್ಕೆ ಸರ್ಕಾರಗಳು, ಸಂಘ, ಸಂಸ್ಥೆಗಳು, ಶಿಕ್ಷಣ ಇಲಾಖೆಯೂ, ಸಮಾಜ ಎಲ್ಲರೂ ಒತ್ತುಕೊಟ್ಟು ಪ್ರೋತ್ಸಾಹಿಸುತಿದ್ದಾರೆ.

 ಹಾಗಾಗಿ…

ಬಹುತೇಕ ಮಕ್ಕಳು ಶಾಲೆಯಲ್ಲಿದ್ದಾರೆ. ಅವರಿಗೆ ಗುಣಾತ್ಮಕ ಶಿಕ್ಷಣ ಸಿಗುವ ಅನೇಕ ಸೌಲಭ್ಯಗಳು ಇವತ್ತು ದೊರಕುತ್ತಿರುವುದು ಸಂತಸದ ವಿಷಯ.

ಇನ್ನೊಂದು ಮಗ್ಗಲು…

 ಮಾಗಾಣಿ ಅಂದ ತಕ್ಷಣ… ನೀರು ಹಂಚಿಕೆ ವಿಷಯ ಬರುತ್ತದೆ.  ಜಿಲ್ಲೆಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆಯ  ವ್ಯಾಜ್ಯಗಳು ಹಾಗೇಯೇ ಇವೆ.  ಹೋರಾಟಗಳು,  ಕೋರ್ಟಗಳು, ಕೇಸ್ ಗಳು, ವಕೀಲರು, ಟ್ರೂಬನಲ್ ಸಮಿತಿಗಳು, ರಾಜ್ಯ,  ಕೇಂದ್ರ ಸರ್ಕಾರಗಳು ಸದಾ ಗೊಣಗುತ್ತಲೇ ಕಾಲ ತಳ್ಳುತ್ತವೆ.

 ಕೊನೆಯ ಪಕ್ಷ…

 ಮಾನವೀಯತೆಯ ದೃಷ್ಟಿಯಿಂದ, ಜೀವಪರತೆಯ ಮನದಾಳದಿಂದ, ಕರುಣೆಯ ಕಣ್ಣುಗಳಿಂದ ನೋಡಬೇಕು.

ಇಲ್ಲವಾದರೆ..

 ನಮ್ಮಂತಹ ಕೂಲಿ ವರ್ಗದವರ ಜನಜೀವನವನ್ನು ಕೆಲವು ಸಲ ತಲ್ಲಣಗೊಳಿಸುತ್ತವೆ. ಕಣ್ಣೀರು ತರಿಸುತ್ತವೆ. ರೈತರ ಬದುಕು ದೀವಾಳಿಯಾಗುತ್ತದೆ.  ಸಕಾಲಕ್ಕೆ ಬರಬೇಕಾದ ಮಳೆ ಬಾರದೆ ಹೋದಾಗ  ಬರಗಾಲದ ಬರಸಿಡಿಲು ಬಡಿಯುತ್ತದೆ.  ನದಿಗಳು ಬತ್ತಿಹೋಗುತ್ತವೆ.

 ಯಾವುದೋ ರಾಜಕೀಯ ಒಪ್ಪಂದದಿಂದಾಗಿಯೋ, ನಮಗೆ ದೊರಕಬೇಕಾದ ನೀರು ಸಿಗದೇ ಇದ್ದಾಗ ಜನಜೀವನ ಅಸ್ವಸ್ಥತೆಗೊಳ್ಳುವುದು.  ಬದುಕು ಕನಿಷ್ಠಗೊಳ್ಳುವುದು.  

 ಇಂತಹ ಸಮಯದಲ್ಲಿ…

 ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ. ನಮ್ಮ ಹಕ್ಕುಗಳನ್ನು ಮಂಡನೆ ಮಾಡಿದಾಗ ನಮ್ಮ ಪಾಲಿಗೆ ದೊರೆಯುವ ನೀರು ನಮಗೆ ದೊರೆಯುತ್ತದೆ.  ಅದು ಕಾವೇರಿಯಾಗಲಿ, ತುಂಗಭದ್ರೆಯಾಗಲಿ, ಭೀಮೆಯಾಗಲಿ, ಕೃಷ್ಣೆಯಾಗಲಿ, ಮಲ್ಲಪ್ರಭ, ಘಟ್ಟಪ್ರಭ, ಮಹಾದಾಯಿ…. ಯಾವುದೇ ಆಗಿರಲಿ, ಆಯಾ ನದಿಯ ನೀರಿನ ನೀರಾವರಿ ಪ್ರದೇಶದ ರೈತರ, ಕೂಲಿ ಜನರ ಬದುಕಿನ ಪ್ರಶ್ನೆಯಾಗುತ್ತದೆ.

 ಇಲ್ಲಿ ನಾವು ನೆನಪಿಡಬೇಕಾದ ಸಂಗತಿಯೊಂದಿದೆ.. ಸಿಗುವ ಸೌಲಭ್ಯಕ್ಕಾಗಿ, ನಮಗೆ ದೊರಕಬೇಕಾದ ಹಕ್ಕುಗಳಿಗಾಗಿ, ನಮ್ಮ ವೈಮನಸನ್ನು ಮರೆಯಬೇಕಾಗಿದೆ. ಅವರು ದಕ್ಷಿಣದವರು, ನಾವು ಉತ್ತರದವರು ಎನ್ನುವ ತಾರತಮ್ಯಕ್ಕೆ ಬಲಿಯಾಗಬಾರದು. “ಇಬ್ಬರ ಜಗಳ ಮೂರನೇಯವನಿಗೆ ಲಾಭವಾಗುವ” ಬಾಲ್ಯದ ಕಥೆ ಗೊತ್ತಿದ್ದರೂ… ಛೇ..! ನಮ್ಮ ನಮ್ಮ ನಡುವಿನ ಒಗ್ಗಟ್ಟಿಲ್ಲವೆಂದರೇ..?

ಇರಲಿ,

 ರೈತರ ಬದುಕಿಗಾಗಿ, ಕೂಲಿ ಬಂಧುಗಳ ಬದುಕಿಗಾಗಿ, ಜನಸಾಮಾನ್ಯರ ಬದುಕಿಗಾಗಿ, ನಮ್ಮೆಲ್ಲರ ಹಸನಾದ ಬದುಕಿಗಾಗಿ ಆಣೆಕಟ್ಟುಗಳು, ನೀರಾವರಿ ಪ್ರದೇಶಗಳು ಜೀವ ಸೆಲೆಯ ತಂತುಗಳಾಗಿವೆ. ನಾವು  ವಿಶಾಲವಾದ ಹೃದಯವನ್ನು ತೆರೆಯಬೇಕಾಗಿದೆ. ಅವರ ಹೋರಾಟಕ್ಕೆ ನಾವು ಕೈಜೋಡಿಸಬೇಕಾಗಿದೆ. ನಮ್ಮ ಹೋರಾಟಕ್ಕೆ ಅವರು ಕೈಜೋಡಿಸಬೇಕು.

 ಕಾವೇರಿಯ ನೆನಪಿನಲ್ಲಿ…

ಮಾಗಾಣಿಯ  ಬದುಕು ನೆನಪಾಯಿತು. ಬಾಲ್ಯದಿಂದಲೂ ಇಂದಿಗೂ ನಾನು ಮಾಗಾಣಿಯ ಪ್ರದೇಶದಲ್ಲಿ ವೃತ್ತಿ ಮಾಡುತ್ತಾ, ಬದುಕನ್ನು ಕಟ್ಟಿಕೊಳ್ಳುತ್ತಿದ್ದೇನೆ. ಆ ಋಣ ಯಾವಾಗಲೂ ಸದಾ ಮರೆಯಲಾಗದು.


 ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

2 thoughts on “

  1. ಕೃಷಿ ಕೂಲಿಕಾರ್ಮಿಕರ ಜೀವನದ ಒಳಹೊರಗುಗಳ ಚಿತ್ರಣ ಸೊಗಸಾಗಿದೆ. ನಾವು ಚಿಕ್ಕವರಿದ್ದಾಗ ಖುಷ್ಕಿ ಬೇಸಾಯದ ಪ್ರದೇಶಗಳಲ್ಲಿ ಕೂಲಿಕಾರ್ಮಿಕರ ಸಂಖ್ಯೆ ಬಹಳವೇ ಕಡಿಮೆ ಇತ್ತು. ಬಹಳಷ್ಟು ಕೆಲಸಗಳು ಮುಯ್ಯಿ ರೀತಿಯಲ್ಲಿಯೇ ಆಗುತ್ತಿದ್ದವು. ಈಗ ಬಹಳಷ್ಟು ಕಡೆಗೆ ಕೂಲಿಕಾರ್ಮಿಕರಿಗೆ ಬೇಡಿಕೆ ಬಹಳ ಇದೆ. ಕೆಲವೊಮ್ಮೆ ಕೆಲಸಗಾರರು ಬಂದಾಗಲೇ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆಯೂ ಬಂದೊದಗಿದೆ.
    ಕಾಲಾಯ ತಸ್ಮೈ ನಮಃ ಎನ್ನಬಹುದು.
    ಅಭಿನಂದನೆಗಳು.

Leave a Reply

Back To Top