ಕಾವ್ಯ ಸಂಗಾತಿ
ಅರುಣಾ ನರೇಂದ್ರ-
ಗಜಲ್
ಹಾರುವ ಹಕ್ಕಿಯ ಹಿಡಿಯುವ ಆಸೆಗೆ ಏನು ಹೇಳಲಿ
ನಿಲುಕದ ಅಂಬರಕೆ ಕೈಚಾಚುವ ಕನಸಿಗೆ ಏನುಹೇಳಲಿ
ಹತ್ತಿಕ್ಕಿಕೊಂಡ ಬಿಕ್ಕುಗಳ ಮಡುಗಟ್ಟಿದೆ ಎದೆಯೊಳಗೆ
ಬಾರದವನ ಬರುವ ಕಾಯುವ ಕಂಗಳಿಗೆ ಏನು ಹೇಳಲಿ
ಹಿಂದೆ ಹಿಂದೆ ಹೋದಂತೆಲ್ಲ ಮಿಂಚಂತೆ ಮಾಯವಾಗುತ್ತಾನೆ
ಎಳ್ಳಷ್ಟೂ ಬೇಧವರಿಯದೆ ಕರಗುವ ಕರುಳಿಗೆ ಏನು ಹೇಳಲಿ
ಎಷ್ಟು ಕರೆದರೂ ಓಗೊಡದ ಜಾಣ ಕಿವುಡು ಅವನಿಗೆ
ಮತ್ತೆ ಮತ್ತೆ ಕೂಗಿ ಕರೆಯುವ ನಂಬಿಕೆಗೆ ಏನು ಹೇಳಲಿ
ಅವನಿಲ್ಲದ ಸ್ವರ್ಗದ ನೆರಳೂ ಅರುಣಾಗೆ ಬೇಕಾಗಿಲ್ಲ ಕೇಳು
ಬೇಡವೆಂದರೂ ಅವನ ಧ್ಯಾನಿಸುವ ಮನಸಿಗೆ ಏನು ಹೇಳಲಿ