ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
ಹುಡುಕುತ್ತಿದೆ ಮನ
ಇರುಳಲಿ ಬೆಳಕ ಹೊಳಹಿನಂತೆ
ಎದೆಯಾಳದಿ ನೀ ಹಚ್ಚಿದ ಪ್ರೀತಿ
ಹಲವು ಭಾವಗಳು ಬಿರಿದು
ಮನ ತಣಿಸಿದ ಹೃದಯ
ಇಂದು ಬರಿದಾಗಿ ಏಕಾಂತದಲಿ
ಹುಡುಕುತ್ತಿದೆ ಮನ ನಿನ್ನ ದಾರಿಯ…
ಜೋಡಿಹಕ್ಕಿಯ ಮಿಲನ ಪ್ರಫುಲ್ಲವಾಯ್ತು ಮನ
ಮುದಗೊಂಡ ಮನದ ಕನಸಿಗೆ ಜೀವ ಒಂದಾಗಿ
ನಿನ್ನುಸಿರಲಿ ನನ್ನುಸಿರು ಮಿಳಿತವಾಗಿ
ಇಂದು ಹುಡುಕುತಿದೇ ಮನ
ಕುಳಿರ್ಗಾಳಿಯಲಿ ಆ ಬಿಸಿಯುಸಿರ….
ಬದುಕಿನ ಮನದ ಆಸೆಗೆ
ಯೋಧನೆಂಬ ಬುತ್ತಿಯ ಹೆಗಲೇರಿಸಿ
ನೀ ಹೊರಟಾಗ ಎದೆಯಾಳದ ನೋವಿಗೆ ಹಚ್ಚಿದೆ
ಬಿಸಿಯಪ್ಪುಗೆಯ ಮಧುರ ನುಡಿಯ ಮುಲಾಮ್
ಇಂದು ಹುಡುಕುತ್ತಿದೆ ಮನ ಆ ಮಧುರಸ್ಫರ್ಶವ…
ವೀರಾವೇಷದಿ ನೀ ಮೆರೆದೆ
ನಾಡ ರಕ್ಷಣೆಗೆ ಶತ್ರು ಪಡೆ ಬಡಿದು
ರಣಭೂಮಿಯಲಿ ಉಸಿರ ಕಳಚಿ ಅಮರನಾದೆ
ಇಂದು ಹುಡುಕುತ್ತಿದೆ ಮನ
ಹಲವು ರುಂಡದ ನಡುವೆ ನನ್ನೊಲವಿನ ಜೀವವ
ತಿಲಕವಿಲ್ಲದ ಬರಿದಾದ ಹಣೆಗೆ
ನಿನ್ನ ಬೆರಳ ನೆತ್ತರನಿಟ್ಟು ಸುಮಂಗಲೆಯಾಗಿಸಿದೆ
ಅರಳಿದ ಹೂ ಮುಡಿಗಿರಿಸಿ ಕನಸ ಬಿತ್ತಿದೆ
ಛಿದ್ರವಾದ ಕನಸ ಹಿಡಿದು ಶೂನ್ಯ ನೋಟದಲಿ
ಇಂದು ಹುಡುಕುತ್ತಿದೆ ಮನ ನಿನ್ನ ನೆತ್ತರವ…
ವಿಮಲಾರುಣ ಪಡ್ಡoಬೈಲ್