ಕನ್ನಡದಲ್ಲಿ ಅರಳಿದ ಮೊದಲ ಫಿಲಿಪೈನ್ಸ್ ಪ್ರಕಾರ ‘ತನಗ’ “ನೀಲಿ ಕಣ್ಣಿನ ಹವಳ” ವಿಮರ್ಶೆ ಅನುಸೂಯ ಯತೀಶ್

ಪುಸ್ತಕ ಸಂಗಾತಿ

ಕನ್ನಡದಲ್ಲಿ ಅರಳಿದ ಮೊದಲ

ಫಿಲಿಪೈನ್ಸ್ ಪ್ರಕಾರ ‘ತನಗ’

“ನೀಲಿ ಕಣ್ಣಿನ ಹವಳ”

‘ಸಿದ್ದಲಿಂಗಪ್ಪ ಬೀಳಗಿ’

ವಿಮರ್ಶೆ

ಅನುಸೂಯ ಯತೀಶ್

ಕನ್ನಡ ಕಾವ್ಯ ಹಲವು ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಕನ್ನಡದ ಕಾವ್ಯ ಪ್ರಕಾರಗಳ ಜೊತೆಗೆ ಅನ್ಯ ಭಾಷೆಯ, ಅನ್ಯ ದೇಶೀಯ ಪ್ರಕಾರಗಳನ್ನು ಕನ್ನಡದ ಕಾವ್ಯಲೋಕ ಆತ್ಮೀಯವಾಗಿ ಸ್ವಾಗತಿಸುತ್ತಿದ್ದು ಕನ್ನಡದ ಕವಿಗಳು ತಮ್ಮ ನೆಲಮೂಲದ ಮಾತೃಭಾಷೆಯನ್ನು ಪೋಷಿಸುತ್ತಾ ಅದರ ನೆರಳಿನಲ್ಲಿ ಇತರ ಪರಕೀಯ ಕಾವ್ಯ ಪ್ರಕಾರವನ್ನು ಕಲಿತು ಕಲಿಸುತ್ತಿರುವುದು ಅಭಿನಂದನಾರ್ಹ ಸಂಗತಿ. ಇದೇ ಮನಸ್ಥಿತಿಯಿಂದ ಈಗಾಗಲೇ ಅಬಾಬಿ, ಗಜಲ್, ತಂಕಾ, ಶಾಹಿರಿ, ಐಕು ರೂಬಾಯಿಗಳು ಕನ್ನಡಕ್ಕೆ ಬಂದು ಕನ್ನಡದ ಕೂಸುಗಳೇ ಅನ್ನುವಷ್ಟರ ಮಟ್ಟಿಗೆ ಕನ್ನಡದ ಕವಿಗಳ ಮನವನಾವರಿಸಿಕೊಂಡು ಆಲದ ಮರದಂತೆ ತನ್ನ ಬಿಳಲುಗಳನ್ನ ಎಲ್ಲಾ ಕಡೆ ಚಾಚಿಕೊಳ್ಳುತ್ತಿವೆ. ನಾವು ಕನ್ನಡವನ್ನು ಪ್ರೀತಿಸಬೇಕು ಪೋಷಿಸಬೇಕು ಬೆಳೆಸಬೇಕು. ಜ್ಞಾನದ ಕಿರಣಗಳು ಯಾವ ದಿಕ್ಕಿನಿಂದ ಬಂದರೂ ಅವುಗಳಿಗನ್ನು ತಡೆಯುವುದು  ಜಾಣತನವಲ್ಲ. ಎಲ್ಲಾ ಕಡೆಯಿಂದ ಬರುವ ಜ್ಞಾನದ ಅರಿವನ್ನು ಪ್ರಜ್ಞಾಪೂರ್ವಕವಾಗಿ ಬಳೆಸಿಕೊಳ್ಳಬೇಕು. ಆ ಮೂಲಕ ಕನ್ನಡ ಭಾಷೆಯನ್ನು ಸಾಹಿತ್ಯವನ್ನು ಸಂಪತ್ಭರಿತಗೊಳಿಸಬೇಕು. ಅಂತಹ ಕ್ರಿಯಾಶೀಲ ಮನಸ್ಸುಗಳಿಂದ ಇಂದು ಕನ್ನಡ ಸಾಹಿತ್ಯ ಪ್ರವೇಶಿಸಿದ ಅನ್ಯದೇಶಿಯ ಸಾಹಿತ್ಯ ಪ್ರಕಾರವೆಂದರೆ ಅದು ‘ತನಗ’.

ಈ ‘ತನಗ’ ಕಾವ್ಯ ಪ್ರಕಾರ ಫಿಲಿಪೈನ್ಸ್ ಮೂಲದಿಂದ ಬಂದಿದೆ. ಈ ಕನ್ನಡ ತನಗದ ಹರಿಕಾರರು ಡಾ. ಗೋವಿಂದ್ ಹೆಗಡೆ ಎಂಬ ಉಲ್ಲೇಖವು ಸಿದ್ದಲಿಂಗಪ್ಪ ಬೀಳಗಿಯವರ ನೀಲಿ ಕಣ್ಣಿನ ಹವಳ ಕೃತಿಯಲ್ಲಿ ದಾಖಲಾಗಿದೆ. ಆ ಪ್ರಕಾರ ಡಾ. ಗೋವಿಂದ ಹೆಗಡೆಯವರು ಪತ್ರಿಕೆಯೊಂದರಲ್ಲಿ ತನಗ ಕುರಿತು ಬರೆದ ಮಾಹಿತಿಯನ್ನು ಆಧರಿಸಿ ಅನೇಕ ಸೃಜನಶೀಲ ಮನಸ್ಸುಗಳು ತನಗ ರಚನೆಯ ಪ್ರಯೋಗಕ್ಕೆ ಇಳಿದರು. ತನಗ ಪದ್ಯಗಳನ್ನು ಅಲ್ಲಲ್ಲಿ ಪ್ರಕಟಿಸಿದವರೂ ಬಹಳಷ್ಟು ಮಂದಿ ಇದ್ದರೂ ಅಧಿಕೃತವಾಗಿ ಕನ್ನಡದ ಮೊದಲ ತನಗ ಕೃತಿಯಾಗಿ ‘ನೀಲಿ ಕಣ್ಣಿನ ಹವಳ’ ಪ್ರಕಟಿಸಿದ ಹೆಗ್ಗಳಿಕೆ ‘ಸಿದ್ದಲಿಂಗಪ್ಪ ಬೀಳಗಿ’ ಅವರದು. ಇವರದು ಸದಾ ಹೊಸತನವನ್ನು ಹುಡುಕುವ ಮನಸ್ಸು. ಹೈಕು ಸೇರಿದಂತೆ ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನ ರಚಿಸಿ ಕನ್ನಡ ಸಾರಸ್ವತ ಲೋಕವನ್ನ ಬೆಳಗಿದ ಕವಿ ಹಾಗೂ ಲೇಖಕರಿವರು.

ಇವರು ವೃತ್ತಿಯಲ್ಲಿ ಸಮಾಜ ಶಾಸ್ತ್ರ ಉಪನ್ಯಾಸಕರಾಗಿದ್ದು ಪ್ರವೃತ್ತಿ ಸಾಹಿತ್ಯ ರಚನೆಯಾಗಿದೆ. ನಿತ್ಯ ವಿದ್ಯಾರ್ಥಿಗಳು ಮತ್ತು ಸಮಾಜದ ನಡುವೆ ಸಂವಹನ ನಡೆಸುವ ಇವರ ಮನಸ್ಸು ಸಮಾಜಮುಖಿಯಾಗಿ ಚಿಂತಿಸುತ್ತಿರುತ್ತದೆ. ಅಂತಹ ಉದಾಹರಣೆಗಳನ್ನು ಈ ತನಕ ಕೃತಿಯಲ್ಲಿ ನಾವು ಕಾಣಬಹುದು. ಫಿಲಿಫೈನ್ಸ್ ಮೂಲದ ಛಂದೊಬದ್ಧ ಕಾವ್ಯ ಪ್ರಕಾರವಾದ ತನಗಕ್ಕೆ ಪುರಾತನವಾದ ಇತಿಹಾಸವಿದೆ.

16ನೇ ಶತಮಾನಕ್ಕಿಂತ ಹಿಂದೆ ಮೌಖಿಕ ಪರಂಪರೆಯ ಹಿನ್ನೆಲೆಯಲ್ಲಿ ಫಿಲಿಪೈನ್ಸ್ ನ ಸಂಪ್ರದಾಯದ ಟ್ಯಾಗ್ಲೋಸ್ ಭಾಷೆಯಲ್ಲಿ ರಚನೆಯಾಗುವ ಕಾವ್ಯವಾಗಿದೆ. ಈ ತನಗದ ಸಾಲುಗಳು 28 ಉಚ್ಚಾರಾಂಶಗಳ ಶೀಷಿಕೆ ರಹಿತ ಸಾಹಿತ್ಯ ಪ್ರಕಾರವಾಗಿದೆ. ಅರಬ್ಬಿ ಮೂಲದ ಗಜಲ್ ಕೂಡ ಶೀರ್ಷಿಕೆ ಇಲ್ಲ ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು.
ಈ ತನಗ ಪ್ರಾಸ ಬದ್ಧ ಕವಿತೆಯಾಗಿದ್ದು ಅಅಬಬ ಪ್ರಾಸದಂತೆ ಬಳಸಲಾಗುತ್ತಿದೆ. ಮುಂದೆ ಪ್ರಾಸಗಳು ಡುಯಲ್ ರೈನ್ ರೂಪಗಳಿಂದ ಹಿಡಿದು ಫ್ರೀ ಸ್ಟೈಲ್ ಫಾರ್ಮಗಳಿಗೆ ಬರೆಯಲ್ಪಡಬಹುದು. ಅ ಅಅಬಬ, ಅಬಅಬ ಬಬಬಬ   ಅಬಕಡ ರೀತಿಯಂತೆ ಎಂದು ಮಣಿಪಾಲ್ ರೆಡ್ಡಿ ಮನ್ಸೂರ್ ರವರು ಅವಲೋಕಿಸಿದ್ದಾರೆ.

ಸಿದ್ದಲಿಂಗಪ್ಪ ಬೀಳಗಿ ಅವರ ನೀಲಿ ಕಣ್ಣಿನ ಹವಳ ಕೃತಿಯಲ್ಲಿ 182 ತನಗಗಳಿದ್ದು ವಿಭಿನ್ನ ವಸ್ತುಗಳನ್ನು ಆಧರಿಸಿ ಕಾವ್ಯಗೈದಿದ್ದಾರೆ. ಕಾವ್ಯ ರಚನೆಗೂ ಹೈಕು ಮತ್ತು ತನಗಗಳ ರಚನೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಕಾವ್ಯಕ್ಕೆ ವಿಸ್ತಾರವಾದ ವ್ಯಾಪ್ತಿ ಇದೆ. ಅಪರಿಮಿತ ಶಬ್ದಗಳಲ್ಲಿ ಸಶಕ್ತಿಯನ್ನು ತುಂಬಬಹುದು. ಆದರೆ ತನಗ ರಚನೆ ಕವಿಯ ಸೃಜನಶೀಲತೆ ಮತ್ತು ಕ್ರಿಯಾಶೀಲ ಅಭಿವ್ಯಕ್ತಿಯನ್ನ ಅವಲಂಬಿಸಿರುತ್ತದೆ. ಪ್ರತಿ ಸಾಲಿನಲ್ಲಿ ಕೇವಲ ಏಳು ಅಕ್ಷರಗಳಂತೆ ನಾಲ್ಕು ಸಾಲುಗಳಲ್ಲಿ 28 ಅಕ್ಷರಗಳಿಂದ ತನ್ನನ್ನು ಕಾಡಿದ ವಸ್ತುವಿಗೆ ತನಗ ರೂಪ ನೀಡುವುದು ಕಷ್ಟ ಸಾಧ್ಯವಾದರೂ ಅವರ ತನಗ ಗಳನ್ನು ಓದಿದಾಗ ಇವರು ಯಾವುದೇ ಪ್ರಯಾಸವಿಲ್ಲದೆ ಅತ್ಯಂತ ಸುಲಲಿತವಾಗಿ ಕಾವ್ಯ ರಚಿಸಿದ್ದಾರೆ ಎನಿಸುತ್ತದೆ. ಅಂತಹ ಅನುಸಂಧಾನ ಇವರ ಲೇಖನಿಯಿಂದ ಹೊರಹೊಮ್ಮಿದೆ. ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳ ಹರವು ದೊಡ್ಡದಾಗಿದ್ದು ಪ್ರತಿ ಓದಿನ ನಂತರ ವಿಭಿನ್ನವಾದ ನೋಟಗಳನ್ನ ಹೊರ ಸೂಸುತ್ತವೆ. ಹೈಕುವಿನ ಹಿರಿಯಕ್ಕ ತಂಕಾದ ಕಿರಿಯಕ್ಕನಂತಿರುವ ಈ ತನಗ ಗಳು ಕಿರಿದರಲ್ಲಿ ಪಿರಿಯರ್ಥ ತುಂಬಿ ಕೊಡುವ ಚುಟುಕುಗಳಾಗಿವೆ. ಇಂತಹ ಸಾಧನೆ ಮಾಡುವುದು ಸರಳವಾದ ಕಾರ್ಯವಲ್ಲ. ಅಂತ ದಾರಿಯಲ್ಲಿ ಸರಳವಾಗಿ ಕ್ರಮಿಸಿದ ಕೀರ್ತಿ ಪ್ರಥಮವಾಗಿ ಸಿದ್ದಲಿಂಗಪ್ಪ ಬಿಳಗಿಯವರಿಗೆ ಸಲ್ಲುತ್ತದೆ. ತನದ ಕಾವ್ಯ ಪ್ರಕಾರವನ್ನು ಪ್ರಥಮ ಬಾರಿಗೆ ಓದಿದರೂ ನಾನು ಹೊಸ ಪ್ರಕಾರ ಓದುತ್ತಿರುವೆನೆಂಬ ಭಾವ ಮೂಡದೆ ಆ ತನಗಳೆ ತನ್ನ ಮನವನಾವರೆಸಿ ಒಂದೇ ಕುಕ್ಕಿಗೆ ಓದಿಸಿಕೊಂಡು ಹೋದವು. ಇದು ಇವರ ಕಣ್ಣು ಕುಸುರಿ ಮತ್ತು ಅಭಿವ್ಯಕ್ತಿಯ ಪ್ರತೀಕವಾಗಿದೆ. ಕಾವ್ಯ ಪ್ರಕಾರ ಯಾವುದೇ ಆದರೂ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸ್ಪಂದಿಸಬೇಕು, ಆಸ್ವಾದಿಸಬೇಕು. ಆಗ ಮಾತ್ರ ಕಾವ್ಯಕ್ಕೆ ಸಾರ್ಥಕತೆ ದಕ್ಕುತ್ತದೆ. ಸಿದ್ದಲಿಂಗಪ್ಪ ಬೀಳಗಿ ಅವರ ತನಗಳು ಸಮಾಜದ ನೋವಿಗೆ ದಣಿಯಾಗಿವೆ. ಇವರು ಸಮಾಜಶಾಸ್ತ್ರ ಉಪನ್ಯಾಸಕರಾಗಿರುವುದರಿಂದ ಸಮಾಜದ ಮನಸ್ಥಿತಿಯ ಅರಿವು ಸಹಜವಾಗಿಯೇ ಇರುತ್ತದೆ. ಇವರ ತನಗಳನ್ನು ಓದಿದಾಗ ಇವರು ಸಮಾಜದ ಭಾಗವೆಂಬ ಭಾವ ಮೂಡುತ್ತದೆ. ವ್ಯವಸ್ಥೆ ಪ್ರಭುತ್ವದ ವಿರುದ್ಧ ಸಾತ್ವಿಕ ಸಿಟ್ಟನ್ನ ತನಗದ ಮೂಲಕ ಹೊರ ಹಾಕಿದ್ದಾರೆ. ಅನ್ಯಾಯ ಅನಾಚಾರಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಲ್ಲಿರುವ ತನಗಗಳು ಅಪಾರ ಅಂತ:ಸತ್ವವನ್ನು ಜೀರ್ಣಿಸಿಕೊಂಡಿವೆ. ಸಾಮಾಜಿಕ ಸ್ಪಂದನ ಗುಣ ಇವರು ಸಮಾಜವನ್ನು ಅರಿಯಲು ಸಮಾಜದ ಒಂದು ಭಾಗವಾಗಲು ನೆರವಾಗಿದೆ. ಕವಿತೆ ಬಾಳನ್ನು ಬೆಳಗುವ ದೀವಿಗೆ ಎನ್ನುವ ಸಿದ್ಧಲಿಂಗ ಬೀಳಗಿಯವರು ತಮ್ಮ ತನಗಗಳ ಮೂಲಕ ಶೋಷಿತರು, ನೋಂದವರು, ಅಸಹಾಯಕರ ಬದುಕಿಗೆ ಬೆಳಕ ನಿಚ್ಚಣಿಗೆ ರೂಪಿಸಿ ಬಾಳನ್ನು ಸಮರ್ಪಕವಾಗಿ ರೂಪಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸುತ್ತಾರೆ.

‘ನೀಲಿ ಕಣ್ಣಿನ ಹವಳ’ ಕೃತಿಯಲ್ಲಿ ಬಹುಪಾಲು ತನಕಗಳು ಸಮಕಾಲೀನ ವಿದ್ಯಮಾನಗಳನ್ನು ಪ್ರತಿನಿಧಿಸುತ್ತವೆ. ಅತ್ಯಂತ ಸ್ವರೂಪದಲ್ಲಿ ಮುಖಾಮುಖಿಯಾಗುವ ಇವರ ತನಗಳು ಓದುಗರಿಗೆ ಬಹುಬೇಗ ಅರ್ಥವಾಗುತ್ತವೆ. ಈ ತನಗಗಳು ಪಂಚಿನಂತೆ ಮೂಡಿಬಂದಿದ್ದು, ಚಿಕ್ಕದಾಗಿ ಚೊಕ್ಕದಾಗಿ ಅಗಾಧ ಸಾರ ಸತ್ವವನ್ನು ತುಂಬಿಕೊಂಡಿರುವ ಕಾವ್ಯ ಪ್ರಕಾರವಾಗಿದೆ. ಈ ಪುಸ್ತಕ ಓದುವ ಅಭಿರುಚಿ ಮತ್ತು ಆಸಕ್ತಿಯಿರದ ಹೊಸ ಪೀಳಿಗೆಯನ್ನು ಈ ತನಕಗಳು ಸೆಳೆಯಬಹುದು.

ಸಿದ್ದಲಿಂಗಪ್ಪ ಬೀಳಗಿಯವರ ಕಾವ್ಯ ವಸ್ತುಗಳ ಕಡೆ ದೃಷ್ಟಿ ಬೀರಿದರೆ ಪ್ರೀತಿ, ಪ್ರೇಮ, ಸರಸ, ಸಲ್ಲಾಪ, ನಲ್ಲೆಯ ವರ್ಣನೆ ತುಂಬಾ ಸುಂದರವಾದ ಪದ ಪುಂಜಗಳಲ್ಲಿ ರಮ್ಯಮಾಲೆಯಾಗಿವೆ. ತಂದೆ ತಾಯಿ ಗುರು ಮತ್ತು ದೇವತೆಗಳು ಇವರ ತನಕಗಳಲ್ಲಿ ಭಿನ್ನ ರೂಪಗಳಲ್ಲಿ ಪ್ರಕಟವಾಗಿವೆ. ನಗರಗಳ ಅವ್ಯವಸ್ಥೆ, ಕವಿಗಳ ಕಾವ್ಯ ರಚನೆ, ಜೀವನದ ಸಾರ್ಥಕತೆ, ಮೋಸ ವಂಚನೆಗಳು, ಮುನ್ನೆಚ್ಚರಿಕೆ, ದಾಂಪತ್ಯದ ಸರಸ ವಿರಸ, ಹಸಿ ಬಿಸಿ ಬಯಕೆಗಳು, ಗೋಸುಂಬೆಗಳ ಮುಖವಾಡ ಬಯಲು, ಇಂಟರ್ನೆಟ್ ನ ಅವಾಂತರಗಳು, ವೇದಾಂತ, ಕಾಮುಕರ ಅಟ್ಟಹಾಸ, ಗಂಟಿಗಾಗಿ ಕಾದಿರುವ ನೆಂಟರು, ದ್ವೇಷ ದಳ್ಳೂರಿಗಳ ಅನಾವರಣ, ಆರೋಪ ಪ್ರತ್ಯಾರೋಪಗಳ ಸರಮಾಲೆ ಮುಂತಾದವುಗಳು ಬೀಳಗಿ ಅವರಿಂದ ತನಗದ ರೂಪ ತಾಳಿವೆ.

ಕಿಟಕಿ ಧೂಳೊರೆಸಿ
 ನೋಡುವ ಜಗ ಚಂದ
ಕೆಟ್ಟ ಗುಣವಳಿಸು
 ಮನಕದು ಆನಂದ

ಜಗತ್ತನ್ನು ನೋಡುವ ನಮ್ಮ ದೃಷ್ಟಿಕೋನ ಸುಂದರವಾಗಿದ್ದರೆ ಜಗತ್ತು ಚೆನ್ನಾಗಿಯೇ ಕಾಣುತ್ತದೆ. ನಮ್ಮ ಮನವು ಸದಾ ಒಳಿತನ್ನು ಬಯಸುತ್ತಾ ಸುವಿಚಾರಗಳನ್ನು ಬಿತ್ತುತ್ತಿದ್ದರೆ ನಿತ್ಯ ಖುಷಿಯಿಂದ ಇರಬಹುದು. ಕಾಮಲೆ‌‌ ಕಣ್ಣೋರಿಗೆ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆಯೇ ವಿನಹ ಅಮೂಲ್ಯವಾದುದೇನು ಗೋಚರಿಸದು ಎಂಬ ಭಾವವಿಲ್ಲಿ ವ್ಯಕ್ತವಾಗಿದೆ.

ಬ್ರಹ್ಮ ಜ್ಞಾನ ಪ್ರಾಪ್ತಿಗೆ
 ವಿಶ್ವಾಮಿತ್ರ ತಪಸ್ಸು
 ಮೇನಕೆ ಕುಣಿತಕ್ಕೆ
 ಕದಡಿತು ಮನಸ್ಸು

ಈ ತನಗದ ಮಹತ್ವ ಅರ್ಥೈಸುವ ಅಗತ್ಯವಿಲ್ಲ. ಸರಳವಾಗಿ ಮೂಡಿ ಬಂದಿದ್ದು ಮನುಜನ ಅರಿಷಡ್ವರ್ಗಗಳ ನಿಯಂತ್ರಣ ಮತ್ತು ಹೆಣ್ಣಿನ ಸೌಂದರ್ಯ ಕಲೆಗಳ ಮುಂದೆ ಯಾವುದೇ ಗಂಡಾದರೂ ಸೋತು ಶರಣಾಗತಿ ಬಯಸುವನು ಎಂಬ ಸತ್ಯದರಿವು ಮೂಡಿಸುತ್ತದೆ. ಇಲ್ಲಿ ನಾವು ಗುರಿ ಸಾಧಿಸಲು ಇಚ್ಛಿಸಿದರೆ ಸಾಲದು, ಗುರಿ ತಲುಪಲು ಮನಸ್ಸಿನ ನಿಯಂತ್ರಣ ಮತ್ತು ಸಾಧನೆಯ ಏಕಾಗ್ರತೆ ಕೂಡ ಬೇಕಾಗುತ್ತದೆ. ಅದನ್ನ ಹೊಂದುವುದು ಸುಲಭವಲ್ಲ ಎಂಬ ಸಂದೇಶವನ್ನ ಮೇನಕೆಯ ನೃತ್ಯಕ್ಕೆ ಮಾರು ಹೋದ ವಿಶ್ವಾಮಿತ್ರನ ತಪಸ್ಸು ಭಂಗವಾದ ರೂಪುದಲ್ಲಿ ನಿರೂಪಿಸಿದ್ದಾರೆ.

ಕತ್ತಲೆ ಓಡಿಸಲು
 ಮಾಡಬೇಡ ಸಾಹಸ
 ಸುತ್ತಲ ಬೆಳಕಲ್ಲಿ
ಮಾಡಿ ಕೋ ಮನ ಹೊಸ

ನಾವು ಕತ್ತಲೆಯೊಳಗೆ ಇದ್ದೇವೆ ಎಂದು ಅದನ್ನೇ ಪರಿತಪಿಸುತ್ತಾ ಕೂರದೆ ನಮ್ಮ ಸುತ್ತಲೂ ಇರುವ ಬೆಳಕನ್ನ ಕಣ್ತೆರೆದು ನೋಡಬೇಕು ಎಂಬ ಸಂದೇಶಯುಕ್ತ ತನಗ ಇದಾಗಿದೆ. ನಾವು ಕಷ್ಟ ನೋವು ಹತಾಶೆಯಲ್ಲಿದ್ದಾಗ ಅದರೊಳಗೆ ಮುಳುಗಿ ನಮ್ಮ ಪಕ್ಕದಲ್ಲಿರುವ ಬೆಳಕ ನಿಚ್ಚನಿಗೆ ಏರದೇ ಕೂರಬೇಡ ಎಂಬ ದಿವ್ಯ ಜ್ಞಾನವನ್ನು ಇದು ಬೋಧಿಸುತ್ತದೆ. ಅಂದರೆ ನಮ್ಮ ಕಣ್ಣಿಗೆ ಬರಿ ಕೆಟ್ಟದ್ದು ಕಾಣಬಾರದು ಒಳಿತನ್ನು ಗ್ರಹಿಸುವ ಶಕ್ತಿ ನಮಗಿರಬೇಕೆಂಬುದು ಇಲ್ಲಿಯ ತಾತ್ಪರ್ಯವಾಗಿದೆ.

ಮನೆಯಲ್ಲಿರುವಾಗ
 ನಿತ್ಯವೂ ಕುರುಕ್ಷೇತ್ರ
 ತಾಜಮಹಲ ಮುಂದೆ
 ನಿಂತಾಗ ಭಾವಚಿತ್ರ

ಇದು ಇಂದಿನ ನಮ್ಮ ಕೌಟುಂಬಿಕ ವ್ಯವಸ್ಥೆಯ ಪ್ರತಿಬಿಂಬವಾಗಿದೆ. ನಾವು ಜನರಿದ್ದಾಗ ಜಗದ ಮುಂದೆ ಒಂದು ರೀತಿ, ತೆರೆಮರೆಯಲ್ಲಿ ಮತ್ತೊಂದು ರೀತಿ ವರ್ತಿಸುವ ಮುಖವಾಡವನ್ನು ಕುರಿತು ಚರ್ಚಿಸುತ್ತದೆ. ದಂಪತಿಗಳ ಗುಣಾವಗುಣಗಳನ್ನು ಇಲ್ಲಿ ಕಾಣಬಹುದು. ಮನೆಯಲ್ಲಿ ಪ್ರೀತಿ ಸಾಮರಸ್ಯ ಹೊಂದಾಣಿಕೆಗಳಿಲ್ಲದೆ ನಿತ್ಯ ಕಾದಾಡುವ ದಂಪತಿಗಳು  ಸಾರ್ವಜನಿಕ ಸ್ಥಳದಲ್ಲಿ ಸತ್ಯವನ್ನು ಮರೆಮಾಚಿ ತಾವು ತುಂಬಾ ಖುಷಿಯಾಗಿ ಇದ್ದೇವೆ ಎಂಬ ಭ್ರಮೆಯನ್ನು ಸೃಷ್ಟಿಸುತ್ತಾರೆ ಎಂಬುದನ್ನ ತಾಜ್ ಮಹಲ್ ಮುಂದೆ ನಗುನಗುತ ಭಾವಚಿತ್ರ ತೆಗೆಯಿಸಿಕೊಳ್ಳುವ ರೂಪಕಗಳಲ್ಲಿ ವಿಸ್ತರಿಸಿದ್ದಾರೆ.

ಬೆಂಕಿಗೆ ಏನು ಗೊತ್ತು
 ಸುಡುವುದೇ ಕಾಯಕ
 ಆರಿಸುವ ಕೈಗಳು
ಯಾಕೋ ಅಸಹಾಯಕ

ಈ ತನಗ ಸಮಾಜದ ಮನಸ್ಥಿತಿ ಕುರಿತು ಮಾತನಾಡುತ್ತದೆ. ದುಷ್ಟರ ನಡವಳಿಕೆಗಳನ್ನು ಬೆಂಕಿಯ ರೂಪಕದಲ್ಲಿ ಕಟ್ಟಿದ್ದಾರೆ. ದುರ್ಜನರು ನಿತ್ಯ ಕೆಡುಕು ಮಾಡಲು ಆಲೋಚಿಸುತ್ತಿರುತ್ತಾರೆ. ಅದು ಅವರ ಗುಣ ಆದರೆ ಅದರ ಅರಿವಿರುವ ಜನರು ಕೂಡ ತಡೆಯಲು ಪ್ರಯತ್ನಿಸುವುದಿಲ್ಲ. ತಪ್ಪನ್ನು ಕಂಡಾಗ ಖಂಡಿಸುವುದಿಲ್ಲ, ಮಾರ್ಗದರ್ಶನ ನೀಡಿ ಸರಿದಾರಿಗೆ ತರಲು ಪ್ರಯತ್ನಿಸುವುದಿಲ್ಲ ಎಂಬ ವಿಷದವನ್ನು ಅಸಹಾಯಕ ಎಂಬ ಪದದ ಮೂಲಕ ವಿವರಿಸಿದ್ದಾರೆ.

ಕ್ಷಣದಲ್ಲಿ ತೀರ್ಮಾನ
ನೀಡುವ ಜಾಲತಾಣ
ಓದದೆಯೂ ಇರ್ತಾವೆ
 ವಿಮರ್ಶೆ ಗುಣಗಾನ

ಈ ತನಗ ಜಾಲತಾಣಗಳನ್ನು ಬಳಸುವ ಎಲ್ಲರಿಗೂ ಸತ್ಯದರ್ಶನ ಮಾಡಿಸುತ್ತದೆ. ಇಂದು ಜನ ಸಾಮಾಜಿಕ ಜಾಲತಾಣಗಳಿಗೆ ಅತಿಯಾದ ವ್ಯಾಮೋಹಿಗಳಾಗಿ ನಿತ್ಯ ಅದೇ ಗುಂಗಿನಲ್ಲಿ ಬದುಕುತ್ತಾರೆ. ಎಂಬ ವಿಚಾರವನ್ನು ಮುನ್ನಲೆಗೆ ತರುತ್ತಾರೆ. ನಾವು ಹಾಕುವ ಯಾವುದೇ ಪೋಸ್ಟ್ ಅಥವಾ ಫೋಟೋಗಳಿಗೆ ತಕ್ಷಣ ನೂರಾರು ಲೈಕ್ ಕಮೆಂಟ್ಗಳ ಸುರಿಮಳೆ ಆಗುತ್ತದೆ. ಆದರೆ ಅವೆಲ್ಲವನ್ನು ನೋಡಿ ಓದಿ ಗ್ರಹಿಸಿ ನಂತರ ಬರುವ ಪ್ರತಿಕ್ರಿಯೆಯೇ ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿ ಇದೇ ಸತ್ಯವೆಂಬ ಭ್ರಮೆಯಲ್ಲಿ ಬದುಕದೆ ವಾಸ್ತವ ಅರಿತು ನಡೆಯಬೇಕೆಂಬ ಎಚ್ಚರಿಕೆ ಗಂಟೆ ಇದಾಗಿದೆ.

 ಅವಶ್ಯ ಇದ್ದವರು
 ಬಾಯ್ಬಿಟ್ಟು ಕೇಳುತ್ತಾರೆ
 ಮೋಸ ಮಾಡುವವರು
 ಮೆತ್ತಗೆ ಕೀಳುತ್ತಾರೆ

ಇದು ವಂಚನೆಯ ಪ್ರತಿರೂಪವಾಗಿದೆ. ಬಡವರು, ನಿರ್ಗತಿಕರು, ಅಸಹಾಯಕರ ಪ್ರಾಮಾಣಿಕತೆಯನ್ನು ಉಳ್ಳವರ ಮೋಸದ ಗುಣವನ್ನು ಇದು ಪರಿಚಯಿಸುತ್ತದೆ. ಅಗತ್ಯ ಇರುವುದನ್ನು ಕೇಳಿ ಪಡೆಯುವುದೇ ಉತ್ತಮ ನಡೆ. ಆದರೆ ದುರಾಸೆಗೆ ಬಿದ್ದು ಇದ್ದರೂ ಮತ್ತಷ್ಟು ಪಡೆಯಲು ತಮ್ಮದೇ ಆದ ತಂತ್ರ್ಯಗಳನ್ನು ಹೆಣೆದು ಮೋಸ ಮಾಡುವ ದುಷ್ಟ ಮನಸ್ಸಿನ ಜನರನ್ನ ಈ ತನಗ ತರಾಟೆಗೆ ತೆಗೆದುಕೊಳ್ಳುತ್ತದೆ.

ಸೌಂದರ್ಯ ಪ್ರಜ್ಞೆಯಲಿ
 ಸಹಜತೆಯೆ ಹೆಚ್ಚು
ವಿಪರೀತ ಮೇಕಪ್
ಕೆಲವರಿಗೆ ಹುಚ್ಚು

ಇಲ್ಲಿ ಕವಿ ಸಹಜತೆ ಮತ್ತು ಕೃತಕತೆ ಕುರಿತು ಚರ್ಚಿಸಿದ್ದಾರೆ. ಪ್ರಕೃತಿ ಸೇರಿದಂತೆ ಜಗದಲಿ ಸಹಜವಾದುದೆಲ್ಲ ಸುಂದರವಾಗಿದೆ. ಸಹಜವಾಗಿ ಬಂದ ಸೌಂದರ್ಯದ ಮುಂದೆ ಹಚ್ಚಿಕೊಂಡ ಬಣ್ಣ ತನ್ನ ರೂಪ ಕಳೆದುಕೊಂಡು ಬೆತ್ತಲಾಗುತ್ತದೆ ಎಂಬ ಭಾವ ಇಲ್ಲಿ ವ್ಯಕ್ತವಾಗಿದೆ.

ಸಾಕ್ಷಿಕರಿಸಲಾರೆ
ಗೆಳೆಯನೊಲವನ್ನು
 ಅಂತರಂಗಕ್ಕೆ ಗೊತ್ತು
 ಅದರಾಳ ವಿಸ್ತಾರ

ಸ್ನೇಹಕ್ಕೆ ಅಮರವಾದ ಇತಿಹಾಸವಿದೆ. ಪುರಾಣ ಚರಿತ್ರೆಗಳು ಸ್ನೇಹದ ಮೌಲ್ಯವನ್ನು ಎತ್ತಿ ಹಿಡಿದಿವೆ. ಈ ಸ್ನೇಹವನ್ನು ಸ್ನೇಹಿತರ ನಡುವಿನ ಎದೆ ಬಗೆದು ತೋರಿಸಬೇಕಿಲ್ಲ. ಮನದೊಳಗಿನ ನಿಷ್ಕಲ್ಮಶ ಭಾವವನ್ನು, ಅದರ ಆಳ ಅಗಲಗಳು, ಅಳತೆಗೆ ಮೀರಿದ ಒಲವನ್ನ ಗಂಭಿಕರಿಸಿಕೊಂಡಿವೆ ಎಂದು ಹೆಮ್ಮೆ ಭಾವದಲ್ಲಿ ಸ್ನೇಹದ ಪರಾಕಾಷ್ಠೆಯನ್ನು ಚಿತ್ರಿಸಿದ್ದಾರೆ.

ಬದುಕ ಪಯಣದಿ
ನೂರಾರು ತಂಗುದಾಣ
 ಸಾಗುತ್ತದೆ ಇರು ನೀ
 ಗುರಿ ಮುಟ್ಟುವ ತನಕ

ಇದು ಗುರಿ ಸಾಧಿಸಲು ದಾರಿ ತೋರುವ ತನಕವಾಗಿದೆ. ಜೀವನದಲ್ಲಿ ಗುರಿಯನ್ನು ಅರಸಿ ಹೊರಟಾಗ ಅದಕ್ಕೆ ಅಡೆತಡೆಗಳು, ನಿಲುಗಡೆಗಳು ಬಹಳಷ್ಟು ಎದುರಾಗುತ್ತವೆ. ಆದರೆ ಅವುಗಳಿಗೆ ಧೃತಿಗೆಡದೆ ನಾವು ಮುನ್ನುಗ್ಗಬೇಕು ಎಂಬ ಕಹಿ ಸತ್ಯವನ್ನ ಸಿಹಿಯಾಗಿ ಉಣಪಡಿಸಿದ್ದಾರೆ. ಈ ಸಾಲುಗಳು ಸಾಧಕರ ಸಾಧನೆಗೆ ಪ್ರೆರೇಪಿಸುತ್ತವೆ. ಧೈರ್ಯದ ಹೆಜ್ಜೆ ಇಡಲು ಪ್ರೋತ್ಸಾಹಿಸುತ್ತವೆ. ಕವಿಗಳಿಂದ ಸಾಹಿತ್ಯದಿಂದ ಆಗಬೇಕಾಗಿರುವುದು ಇದೆ ಅಲ್ಲವೇ? ಒಂದು ಸಕಾರಾತ್ಮಕ ಬದಲಾವಣೆ ಬರಹದಿಂದ ಸಾಧ್ಯವಾದರೆ ಸಾಹಿತ್ಯದ ನೈಜ ಗೆಲುವು ಆಗುತ್ತದೆ ಅದನ್ನು ಈ ತನಕ ಬಿಂಬಿಸುತ್ತದೆ.

 ಹರೆಯ ಉಕ್ಕುವಾಗ
ಅರಿಯದುಪದೇಶ
ಇಳಿಯ ವಯಸ್ಸಲ್ಲಿ
 ನೆನಪು ಅವಶೇಷ

ಇದು ಯೌವ್ವನದ ಅದಮ್ಯ ಉತ್ಸಾಹ ಮತ್ತು ಸಂಧ್ಯಾಕಾಲದ ನೆನಪುಗಳ ಸರಮಾಲೆಯನ್ನು ಹೊತ್ತು ತಂದಿದೆ. ಹರೆಯ ಮನುಜನ ಬದುಕಿನ ಪರ್ವಕಾಲ. ಏನು ಬೇಕಾದರೂ ಕ್ಷಣ ಮಾತ್ರದಲ್ಲಿ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಬಿತ್ತುವ ಸಮಯ ಇದು. ಒಳಿತಿಗೂ ದಾರಿಯಾಗಬಹುದು. ಕೆಡುಕನ್ನು ಮಾಡಬಹುದು ಎನ್ನುವ ಆತಂಕ ತೋರುವ ಕವಿಯು ಬಿಸಿ ರಕ್ತದಲ್ಲಿ ಯುವಕರು ಗುರುಹಿರಿಯರ ಸಲಹೆ, ಮಾರ್ಗದರ್ಶನ ತಿರಸ್ಕರಿಸಿ ತಪ್ಪು ದಾರಿಯಲ್ಲಿ ನಡೆದರೆ ಅದರ ಫಲಿತಾಂಶವನ್ನು ಅನುಭವಿಸಬೇಕಾಗುತ್ತದೆ. ಆಗ ಕಾಲ ಮಿಂಚಿರುತ್ತದೆ ಎಂಬ ಜಾಗೃತಿಯನ್ನು ಈ ತನಕದ ಮೂಲಕ ನೀಡಿದ್ದಾರೆ.

ಕಾಣದ ದೇವರಿಗೆ
 ಕೈಮುಗಿದರೇನುಂಟು,
 ಧರೆಯ ದೇವರೆಲ್ಲ
ತಂದೆ ತಾಯಿಯಲುಂಟು

ತಂದೆ ತಾಯಿ ನಿಜವಾದ ದೇವರುಗಳು. ಅವರ ಕಾಳಜಿ ಪ್ರೀತಿ ವಾತ್ಸಲ್ಯ ತ್ಯಾಗಕ್ಕೆ ಸಮಾನವಾದದ್ದು ಇದ್ದರೆ ಎಲ್ಲಿ ಯಾವುದೂ ಇಲ್ಲ ಈ  ಧರೆಯಲಿ  ಯಾವುದು ಇಲ್ಲ. ಹೆತ್ತವರನ್ನು ನಿರ್ಲಕ್ಷಿಸಿ ಕಾಣದ ದೇವರನ್ನು ಹುಡುಕುವ ಜನರಿಗೆ ಸತ್ಯ ದರ್ಶನ ಮಾಡಿಸುವ ತನಕವಿದಾಗಿದೆ.

ಹಣವ ಕೊಟ್ಟು ತಂದ
ಪ್ರಶಸ್ತಿ ಡಾಕ್ಟರೇಟು
ಅಮಾಯಕ ಕೇಳಿದ
 ಒಂದಕ್ಕೆ ಎಷ್ಟು ರೇಟು

 ಈ ತನಗ ಇಂದು ಪಿಎಚ್ಡಿ ಪದವಿಗಳು ಮಾರಾಟವಾಗುವುದರ ವಿರುದ್ಧ ದನಿಯೆತ್ತಿವೆ. ಹಣದಿಂದ ಪ್ರಶಸ್ತಿ ಬಹುಮಾನಗಳಷ್ಟೇ ಅಲ್ಲ ಡಾಕ್ಟರೇಟ್ ಕೂಡ ಅನಾಯಾಸವಾಗಿ ಸಿಗುತ್ತದೆ ಎನ್ನುವ ಈ ತನಗ ಶೈಕ್ಷಣಿಕ ವ್ಯವಸ್ಥೆಗಳಲ್ಲಿನ ಭ್ರಷ್ಟಾಚಾರವನ್ನು ಪ್ರತಿಭಟಿಸುತ್ತದೆ. ಇವೆಲ್ಲ ಮೋಸ ವಂಚನೆ ಮಾಡುವವರ ಸ್ವತ್ತು, ಅದು ನಿಜವಾದ ಪ್ರತಿಭೆ ಇರುವ ಅಮಾಯಕರಿಗೆ ಕಲ್ಪನೆ ಎಂಬುದು ಕವಿಯ ವಿಚಾರ ಹಾಗೂ ತರ್ಕವಾಗಿದೆ.

ಮುಖಪುಟವ ನೋಡಿ
 ಕೃತಿ ಅಳೆಯಬೇಡಿ
 ಪುಟ ತೆರೆದು ನೋಡು
 ಜ್ಞಾನಾಮೃತದ ಜಾಡು

ಪುಸ್ತಕದ ಮುಖಪುಟ ಆ ಕೃತಿಯ ಆಶಯ ಮತ್ತು ಗುರಿಗಳನ್ನು ಬಿಂಬಿಸುತ್ತದೆ. ಆದರೆ ಅದೇ ಅಂತಿಮವಲ್ಲ. ಸುಂದರವಾದ ಮುಖಪುಟ ಹೊಂದಿರುವ ಅದೆಷ್ಟೋ ಕೃತಿಗಳು ಜನರನ್ನು ಸೆಳೆಯುವಲ್ಲಿ ಸೋತಿವೆ. ಅದಕ್ಕೆ ಕವಿ ಹೊರಗಿನ ನೋಟಕ್ಕೆ ಬೆರಗಾಗಿ ಒಳಗಿನ ಸಾರವನ್ನು ದಕ್ಕಿಸಿಕೊಳ್ಳದೆ ಇರಬೇಡಿ ಅರ್ಥಪೂರ್ಣವಾದ ಪುಸ್ತಕಗಳನ್ನು ಓದುವ ಅವಕಾಶ ಕಳೆದುಕೊಳ್ಳಬೇಡಿ ಆದಷ್ಟು ಪುಸ್ತಕದ ಒಳಗಿನ ಜ್ಞಾನಕ್ಕೆ ಮಾನ್ಯತೆ ನೀಡಿರೆಂದು ಕೋರುತ್ತಾರೆ.

ಅರೆ ಜ್ಞಾನಿ ಎದುರು
 ಅರೆ ಹುಚ್ಚನಂತಿರು
 ಜ್ಞಾನಿಗಳ ಸಂಗಡ
ವಾದ ಮಾಡುತ್ತಿರು

ಇದು ಅರೆಬರೆ ಜ್ಞಾನ ಹೊಂದಿರುವ ವಿತಂಡವಾದಿಗಳ ಗುಣಗಾನ ಮಾಡುತ್ತದೆ. ಹೇಳಿದ್ದನ್ನು ವಿರೋಧಿಸುವುದೇ ಅವರ ಕಾಯಕ. ಯಾರಾದರೂ ಹೇಳಿದ ವಿಚಾರದ ಬಗ್ಗೆ ಯೋಚಿಸಿ ಸರಿ ತಪ್ಪು ಪರಾಮರ್ಶಿಸಿ ಮಾತನಾಡುವುದಿಲ್ಲ. ತಾನು ಹೇಳಿದ್ದೆ ವೇದ ವಾಕ್ಯ ಎನ್ನುತ್ತಾರೆ. ಅವರ ಬಳಿ ಚರ್ಚೆ ಮಾಡುವುದು ಸಗಣಿಯೊಡನೆ ಗುದ್ದಾಟ ಮಾಡಿದಂತೆ. ಆದರೆ ಜ್ಞಾನಿಗಳ ಸಹವಾಸ ಬೇರೆಯೇ ತೆರನಾದದ್ದು. ಅವರೊಳಗಿನ ಒಡನಾಟ, ವಾದ ಗಂಧದೊಡನೆ ಗುದ್ದಾಟವಿದ್ದಂತೆ. ಇದರಿಂದ ಪರಿಮಳವಂತು ದೊರೆಯುತ್ತದೆ. ವಾದಗಳು ಸರಿಯಾದ ಮಾರ್ಗದಲ್ಲಿ ಸಾಗಿ ಅರ್ಥಪೂರ್ಣವಾದ ಚಿಂತನೆಗಳು ಆಲೋಚನೆಗಳು ಹೊರಹೊಮ್ಮಲಿ ಎಂಬುದು ಕವಿಯ ಆಶಯವಾಗಿದೆ.

ಕ್ಷಣ ಹೊತ್ತು ನಿಂತರೆ
 ಕಾಣದ ಇಂಟರ್ನೆಟ್ಟು
 ಲೋಕ ತುಂಬಾ ಆತಂಕ
 ನೂರೆಂಟು ಎಡವಟ್ಟು

ಇಂದು ಮನುಷ್ಯ ಇಂಟರ್ನೆಟ್ನ ಬಲೆಯೊಳಗೆ ಅದೆಷ್ಟು ಬಂಧಿಯಾಗಿದ್ದಾನೆಂದರೆ ಅರೆಕ್ಷಣ ಅದು ನಿಂತರೆ ಜನರ ಉಸಿರೇ ನಿಂತಂತೆ ಪರಿತಪಿಸುತ್ತಾರೆ. ಜಗತ್ತು ಸಂಪೂರ್ಣವಾಗಿ ಆನ್ಲೈನ್ ಚಟುವಟಿಕೆಗಳನ್ನೇ ಅವಲಂಬಿಸಿದೆ. ಅದಿಲ್ಲದೆ ಅಂತರಾಷ್ಟ್ರೀಯ ಮಾರುಕಟ್ಟೆಗಳೆ ಶಬ್ದವಾಗುತ್ತವೆ. ಇನ್ನು ಸಾಮಾನ್ಯ ಜನರು ತಮ್ಮ ವಾಟ್ಸಪ್ ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಿಂದ ದೂರ ಉಳಿಯುವುದು ಎಂದರೆ ಸರ್ವಸ್ವವನ್ನು ಕಳೆದುಕೊಂಡ ಭಾವ ತಾಳುತ್ತಾರೆ ಇದನ್ನು ಚರ್ಚಿಸುವ ಈ ತನಗದ ಆಶಯ ಮನುಷ್ಯ ಯಾವುದನ್ನೇ ಆದರೂ ಪರಿಮಿತಿಯಲ್ಲಿ ಇಟ್ಟುಕೊಳ್ಳಬೇಕು ಎಂಬುದಾಗಿದೆ.

ಧರ್ಮದ ಮೇಲಾಟದಿ
ದೇವರಿಗು ಆತಂಕ
ಗೋಸುಂಬೆಗಳ ಪಾತ್ರ
 ಪರದೆ ಹಿಂದಿನಂತೆ

 ದೇವರು ಒಬ್ಬನೇ ನಾಮ ಹಲವು ಎನ್ನುವ ವಾಣಿಯನ್ನು ಮರೆತು ಧರ್ಮ ಧರ್ಮಗಳ ನಡುವೆ ದ್ವೇಷಾಸುಯೇ ಬೆಳೆಸಿಕೊಂಡು ತಮ್ಮ ತಮ್ಮ ದೇವರೇ ಶ್ರೇಷ್ಠವೆಂದು ಕಾದಾಡುವ ಪರಿಗೆ ರೋಸಿ ಹೋದ ಕವಿ ಮನಸು ಧರ್ಮದ ನೆಪದಲ್ಲಿ ಬಣ್ಣ ಬದಲಿಸುವ ಜನರ ನಾಟಕವನ್ನು ತೀವ್ರವಾಗಿ ವಿರೋಧಿಸುತ್ತದೆ.

ತೂಕ ತಪ್ಪಿದ ಮಾತು
 ಸಾವಿರದ್ದರು ವ್ಯರ್ಥ
ಸಮರಸ ಬೆಸೆವ
 ಮೌನಕೆ ಅನೇಕಾರ್ಥ

ಮಾತು ಆಡಿದರೆ ಹೋಯಿತು, ಮಾತು ಬೆಳ್ಳಿ ಎಂಬ ನುಡಿಗಳು ಮಾತಿನ ಮಹಿಮೆಯನ್ನು ಸಾರುತ್ತವೆ. ಇದರಿಂದ ಮನುಜ ಮಾತಿನ ತೂಕವನ್ನು ಅರಿಯಬೇಕು. ನಮ್ಮ ಮಾತು ಇತರರ ಮನಸ್ಸಿಗೆ ನೋವುಂಟು ಮಾಡಬಾರದು. ಬದಲಾಗಿ ಜೀವನಕ್ಕೆ ಸ್ಪೂರ್ತಿ ಪ್ರೇರಣೆ ಆನಂದ ನೀಡುತ್ತಿರಬೇಕು. ಅದರ ಹೊರತಾಗಿ ಮಾತು ನಿರರ್ಥಕ ಎನ್ನುವ ಕವಿ ಈ ಮೌನ ಒಡೆದ ಮನಸ್ಸುಗಳನ್ನು ಬೆಸೆಯಬಹುದು ಜನರ ನಡುವೆ ಸೌಹಾರ್ದ್ಯತೆ ಮೂಡಿಸಬಹುದು ಎನ್ನುತ್ತಾರೆ.

ಚಾಡಿ ಮಾತು ಕಿಡಿಗೆ
 ನಡುಗುತ್ತಿದೆ ಮುಖ
ಪ್ರೀತಿ ಮಾತಲಿ ಇದೇ
ಬಾಳು ಅರಳು ಸುಖ

ಇಂದು ಜನರ ನಡುವೆ ಬೆಂಕಿ ಹಚ್ಚಿ ಇಲ್ಲ ಸಲ್ಲದ ಸುದ್ದಿ ಮಾಡಿ ಜನರ ನೆಮ್ಮದಿ ಕೆಡಿಸುವವರ ಕುರಿತ ಅಕ್ಷೇಪವನ್ನು ಈ ತನಗ ಹೊತ್ತು ತಂದಿದೆ. ಅವರಿಗೆ ಖುಷಿ ನೀಡಲು ಕವಿ ಈ ಮೂಲಕ ಕರೆ ಕೊಡುತ್ತಾರೆ.

ಆಗಾಗ ಮುನ್ನಡೆಗೆ
ಹೆಣ್ಣು ವಸ್ತ್ರ ಸಂಹಿತೆ
ಬಣ್ಣದ ಮೇಲಾಟದೆ
ಇದ್ದ ಬಟ್ಟೆಗೂ ಚಿಂತೆ

ಹೆಣ್ಣು ಮಕ್ಕಳ ವಸ್ತ್ರಸಂಹಿತೆ ಕುರಿತು ಚರ್ಚಿಸುವ ಗಂಡು ಸಮಾಜಕ್ಕೆ ಈತನದ ಚಾಟಿ ಬೀಸುತ್ತದೆ. ಗಂಡಿನ ಬಟ್ಟೆಯ ಬಗ್ಗೆ ವಿಧಿಗಳಿಲ್ಲ. ಆದರೆ ಹೆಣ್ಣು ಧರಿಸುವ ಬಟ್ಟೆಯ ಬಗ್ಗೆ ಆಗಾಗ ಕೇಳಿ ಬರುವ ಅಪಸ್ವರಗಳು ಗಂಡು ಹೆಣ್ಣಿಗೂ ಇರಬೇಕೆಂಬುದು ಕವಿಗೂ ವಾದವಾಗಿದೆ. ಹೆಣ್ಣು ಮಕ್ಕಳು ಕೂಡ ಇತರ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವುದು ಅತ್ಯಂತ ಖೇದದ ಸಂಗತಿ.
ಇಂದು ಬಟ್ಟೆಗಳ ಬಣ್ಣವೂ ಕೂಡ ಧರ್ಮಗಳನ್ನ ಪ್ರತಿನಿಧಿಸಲು ಶುರುವಾಗಿ ಧಾರ್ಮಿಕವಾಗಿ ಬಳಸಿಕೊಳ್ಳುವ ಬಗ್ಗೆ ಕವಿಯು ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.

ನಂಬಿಕೆ ಇದ್ದರೆ
ಬಲುಚಂದ ಸಂಸಾರ
 ಸಂಶಯ ಸುಳಿದರೆ
ಅದರಲ್ಲಿಲ್ಲ ಸಾರ

ಸುಖ ಸಂಸಾರದ ಸಾರವೇ ನಂಬಿಕೆ.ಅದು ಹೋದರೆ ಆ ಕುಟುಂಬದ ದಾಂಪತ್ಯದ ಬೇರು ಕಳಚಿ ಪ್ರೀತಿಯ ಆದ್ದರಿಂದ ದಂಪತಿಗಳ ನಡುವೆ ಪ್ರೀತಿಯ ಸೌಧ ಕುಸುತ್ತದೆ. ಆದ್ದರಿಂದ ದಂಪತಿಗಳ ನಡುವೆ ವಿಶ್ವಾಸ ಇರಬೇಕು. ಅನುಮಾನ ಎಂದಿಗೂ ನುಸುಳಬಾರದೆಂಬ ಕಿವಿ ಮಾತನ್ನ ಈ ತನಗ ಹೊತ್ತು ತಂದಿದೆ.

ಈಗೀಗ ಎಲ್ಲಾ ಕಡೆ
ಸುಳ್ಳಿನದೇ ದರ್ಬಾರು
ಸತ್ಯ ಮೂಲೆಗೆ ಸೇರಿ
ಮರೆವರು ಕೂಳರು

 ಸತ್ಯ ಮತ್ತು ಸುಳ್ಳುಗಳ ನಡುವಿನ ಕಣ್ಣ ಮುಚ್ಚಾಲೆಯನ್ನು ಈ ತನಗ ತೋರಿಸುತ್ತದೆ. ಸುಳ್ಳನ್ನು ಸತ್ಯವೆಂದು ನಂಬಿಸಿ ನಿಜವಾದ ಸತ್ಯವನ್ನು ಮರೆಮಾಚುವ ಕೂಳರ ವಿರುದ್ಧ ಕವಿ ಸಿಡಿಮಿಡಿಗೊಂಡಿದ್ದಾರೆ.

ಒಪ್ಪಂದದ ಕಾಮವು
 ನಡೆದರೆ ಪ್ರಕೃತಿ
ಮೃಗೀಯ ಅತ್ಯಾಚಾರ
ಕಾಮುಕರ ವಿಕೃತಿ

ಕಾಮ ಸೃಷ್ಟಿಯ ಸಹಜ ಕ್ರಿಯೆ ದಂಪತಿಗಳ ನಡುವೆ ಲೈಂಗಿಕತೆ ಒಪ್ಪಿಗೆ ಇರುತ್ತದೆ. ಅದು ಸಮಾಜ ಮಾನ್ಯ ಸಮ್ಮತಿ ನಡೆ. ಅದರ ಹೊರತಾದ ಹೆಣ್ಣಿನ ಲೈಂಗಿಕ ಶೋಷಣೆ, ಅತ್ಯಾಚಾರವನ್ನು ತರಾಟೆಗೆ ತೆಗೆದುಕೊಳ್ಳುವ ಕವಿ ಮೃಗಿಯ ವರ್ತನೆ ತೋರುವ ಕಾಮುಕರ ವಿಕೃತಿಯನ್ನು ಖಂಡಿಸುತ್ತಾರೆ.

ಕಾವಿಯೊಳಗವಿತು
ಕೆಣಕುತಿತ್ತು ಕಾಮ
ನಂಬಿದ ಭಕ್ತರಿಗೆ
ಹಾಕಿತ್ತು ಮೂರು ನಾಮ

ಇದು ಮಠ ಮಾನ್ಯಗಳಲ್ಲಿ ಕಾವಿ ಧರಿಸಿ ದೈವಾಂಶ ಸಂಭೂತರಂತೆ ನಾಟಕವಾಡುವ ಕೆಲವು ಕಾವಿ ಸ್ವಾಮಿಗಳ ಬಗ್ಗೆ ದನಿ ಎತ್ತಿದೆ. ಜನ ಮಠಾಧೀಶರ ಬಗ್ಗೆ ಅಪಾರವಾದ ಭಕ್ತಿ ಗೌರವಗಳನ್ನು ಇಟ್ಟುಕೊಂಡಿರುತ್ತಾರೆ. ಅದನ್ನು ಹುಸಿ ಮಾಡದಂತೆ ಭಕ್ತರ ನಂಬಿಕೆಯನ್ನು ಉಳಿಸಿಕೊಂಡು ಅರಿಷಡ್ವರ್ಗಗಳ ನಿಯಂತ್ರಣ ಸಾಧಿಸಿ ಸಮಾಜದ ಒಳಿತಿಗಾಗಿ ಶ್ರಮಿಸಲು ಈ ತನಗ ಕರೆ ಕೊಡುತ್ತದೆ.

ಸಾಲ ಮಾಡುವ ಮುನ್ನ
ನೂರು ಸಾರಿ ಯೋಚಿಸು
 ಗಳಿಕೆ ಹಣದಲ್ಲಿ
ಸುಖ ಅನುಭವಿಸು

ಸಾಲ ಮಾಡಿ ಕಷ್ಟದಲ್ಲಿ ಸಿಲುಕಿ ಪಡಬಾರದಾ ತೊಂದರೆ ಪಡುವುದನ್ನು ನೋಡಿ ಸಾಲ ಮಾಡದಂತೆ ಮುಂದಿನ ಆಗು ಹೋಗುಗಳ ಬಗ್ಗೆ ಚಿಂತಿಸಬೇಕೆಂದು ಸಲಹೆ ನೀಡುತ್ತಾರೆ. ಹಾಸಿಗೆ ಇರುವಷ್ಟು ಕಾಲು ಚಾಚು ಬದುಕಬೇಕೆನ್ನುವ ನಮ್ಮ ಹಿರಿಯರ ಗಾದೆ ಮಾತನ್ನು ನಾವು ಮರೆಯುವಂತಿಲ್ಲ. ತಮ್ಮ ಆದಾಯ ಗಳಿಕೆ ಎಷ್ಟಿದೆಯೋ ಅದಕ್ಕೆ ಪೂರಕ ಯೋಜನೆಯನ್ನು ರೂಪಿಸಿ ಜೀವನ ನಡೆಸುವುದು ಸೂಕ್ತ ಅದನ್ನೇ ಕವಿ ಈ ತನಗದಲ್ಲಿ ನಿರೂಪಿಸಿದ್ದಾರೆ.

ಸಕಲ ರೋಗಕದು
ದಿವ್ಯ ಔಷಧಿ ನಗು
 ಎಲ್ಲವೂ ಮರೆಯಲು
ಆಗಬೇಕು ನೀ ಮಗು

ಇಲ್ಲಿ ನಗುವಿನ ದಿವ್ಯ ಔಷಧಿಯನ್ನು ಕವಿ ಸಿಂಪಡಿಸಿದ್ದಾರೆ. ಇಲ್ಲಿ ಎರಡು ಅಂಶಗಳನ್ನ ನಾವು ಗಮನಿಸಬೇಕು. ನೋವು ಕಷ್ಟ ದುಃಖ ಏನೇ ಇದ್ದರೂ ಅವೆಲ್ಲವನ್ನು ಮೆಟ್ಟಿನಿಂತು ನಗೆಯ ಸಿಂಪಡಿಸಬೇಕು. ಆಗ ಆರೋಗ್ಯ ಲಭಿಸುತ್ತದೆ. ಮತ್ತೊಂದು ವಿಧಾನ ಮಗುವಾಗಬೇಕು ಎನ್ನುವುದು. ಯಾಕೆ ಮಗು ಆಗಿರಬೇಕು ಎಂದರೆ ನೋವನ್ನು ಮರೆಯಲು ಮಕ್ಕಳಿಗೆ ಯಾವುದೇ ಆಗುಹೋಗುಗಳ ಚಿಂತೆಯಾಗಲಿ ಇರುವುದಿಲ್ಲ. ಅಂತಹ ಮಗುವಿನಂತಹ ಮನಸ್ಸನ್ನು ನಾವು ಹೊಂದಬೇಕೆಂದು ಕವಿ ಆಶಿಸುತ್ತಾರೆ.

ಎಲ್ಲಿದ್ದರೂ ಪೈಪೋಟಿ
 ಇನ್ನಿಲ್ಲದ ದಾವಂತ
 ಸಾಯುವುದರೊಳಗೆ
ಬೇಕು ಎಲ್ಲವೂ ಸ್ವಂತ

ಇದು ಇಂದಿನ ದಾವಂತ ಬದುಕಿನ ಹೋರಾಟಗಳನ್ನು, ಸಂಘರ್ಷಗಳನ್ನು ತೆರೆದಿಡುತ್ತದೆ. ಮನುಷ್ಯನ ದುರಾಸೆಯ ಪ್ರತಿಕವಾಗಿ ಕೂಡ ಈ ಸಾಲುಗಳು ಮೂಡಿವೆ. ಇರುವ ಆಯುಷ್ಯವನ್ನೆಲ್ಲ ಮನುಷ್ಯ ಎಲ್ಲವನ್ನು ದಕ್ಕಿಸಿಕೊಳ್ಳಲು ವ್ಯಯಿಸುತ್ತ ಯಾವುದನ್ನು ಅನುಭವಿಸುವುದಿಲ್ಲ ಎಂಬ ಕಟು ಸತ್ಯವನ್ನ ಈ ತನಗದಲ್ಲಿ ಬಿತ್ತಿದ್ದಾರೆ.

 ಪ್ರೀತಿಸಲು ಸಮಯ
 ಇಲ್ಲವೆಂದನ ಕವಿ
 ಒಳಗೆ ಪತ್ನಿ ಧ್ವನಿ
ನಿನಗೆ ಯೋಗ್ಯ ಗವಿ

ಇದು ಕವಿಯ ಕಾವ್ಯ ರಚನೆಯ ವಿಧಾನವನ್ನು ತೆರೆದಿಡುತ್ತದೆ. ಕವಿ ಕಾವ್ಯದೊಳಗೆ ಧ್ಯಾನಾಸಕ್ತನಾಗಿ ಜಗವನ್ನು ಮರೆಯುವನು. ಆಗ ಮಡದಿಯು ಅದರ ಹೊರತಾಗಿಲ್ಲ. ಪ್ರೀತಿಸಲು ಸಮಯವಿಲ್ಲದಷ್ಟು ಕಾವ್ಯದೊಳಗೆ ಮುಳುಗಿರುತ್ತಾನೆ ಇದನ್ನ ಕಂಡ ಹೆಂಡತಿ ಮನೆ ಮಕ್ಕಳ ಕಡೆ ಗಮನವಿಲ್ಲದ ಕವಿಗೆ ನೀರಲು ಯೋಗ್ಯ ಸ್ಥಳ ಗವಿ ಎಂದು ಟಿಕ್ಕಿಸುತ್ತಾಳೆ ಸಾಹಿತಿಗಳ ಪ್ರತಿಬಿಂಬವಾಗಿದೆ

ಅನ್ನ ನೀಡುವವನ
 ಬದುಕಲ್ಲಿ ಸವೆತ
ಬೆಂಬಲ ಬೆಲೆಗಾಗಿ
ಹಂಬಲಿಸುವ ರೈತ

ಇದು ನಮ್ಮ ಕಾಯಕ ಜೀವಿ ನೇಗಿಲ ಯೋಗಿ ಅನ್ನದಾತ ರೈತನ ಬದುಕು ಬವಣೆಯನ್ನು ಪರಿಚಯಿಸುತ್ತದೆ. ರೈತ ಇಡೀ ಜಗತ್ತಿಗೆ ಅನ್ನ ನೀಡಿ ಸಲಹುತ್ತಾನೆ. ದೂರದೃಷ್ಟವೆಂದರೆ ನಾನಾ ಕಾರಣಗಳಿಂದ ಬೆಳೆದ ಬೆಳೆಗಳಿಗೆ ಬೆಲೆ ದೊರೆಯದಿದ್ದಾಗ ಇದರಿಂದ ನೊಂದು ಜೀವ ಸವೆಸುವನು ಎನ್ನುವ ಮೂಲಕ ಸುಧಾರಿಸದ ರೈತನ ಪರಿಸ್ಥಿತಿ ಮತ್ತು ಹಿತಾಸಕ್ತಿ ಕಾಪಾಡದ ವ್ಯವಸ್ಥೆಯ ಸೋಲನ್ನ ಈ ತನಗ ಸಂಕೇತಿಸುತ್ತದೆ.

ಕೋಪ ಇದ್ದರೆ ಒಂದು
ನೇರ ಎದೆಗೆ ಇರಿ
ಮೋಸ ಮಾಡಿ ಬೆನ್ನಿಗೆ
ಹಾಕಬೇಡ ನೀ ಚೂರಿ

ಇದು ನಮ್ಮ ಬೆನ್ನ ಹಿಂದೆ ನಡೆಯುವ ಪಿತೂರಿಯನ್ನ ಸೂಚಿಸುತ್ತದೆ. ಇಂದು ಜನ ನಮ್ಮ ಮೇಲೆ ಇರುವ ಕೋಪವನ್ನು ನೇರವಾಗಿ ತೀರಿಸಿಕೊಳ್ಳದೆ ಬೇರೆ ಬೇರೆ ಹಾದಿಯಲಿ ತಂತ್ರಗಳನ್ನ ಹೆಣೆಯಬಹುದು. ಅಲ್ಲದೇ ಹಿಂಬಾಗಿಲಿನ ಮಾರ್ಗಗಳ ಮೂಲಕ ಅವರ ಅರಿವಿಗೆ ಬಾರದಂತೆ ಅವರಿಗೆ ಕೆಡುಕನ್ನು ಉಂಟು ಮಾಡುತ್ತಾರೆ ಇದನ್ನು ಕವಿ ಈ ತನಗದ ಮೂಲಕ ಚಿತ್ರಿಸಿದ್ದಾರೆ.

ನೋಡುಗರ ಕಣ್ಣಿಗೆ
ನಾನೇನು ಯಜಮಾನ
ಎಲ್ಲಕ್ಕೂ ನಿಯಂತ್ರಣ
ನನ್ನಾಕೆ ಜಾಯಮಾನ

 ಇದು ದಂಪತಿಗಳ ನಡುವಿನ ಹಾಸ್ಯದ ತನಕವಾಗಿದೆ. ಗಂಡ ತಾನು ಮನೆಗೆ ಹೆಸರಿಗೆ ಮಾತ್ರ ಯಜಮಾನ ಇದು ಹೊರನೋಟ ಆದರೆ ಮನೆಯ ನಿಜ ಒಡತಿ ನನ್ನ ಮಡದಿ ಎಂದು ಸಂಸಾರದ ಒಳನೋಟವನ್ನು ಪ್ರತಿಬಿಂಬಿಸಿರುವುದು.

ಹೀಗೆ ಸಿದ್ದಲಿಂಗಪ್ಪ ಬೀಳಗಿಯವರ ತನಗಗಳು ಒಂದಕ್ಕಿಂತ ಮತ್ತೊಂದು ಉತ್ತಮ ಆಶಯಗಳನ್ನು ಸ್ರವಿಸುತ್ತಾ ಸಾಗಿರುವುದು ಹೆಮ್ಮೆಯ ಸಂಗತಿ. ಇದು ಕನ್ನಡದ ಮೊದಲ ತನಗ ಕೃತಿಯಾಗಿದೆ. ಇದರಲ್ಲಿ ಇರುವ ಬಹುತೇಕ ಗಟ್ಟಿಯಾದ‌ ತನಗಗಳ ರಚನೆಗಳಿವೆ. ಅಲ್ಲಲ್ಲಿ ಕಾಣುವ ಪ್ರಾಸ ಹೊಂದಾಣಿಕೆಯ ತ್ರಾಸ ಮುಂದಿನ ದಿನಗಳಲ್ಲಿ ಮತ್ತಷ್ಟು ಸಶಕ್ತವಾಗಲಿ. ವಿಶಿಷ್ಟ ಶಬ್ದ ಪ್ರಯೋಗಗಳ ಮೂಲಕ ಕಿರಿದರಲ್ಲಿ ಪಿರಿಯರ್ಥ ಕಟ್ಟಿಕೊಡಲು ಶ್ರೀಯುತರು ಮತ್ತಷ್ಟು ಮಗದಷ್ಟು ಶ್ರಮಿಸುವರು ಎಂಬ ಆಶಾಭಾವದ ಮೂಲಕ ಮುಂದಿನ ಇವರ ತನಗ ಸಾಹಿತ್ಯ ಪಯಣಕ್ಕೆ ಶುಭ ಹಾರೈಸುವೆ


ಅನುಸೂಯ ಯತೀಶ್

Leave a Reply

Back To Top