ಹಮೀದಾ ಬೇಗಂ ದೇಸಾಯಿಯವರ ಕವಿತೆ”ಬದುಕಿನ ಹೆಜ್ಜೆಗಳು…”

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿಯವರ ಕವಿತೆ

“ಬದುಕಿನ ಹೆಜ್ಜೆಗಳು…”

ಕಳೆದು ಹೋದ ಬದುಕಿನ
ನೆನಪುಗಳು ಮೂಡಿವೆ
ಮನದ ಕನ್ನಡಿಯಲಿ
ಮರುಕಳಿಸಿ ಢಾಳಾಗಿ..

ಎಳವೆಯ ಹಸಿ ಹಸಿ
ರಂಗು ರಂಗಿನ ಚಿನ್ನಾಟ
ನಕ್ಕು ನಲಿದಿಹ ನಿಶ್ಚಿಂತ
ಗರಿಗೆದರಿದಂಥ ಹಾರಾಟ..

ಏಸೋ ಕನಸುಗಳ ಮಾಲೆ
ಹೆಣೆ ಹೆಣೆದು ಮನಸಿನಲಿ
ಸುಖಿಸುತಿದ್ದೆ ನನ್ನೊಳಗೆಯೇ
ಬಚ್ಚಿಟ್ಟು ಎದೆಯ ಗೂಡೊಳಗೆ..

ವಸಂತಾಗಮನ ನಿರುಕಿಸುತ
ಚಿಗುರು-ಮೊಗ್ಗು- ಹೂಗಳ
ಮೈಮನ ಬಯಸಿ ಪುಳಕಿತ
ಉರುಳಿ ಹೋಯಿತು ಯೌವ್ವನ..

ಇಂದು ತನು ಮಾಗಿ ಬಾಗಿದೆ
ಬಯಕೆಗಳೆಲ್ಲ ಮುರುಟಿವೆ;
ಆದರೂ ಸಂತೃಪ್ತವಿದೆ ಮನವು
ಕಳಿತ ಫಲದ ರಸ-ರುಚಿಯಂತೆ..!


ಹಮೀದಾ ಬೇಗಂ ದೇಸಾಯಿ

Leave a Reply

Back To Top