ಆದಪ್ಪ ಹೆಂಬಾ ಮಸ್ಕಿ-ರಾಧೇ….ರಾಧೇ…

ಲೇಖನ ಸಂಗಾತಿ

ಆದಪ್ಪ ಹೆಂಬಾ ಮಸ್ಕಿ-

ರಾಧೇ….ರಾಧೇ…

ಶ್ರೀ ಕೃಷ್ಣ ಜನ್ಮಾಷ್ಠಮಿ ಅಂದ್ರೆ ಭಾರತೀಯರ ಪಾಲಿಗೊಂದು ಸಂಭ್ರಮದ ಹಬ್ಬ. ಉತ್ತರ ಭಾರತದಲ್ಲಂತೂ ಇದನ್ನು ವಿಶಿಷ್ಟವಾಗಿ, ವಿಜೃಂಭಣೆಯಿಂದ ಆಚರಿಸುತ್ತಾರೆ. ಈಗೀಗ ನಾವು ದಕ್ಷಿಣ ಭಾರತೀಯರೂ ಕೃಷ್ಣ ಜನ್ಮಾಷ್ಠಮಿಯನ್ನು ಸಂಭ್ರಮಿಸುತ್ತಿದ್ದೇವೆ. ತಮ್ಮ ಮನೆಯ ಪುಟ್ಟ ಪುಟ್ಟ ಕಂದಮ್ಮಗಳನ್ನು ಕೃಷ್ಣನ ರೂಪದಲ್ಲಿ ನೋಡುವುದೆಂದರೆ ತಾಯಂದರಿಗೆ ಒಂದು ಹಬ್ಬ. ತಮ್ಮ ಮಗುವಿಗೆ ಕೃಷ್ಣನಂತೆ ಅಲಂಕಾರ ಮಾಡಿ, ತಲೆಗೆ ನವಿಲುಗರಿ ಸಿಕ್ಕಿಸಿ, ಕೈಗೊಂದು ಕೊಳಲು ಕೊಟ್ಟು ಫೋಟೋ, ಸೆಲ್ಫೀ ತಗೆದುಕೊಳ್ಳುವುದು ಸಂಭ್ರಮವೇ. ಎಲ್ಲ ಬಾಲಕೃಷ್ಣರು ಮುದ್ದು ಕೃಷ್ಣರೇ….. ನಿಷ್ಕಲ್ಮಶ ಭಾವ. ಅಲ್ಲವನ ಮುಗ್ಧತೆ, ನಗುವೊಂದೆ ಪ್ರಧಾನ. ಅಪ್ಪಿ ಮುದ್ದಾಡಬೇಕೆನ್ನುವಷ್ಟು ಚೆಂದವಾಗಿ ತಯಾರಾಗಿರುತ್ತವೆ ಮಕ್ಕಳು. ಇಲ್ಲಿ ಗಮನಿಸಬೇಕಾದ ಅಂಶ ಈ ಮುದ್ದು ಕೃಷ್ಣ ಅಕ್ಷರಶಃ ಜಾತ್ಯಾತೀತ.! ಪ್ರತೀ ವರ್ಷ ಬುರ್ಕಾ ಹಾಕಿಕೊಂಡಿರುವ ಮುಸ್ಲಿಂ ತಾಯಿ ತನ್ನ ಮಗನಿಗೆ ಕೃಷ್ಣನ ವೇಷ ಹಾಕಿ ಶಾಲಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದನ್ನು ನಾವು ನೋಡುತ್ತಲೇ ಇರುತ್ತೇವೆ. ಈ ಬಾರಿಯೂ ಅಂತಹದೇ ಒಂದು ಪ್ರಸಂಗ ಈ ಲೇಖನಕ್ಕೆ ಕಾರಣವಾಯಿತು.

        ಆರೇಳು ವರ್ಷಗಳ ಹಿಂದೆ ನಾನು ಕೃಷ್ಣನ ಜನ್ಮ ಸ್ಥಳ ಮಥುರಾ ಕ್ಕೆ ಹೋಗಿದ್ದೆ. ಅಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ, ಇಲ್ಲಿ ನಾವು ಒಬ್ಬರನ್ನೊಬ್ಬರು ಭೇಟಿಯಾದಾಗ ಹಲೋ….ಅಂತಾಗಲೀ ಅಥವಾ ನಮಸ್ಕಾರ ಅಂತಾಗಲೀ…ಪರಸ್ಪರ ವಿಶ್ ಮಾಡ್ಕೊಳ್ಳಲ್ವೇ…. ಹಂಗೆ ಅಲ್ಲಿ ಮಥುರೆಯಲ್ಲಿ ಒಬ್ಬರಿಗೊಬ್ಬರು ಭೇಟಿಯಾದಾಗ, “ರಾಧೇ…ರಾಧೇ….” ಅಂತ ವಿಶ್ ಮಾಡ್ಕೋತಾರೆ.‌ ನನ್ನ ಅಲ್ಪ ಮತಿಗೆ ಆಶ್ಚರ್ಯ! ಕೃಷ್ಣನ ಜನ್ಮ ಭೂಮಿ,…           “ಕೃಷ್ಣ ಕೃಷ್ಣ” ಅಂದಿದ್ರೆ ಓಕೆ ಅನಿಸ್ತಿತ್ತು. ಇದೇನಿದು ಕೃಷ್ಣನ ಸಖಿ ರಾಧೆಯ ಹೆಸರು ರಾಧೇ..ರಾಧೇ  ಅಂತ ಹೇಳ್ತಾರೆ ? ಅನಿಸ್ತು. ನಾ ಸುಮ್ಮನಾಗುವವನಲ್ಲ ಅಲ್ಲಿದ್ದ ಹಿರಿಯರೊಬ್ಬರನ್ನ ಹಿಂಗ್ಯಾಕೆ ? ಅಂತ ಕೇಳೇ ಬಿಟ್ಡೆ (ನನಗೆ ಬರುವ ಅರ್ಧಂಬರ್ಧ ಹಿಂದಿಯಲ್ಲಿ) ಅದಕ್ಕವರು, “ಅವರು ಹೇಳುತ್ತಿರುವುದು, ಕೃಷ್ಣನ ಹೆಸರನ್ನೇ…..ರಾಧೇಯ…ರಾಧೇಯ….. ಅಂತ, ಆಡು ಮಾತಿನಲ್ಲಿ ಅದು ರಾಧೆ…ರಾಧೇ… ಅಂತ ತುಂಡಾಗಿದೆ” ಅಂದ್ರು. ನನಗೆ ಸಮಾಧಾನ ಆಯ್ತು. ಹಳೆಯದನ್ನು ನೆನಪಿಸಿದ ಮುದ್ದು “ರಾಧೆ” ಗೊಂದು ಥ್ಯಾಂಕ್ಸ್.
“ರಾಧೇ…..ರಾಧೇ….”
ಅಷ್ಟಕ್ಕೂ ಈ ಮದ್ದು ರಾಧೆಯ ಹೆಸರು.
 “ಅರ್ಫಾನಾ” ನಮ್ಮ ಶಾಲೆಯ ಶಿಕ್ಷಕಿ “ನೂರಜಾ” ಅವರಗಳು. ಯಾವ ಧರ್ಮದವರೆಂದು ಹೇಳುವುದು ಅವಶ್ಯಕತೆ ಇಲ್ಲ ಅನ್ಕೋತೀನಿ. ಜಿ.ಎಸ್.ಎಸ್. ಅವರ
“ಎಲ್ಲಿದೆ ನಂದನ
ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ,
ಒಳಗಿನ ತಿಳಿಯನು
ಕಲಕದೆ ಇದ್ದರೆ
ಅಮೃತದ ಸವಿ ಇದೆ ನಾಲಿಗೆಗೆ”
ಸಾಲುಗಳು ಕಾಡುತ್ತಲೇ ಇರುತ್ತವೆ. ನಾವ್ಯಾರು ? ಅನ್ನುವ ಪ್ರಶ್ನೆಗೆ ನಮ್ಮೆಲ್ಲ ಜಾತಿ ಮತ ಪಂಥ ಗಳನ್ನು ಬದಿಗಿಟ್ಟು ನಾವು ಭಾರತೀಯರು. ಭಾರತೀಯರು ಮಾತ್ರ ಅಂತ ಅನ್ಕೊಂಡ್ರೆ ನಮ್ಮ ಕೃಷ್ಣ ಜನ್ಮ ಭೂಮಿ ನಂದನವೇ.


 ಆದಪ್ಪ ಹೆಂಬಾ ಮಸ್ಕಿ

4 thoughts on “ಆದಪ್ಪ ಹೆಂಬಾ ಮಸ್ಕಿ-ರಾಧೇ….ರಾಧೇ…

Leave a Reply

Back To Top