ಸುಧಾ ಪಾಟೀಲ ಕವಿತೆ ಕಥೆ ಹೇಳುವ ಭಾವಗಳು

ಕಾವ್ಯ ಸಂಗಾತಿ

ಸುಧಾ ಪಾಟೀಲ

ಕಥೆ ಹೇಳುವ ಭಾವಗಳು

ಭಾವನೆಗಳೆಲ್ಲ ಬೆಸೆದು
ಗಂಟಲುಬ್ಬಿ
ಮಾತು ಹೊರಡದೆ
ಸಿಲುಕಿಕೊಂಡು
ಹೊರಬರದೆ ಒದ್ದಾಡಿ
ಕಥೆಯಾಗಹೊರಟವು

ನಿಜ ಹೇಳಲಾರದೆ
ಉಸಿರುಗಟ್ಟಿ ಏದುಸಿರು
ಬಿಟ್ಟಾಗ
ಅಮುಕಿ ಹಿಡಿದ ತಲ್ಲಣಗಳು
ಝಲ್ಲನೆ ಚಿಮ್ಮಿ
ಕಥೆಯಾಗಹೊರಟವು

ಗೊತ್ತಿರದ ಪುಸ್ತಕಕ್ಕೆ
ನಾನೇ ಮುನ್ನುಡಿಯಾಗಿ
ಪುಟ ಪುಟಗಳಲ್ಲೂ
ಆಚ್ಚೊತ್ತಿದ ಅಕ್ಷರಗಳು
ಹಾರಾಡಿವೆ ಎಲ್ಲೆಲ್ಲೋ
ದಿಕ್ಕು ದಿಸೆಯಿಲ್ಲದೆ
ಯಾರ ಕೈಗೂ ಸಿಗದಂತೆ
ಕಥೆಯಾಗಹೊರಟವು

ಬಾಳಿನ ಮರ್ಮವ
ನೀಗಿ ಹೃದಯದ ಭಾಷೆಯ
ಕೊಡವಿ
ಎದ್ದು ನಿಲ್ಲಲು ಹೋದಾಗ
ಬೆನ್ನ ಹಿಂದೆ ಬಿದ್ದಿತ್ತು
ಮರೆಯದ ಗಾಯ
ಅದೇ ದೊಡ್ಡದಾಗಿ
ಎಲ್ಲ ಕಡೆ ಸುತ್ತಾಡಿ
ಕಥೆಯಾಗಹೊರಟವು

ನಿಯಂತ್ರಣಕ್ಕೆ ಸಿಲುಕದ
ಏಳು ಬೀಳಿನ ಹಾದಿಯಲಿ
ಗಮ್ಯವ ಮರೆತು
ತಡಕಾಡಿ ಎದ್ದು ಹೊರಟಾಗ
ವಿಷಯಾ0ತರವಾಗಿ
ಅಭಾಸವಾದಾಗ
ಕಥೆಯಾಗಹೊರಟವು

ಚೆಲುವಿನ ಚೈತನ್ಯಕ್ಕೆ
ಮೊಗದ ಭರವಸೆಗೆ
ಯಾರೂ ಗಮನಿಸದ
ಈ ಆಂತರ್ಯದ ಬಾಳಿಗೆ
ಹಲವಾರು ಕಾರಣ ಕೂಡಿ
ಕಥೆಯಾಗಹೊರಟವು


ಸುಧಾ ಪಾಟೀಲ

Leave a Reply

Back To Top