ವಿಶೇಷ ಲೇಖನ
ರಕ್ಷಾಬಂಧನ ದೊಂದಿಗೆ ವೃಕ್ಷಾ ಬಂಧನ-
ಪ್ರಜ್ವಲಾ ಶೆಣೈ
ರಕ್ಷಾಬಂಧನ ದೊಂದಿಗೆ ವೃಕ್ಷಾ ಬಂಧನ
ಪ್ರಾಣಿ,ಪಕ್ಷಿ,ಸಕಲ ಜೀವರಾಶಿಗಳನ್ನು ತನ್ನ ಮಡಿಲಲ್ಲಿಟ್ಟು ಪೊರೆವ ಪ್ರಕೃತಿ ಎಂಬ ಭೂತಾಯಿ ತಾನು ಪಡೆದುಕೊಂಡದ್ದಕ್ಕಿಂತ ನಮಗೆ ಕೊಟ್ಟದ್ದೇ ಹೆಚ್ಚು.ನಮಗೆ ಆಶ್ರಯ,ಉಸಿರಾಡಲು ಶುದ್ಧ ವಾಯು,ಆಹಾರವಷ್ಟೆ ಅಲ್ಲ,ತನ್ನ ದೇಹದ ಭಾಗಗಳನ್ನು ಮನುಷ್ಯನ ಅಗತ್ಯತೆಗಳಿಗಾಗಿ ತ್ಯಾಗ ಮಾಡಿರುವ ವಾತ್ಸಲ್ಯಮಯಿ. ಆಕೆ ತನ್ನ ಮಡಿಲಲ್ಲಿ ಎಲ್ಲರನ್ನೂ ಪೊರೆದು ಆಶ್ರಯವಿತ್ತು ಜೋಗುಳ ಹಾಡಿದ ಮಾತೃ ಹೃದಯಿ. ಉಸಿರನಿತ್ತ ಜೀವಜಾತೆ.ಹೂವು ಹಣ್ಣು,ಆಹಾರವಿತ್ತು ತನ್ನ ಮಡಿಲನ್ನು ಬರಿದಾಗಿಸಿದ ತ್ಯಾಗಮಯಿ. ಇಷ್ಟಾದರೂ ಮಾನವನಿಗೆ ತೃಪ್ತಿ ಇಲ್ಲ. ಖನಿಜ,ಲೋಹ,ತೈಲವನ್ನೂ ಬಾಚಿ ಭೂತಾಯಿಯ ಒಡಲು ಕೊರೆದು ತನ್ನ ಅಗತ್ಯತೆ ಗಳನ್ನು ಪೂರೈಸಿ ಕೊಳ್ಳುತ್ತಿದ್ದಾನೆ.ಇದರಿಂದ ಅರಣ್ಯಗಳು ಅಳಿವಿನಂಚಿಗೆ ಸಾಗುತ್ತಿದೆ.ನಿಸರ್ಗದ ಅತ್ಯಮೂಲ್ಯವಾದ ಕೊಡುಗೆ ಅರಣ್ಯಗಳು. ಪ್ರಾಣಿ ಪಕ್ಷಿಗಳ ಅಳಿವು ಉಳಿವು ಅರಣ್ಯದ ಅಸ್ತಿತ್ವದ ಮೇಲೆ ಅವಲಂಬಿತವಾಗಿದೆ. ಕಾಡು ಇಂದು ನಾಡಾಗಿ ಪರಿವರ್ತನೆಗೊಂಡಿದೆ. ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು ನಾಡಿಗೆ ಬಂದು ಭಯವನ್ನು ಹುಟ್ಟಿಸುವ ದೃಶ್ಯವನ್ನು ನಾವು ಆಗಾಗ ಕಾಣುತ್ತೇವೆ. ಆದರೆ ಇದರಲ್ಲಿ ಪ್ರಾಣಿಗಳ ತಪ್ಪೇನಿದೆ? ವನ್ಯಜೀವಿಗಳ ಆಶ್ರಯ ತಾಣ ಇಂದು ಮಾನವನ ಆವಾಸದ ನಿಲ್ದಾಣವಾಗಿದೆ. ಹೀಗೆ ಅರಣ್ಯ ನಾಶವಾಗುತ್ತಾ ಹೋದರೆ ಪ್ರಾಣಿಗಳು ಹೋಗುವುದಾದರೂ ಎಲ್ಲಿಗೆ? ಹೀಗಾಗಿ ಕಾಡನ್ನು ಉಳಿಸಿದರೆ ಮಾತ್ರ ನಾಡು ಉಳಿದೀತು. ನಿಸರ್ಗವೆಲ್ಲಿದೆಯೋ ಅಲ್ಲಿಯೇ ಸ್ವರ್ಗ. ನಿಸರ್ಗದ ಜೊತೆ ಬೆರೆತು ಬಾಳಿದರೆ ಸ್ವಚ್ಛ ಗಾಳಿ, ಸ್ವಾಸ್ತ್ಯ ಬದುಕು ನಮ್ಮದಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು. ಪ್ರತಿ ಬಾರಿ ಆಚರಿಸುವ ಸಹೋದರ ಸಹೋದರಿಯರ ಪವಿತ್ರ ಹಬ್ಬ ರಾಖಿ ಹಬ್ಬವನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸುವ ಶಪಥ ಮಾಡೋಣ. ರಕ್ಷಾಬಂಧನದೊಂದಿಗೆ ವೃಕ್ಷಗಳನ್ನು ರಕ್ಷಿಸುವ ಹಾಗೂ ನಮ್ಮ ಸುತ್ತಮುತ್ತ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವಂತಹ ವೃಕ್ಷಾಬಂಧನವನ್ನು ಆಚರಿಸೋಣ. ಪ್ರತಿಯೊಬ್ಬರೂ ಒಂದೊಂದು ವೃಕ್ಷಕ್ಕೆ ರಕ್ಷೆಯನ್ನು ಕಟ್ಟಿ ಅದನ್ನು ರಕ್ಷಿಸುವ ಹೊಣೆಗಾರಿಕೆ ಬೆಳೆಸಿಕೊಳ್ಳೋಣ. ಸಹೋದರ ಪ್ರೇಮ, ಕಾಳಜಿ,ಕೇವಲ ಮನುಷ್ಯನಿಗಷ್ಟೇ ಅಲ್ಲ ನಮಗೆ ಉಸಿರು ಕೊಡುವ ಪರಿಸರಕ್ಕು ಮೀಸಲಾಗಿರಲಿ.ನಮ್ಮೆಲ್ಲರಿಗಾಗಿ ತನ್ನೆಲ್ಲವನ್ನು ಧಾರೆಯೆರೆಯುವ ವೃಕ್ಷಮಾತೆಯನ್ನು ಉಳಿಸೋಣ.ಆಗಲೇ ಪರಿಸರ ಸಂರಕ್ಷಣೆ ಸಾಧ್ಯ.ಅಲ್ಲವೇ ? ನೀವೇನಂತೀರಿ?
————————————————
ಪ್ರಜ್ವಲಾ ಶೆಣೈ