ಕಾವ್ಯ ಸಂಗಾತಿ
ಡಾ. ನಾಗರತ್ನ ಅಶೋಕ ಭಾವಿಕಟ್ಟಿ
ಗಜಲ್
ಜೊತೆಯಾಗಿ ನಡೆದ ಪಯಣ
ನಿಲ್ಲಿಸದಿರು ವಿನಂತಿ ಮೇರೆಗೆ
ನಿಲ್ದಾಣ ಬರುವ ಮುಂಚೆ
ಇಳಿಯದಿರು ವಿನಂತಿ ಮೇರೆಗೆ
ಬದುಕಿನ ತವಕಗಳ ದಾಟಿರುವೆ
ಏರುಪೇರಿನ ದಾರಿಗೆ ಹಿಂಜರಿಯುವೆಯೇಕೆ
ಮೌನದಲಿ ನೋವ ನುಂಗುತ
ನಡೆಯದಿರು ವಿನಂತಿ ಮೇರೆಗೆ
ಕಣ್ಣ ಅಂಚಿನ ಕುಡಿನೋಟದ
ಮರುಳುತನವ ಮರೆತು ಬಿಡು
ಕಲಕಿದ ಉದಕ ತಿಳಿಯಾದೀತು
ಅವಸರಿಸದಿರು ವಿನಂತಿ ಮೇರೆಗೆ
ಉಸಿರಿನ ಕಣಕಣದಲೂ ಅಳಿದುಳಿದ
ಒಲುಮೆಯ ಉಸುರಿ ಬಿಡು
ನೀಡಿದ ವಚನವ ಮೀರಿದೆನೆಂದು
ಕೊರಗದಿರು ವಿನಂತಿ ಮೇರೆಗೆ
ಅಪ್ಪಳಿಸುತಿಹ ಅಲೆಗಳ ಹೊಡೆತದಲೂ
ಅರುಣೋದಯವ ಆಸ್ವಾದಿಸುತಿಹ ರತುನಳ
ಜೀವದ ತುಡಿತವನು ಅರಿತು
ಮರುಗದಿರು ವಿನಂತಿ ಮೇರೆಗೆ
ಡಾ. ನಾಗರತ್ನ ಅಶೋಕ ಬಾವಿಕಟ್ಟಿ
ಚನ್ನಾಗಿದೆ.