ಕಾವ್ಯ ಸಂಗಾತಿ
ಡಾ.ಬಸಮ್ಮ ಗಂಗನಳ್ಳಿ
ಮತ್ತೆ ಬರುವನು ಚಂದಿರ
ಸುಮಧುರ ಭಾವದ ಚಂದಿರ
ದೂರವಾದನು ಹುಸಿ ಮುನಿಸಿನಲಿ
ಒಂದು- ಎರಡು ದಿನಗಳೇ
ವರುಷಗಳಂತೆ ದೀರ್ಘವಾದವು
ವಿರಹ ಬಾಧೆ ತಾಳಲಾರನು
ಅವಳಿಗೂ ಕಾಡಿದೆ
ಅವನಂತಹದೇ ನೋವು
ಕಂಡ ಕನಸು ನನಸಾಗದೆ
ಹಾಗೆ ಬಂದು ಹೀಗೆ ಹೋದ
ಸಖನ ನೆನಪು ನಿರಂತರ
ತಿಳಿಯದ ತಳಮಳ
ಮತ್ತೆ ಬರುವನೆ ? ಚಂದಿರ
ಕಾದಿಹಳು ಕ್ಷಣ ಕ್ಷಣವು
ಅವನ ಒಲುಮೆಯ
ಬತ್ತಲಾಗದ ಪ್ರೀತಿಯ ಸೆಲೆಯ
ಎದೆಯ ಬಟ್ಟಲಲ್ಲಿ ಮುಚ್ಚಿಟ್ಟು
ಬೆಳದಿಂಗಳಕೆ ಆಶಿಸುತಿಹಳು
ನೋವು ತುಂಬಿದ ಕಂಗಳಲಿ
ನಿರಾಸೆಯೆನುವುದು ಇಲ್ಲ
ಮತ್ತೆ ಬರುವನು ಚಂದಿರ
ಅಂದದ ಚೆಲುವೆಯ ಮೊಗದಿ
ಆನಂದ ತಂದನು ಚಂದಿರ
ಹೂನಗೆಯ ಬೀರುತ
ಹಗುರಾದ ಮನದಿ
ಪುಳಕಿತಗೊಳುವಳು ಸುಂದರಿ
ಅಂಗಳಕೆ ಬಂದನು ಚಂದಿರ
——————
ಡಾ.ಬಸಮ್ಮ ಗಂಗನಳ್ಳಿ