ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ತರಹಿ ಗಜಲ್
(ಸಾನಿ ಮಿಸ್ರ ಜಬಿವುಲ್ಲಾ ಎಂ ಅಸದ್ ಸರ್ ಅವರದ್ದು)
ಅವನ ಬಗೆಗೆ ಹೇಳಲು ಬಹಳಷ್ಟಿದೆ ,
ಆದರೂ ಹೇಳಲಾಗದಲ್ಲ ಗಾಲಿಬ್
ಪದಗಳಲ್ಲಿ ಅವನ ಪ್ರಶಂಸೆಯು
ಮಾಡಲಾಗದಲ್ಲ ಗಾಲಿಬ್
ಕಣ್ಣಂಚಿನಿಂದಲೇ ಕಳುಹಿಸಿದ
ಪ್ರೀತಿಯ ಪತ್ರಗಳಿಗೆ ಲೆಕ್ಕವೇ ಇಲ್ಲ
ಓದಿ ಉಸಿರು ಬಿಗಿಹಿಡಿದ ಕ್ಷಣಗಳ
ಮರೆಯಲಾಗದಲ್ಲ ಗಾಲಿಬ್
ಮೌನದಿಂದಲೇ ಮೊಹಬ್ಬತ್ತಿನ
ಮಹಾಕಾವ್ಯವೊಂದು ಬರೆದನವನು
ಮಾತಾಡದೇ ಅರುಹಿದ ಆ ಅನುರಾಗವ
ಅಳಿಸಲಾಗುತಿಲ್ಲ ಗಾಲಿಬ್
ಅವನ ಹೆಜ್ಜೆಗುರುತುಗಳ ಮೇಲೆ
ನಾ ಹೆಜ್ಜೆಯನಿಟ್ಟು ಸಂಭ್ರಮಿಸುತಿದ್ದೆ
ಆ ಸಂಭ್ರಮವ ನೆನೆದರೆ, ಎದೆಬಡಿತವೇ
ನಿಂತು ಹೋಗುವುದಲ್ಲ ಗಾಲಿಬ್
ಒಂದಾಗಿ ಬಾಳಿದರೇನೆ ಒಲವಿಗೆ
ಗೆಲುವೆಂದು ವಾಣಿಗನ್ನಿಸಲಿಲ್ಲ
ಅವ ಹಚ್ಚಿದ ಪ್ರೀತಿಯ ದೀಪದಿಂದಲೇ
ಒಡಲು ಉಸಿರಾಡುತಿಹುದಲ್ಲ ಗಾಲಿಬ್
————————————-
ವಾಣಿ ಯಡಹಳ್ಳಿಮಠ