ಬಡಿಗೇರ ಮೌನೇಶ್ ಕವಿತೆ ವಿಶಾಲ

ಕಾವ್ಯ ಸಂಗಾತಿ

ಬಡಿಗೇರ ಮೌನೇಶ್ ಕವಿತೆ

ವಿಶಾಲ

ಎಂಥಾ ಹೆಸರೇ ನಿನ್ನದು
ಬತ್ತಿದೆದೆ ಭೂಮಿಯಲಿ
ನವೋಲ್ಲಾಸದಲಿ
ನವೋತ್ಸಾಹ ಒಸರಿಸುವೆ

ಕಮರಿದ ಕನಸುಗಳಿಗೆ
ಸ್ಫೂರ್ತಿಯ ನೀರನೆರೆದು
ಹೊಂಗನಸುಗಳಿಗೆ ಬಣ್ಣ ಬರೆವೆ
ಬದುಕಿನುದ್ದಕೂ ಒಲುಮೆಯನು
ಜಲಧಾರೆಯಾಗಿ ಪ್ರವಹಿಸುವೆ

ಅದೆಂತಹ ಮೋಡಿಯಿದೆ
ನಿನ್ನ ಸಾಂಗತ್ಯದಲ್ಲಿ
ಬದುಕಿನ ನೂರು ಜಂಜಡಗಳ
ಹೊತ್ತ ಮನಸು
ಇಡೀ ಕಾಯವೇ ಹಗುರಾಗಿ
ನಿರಾಳ, ನಿರುಮ್ಮಳವಾಗುತ್ತವೆ

ವಿಶಾಲವೆಂದರೆ….
ಅಗಣಿತ ತಾರಾಗಣವೇ ತುಂಬಿದ
ಪ್ರಖರ ಹೊಳೆವ
ಸ್ವಚ್ಛಂದ ನೀಲಿಯಾಕಾಶ
ಕವಿದ ಕತ್ತಲೆ ಕಳೆವ ಸುಪ್ರಕಾಶ
ವಿಶಾಲವೆಂದರೆ ಕೇವಲ ಹೆಸರಲ್ಲ
ನನ್ನ ಜೀವದುಸಿರೂ ಕೂಡ.


 ಬಡಿಗೇರ ಮೌನೇಶ್




Leave a Reply

Back To Top