ಭಾಗ್ಯಜ್ಯೋತಿ ಹಿರೇಮಠರವರ ಸಂಕಲನ ‘ಬಿದಿರ ಬಿನ್ನಹ’ದ ಅವಲೋಕನ..ಶೋಭಾ ಹಿರೇಕೈ ಕಂಡ್ರಾಜಿ.

ಪುಸ್ತಕ ಸಂಗಾತಿ

ಭಾಗ್ಯಜ್ಯೋತಿ ಹಿರೇಮಠರವರ ಸಂಕಲನ

‘ಬಿದಿರ ಬಿನ್ನಹ’

ಅವಲೋಕನ..ಶೋಭಾ ಹಿರೇಕೈ ಕಂಡ್ರಾಜಿ.

ಖಾಲಿ ಕ್ಯಾನ್ವಾಸ್ ನಲ್ಲಿ ಬಿಡಿಸಿದ ಭಾವಗಳ ನೀಲನಕ್ಷೆ.

೨೦೨೩ ರ ಕದಂಬೋತ್ಸವ  ಕವಿಗೋಷ್ಠಿಯ ವೇದಿಕೆಯಲ್ಲಿ ” ಡಮ್ ಡಮಕ್ ಡಮಕ್ ಡಮಕ್ ಡಮ್ ” ಎಂದು ಕಂಚಿನ ಕಂಠಕ್ಕೆ ಮಾಧುರ್ಯ ಬೆರೆತ ದನಿಯಲ್ಲಿ ‘ಡೊಂಬರ ಹುಡುಗಿ ‘ ಕವಿತೆಯನ್ನು  ಭಾಗ್ಯಜ್ಯೋತಿ ಹಿರೇಮಠ್ ರವರು  ವಾಚಿಸಿದಾಗ ಅವರ ಉಳಿದ ಕವಿತೆ ಓದುವ ಆಸೆ ವ್ಯಕ್ತ ಪಡಿಸಿದ್ದೆ. ಅದೇ ಕಾವ್ಯ ಪ್ರೀತಿಗೆ ಇಂದು   ಅವರ  ಕವಿತಾ ಸಂಕಲನ ‘ಬಿದಿರ ಬಿನ್ನಹ’ ನನ್ನ ಕೈಸೇರಿದೆ.  ೨೦೨೨ ನೇ ಸಾಲಿನ   ವಿಭಾ ಸಾಹಿತ್ಯ ಪಡೆದ  ಕೃತಿ ಎಂಬುದು ಕೂಡಾ ಈ ಸಂಕಲನದ ವಿಶೇಷತೆ ಮತ್ತು ಹೆಗ್ಗಳಿಕೆ.

ಒಳಗೊಳಗೆ ನಿಡುಸುಯ್ವ ಎಲ್ಲ ಭಾವಗಳನ್ನು ಕವಿತೆಗೆ ದಾಟಿಸಿ , ನಿರುಮ್ಮಳರಾಗಿ  “ನನ್ನದಲ್ಲ ಇವು ನಿಮ್ಮವು ಇನ್ನೆ “ಎಂದು   ನಮ್ಮ ಕೈಗಿತ್ತ ಈ ಪುಸ್ತಕದ ಒಡಲಲ್ಲಿರುವ  ಕೆಲವು  ಕವಿತೆಗಳು  ಪಕ್ಕಾ  ನಮ್ಮ  ಭಾವಗಳೇ ಆಗಿ ಹೆಚ್ಚು ಪಕ್ವವಾದಂತೆ ಕಾಡುತ್ತವೆ. ಪುಟ ತಿರುವುತ್ತಾ ಹೋದಂತೆ ಇವರ ಭಾವಲೋಕ ಕಾವ್ಯವಾಗಿ ಬಿಚ್ಚಿಕೊಂಡ ಪರಿ ಅಚ್ಚರಿಯನ್ನುಂಟು ಮಾಡುತ್ತದೆ.  ಇವರ ಅನೇಕ ಕವಿತೆಗಳಲ್ಲಿ ಖಾಸಗಿ ನೋವಲ್ಲಿ   ವಿಷಾದದ ಅಲೆಯಿದ್ದು  ಆ ನೋವಲ್ಲೂ ಸಹ   ಒಂದು ದೈವತ್ವದ ಎಳೆಯನ್ನೋ..ತಾತ್ವಿಕತೆಯ  ಹೊಳವನ್ನೋ  ಥಟ್ಟನೆ ಮನಸಿಗೆ ತಟ್ಟುವಂತೆ  ಮಾಡಿಬಿಡುವ ಕಾವ್ಯ  ಮೋಡಿ ಭಾಗ್ಯರವರ ಕವಿತೆಯಲ್ಲಿದೆ. ವಯಕ್ತಿಕವಾಗಿ ನನಗಿವರ ಕೆಲವು ಕವಿತೆಯ ಕೆಲವು ಸಾಲುಗಳಲ್ಲಿ  ನಿಗೂಢ ಲೋಕವನ್ನೊಮ್ಮೆ ಸುತ್ತಿದಂತಾಗಿ, ಕೇವಲ ವಿಸ್ಮಯ ಪಟ್ಟು,ಅವರ ಕವಿತೆಯ ಆಳಕ್ಕಿಳಿಯಲಾಗದೆ ದಡದ ಮೇಲಷ್ಟೇ ನಿಂತು ಎದೆತುಂಬಿಕೊಂಡಿದ್ದೂ ಇದೆ.ಹಾಗಾಗಿ ಇವರ ಕೆಲವು ಕವಿತೆಯ ಸಾಲುಗಳ ಒಳಾರ್ಥ ಹುಡುಕುವಲ್ಲೂ ಸೋತಿದ್ದೇನೆ…ಮತ್ತಿವರ ಕವಿತೆಗಳಿಗೂ ಸೋತಿದ್ದೇನೆ!

 ನೀವೇ..ಓದಿ ಅವರ ಕವಿತೆಯ  ಕೆಲವು ಸಾಲುಗಳ

” ಹೌದು ನಾನಲ್ಲವೆ ಅವಳು,ಶಬ್ದ ಸ್ಪರ್ಶ ರೂಪ  ರಸ ಗಂಧ ಮೈಯ್ಯವಳು.ಹರಯಕ್ಕೂ ಮುನ್ನ  ನಿನ್ನಂಥ ಕೂಸ ಹೆತ್ತವಳು.
ಹಗ್ಗದ ನಡುವಲ್ಲೇ  ಈಗಲೂ
ಗಾಜು ಗನ್ನಡಿಯ  ಚಿತ್ರ ವಾಗಿ ನಿಂತಿರುವೆ.
ನನ್ನೊಳಗೆ ಅವಿತಿರುವ ಗುಟ್ಟು ನೀನು
ಒಣ ರೊಟ್ಡಿಯೊಂದಿಗೆ ಹಸಿ ನೆನಪುಗಳ ಉಣಿಸುತ್ತಿರುವೆ.



ನನಗೆ ತುಂಬಾ ಇಷ್ಟವಾದ
  ಡೊಂಬರ ಹುಡುಗಿ ಕವಿತೆಯಲ್ಲಿ ಬರುವ  ಸಾಲುಗಳು .ಇಲ್ಲಿ ಹುಡುಗಿ  ಕಬ್ಬಿಣದ ಸರಳನ್ನು ತಗ್ಗಿಸಿ ,ಬಗ್ಗಿಸಿ ,ಜಗ್ಗಿಸಿ ,ಹಿಗ್ಗಿಸಿ ಅಂಗಾಂಗಗಳನ್ನೆಲ್ಲ ಬಳೆಯಲ್ಲಿ ತುರುಕಿ ಮಿಡಿನಾಗರದಂತೆ ಗಮ್ಮತ್ತು ಮಾಡಿ.. ತುತ್ತಿನ ಚೀಲ ತುಂಬಿಸಿಕೊಳ್ಳಲು ತನ್ನ ಜೀವ ಒತ್ತೆಇಟ್ಟು ಹೆಣಗಾಡುವ ಪರಿ  ನನಗೆ ಎಲ್ಲಾ ಶ್ರಮ ಜೀವಿಗಳ ಜೀವನವಾಗಿ ,  ದಮನಿತ ಹೆಣ್ಣಿನ  ಚಿತ್ರ ಣವಾಗಿ ಕಣ್ಮುಂದೆ ಬರುತ್ತದೆ.ಹುಡುಗಿಯ  ತಾಯಿಯ ಕಥೆ   ಹರಯಕ್ಕೂ ಮುನ್ನ ಕೂಸ ಹೆತ್ತ ಶೋಷಿತಳಾಗಿ.. ಒಣ ರೊಟ್ಟಿ ಯಲಿ ಹಸಿ ನೆನಪು ಎನ್ನುವಾಗ ಡೊಂಬರ ಹುಡುಗಿಯ ಹುಟ್ಠೆ ಒಂದು ಗು ಟ್ಟಾಗಿ , ಒಂದು ಕರುಣಾಜನಕ ಕಥೆ ನಮ್ಮ ಮುಂದೆ ನಿಂತೇ ಬಿಡುತ್ತದೆ. ಹೀಗೆ ಇವರ ಕೆಲವು ಕವಿತೆಗಳಲ್ಲಿ   ನೋವು, ವಿಷಾದ , ಬಾಲ್ಯ ಹರಯ , ಪ್ರೇಮ, ಕಾಮ,  ತವರು ತಲ್ಲಣಗಳ ಹಲವು ಕತೆಗಳೆ ಇವೆ

ಅವರ “ಪಾಲಿಥಿನ್    ಚೀಲ”  ಕವಿತೆ ಯಲ್ಲಿ
 ನನ್ನ ಕೈಗೆ ಮದರಂಗಿ ರಂಗು ಏರಿದ ನೆನಪೇ ಇಲ್ಲ  ಎನ್ನುವಲ್ಲಿ..ಇವನೂ ಒಮ್ಮೆ ತನ್ನ ನಿಲ್ದಾಣದಲ್ಲಿ ಇಳಿದು ಹೋಗುವವನು ಎನ್ನುವ ಸಾಲಾಗಲಿ  , ಬೆಳಗಿನ ಕನಸು ಸತ್ಯವೆಂದು ನಂಬುತ್ತೇನೆ ಎನ್ನುವ ಸಾಲುಗಳಲ್ಲಿ   ಪ್ರೇಮದ ವಿಷಾದದ ಛಾಯೆಯ  ಚಿತ್ರಿಸುತ್ತಲೇ..
” ಖಾಲಿ ಕ್ಯಾನ್ವಾಸ್ ” ನಲ್ಲಿ ನಿನ್ನ  ಖಯಾಲಿಯಲ್ಲಿಯೇ  ಜೀವಮಾನ ಸುರುಳಿ ಸುತ್ತಿದರೂ ಖಾಲಿ ಕ್ಯಾನ್ವಾಸ್ ರಂಗೇರುತ್ತದೆ   .ಎನ್ನುವ ತಾಜಾ ತಾಜ ದಿವ್ಯ ಪ್ರೇಮದ ನವಿರು  ಸಾಲಿನ ಕವಿತೆಗಳನ್ನು  ನೀಡಿ  ವಿರಹದಿಂದ ಹೊರಬಂದು   ಕಾವ್ಯ ಪ್ರಿಯರ ಎದೆ ತಣಿಸುವಂತೆ ಮಾಡುತ್ತಾರೆ.

ನನಗೆ  ತುಂಬಾ ಇಷ್ಟವಾದ ಮತ್ತೊಂದು ಕವಿತೆ ‘ಪುಟ್ಟ ಕಿಟಕಿ’ ಕಿಟಕಿ ಪ್ರತಿಮೆ ಏನೆಲ್ಲಾ ಹೇಳುತ್ತಾ ಹೋಗುತ್ತದೆ  . ಕಿಟಕಿಯ ಸಳಿ ಬರೀ ಸರಳಾಗಿ ಕಾಣದೆ   ನನಗೆ ಬೆಳಕಿನ ಸರಗೋಲೇ ಆಗಿ ಕಂಡಿದೆ.
 ಅವರ ಸಾಲೊಂದು…
” ಹುತಾತ್ಮರೆಲ್ಲ  ಕಿಡಕಿಯ   ಕಾವಲು ಕಾಯುತಿದ್ದಾರೆ”  
   ಎನ್ನುವಾಗ .. ಕಿಡಕಿ   ಕೇವಲ ಕಿಡಕಿಯಾಗದೆ  ಸತ್ಯ ಪ್ರಾಮಾಣಿಕತೆ , ವೈಚಾರಿಕ ಪ್ರಜ್ಞೆಗಳ   ಶಕ್ತಿ ಕೇಂದ್ರವಾಗಿ ಕಾಣುತ್ತದೆ.
” ನನ್ನ  ಕಿಟಕಿಯ ಸಳಿಗಳು
ಘೋಷಣೆಯ ಭಾಷಣಗಳನ್ನೆಲ್ಲ  ಗಂಟು ಮೂಟೆ  ಕಟ್ಟಿ ಸುಟ್ಟು ಭಸ್ಮ ಮಾಡಿವೆ.
ಎಂಬಂತ ಸಾಲುಗಳಲ್ಲಿರುವ   ಪ್ರತಿರೋಧ ದಲ್ಲಿ ಪುಟಪಾತಿನಲ್ಲಿರುವ  ಗುಂಡಿಯಿಲ್ಲದ  ಅಂಗಿ ತೊಟ್ಟ ಮಕ್ಕಳನ್ನು ನೆನಪಿಸಿ …  ವ್ಯವಸ್ಥೆಯ ವಿರುದ್ಧ  ಆಕ್ರೋಶ ವ್ಯಕ್ತಪಡಿಸುವಾಗ    ..ಪುಟ್ಟ ಕಿಟಕಿಯ ಯ ಅರ್ಥ ವ್ಯಾಪ್ತಿ ಹಿಗ್ಗಿಸಿದಂತೆ ಹಿಗ್ಗುತ್ತಾ ಹೋಗುತ್ತದೆ. ಕವಯತ್ರಿ ಯ ಸಾಮಾಜಿಕ ಪ್ರಜ್ಞೆ ಗೂ ಸಾಕ್ಷಿ ಯಾಗುತ್ತದೆ.

ವಿರಕ್ತಿ ಸಂಚಿ,  ಅಕ್ಕ, ಔದುಂಬರ : ಗೆಳತಿ ರತ್ನ, ಮುಂತಾದ ಕವಿತೆಯಲ್ಲಿ ಕವಯತ್ರಿಯ ಖಾಸಗಿ ನೋವೆಲ್ಲ ಹೊರಬಂದಿರುವುದು  ಗೊತ್ತಾಗುತ್ತದೆ
ಅಕ್ಕ ಕವಿತೆಯ


” ಮೊನ್ನೆ  ಅಷ್ಟು  ಬಿರುಸಾಗಿ ಬೀಸುವ ಗಾಳಿಗುಂಟ
ತವರಿಗೆ ಬಂದರೆ ಪಡಸಾಲೆಯ
ಗುಬ್ಬಿ ಮರಿಗಳು ಗೂಡು ಬಿಟ್ಟು ಹಾರಿ ಹೋಗಿವೆ”
ಎಂಬಂತ ಸಾಲುಗಳಲ್ಲಿ  ಕಾಣುವ ತಬ್ಬಲಿತನಕ್ಕೆ ಕಣ್ಣು ತೇವವಾಗುತ್ತವೆ.
.
ಕಡತಂದ ರಾತ್ರಿ , ಆತ್ಮ ಕಂಡ ಹುಡುಗಿ, ಮಹಾಮನಿ,   ಬಿದಿರ ಬಿನ್ನಹ ,ಸೈಕಲ್ ಸವಾರಿ ..  ಮುಂತಾದ ಎಲ್ಲಾ ಕವಿತೆಗಳಲ್ಲಿ ಹೊಸತನವಿದೆ , ಸಂಕಲನಕ್ಕೆ  ಅದರದೇ ಆದ ಒಂದು ವಜನಿದೆ.

ಶುಭಾಶಯಗಳು ಕವಯತ್ರಿಗೆ.ಅಭಿಮಾನದ ಅಭಿನಂದನೆಗಳೊಂದಿಗೆ


ಶೋಭಾ ಹಿರೇಕೈ ಕಂಡ್ರಾಜಿ.

3 thoughts on “ಭಾಗ್ಯಜ್ಯೋತಿ ಹಿರೇಮಠರವರ ಸಂಕಲನ ‘ಬಿದಿರ ಬಿನ್ನಹ’ದ ಅವಲೋಕನ..ಶೋಭಾ ಹಿರೇಕೈ ಕಂಡ್ರಾಜಿ.

  1. ಪುಸ್ತಕ ಪರಿಚಯ ತುಂಬಾ ಚನ್ನಾಗಿ ಬಂದಿದೆ. ಅಭಿನಂದನೆಗಳು

  2. ಕವಿತೆಗಳಿಗಿಂತ ವಿಶ್ಲೇಷಣೆ ಚೆನ್ನಾಗಿ ಬರಲು ಸಾದ್ಯವಿಲ್ಲ.ಅವರ ಕವಿತೆಗಳಾಳಕ್ಕೆ ಇಳಿಯಲು ಆಗಿಲ್ಲವೆಂದೇ ನನ್ನ ಅನಿಸಿಕೆ. ಅದನ್ನು ಮೊದಲೇ ಹೇಳಿದ್ದೇನೆ.ಅದ್ಭುತವಾದ ಕವನ ಸಂಕಲನವಾದ್ದರಿಂದಲೇ ಪ್ರತಿಷ್ಠಿತ ವಿಭಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Leave a Reply

Back To Top