ಅಂಕಣ ಬರಹ
ವತ್ಸಲಾ ಶ್ರೀಶ
ನಾವುಮರೆತ ಮಹಿಳಾ
ಸ್ವಾತಂತ್ರ್ಯ ಹೋರಾಟಗಾರರು
“ನೀರಾ ಆರ್ಯ”
(ಕರಿನೀರಿನ (ಕಾಲಾಪಾನಿ ) ಶಿಕ್ಷೆಯಲ್ಲಿ ನಲುಗಿದ ಭರತ ಮಾತೆಯ ಕುವರಿ)
ಕೆಲವು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳೇ ಹಾಗೆ…ಮತ್ತೆ ಮತ್ತೆ ಕಾಡುತ್ತವೆ. ಸ್ವಾತಂತ್ರ್ಯಕ್ಕಾಗಿ ಅವರು ಪಟ್ಟ ಶ್ರಮ, ಹೋರಾಟದ ಕಿಚ್ಚು, ನಿಸ್ವಾರ್ಥ ದೇಶಪ್ರೇಮ.. ನಿಜಕ್ಕೂ ಅಂತಹ ವೀರರನ್ನು ಪಡೆದ ತಾಯಿ ಭಾರತಿ ಧನ್ಯಳು. ಅಂತಹುದೇ ಒಬ್ಬ ಹೆಣ್ಣು ಮಗಳು ಸ್ವಾತಂತ್ರ್ಯಕ್ಕಾಗಿ ಪಟ್ಟ ಶ್ರಮದ ಕಥೆಯಿದು… ಇಲ್ಲಿ ಹೆಣ್ಣು ಮಗಳೊಬ್ಬಳ ಧೈರ್ಯ, ಸಾಹಸ ಹಾಗೂ ಆಂಗ್ಲರ ಅಮಾನುಷ ಕೃತ್ಯಗಳನ್ನು ತೆರೆದಿಡುವ ಸಾಲುಗಳಿವೆ.
ಹೌದು ಅವಳೇ ನೀರಾ ಆರ್ಯ ಎಂಬ ಹೆಣ್ಣು ಮಗಳು.ಇವಳು ಮಾರ್ಚ್ 5, 1902 ರಂದು ಉತ್ತರ ಪ್ರದೇಶದ ಖೇಕ್ರಾ ನಗರದಲ್ಲಿ ಜನಿಸಿದರು. ಅವರ ತಂದೆ ಶ್ರೀಮಂತ ಉದ್ಯಮಿ. ನೀರಾಳ ತಂದೆ ವ್ಯಾಪಾರದ ಸಲುವಾಗಿ ಕಲ್ಕತ್ತಾದಲ್ಲಿ ವಾಸಿಸುತ್ತಿದ್ದುದರಿಂದ ಆಕೆ ತನ್ನ ಆರಂಭಿಕ ಶಿಕ್ಷಣವನ್ನು ಕಲ್ಕತ್ತಾದಲ್ಲಿ ಮುಗಿಸಿದಳು. ನೀರಾಳಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್, ಬಂಗಾಳಿ ಮುಂತಾದ ಭಾಷೆಗಳ ಬಗ್ಗೆ ಜ್ಞಾನವಿತ್ತು. ಅವರವಿವಾಹವು ಬ್ರಿಟಿಷ್ ಸಿಐಡಿ ಆಗಿದ್ದ ಶ್ರೀಕಾಂತ್ ಜಯ ರಂಜನ್ ದಾಸ್ ಜೊತೆಗೆ ನಡೆಯುತ್ತದೆ. ಮದುವೆಯಾದ ಸ್ವಲ್ಪ ದಿನಗಳ ನಂತರ ನೀರಾ ಆರ್ಯಾಳಿಗೆ ತನ್ನ ಗಂಡ ಭಾರತ ದೇಶದ ಮೇಲೆ ಅಧಿಕಾರ ಚಲಾಯಿಸುತ್ತಿರುವ ಬ್ರಿಟಿಷರ ಗುಲಾಮನಾಗಿದ್ದ ಎಂದು ತಿಳಿಯುತ್ತದೆ. ಅವನು ಎಷ್ಟರ ಮಟ್ಟಿಗೆ ಅವರ ಗುಲಾಮನಾಗಿದ್ದನೆಂದರೆ ಹಲವು ಭಾರತೀಯರನ್ನು ನಿಲ್ಲಿಸಿ ಅವರಿಗೆ ಗುಂಡಿಕ್ಕಿ ಕೊಲ್ಲು ಎಂದರೆ ಕೂಡಲೇ ಅವರ ಆಜ್ಞೆಯನ್ನು ಪಾಲಿಸುವ ಗುಲಾಮನಾಗಿದ್ದ. ಇಂಗ್ಲಿಷರನ್ನು ಖುಷಿ ಪಡಿಸಲು ಅವನು ಯಾವ ಮಟ್ಟಕ್ಕೂ ಇಳಿಯುತ್ತಿದ್ದ. ಆದರೆ ನೀರಾ ಆರ್ಯ ಅಪ್ಪಟ ದೇಶಭಕ್ತೆಯಾಗಿದ್ದಳು. ಅವರಿಬ್ಬರ ಧೋರಣೆಗಳಿಗೆ ಅಜಗಜಾಂತರ ವ್ಯತ್ಯಾಸವಿತ್ತು. ಶ್ರೀಕಾಂತ್ ಬ್ರಿಟಿಷರ ಕುಟಿಲ ಯೋಜನೆಗಳನ್ನು ಪ್ರೋತ್ಸಾಹಿಸುತ್ತಿದ್ದರೆ ನೀರಾ ಆರ್ಯ ದೇಶಭಕ್ತಿಯನ್ನು ಹೊರ ಹಾಕುತ್ತಿದ್ದಳು. ನೀರಾ ಆರ್ಯ ನೇತಾಜಿಯವರ ಆಜಾದ್ ಹಿಂದೂ ಫೌಜ್ ಸೇರಿರುವುದು ಶ್ರೀಕಾಂತ್ ಗೆ ತಿಳಿಯುತ್ತದೆ. ಹೀಗಿರುವಾಗಲೇ ಒಂದು ದಿನ ಶ್ರೀಕಾಂತ್ ಬ್ರಿಟಿಷರ ಆಜ್ಞೆಯಂತೆ ಸುಭಾಷ್ ಚಂದ್ರ ಬೋಸ್ ಅವರನ್ನು ಕೊಲ್ಲಲು ಷಡ್ಯಂತರ ರಚಿಸುತ್ತಿರುವ ಬಗ್ಗೆ ನೀರಾ ಆರ್ಯಾಳಿಗೆ ತಿಳಿಯುತ್ತದೆ. ಅವನು ನೇತಾಜಿಯವರನ್ನು ಕೊಲ್ಲಲು ಸಹಕರಿಸಬೇಕೆಂದು ನೀರಾ ಆರ್ಯಾಳೊಡನೆ ಹೇಳುತ್ತಾನೆ. ಅವಳು ಇಂಗ್ಲಿಷರ ಗುಲಾಮನಾದ ಗಂಡ ಹಾಗೂ ದೇಶ ಇವೆರಡರಲ್ಲಿ ದೇಶವನ್ನು ಆರಿಸಿಕೊಳ್ಳುತ್ತಾಳೆ..ಸ್ವಾತಂತ್ರ್ಯ ಕ್ಕಾಗಿ ಹೋರಾಡುತ್ತಿದ್ದ ನೇತಾಜಿಯವರ ಸೇನೆಯಲ್ಲಿ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವ ಮನಸ್ಸು ಮಾಡುತ್ತಾಳೆ. ಶ್ರೀಕಾಂತ್ ಸುಭಾಷ್ ಚಂದ್ರ ಬೋಸ್ ಅವರನ್ನು ಕೊಲ್ಲಲು ಗುಂಡುಗಳ ಮಳೆಗರೆದಾಗ ಸುಭಾಷ್ ಚಂದ್ರ ಬೋಸ್ ಅಪಾಯದಿಂದ ಪಾರಾಗುತ್ತಾರೆ. ಆದರೆ ಅವರ ಚಾಲಕ ಗುಂಡಿಗೆ ಬಲಿಯಾಗುತ್ತಾನೆ. ಇದನ್ನು ತಿಳಿದ ನೀರಾ ಆರ್ಯ ಸಿಡಿದೇಳುತ್ತಾಳೆ.ದೇಶದ್ರೋಹಿಯಾದ ಗಂಡನನ್ನು ಚಾಕುವಿನಿಂದ ಇರಿದು ಇರಿದು ಕೊಂದು ಹಾಕುತ್ತಾಳೆ. ಇದನ್ನು ತಿಳಿದ ಸುಭಾಷ್ ಚಂದ್ರ ಬೋಸ್ ಅವರು ನೀರಾ ಆರ್ಯಾಳನ್ನು ನಾಗಿಣಿ ಎಂದು ಕರೆಯುತ್ತಾರೆ. ಆನಂತರ ಅವಳನ್ನು ನೀರಾ ಆರ್ಯ ನಾಗಿಣಿ ಎಂದು ಕರೆಯುತ್ತಿದ್ದರು. ನಂತರ ಅವಳು ಆಜಾದ್ ಹಿಂದೂ ಪೌಜಿನ ಝಾನ್ಸಿರಾಣಿ ರೆಜಿಮೆಂಟ್ ಗೆ ಸೇರ್ಪಡೆಯಾಗುತ್ತಾಳೆ. (ಅದೇ ಸಮಯದಲ್ಲಿ ಇನ್ನೊಬ್ಬ ಕೆಚ್ಚೆದೆಯ ದೇಶ ಪ್ರೇಮಿ ಹೆಣ್ಣುಮಗಳು ಅದೇ ಸೇನೆಯಲ್ಲಿದ್ದಳು..ಅವಳೇ ಸರಸ್ವತಿ ರಾಜಮಣಿ.)ಅಲ್ಲಿ ಅವಳು ನೇತಾಜಿಯ ದೇಶ ಪ್ರೇಮ ಇನ್ನೂ ಹೆಚ್ಚುತ್ತದೆ. ಆದರೆ ಕೆಲವೇ ದಿನಗಳಲ್ಲಿ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪುತ್ತಾರೆ. ಆಜಾದ್ ಹಿಂದೂ ಫೌಜ಼್ ಚದುರಿಹೋಗುತ್ತದೆ. ಆಗ ಅದರ ಹಲವಾರು ಸೈನಿಕರು ಇಂಗ್ಲಿಷರ ಬಂದಿಗಳಾಗುತ್ತಾರೆ. ಕೆಂಪು ಕೋಟೆಯಲ್ಲಿ ಅವರೆಲ್ಲರ ವಿಚಾರಣೆ ನಡೆಯುತ್ತಿರುತ್ತದೆ. ಅದರಲ್ಲಿ ನೀರಾ ಆರ್ಯಾ ಕೂಡ ಇರುತ್ತಾಳೆ. ಏಕೆಂದರೆ ಅವಳು ಗಂಡನನ್ನು ಕೊಲೆ ಮಾಡಿರುತ್ತಾಳೆ ಎಂಬ ಕಾರಣದಿಂದ ಅವಳ ಮೇಲೆಯೂ ಕೇಸು ದಾಖಲಾಗಿರುತ್ತದೆ… ಎಲ್ಲಾ ಬಂದಿ ಗಳಿಗೂ ಅಲ್ಪಸಮಯದ ಸಜೆ ಹಾಗೂ ಸ್ವಲ್ಪ ದಂಡದ ನಂತರ ಬಿಡುಗಡೆಯಾಗುತ್ತದೆ. ಆದರೆ ನೀರಾ ಆರ್ಯಾಳಿಗೆ ಕಾಲಾಪಾನಿ ಸಜೆ (ಕರಿ ನೀರಿನ ಶಿಕ್ಷೆ) ಘೋಷಣೆಯಾಗುತ್ತದೆ. ಅದಕ್ಕೆ ಇನ್ನೊಂದು ಕಾರಣವೂ ಇತ್ತು.ಇಂಗ್ಲಿಷರಿಗೆ ಸುಭಾಷ್ ಚಂದ್ರ ಬೋಸ್ ಅವರು ನಿಧನ ಹೊಂದಿರಲಿಲ್ಲ ಎಂಬ ಅನುಮಾನವಿತ್ತು. ಅವರನ್ನು ಎಲ್ಲೋ ಬಚ್ಚಿಡಲಾಗಿದೆ ಎಂದು ಅವರು ಅರಿತಿದ್ದರು. ಅದರ ಬಗ್ಗೆ ನೀರಾ ಆರ್ಯಾಳಿಗೆ ಗೊತ್ತಿರಬಹುದು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಅದಕ್ಕಾಗಿ ಅವಳಿಗೆ ಕಾಲಾಪಾನಿ ಶಿಕ್ಷೆ ನೀಡಿ ಬಂದಿಯಾಗಿರಿಸಿರುತ್ತಾರೆ..ಕಾಲಾಪಾನಿ ಶಿಕ್ಷೆ ಘೋಷಿಸುವುದರ ಮೂಲಕ ಅವಳನ್ನು ಬಂಧುಗಳಿಂದ ಹಾಗೂ ಅವಳ ಊರಿನಿಂದ ತುಂಬಾ ದೂರದ ಅಂಡಮಾನ್ ಗೆ ಕರೆದುಕೊಂಡು ಹೋಗಲಾಗಿತ್ತು. ಅವಳ ಸಹೋದರ ಕೂಡ ಆಜಾದ್ ಹಿಂದೂ ಪೌಜಿನಲ್ಲಿದ್ದು ಅವನನ್ನು ಬಿಡುಗಡೆ ಮಾಡಲಾಗಿತ್ತು. ನಂತರ ಅವನು ಸನ್ಯಾಸವನ್ನು ಸ್ವೀಕರಿಸುತ್ತಾನೆ. ನೀರಾ ತನ್ನ ಆತ್ಮಕಥೆ ಅಂಡಮಾನ್ ಕಿ ಅನೌಖಿ ಕಥಾಯೇಂ ಯಲ್ಲಿ ತಾನು ಅನುಭವಿಸಿದ ನರಕಯಾ ತನೆಗಳನ್ನು ದಾಖಲಿಸಿದ್ದಾಳೆ. ಅವಳನ್ನು ಬಂಧಿಸಿದ ನಂತರ ಮೊದಲು ಕಲ್ಕತ್ತಾದ ಜೈಲಿನಲ್ಲಿ ಇಡಲಾಯಿತು. ಅದು ಅತ್ಯಂತ ಸಣ್ಣ ಕೊಠಡಿಯಾಗಿತ್ತು. ಅಲ್ಲಿ ಹಲವಾರು ಅಪರಾಧಗಳನ್ನು ಮಾಡಿದ ಹೆಂಗಸರು, ಗಂಡಸರು ಎಲ್ಲಾ ಒಟ್ಟಿಗೆ ಇದ್ದರು. ಅಲ್ಲಿ ಕುಡಿಯಲು ನೀರು, ಮಲಗಲು ಚಾಪೆ ಯಾವುದೂ ಇರಲಿಲ್ಲ. ಕರಿನೀರಿನ ಶಿಕ್ಷೆ ಗಾಗಿ ಅಂಡಮಾನಿಗೆ ಕಳುಹಿಸುವ ಹಿಂದಿನ ದಿನ ಅವಳ ಮನಸ್ಸಿನಲ್ಲಿ ತನ್ನನ್ನು ಕಳಿಸುವ ಆ ದೂರದ ಊರಿನಲ್ಲಿ ಸಾವಿನ ದಾರಿ ಕಾಯುತ್ತಾ ಇರುವುದು ಹಾಗೂ ಅಂಧಕಾರ ಮಾತ್ರವೇ ಇರಬಹುದು…ನಾನು ಅಲ್ಲಿ ಹೋದರೆ ಸ್ವಾತಂತ್ರ್ಯಕ್ಕಾಗಿ ಹೇಗೆ ಹೋರಾಡಲಿ ಎಂದು ಯೋಚಿಸುತ್ತಿದ್ದಳು.ಯೋಚಿಸುತ್ತಾ ಯೋಚಿಸುತ್ತಾ ಹಾಗೆಯೇ ನಿದ್ರೆಗೆ ಜಾರಿದ್ದಳು. ಆಗ ಒಬ್ಬ ಬಂದು ಏನೂ ಮಾತನಾಡದೆ ಅವಳ ಮೇಲೆ ಕಂಬಳಿಯನ್ನು ಎಸೆಯುತ್ತಾನೆ. ಅವನ ಅಮಾನವೀಯ ವರ್ತನೆಯಿಂದ ಅವಳಿಗೆ ಸಿಟ್ಟು ಉಕ್ಕಿ ಬರುತ್ತಿತ್ತು. ಆದರೂ ಕಂಬಳಿ ಸಿಕ್ಕಿದ ಖುಷಿಯಲ್ಲಿ ರುತ್ತಾಳೆ. ಬೆಳಗಾದ ಕೂಡಲೇ ತಿನ್ನಲು ಕಿಚಡಿ ಕೊಡುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಕೈಕಾಲುಗಳಿಗೆ ಹಾಕಿದ ಸರಪಳಿಯನ್ನು ಬಿಡಿಸಲು ಸರಪಳಿ ತುಂಡರಿಸುವವನು ಬರುತ್ತಾನೆ.. ಕೈಗೆ ಹಾಕಿದ ಬೇಡಿ ಯನ್ನು ಕತ್ತರಿಸುವಾಗ ಕೈಯ ಚರ್ಮವೂ ಕತ್ತರಿಸಿ ಹೋಗುತ್ತದೆ. ಅಷ್ಟು ನೋವೆನಿಸದಿದ್ದರೂ ಸಿಟ್ಟಿನಿಂದ ಕುದಿಯುತ್ತಾಳೆ.. ಕಾಲಿನ ಬೇಡಿಗಳನ್ನು ಕಳಚುವಾಗ ಕಾಲಿನ ಮೂಳೆಗಳಿಗೆ 3-4 ಬಾರಿ ಸುತ್ತಿಗೆಯಿಂದ ಬಡಿಯುತ್ತಾನೆ.. ಮೂಳೆಗಳು ಎಷ್ಟು ಶಕ್ತಿಯುತವಾಗಿದೆ ಎಂದು ನೋಡಲು ಹಾಗೆ ಬಡಿಯುತ್ತಿದ್ದರು. ಬಹುಶಃ ಶಕ್ತಿಯುತವಾಗಿ ಇರದಿದ್ದರೆ ಅವಳಿಗೆ ಕಾಲ ಪಾನಿಯ ಶಿಕ್ಷೆ ಆಗುತ್ತಿರಲಿಲ್ಲ. ಆದರೆ ಹಣೆಬರಹದಲ್ಲಿ ಕಾಲಾಪಾನಿಯ ಸಜೆ ಬರೆದಾಗಿತ್ತು. ಕಾಲಿಗೆ ಹೊಡೆಯುತ್ತಿದ್ದವನಿಗೆ “ನನ್ನ ಕಾಲ ಮೇಲೆ ಇಷ್ಟು ಜೋರಾಗಿ ಬಡಿಯುತ್ತಿರುವೆಯಲ್ಲ ನಿನಗೆ ಕಣ್ಣು ಕಾಣಿಸುವುದಿಲ್ಲವೇ.. ಎಂದು ಕೇಳುತ್ತಾಳೆ.ಆಗ ಅವನು ಕಾಲು ಏನು ನಿನ್ನ ಎದೆಯನ್ನೂ ಬಡಿಯುತ್ತೇವೆ. ನಿನ್ನಿಂದ ಏನು ಮಾಡಲು ಸಾಧ್ಯ ಎಂದು ಕೇಳುತ್ತಾರೆ. ಆಗ ಅವಳು ಹೌದು ನಾನು ನಿಮ್ಮ ಬಂಧನದಲ್ಲಿದ್ದೇನೆ. ನನ್ನಿಂದ ಏನು ಮಾಡಲು ಸಾಧ್ಯ ಎನ್ನುತ್ತಾಳೆ. ಆದರೂ ತನ್ನ ಬಲವನ್ನೆಲ್ಲ ಸೇರಿಸಿ ಧೈರ್ಯದಿಂದ ಅವರ ಮುಖಕ್ಕೆ ಉಗಿದು ಬಿಡುತ್ತಾಳೆ. ಹೆಂಗಸರಿಗೆ ಮರ್ಯಾದೆ ಕೊಡಲು ಕಲಿ ಎನ್ನುತ್ತಾಳೆ. ಇಂಗ್ಲೀಷರಿಗೆ ಅದು ಹೇಗೆ ಅರ್ಥವಾಗಲು ಸಾಧ್ಯ. ಇದನ್ನು ನೋಡಿದ ಜೈಲರ್ ಹೇಳುತ್ತಾನೆ… ನಿನಗೆ ನೋವಾಗುವುದಾದರೆ ಈಗಲೂ ನಿನ್ನನ್ನು ನಾವು ಬಿಡುಗಡೆ ಮಾಡಲು ಸಿದ್ಧ. ಆದರೆ ನೇತಾಜಿ ಎಲ್ಲಿದ್ದಾರೆ ಎಂದು ಹೇಳು. ಎನ್ನುತ್ತಾರೆ… ನೀರಾ ಆರ್ಯ, ಅವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದಾರೆ ಎನ್ನುತ್ತಾಳೆ.. ಆಗ ಆ ಜೈಲರ್ ಅದು ಇಡೀ ದೇಶಕ್ಕೆ ಗೊತ್ತಿದೆ.. ಆದರೆ ಅದು ಸುಳ್ಳು ..ನಿನಗೆ ಅವರು ಎಲ್ಲಿರುವರು ಎಂಬುದು ಗೊತ್ತು ಎನ್ನುತ್ತಾನೆ. ಅದಕ್ಕೆ ನೀರಾ ಹೌದು, ಸುಭಾಷ್ ಚಂದ್ರ ಬೋಸ್ ಬದುಕಿದ್ದಾರೆ ಎನ್ನುತ್ತಾಳೆ…ಜೈಲರ್ ಗೆ ಸಂತಸವಾಗುತ್ತದೆ. ಎಲ್ಲಿದ್ದಾರೆ ಎಂದು ಅವನು ಪುನಃ ಕೇಳುತ್ತಾನೆ. ಅದಕ್ಕೆ ನೀರಾ ಆರ್ಯ ಅವರು ನನ್ನ ಹೃದಯದಲ್ಲಿ ಜೀವಂತವಾಗಿದ್ದಾರೆ ಎನ್ನುತ್ತಾಳೆ. ಅದಕ್ಕೆ ಪ್ರತ್ಯುತ್ತರವಾಗಿ ಅವರು ಮಾಡಿದ ಕೃತ್ಯವನ್ನು ಅವಳು ಯೋಚಿಸಲೂ ಸಾಧ್ಯವಿರಲಿಲ್ಲ.. ಅವರು ಅವಳ ಅಂಗವಸ್ತ್ರವನ್ನು ತೆಗೆಯುತ್ತಾರೆ. ಹಾಕಿದ ಕುಪ್ಪಸವನ್ನು ಹರಿಯುತ್ತಾರೆ. ಹೂವಿನ ಗಿಡಗಳನ್ನು ಕತ್ತರಿಸುವ ದೊಡ್ಡದಾದ ಕತ್ತರಿಯನ್ನು ತರುತ್ತಾರೆ.. ಅದರಿಂದ ಅವಳ ಸ್ತನಗಳನ್ನು ಗಟ್ಟಿಯಾಗಿ ಹಿಡಿದು ಕತ್ತರಿಸಲು ತೊಡಗುತ್ತಾರೆ…ಆದರೆ ಅದು ಹರಿತವಿಲ್ಲದ ಕಾರಣ ಆಳವಾದ ಗಾಯವಾಗಿ ಚರ್ಮ ಹರಿಯುತ್ತದೆ.. ಅಸಹನೀಯ ನೋವಾಗುತ್ತದೆ.. ರಕ್ತ ಸುರಿಯುತ್ತದೆ.. ಅವಳ ಕುತ್ತಿಗೆಯನ್ನು ಬಲವಾಗಿ ಹಿಡಿದು ಇನ್ನೊಂದು ಮಾತನಾಡಿದರೆ ನಿನ್ನ ಈ ಎರಡು ಸ್ತನಗಳು ದೇಹದಿಂದ ಬೇರ್ಪಡುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ.. ಆ ಆಯುಧದಿಂದ ಮೂಗಿಗೆ ಬಡಿಯುತ್ತಾನೆ..
ಮುಂದೆ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ. ಆಗ ನೀರಾ ಆರ್ಯಾಳ ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಸಂದರ್ಭದಲ್ಲಿ ನೆಹರು ಸರ್ಕಾರವು ಅವಳಿಗೆ ಯಾವುದೇ ರೀತಿಯ ಪಿಂಚಣಿ ಪಡೆಯಬಾರದೆಂಬ ಶರತ್ತು ವಿಧಿಸುತ್ತದೆ.ಅವಳು ಒಪ್ಪಿಕೊಳ್ಳುತ್ತಾಳೆ ..ಹಾಗೂ ಕಾಲಾಪಾನಿ ಸಜೆಯಿಂದ ಬಿಡುಗಡೆ ಹೊಂದುತ್ತಾಳೆ. ನಮ್ಮ ದೇಶದ ವಿಡಂಬನೆ ಎಂದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಇಷ್ಟೊಂದು ನೋವು ಕಷ್ಟಗಳನ್ನು ಅನುಭವಿಸಿದ ನೀರಾಳಿಗೆ ಆಸರೆ ನೀಡಲು ಯಾರೂ ಮುಂದೆ ಬರಲಿಲ್ಲ.. ಅವಳು ತನ್ನ ಕೊನೆಯ ದಿನಗಳಲ್ಲಿ ಹೂ ಮಾರಿ ಜೀವನ ಸಾಗಿಸುತ್ತಾ ಇನ್ನೊಬ್ಬರ ಬದುಕಿಗೆ ಸುಗಂಧವನ್ನು ಹರಡಿದಳು. ಅಲ್ಲದೆ ಅವಳು ಹೈದರಾಬಾದಿನಲ್ಲಿ ಒಂದು ಸಣ್ಣ ಜೋಪಡಿಯಲ್ಲಿ ಬದುಕುತ್ತಿದ್ದಳು. ಆಗಿನ ಹೈದ್ರಾಬಾದ್ ಸರ್ಕಾರವು ಸರಕಾರಿ ಜಾಗದಲ್ಲಿದ್ದ ಅಕ್ರಮ ಜೋಪಡಿಗಳನ್ನು ನೆಲಸಮ ಮಾಡುವಾಗ ಇವಳ ಜೋಪಡಿಯನ್ನೂ ನೆಲ ಸಮ ಮಾಡುತ್ತಾರೆ. ನೀರಾ ಆರ್ಯಾ ನಿರಾಶ್ರಿತಳಾಗುತ್ತಾಳೆ. ಹಲವು ವರ್ಷಗಳ ಅನಾರೋಗ್ಯದ ಕಾರಣ ಎಲ್ಲಿಯೂ ಆಸರೆ ಇಲ್ಲದ ನೀರಾ ಆರ್ಯ ಚಾರ್ ಮಿನಾರ್ ನ ಸಮೀಪವಿರುವ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಯಾರು ದಿಕ್ಕಿಲ್ಲದ ಸ್ಥಿತಿಯಲ್ಲಿ 26 ಜುಲೈ 1998ರಲ್ಲಿ ಕೊನೆಯುಸಿರೆಳೆಯುತ್ತಾಳೆ… ಕೊನೆಗೆ ಅವಳ ಅಂತಿಮ ಸಂಸ್ಕಾರವನ್ನು ಮಾಡಲೂ ಯಾರೂ ಮುಂದೆ ಬರುವುದಿಲ್ಲ. ತೇಜ್ಪಾಲ್ ಸಿಂಗ್ ಭಾಮಾ ಎಂಬ ವೃತ್ತಿಪರ ಪತ್ರಕರ್ತನು ತನ್ನ ಸಂಗಡಿಗರೊಂದಿಗೆ ಅವಳ ಅಂತ್ಯಕ್ರಿಯೆಯನ್ನು ನಡೆಸುತ್ತಾನೆ. ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ಯಾತನೆ ಅನುಭವಿಸಿ ಬದುಕು ಸವೆಸಿದ ಜೀವವೊಂದು ತಾಯಿ ಭಾರತಿಯ ಮಡಿಲಲ್ಲಿ ವಿರಮಿಸುತ್ತದೆ….
(ಆಧಾರ: ಟಿ.ವಿ.ಚಾನಲ್ಸ್ ,ಅಂತರ್ಜಾಲ)
ವತ್ಸಲಾ ಶ್ರೀಶ
ಶ್ರೀಮತಿ ವತ್ಸಲಾ ಶ್ರೀಶ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಎಂಬಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ಇವರ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು.ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ಸರ್ವೋದಯ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ಈಗ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೊಡಗಿನ ಶ್ರೀಶಕುಮಾರ್ ಅವರನ್ನು ವಿವಾಹವಾದ ನಂತರ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ವತ್ಸಲಾ ಶ್ರೀಶರವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ ,ಕವನ, ಲೇಖನ, ಷಟ್ಪದಿಗಳು,ಇತರ ಛಂದೋಬದ್ಧ ರಚನೆಗಳು, ವಿಮರ್ಶೆ,ಹಾಯ್ಕು,ಗಝಲ್ ಮುಂತಾದವುಗಳನ್ನು ರಚಿಸುತ್ತಾರೆ. ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ,೨೦೨೩ ರ ಬನವಾಸಿಯ ಕದಂಬೋತ್ಸವ ಸೇರಿ ಹೊರಜಿಲ್ಲೆಗಳ ಹಾಗೂ ಜಿಲ್ಲೆಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ.೨೦೨೧ ರಲ್ಲಿ ಇವರ ಕವನ ಸಂಕಲನ ಭ್ರಾಜಿತ – “ಬೆಳಕಿನಕಡೆಗೊಂದು ಪಯಣ” ಬಿಡುಗಡೆಯಾಗಿದ್ದು ಜನಮನ್ನಣೆ ಪಡೆದಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.ಇವರು ಬರೆಯುವ ನ್ಯಾನೋ ಕತೆಗಳು ಜನಪ್ರಿಯತೆ ಗಳಿಸಿವೆ.ವತ್ಸಲಾ ಶ್ರೀಶ ಇವರು ‘ವಿಶ್ರುತಾತ್ಮ’ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಹಾಗೂ ‘ತಪಸ್ಯಾ’ ಕಾವ್ಯನಾಮದೊಂದಿಗೆ ಗಝಲ್ ಗಳನ್ನು ರಚಿಸುತ್ತಾರೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಗಜ಼ಲ್ ಕೃತಿಯು ಕೊಡಗಿನ ಮೊದಲ ಗಜ಼ಲ್ ಕೃತಿಯಾಗಿ ಹೊರಬಂದಿದೆ.