ಪ್ರೇಮಾ ಟಿ.ಎಂ.ಆರ್ ಅವಳೆಂಬ ಅವಳು

ಕಾವ್ಯ ಸಂಗಾತಿ

ಪ್ರೇಮಾ ಟಿ.ಎಂ.ಆರ್

ಅವಳೆಂಬ ಅವಳು

ಅಭಿಮಾನವ ಮೆಟ್ಟಿ ನಿಲ್ಲುವ
ಹೆಜ್ಜೆಗಳೊಳಗಿಂದಲೇ
ಎದ್ದು ನಿಲ್ಲುತ್ತಾಳವಳು
ತನ್ನ ಸುತ್ತ ಎದ್ದು ನಿಂತ ಬೇಲಿಗಳನ್ನೆಲ್ಲ
ಕಿತ್ತೊಗೆದು ನಡೆಯಬೇಕೆಂದುಕೊಂಡಿದ್ದು
ಅದೆಷ್ಟು ಬಾರಿಯೋ
ಮತ್ತೆ ಬೇಲಿಯೊಳಗಿನ ಮುಳ್ಳೊಳಗೆ
ಹೂವಾಗಿ ನಗುತ್ತಾಳೆ
ಶುದ್ಧ ಹಾಲಿನಂತೆ ನಗುವವಳು
ಕಲುಷವಿಲ್ಲ ಕಪಟವಿಲ್ಲ

ಅಪ್ಪಳಿಸುವ ಅಲೆಗಳ ದಂಡಗೆ
ದೂರದಲ್ಲಿ ಅಭಿಮುಖವಾಗಿ ಕೂತಿದ್ದಾಳೆ
ಅದೆಷ್ಟೋ ವಸಂತಗಳಿಗೆ ಸಿಕ್ಕು
ಸುಕ್ಕುಗೊಂಡ ಹೆಣ್ಣು
ಯಾರೋ ಬಿಟ್ಟು ಹೋದ ಹೆಜ್ಜೆಗಳ
ಹೆಕ್ಕುತ್ತಿರಬಹುದೇ
ಬಿಟ್ಟುಹೋದ ಬುದ್ಧನ ಬಗೆಗೆ
ದಿವ್ಯ ನಿರ್ಲಕ್ಷವಿರಬಹುದೇ?
ಬದುಕಿನ ತುಳಿತಗಳಿಗೆ
ನೊಂದು ಬೆಂದು ಹದಗೊಂಡ ಪರಿಯೇ

ಸಣ್ಣ ತೆರೆಗಳ ಮೇಲೆ ಬಿದ್ದುಬಿದ್ದು
ಕೈಕಾಕಾಲು ಬಡಿಯುತ್ತಾಳೆ
ಮೂರೋ ನಾಲ್ಕೋ ವಯದ ಮುದ್ದಮ್ಮ
ಬಾಳ ಸಾಗರವ ಈಜಲು
ರಂಗ ತಾಲೀಮು ಇರಬಹುದೇ
ಆ ತೋಳುಗಳಿಗೆ ಸಾಗರಕ್ಕೊಂದು
ಕೌದಿ ಹೊದೆಸುವ ಕನಸೇ
ಹಾಗೇ ಮುಖ ಮೇಲೆತ್ತಿ ಗಗನವ ದಿಟ್ಟಿಸುತ್ತಾಳೆ
ಆಗಸಕ್ಕೊಂದು ಅಂಗಿ ತೊಡಿಸಬೇಕು
ಅಂದಕೊಂಡಿರಬಹುದೇ
ಏನೇ ಕನಸುಗಳಿರಲಿ ಎಲ್ಲವೂ ಕೈಗೂಡಲಿ
ಕನಸುಗಳನ್ನೆಲ್ಲ ಸುಟ್ಟುಕೊಂಡವಳ
ಎದೆಯಿಂದ ಹೊರಟ ಕನವರಿಕೆ

ಹಗಲು ರಾತ್ರಿಗಳು ಸದ್ದಿಲ್ಲದೇ ಸರಿಯುತ್ತವೆ
ಸಾವಿಗೆ ಹತ್ತಿರವಾಗುತ್ತಾಳವಳು ಒಂದೊಂದೇ ಹೆಜ್ಜೆ
ಮೆತ್ತಗಾಗುತ್ತಾಳೆ ಮತ್ತಷ್ಟು ಹಿಂಜಿದ ಹತ್ತಿಯ ಹಾಗೆ
ಬಿಟ್ಟ ಕಣ್ಗಳಲ್ಲಿಯ ಕನಸುಗಳ
ಉಸಿರು ಬಿಗಿದಿಟ್ಟು

ಒಂದುಕ್ಷಣವಾದರೂ ಬದುಕಬೇಕೆಂದುಕೊಳ್ಳುತ್ತಾಳೆ
ತಾನಂದುಕೊಂಡಂತೆ
ಅವಳೊಬ್ಬಳದೇ ಅಲ್ಲ
ಎಲ್ಲರದೂ ಅದೇ ಕನಸು
ನಂಬಿಕೆ ಕಳಕೊಂಡಿದ್ದು ಅದೆಷ್ಟು ಬಾರಿಯೋ
ಮತ್ತೆ ನಂಬುತ್ತಾಳೆ ಅವಳೇ ನಂಬಿಕೆ
ನಂಬಿಕೆಯೆಂದರೆ ಅವಳೇಯೇನೋ
ಗೋಡೆಗಳಿಲ್ಲದ ಗೂಡೊಳಗೆ
ಒಂದಷ್ಟು ಹಾಯಾಗಿ ಹಾರಾಡಿಕೊಂಡಿರಬೇಕು
ಅಂದುಕೊಳ್ಳುತ್ತಾಳೆ
ಸತ್ಯ ಸತ್ವ ತನ್ನೊಳಗಿದ್ದರೂ ಬೊಟ್ಟು
ಮಾಡುವವರೆದುರು ಬಗ್ಗುತ್ತಾಳೆ ತಗ್ಗುತ್ತಾಳೆ
ತಣ್ಣೀರನ್ನೂ ತಣಿಸಿ ಕುಡಿವ ಹೆಣ್ಣು
ಅವಳು ಶುದ್ಧ ಹಾಲಿನಂತೆ ನಗುವವಳು
ಹೊಂಬಾಳೆಯಂತವಳು

ಸ್ವಾಭಿಮಾನವ ಜಜ್ಜಿ ಪಿಚಳಿ ಮಾಡಿದವರನ್ನೂ
ಇರಲಿಬಿಡು ಪಾಪ ಎಂದುಕೊಳ್ಳುತ್ತಾಳೆ
ಕ್ಷಮಿಸಿದ್ದಾಳೆ ಕ್ಷಮಿಸುತ್ತಲೇ ಸಾಗಿದ್ದಾಳೆ
ಮತ್ತೆ ಕ್ಷಮಿಸುವದು ಇದ್ದೇ ಇದೆ
ಅವಳೆಂಬ ಅವಳಿಗೆ
ಹೀಗೊಂದು ಭೂಮಿಯ ಮೇಲಿನ ವಿಚಿತ್ರ
ಈ ಹೆಣ್ಣೆಂಬ ಹೆಣ್ಣು ಜೀವ


ಪ್ರೇಮಾ ಟಿ.ಎಂ.ಆರ್

Leave a Reply

Back To Top