ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಸಿಂಧುರತ್ನ.
ತಾಯಿ ಪ್ರೀತಿ ವಂಚಿತಳಾದ ನೀ
ಅನಾಥಮಕ್ಕಳಿಗೆ ಮಮತೆಯ ಮಾತೆಯಾದೆ
ಅಕ್ಷರದಿಂದ ವಂಚಿತಳಾದ ನೀ
ಎಲೆಗಳಲಿ ಅಕ್ಷರಬರೆದು
ಅಕ್ಕರೆಯ ಶಾಯರಿ ಹೇಳುವ
ಚತುರೆ ನೀ
ಕಲ್ಲಿಂದ ಕರುಳಬಳ್ಳಿ ಕತ್ತರಿಸಿಕೊಂಡ ನೀ
ಅನಾಥಮಕ್ಕಳ ಬಾಳಿಗೆ
ಪ್ರೀತಿಯ ಸೆರೆಯಾಗಿ
ಕರುಣೆಯಬಳ್ಳಿ ಧಾರೆಎರೆದ ಮಾಯಿ ನೀ
ಆಶ್ರಯಸಿಗದ ಮುಗ್ದ
ಕಂದಮ್ಮಗಳಿಗೆ
ಆಲದಮರ ನೀ
ಬೆಂದ ನೊಂದ ಮನಗಳಿಗೆ
ಆಶಾಕಿರಣ ನೀ
ಪ್ರೀತಿಯೆ ತುಂಬಿದ ನಿನ್ನ ಉಡಿಯಲಿ
ಅವರಿಗಾಗಿ ಬಿಕ್ಷೆಯ ಜೋಳಿಗೆ
ಸ್ಮಶಾನದಲಿ ಕಳೆದ ಘಳಿಗೆ
ರೈಲ್ವೇ ಸ್ಟೇಶನಲಿ ಹಾಡಿದ
ಗಾನಗಳೆ ಹೊಟ್ಟೆ ತುಂಬಿಸುವ ದಾರಿದೀಪಗಳು
ಛಲಬಿಡದೆ ನಿನ್ನ ನಡಿಗೆಯ
ಏಳಿಗೆ
ಉಸಿರಾದವು ಹಸಿರಾದವು ಹೆಸರಾದವು
ನಿನ್ನ ಶ್ರಮದ ಕೊರಳಿಗೆ
ಹೂ ಮಾಲೆಯಾದವು
ನೀನಾದೆ ಸಿಂಧುರತ್ನ
ನಿನ್ನ ಅವಿರತ ಪ್ರಯತ್ನದ
ಸಾಧನೆಗೆ
ವಿಶ್ವವೇ ನಿನ್ನ ಗಮನದತ್ತ
ನಿನ್ನನೆ ಹುಡುಕಿಕೊಂಡ ಪ್ರಶಸ್ತಿ ಪುರಸ್ಕಾರಗಳ ಮೊತ್ತ ತಲೆ ಬಾಗಿದವು
ನಿನ್ನತ್ತ
ನಿನ್ನ ಸಹನೆಯ ಸಾಧನೆಯೆ ಮಹಿಳಾ
ಲೋಕಕೆ ಆದರ್ಶ.
ಲಲಿತಾ ಪ್ರಭು ಅಂಗಡಿ.