ಅಂಕಣ ಬರಹ

ವತ್ಸಲಾ ಶ್ರೀಶ

ನಾವುಮರೆತ ಮಹಿಳಾ

ಸ್ವಾತಂತ್ರ್ಯ ಹೋರಾಟಗಾರರು

ರಾಣಿ ವೇಲು ನಾಚಿಯಾರ್

(ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಯುದ್ದ ಮಾಡಿದ ಮೊದಲ‌ ಭಾರತೀಯ ರಾಣಿ)

ವೇಲು ನಾಚಿಯಾರ್ ತಮಿಳುನಾಡಿನ ರಾಮನಾಥಪುರಂ ರಾಜಕುಮಾರಿಯಾಗಿದ್ದಳು. ರಾಣಿ ವೇಲು ನಾಚಿಯಾರ್   ಜನವರಿ 3, 1730 ರಂದು ರಾಮನಾಥಪುರಂ ನಲ್ಲಿ ಜನಿಸಿದಳು. ಶಿವಗಂಗೆಯ ರಾಣಿಯಾಗಿ  ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಯುದ್ಧ ಮಾಡಿದ ಮೊದಲ ಭಾರತೀಯ ರಾಣಿ ಅವಳು .  ಆಕೆಯನ್ನು ತಮಿಳರು ವೀರಮಂಗೈ (“ಧೈರ್ಯಶಾಲಿ”) ಎಂದು ಕರೆಯುತ್ತಾರೆ

ವೇಲು ನಾಚಿಯಾರ್ ರಾಮನಾಥಪುರಂನ ಚೆಲ್ಲ ಮುತ್ತು ವಿಜಯ ರಘುನಾಥ ಸೇತುಪತಿ ಹಾಗೂ ರಾಣಿ ಸಖಂದಿ ಮುತ್ತಲ್ ರ ಒಬ್ಬಳೇ ಮಗಳಾಗಿದ್ದಳು. ವೇಲು ಸಾಧಾರಣ ಹೆಣ್ಣು ಮಗಳಾಗಿರಲಿಲ್ಲ. ಅವಳು ಶಸ್ತ್ರ ಹಾಗೂ ಶಾಸ್ತ್ರಗಳಲ್ಲಿ ಅಸಾಧಾರಣ ಜ್ಞಾನವನ್ನು ಹೊಂದಿದ್ದಳು. ಅವಳು ರಾಜ ಮನೆತನದ ಶ್ರೀಮಂತಿಕೆಯನ್ನು ಅನುಭವಿಸುವ ಬದಲು ಯುದ್ಧ ಕಲೆಗಳನ್ನು ಕಲಿಯಲು ಬಯಸಿದಳು. ನಾವೆಲ್ಲರೂ ತಿಳಿದಂತೆ ಹಿಂದಿನ ಕಾಲದಲ್ಲಿ ಹೆಂಗಸರಿಗೆ ಸ್ವಾತಂತ್ರ್ಯವಿರಲಿಲ್ಲ, ವಿದ್ಯೆ ಇರಲಿಲ್ಲ, ಎಂಬ ಮಾತುಗಳೆಲ್ಲಾ ಸುಳ್ಳು ಎಂಬುದನ್ನು ಗಮನಿಸಬೇಕಾಗಿದೆ. ಅವೆಲ್ಲ ಇತ್ತೀಚೆಗೆ ಆದಂತಹ ಸಾಮಾಜಿಕ ಬದಲಾವಣೆಗಳು. ಹಿಂದಿನ ಕಾಲದಲ್ಲಿ ಮಹಿಳೆಯರು ಗೌರವ ಸ್ಥಾನವನ್ನು ಪಡೆದಿದ್ದರು, ವಿದ್ಯೆ, ಶಸ್ತ್ರ ವಿದ್ಯೆ ಎಲ್ಲದರಲ್ಲೂ ಪಾರಂಗತರಾಗಿದ್ದರು.  ರಾಜಕುಮಾರಿ ನಾಚಿಯಾರ್ ಕುದುರೆ ಸವಾರಿ, ವಲರಿ, ಸಿಲಂಬಂ ಮುಂತಾದ ಸಮರ ಕಲೆಗಳನ್ನು ಕಲಿತಳು.


ಅವಳು ಸಾಹಿತ್ಯದ ಬಗ್ಗೆಯೂ ತುಂಬಾ ಆಸಕ್ತಿ ಹಾಗೂ ಜ್ಞಾನವನ್ನು ಹೊಂದಿದ್ದಳು. .ಅವಳು ಉರ್ದು, ಫ್ರೆಂಚ್, ಇಂಗ್ಲಿಷ್ ಮುಂತಾದ ಭಾಷೆಗಳನ್ನು ಕಲಿತಿದ್ದಳು. ನಂತರ ಅವಳು  ಶಿವಗಂಗೆಯ ರಾಜನಾದ ಮುತ್ತು ವಡುಗನಾಥ ಪೆರಿಯವುದಯ ತೇವರ್ ನ ಮಡದಿಯಾಗುತ್ತಾಳೆ.ಮಗಳು ವೆಲ್ಲಚ್ಚಿ ಹುಟ್ಟುತ್ತಾಳೆ..ಅವರು ಸಂತೋಷದಿಂದಲೇ ಇರುತ್ತಾರೆ..ರಾಜ್ಯದ ಜನರೂ ಸುಖ ಸಂತೋಷದಿಂದ ಜೀವಿಸುತ್ತಿದ್ದರು.ಆಗಲೇ  ಬ್ರಿಟಿಷರ ಕಣ್ಣು ಶಿವಗಂಗೆಯ ಮೇಲೆ ಬೀಳುತ್ತದೆ. ಹೇಗಾದರೂ ರಾಜ್ಯವನ್ನು ಕಬಳಿಸಬೇಕೆಂದು ಯೋಚನೆ ಮಾಡುತ್ತಾರೆ. ಬ್ರಿಟಿಷರು ಎಂದೂ ನೇರವಾಗಿ ಯುದ್ಧ ಮಾಡಿದವರಲ್ಲ. ಕೂಟ ಯುದ್ಧಗಳಿಂದ, ಕುಟಿಲತೆಯಿಂದ ಹಾಗೂ ಭಾರತದವರನ್ನೇ ತಮ್ಮೆಡೆಗೆ ಸೆಳೆದುಕೊಂಡು ತಂತ್ರಗಳ ಮೂಲಕ ಭಾರತದ ಒಂದೊಂದೇ ಭೂಭಾಗಗಳನ್ನು ವಶಪಡಿಸಿಕೊಳ್ಳುತ್ತಿದ್ದರು. ಆದರೆ ಶಿವಗಂಗೆಯನ್ನು ಗೆಲ್ಲುವುದು ಬ್ರಿಟಿಷರಿಗೆ ಅಷ್ಟು ಸುಲಭವಾಗಿರಲಿಲ್ಲ. ಅವರು ಆರ್ಕಾಟಿನ ನವಾಬನ ಸಹಾಯವನ್ನು ಕೇಳಿದರು. ಆರ್ಕಾಟಿ ನ ನವಾಬ ಮಹಮ್ಮದ್ ಅಲಿ ಖಾನ್ ವಾಲ್ಜಾ ಈಗಾಗಲೇ ಮಧುರೈ ನಾಯಕರ ರಾಜ್ಯವನ್ನು ವಶಪಡಿಸಿಕೊಂಡಿದ್ದರು. ರಾಮನಾಥ ಪುರಂ ಹಾಗೂ ಶಿವಗಂಗೆಯ ರಾಜರು ಅವನಿಗೆ ಕಪ್ಪ ಕಾಣಿಕೆಗಳನ್ನು ಕೊಡಲು ಒಪ್ಪಿರಲಿಲ್ಲ. ಆದುದರಿಂದ ಅವನು ಇಂಗ್ಲೀಷರ ಜೊತೆ ಸೇರಿಕೊಳ್ಳುತ್ತಾನೆ. 1772 ರ ಒಂದು ದಿನ ಶಿವಗಂಗೆ ಯ ರಾಜ ಮುತ್ತು ವಡುಗನಾಥ ತೇವರ್ ಶಿವಗಂಗೆಗೆ ಸಮೀಪವಿರುವ  ಕಾಳೆಯರ್ ಕೋವಿಲ್  ಶಿವ ದೇವಾಲಯಕ್ಕೆ ಹೋಗುತ್ತಾನೆ. ಆಗ ಆರ್ಕಾಟಿನ ನವಾಬನ ಸಹಾಯದೊಂದಿಗೆ ಕಮಾಂಡರ್  ಜೋಸೆಫ್ ಸ್ಮಿತ್ ನ ಸೈನ್ಯ ಕೋಟೆಗೆ ಮುತ್ತಿಗೆ ಹಾಕುತ್ತದೆ. ಇನ್ನೊಂದೆಡೆಯಲ್ಲಿ ಗುಪ್ತ ಮಾರ್ಗವಾಗಿ ಕರ್ನಲ್ ಅಬ್ರಹಾಂ ಬೂಜನರ್ ಸೈನ್ಯ ಶಿವಾಲಯಕ್ಕೆ ಮುತ್ತಿಗೆ ಹಾಕುತ್ತದೆ. ಅನಿರೀಕ್ಷಿತ ದಾಳಿಯಿಂದಾಗಿ ಏನೂ ಮಾಡಲಾಗದ ರಾಜ ಕ್ರೂರವಾಗಿ ಕೊಲ್ಲಲ್ಪಡುತ್ತಾನೆ. ದೇವಾಲಯದಲ್ಲಿದ್ದ 50 ಸಾವಿರ ಚಿನ್ನದ ನಾಣ್ಯಗಳನ್ನು ಅಬ್ರಹಾಂ ಲೂಟಿ ಮಾಡುತ್ತಾನೆ. ಗಂಡನ ಮರಣ ದ ವಿಷಯವನ್ನು ತಿಳಿದ ನಾಚಿಯಾರ್ ಆಘಾತಗೊಳ್ಳುತ್ತಾಳೆ. ಹಾಗೆಂದು ದುಃಖಿಸಿಕೊಂಡು  ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ.. ತನ್ನ ಪುಟ್ಟ ಮಗಳ ರಕ್ಷಣೆಯ ಅಗತ್ಯವಿತ್ತು.ದಳವಾಯಿ ತಾಂಡವರಾಯ ಪಿಳ್ಳೈ ,ವೇಲು ನಾಚಿಯಾರ್ ಹಾಗೂ ಅವಳ ಪುಟ್ಟ ಮಗಳು ವೆಲಚ್ಚಿ ಅಲ್ಲಿಂದ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಹಾಗೂ ವಿರೂಪಾಕ್ಷಿಯ ದುಂಡಿಗಲ್ ಗೆ  ಹೋಗುತ್ತಾರೆ. ಅಲ್ಲಿ ಶಿವಗಂಗಾ ಸೈನ್ಯದ ಮರುದು ಸಹೋದರರು ಅವಳನ್ನು ಸೇರಿಕೊಳ್ಳುತ್ತಾರೆ. ಅವಳು ಎಂಟು ವರ್ಷಗಳ ಕಾಲ ಹಿಂಡುಗಲ್ಲಿನ ವಿರುಪಾಕ್ಷಿಯಲ್ಲಿ ಪಾಳೆಯಗಾರರ ಕಪಾಲ ನಾಯಕರ್ ನ ಆಶ್ರಯದಲ್ಲಿ ತಲೆಮರೆಸಿಕೊಂಡು ಬದುಕಿದಳು. ಆದರೆ ಅವಳು ಬ್ರಿಟಿಷರಿಗೆ ಹೆದರಿ ತಲೆಮರೆಸಿಕೊಂಡಿರಲಿಲ್ಲ.. ಗಂಡನ ಸಾವಿನ ಪ್ರತಿಕಾರಕ್ಕಾಗಿ ಹಾಗೂ ಶಿವ ಗಂಗೆಯನ್ನು ಮರಳಿ ಪಡೆಯುವುದಕ್ಕಾಗಿ ಅವಳು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಳು. ಅವಳ ನಂಬಿಕಸ್ಥ ಅಂಗರಕ್ಷಕನಾದ ಉದಯಾಳ್ ಬ್ರಿಟಿಷರ ಕೈಗೆ ಸಿಕ್ಕಿ ಬಿದ್ದು ರಾಣಿ ಎಲ್ಲಿ ಇರುವಳೆಂದು ಹೇಳುವಂತೆ ಒತಾಯಿಸುತ್ತಾರೆ ಆದರೆ ಅವನು ಅವಳಿರುವ ಜಾಗವನ್ನು ತಿಳಿಸುವುದಿಲ್ಲ . ಬ್ರಿಟಿಷರು ಅವನನ್ನು ಕ್ರೂರವಾಗಿ ಕೊಲ್ಲುತ್ತಾರೆ.ಗಂಡನ ಸಾವಿನಿಂದ ಬೆಂಕಿಯಾಗಿದ್ದ ರಾಣಿಗೆ  ಉದಯಾಳ್ ನ ಸಾವಿನ  ವಿಷಯ ಉರಿಯುವ ಬೆಂಕಿಗೆ ಮತ್ತೆ ತುಪ್ಪ ಸುರಿದಂತಾಯ್ತು. ಅಂದೇ ನಾಚಿಯಾರ್ ಅವನ ಸಾವಿಗೆ ಪ್ರತಿಕಾರ ನೀಡುವುದಾಗಿ ಪ್ರತಿಜ್ಞೆ ಮಾಡುತ್ತಾಳೆ. ಅವಳು ಸದ್ದಿಲ್ಲದೆ ಸೈನ್ಯವೊಂದನ್ನು ಕಟ್ಟಿದಳು..ಬ್ರಿಟಿಷರನ್ನು ಹೊಡೆದೋಡಿಸುವುದು ಕಷ್ಟವೆಂದು ತಿಳಿದವಳು ಗೋಪಾಲ ನಾಯಕರ್ ಹಾಗೂ ಮೈಸೂರಿನ ಹೈದರಾಲಿಯ ಸಹಾಯವನ್ನು ಕೇಳುತ್ತಾಳೆ. ಅಂದು ನಾಚಿಯಾರ್ ಸಹಾಯ ಕೇಳಲು ಹೋದಾಗ  ಶುದ್ದ ಉರ್ದು ಭಾಷೆಯಲ್ಲಿ ಹೈದರಾಲಿಯೊಡನೆ ಮಾತನಾಡುತ್ತಾಳೆ..ಅವಳ ಭಾಷಾ ಜ್ಞಾನ ಪರಾಕ್ರಮದಿಂದ ಪ್ರಭಾವಿತನಾದ ಹೈದರಾಲಿ ಅವಳಿಗೆ ಸಹಾಯ ಮಾಡಲು ಒಪ್ಪುತ್ತಾನೆ..ಹಾಗೂ ಅವಳನ್ನು ತನ್ನ ಸ್ವಂತ ಮಗಳಂತೆಯೇ ಕಾಣುತ್ತಾನೆ.ಹೈದರ್ ಅಲಿಯ ಸೈನ್ಯ, ಊಳಿಗಮಾನ್ಯ ಪ್ರಭುಗಳು, ಮಾರುತು ಸಹೋದರರು, ದಲಿತ ಕಮಾಂಡರ್‌ಗಳು ಮತ್ತು ತಾಂಡವರಾಯನ್ ಪಿಳ್ಳೈ ಅವರ ಬೆಂಬಲದೊಂದಿಗೆ ಅವಳು ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋರಾಟಕ್ಕೆ ಇಳಿಯುತ್ತಾಳೆ.


ಅವಳು  ಮಹಿಳೆಯರ ಒಂದು ಸೈನ್ಯವನ್ನು ಕಟ್ಟುತ್ತಾಳೆ. ಉದಯಾಳ್ ನ ನೆನಪಿಗಾಗಿ ಆ ಸೈನ್ಯಕ್ಕೆ “ಉದಯಾಳ್ ಸೈನ್ಯ” ಎಂದು ಹೆಸರಿಡುತ್ತಾಳೆ.ಅದರಲ್ಲಿ ೩೦೦೦ ಜನ ಮಹಿಳಾ ಸೈನಿಕರಿದ್ದರೆಂದು ಹೇಳಲಾಗುತ್ತದೆ. ಅದಾಗಲೇ ಆರ್ಕಾಟಿನ ನವಾಬ ವಾಲಜ ಶಿವಗಂಗೆಗೆ ಹುಸೇನ್ ನಗರ್ ಎಂದು ಹೆಸರಿಟ್ಟಿರುತ್ತಾನೆ. ಶಿವಗಂಗೆ ಯನ್ನು ಮರಳಿ ಪಡೆಯುವುದಕ್ಕಾಗಿ ಅವರೆಲ್ಲರೂ ಸೇರಿ ಒಂದು ಉಪಾಯವನ್ನು ಹೂಡುತ್ತಾರೆ. ಹಾಗೂ ಅದನ್ನು ಕಾರ್ಯರೂಪಕ್ಕೆ ತರಲು ಸಮಯ ಕಾಯುತ್ತಿರುತ್ತಾರೆ. ವಿಜಯ ದಶಮಿಯ ದಿನ ರಾಜ ರಾಜೇಶ್ವರಿ ಅಮ್ಮನ ದೇವಾಲಯ ಸಾರ್ವಜನಿಕರ ಪ್ರವೇಶಕ್ಕಾಗಿ ತೆರೆದಿತ್ತು. ಮಹಿಳಾ ಸೈನಿಕರು ದೇವಿಗೆ  ಪೂಜೆ ಸಲ್ಲಿಸಲು ಹೋಗುವಂತೆ ಹೋಗಿ  ಮದ್ದು ಗುಂಡುಗಳನ್ನು ಬಚ್ಚಿಟ್ಟಿರುವ ಜಾಗವನ್ನು ಪತ್ತೆ ಹಚ್ಚುತ್ತಾರೆ..ಮಹಿಳಾ ಕಮಾಂಡರ್ ಕೊಯಿಲಿ ಆತ್ಮಾಹುತಿ ಬಾಂಬ್  ರೀತಿಯ ದಾಳಿ  ಮಾಡಿ ಬ್ರಿಟಿಷರ ಶಸ್ತ್ರಾಸ್ತ್ರದ ಮೇಲೆ ಬಿದ್ದು ಅವುಗಳನ್ನು ನಾಶಮಾಡುತ್ತಾಳೆ. ಈ ಘಟನೆ  ಮೊದಲ ಆತ್ಮಾಹುತಿ ಬಾಂಬ್ ದಾಳಿ ಎಂದೇ ಪ್ರಸಿದ್ದಿಯಾಗಿದೆ.. ಇದರಿಂದ ಬ್ರಿಟಿಷರ ಶಸ್ತ್ರಾಸ್ತ್ರ ಸಂಪೂರ್ಣವಾಗಿ ನಾಶವಾಗುತ್ತದೆ. ಬ್ರಿಟಿಷರಿಗೆ ಶಸ್ತ್ರಾಸ್ತ್ರ ದ ಕೊರತೆ ಉಂಟಾಗುತ್ತದೆ. ವೇಲು ನಾಚಿಯಾರ್ ಇದೇ ಸಂದರ್ಭದಲ್ಲಿ ಬ್ರಿಟಿಷರಿಗೆ ಬುದ್ಧಿ ಕಲಿಸಲು ಯೋಚಿಸುತ್ತಾಳೆ. ಅವಳ ಒಂದು ಸೈನ್ಯ ಶಿವಗಂಗೆ ಕೋಟೆಗೆ ಮುತ್ತಿಗೆ ಹಾಕುತ್ತದೆ .ರಾಣಿ ನಾಚಿಯಾರ್..ಬ್ರಿಟಿಷರಿಗೆ ಬಹಳ ಬೇಕಾದ ಒಂದು ಜಾಗ ವಾಲಾಜ್ ನ್ನು ವಶಪಡಿಸಿಕೊಳ್ಳುತ್ತಾಳೆ. ಆ ಪ್ರದೇಶ ಇಂಗ್ಲೀಷರಿಗೆ ಬಹಳ ಮುಖ್ಯ ಪ್ರದೇಶವಾಗಿತ್ತು. ಏಕೆಂದರೆ ಅವರ ಆರ್ಥಿಕ ವಹಿವಾಟುಗಳು ನಡೆಯುವ ಜಾಗ ಅದಾಗಿತ್ತು. ತನ್ನ ಶಿವಗಂಗೆಯನ್ನು ಬಿಟ್ಟು ಕೊಟ್ಟರೆ ಮಾತ್ರವೇ ನಾನು ಆ ಜಾಗವನ್ನು ಬಿಟ್ಟುಕೊಡುತ್ತೇನೆ ಎಂದು ಬ್ರಿಟಿಷರಿಗೆ ವೇಲು ನಾಚಿಯಾರ್ ಸವಾಲು ಹಾಕುತ್ತಾಳೆ. ಹಾಗೆಯೇ ಶಿವಗಂಗೆಯನ್ನು ಮರಳಿ ಪಡೆದುಕೊಳ್ಳುತ್ತಾಳೆ. ಹುಸೇನ್ ನಗರ ಪುನಃ ಶಿವಗಂಗೆ ಎಂದು ನಾಮಕರಣಗೊಳ್ಳುತ್ತದೆ. ಮುಂದಿನ ಹತ್ತು ವರ್ಷಗಳ ಕಾಲ ರಾಣಿ ವೇಲುನಾಚಿಯಾರ್ ಶಿವಗಂಗೆಯನ್ನು ಆಳುತ್ತಾಳೆ.ತನ್ನ ಆಳ್ವಿಕೆಯ ಕೊನೆಯವರೆಗೂ ಬ್ರಿಟಿಷರನ್ನ ಸದ್ದೆತ್ತದಂತೆ ಮಾಡಿ ರಾಜ್ಯವನ್ನಾಳಿದ ವೀರ ವನಿತೆ ವೇಲು ನಾಚಿಯಾರ್ .. ವೇಲು ನಾಚಿಯಾರ್ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಹಾಗೂ ತನ್ನ ರಾಜ್ಯವನ್ನು ಬ್ರಿಟಿಷರಿಂದ ಮರಳಿ ಪಡೆದ ಮೊದಲ ಮಹಿಳೆಯಾಗಿರುತ್ತಾಳೆ. 1790 ರಲ್ಲಿ, ಸಿಂಹಾಸನವನ್ನು ಅವಳ ಮಗಳು ವೆಲ್ಲಾಚಿ ಅನುವಂಶಿಕವಾಗಿ ಪಡೆದಳು.
ಅವಳು 25 ಡಿಸೆಂಬರ್ 1796 ರಂದು ನಿಧನ ಹೊಂದುತ್ತಾಳೆ..ಹೀಗೆ ಬ್ರಿಟಿಷರ ವಿರುದ್ಧ ಹೋರಾಡಿದ ವೀರ  ಮಹಿಳೆ ವೇಲು ನಾಚಿಯಾರ್.
31 ಡಿಸೆಂಬರ್ 2008 ರಂದು, ಅವರ ಹೆಸರಿನಲ್ಲಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.ಆದರೂ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ರ ಹೆಸರಾಗಿ ರಾರಾಜಿಸುವಲ್ಲಿ ಇವಳ ಹೆಸರು  ಹಿಂದೆ ಉಳಿದಿದೆ ..

(ಆಧಾರ:ನ್ಯೂಸ್ ಚಾನಲ್ಸ್,ಅಂತರ್ಜಾಲ)

—————————————————–

ವತ್ಸಲಾ ಶ್ರೀಶ

ಶ್ರೀಮತಿ ವತ್ಸಲಾ ಶ್ರೀಶ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಎಂಬಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ಇವರ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು.ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ಸರ್ವೋದಯ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ಈಗ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೊಡಗಿನ ಶ್ರೀಶಕುಮಾರ್ ಅವರನ್ನು ವಿವಾಹವಾದ ನಂತರ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ವತ್ಸಲಾ ಶ್ರೀಶರವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ ,ಕವನ, ಲೇಖನ, ಷಟ್ಪದಿಗಳು,ಇತರ ಛಂದೋಬದ್ಧ ರಚನೆಗಳು, ವಿಮರ್ಶೆ,ಹಾಯ್ಕು,ಗಝಲ್ ಮುಂತಾದವುಗಳನ್ನು ರಚಿಸುತ್ತಾರೆ. ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ,೨೦೨೩ ರ ಬನವಾಸಿಯ ಕದಂಬೋತ್ಸವ ಸೇರಿ ಹೊರಜಿಲ್ಲೆಗಳ ಹಾಗೂ ಜಿಲ್ಲೆಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ.೨೦೨೧ ರಲ್ಲಿ ಇವರ ಕವನ ಸಂಕಲನ ಭ್ರಾಜಿತ – “ಬೆಳಕಿನಕಡೆಗೊಂದು ಪಯಣ” ಬಿಡುಗಡೆಯಾಗಿದ್ದು ಜನಮನ್ನಣೆ ಪಡೆದಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.ಇವರು ಬರೆಯುವ ನ್ಯಾನೋ ಕತೆಗಳು ಜನಪ್ರಿಯತೆ ಗಳಿಸಿವೆ.ವತ್ಸಲಾ ಶ್ರೀಶ ಇವರು ‘ವಿಶ್ರುತಾತ್ಮ’ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಹಾಗೂ ‘ತಪಸ್ಯಾ’ ಕಾವ್ಯನಾಮದೊಂದಿಗೆ ಗಝಲ್ ಗಳನ್ನು ರಚಿಸುತ್ತಾರೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಗಜ಼ಲ್ ಕೃತಿಯು ಕೊಡಗಿನ‌ ಮೊದಲ‌ ಗಜ಼ಲ್ ಕೃತಿಯಾಗಿ ಹೊರಬಂದಿದೆ.

Leave a Reply

Back To Top