ಇಂದಿರಾ ಮೋಟೆಬೆನ್ನೂರ ತೀರದ ನೀರೀಕ್ಷೆ

ಕಾವ್ಯಸಂಗಾತಿ

ಇಂದಿರಾ ಮೋಟೆಬೆನ್ನೂರ

ತೀರದ ನೀರೀಕ್ಷೆ

ಕ್ಷಣ ಕಾಲ ತೆರೆದ ಬಾಗಿಲು
ಅನುಗಾಲ ಮುಚ್ಚಿದ ಬಾಗಿಲು
ಮುಂದೆ ಕುಳಿತು ಸದಾ
ಕಾಯುವುದೇ ಕಾಯಕ..
ಹೆಸರಿಗೆ ತೆರೆದ ಬಾಗಿಲು ಅಷ್ಟೇ
ಮಾತಿಲ್ಲ ಕಥೆಯಿಲ್ಲ..
ಮೌನದ ಸಾಮ್ರಾಜ್ಯ ಎಲ್ಲೆಡೆ..
ಒಳಗಿಣುಕಲೂ ಅನುಮತಿಯಿಲ್ಲ
ಹೃದಯಕೆ ಹತ್ತಿರವಾಗುವುದಾದರೂ ಹೇಗೆ…
ಪ್ರೀತಿ ಇಲ್ಲದೆ ಅರಳುವುದಾದರೂ ಹೇಗೆ..?
ಭಾವ ಮೊಗ್ಗೆ ಬಿರಿಯುವುದಾದರೂ ಹೇಗೆ?
ನವ ಭಾವ ಬಿತ್ತನೆಯ ಭರದಿ
ಮಗ್ನ ತಲ್ಲೀನ ಹೃದಯ…
ಸುತ್ತ ಎತ್ತರದ ಗೋಡೆ…
ಮುಳ್ಳಿನ ಬೇಲಿ…
ಸೈನಿಕರು..ಭದ್ರತಾ ಪಡೆ..
ಕಾವಲು…ಸಾಮ್ರಾಜ್ಯ..
ಹೃದಯ ಸಾಮ್ರಾಟನ
ಭಾವ ಸಮುದ್ರ…
ಹೂವು ದಾಟೀತಾದರೂ ಹೇಗೆ?
ಮೆತ್ತಗೆ ಹೆದರುತ ಅಳುಕುತ
ಅಂಜುತ ಒಂದು ಹೆಜ್ಜೆ
ಮುಂದಿಡಲು ಹವಣಿಸಿದಾಗ
ನಿಲ್ಲು ಎಂಬ ಮಹದಾಜ್ಞೆ…
ಶಿರಸಾವಹಿಸಿ ಪಾಲಿಸುತ
ಒಳಗೆ ಹೋಗುವ ದಾರಿಯ
ಅರಸುತಿದೆ ಹೂವಿಂದಿಗೂ…..
ಮತ್ತೆ ಹೊರಬಂದು ಕಾಯುತಿದೆ..
ತೀರದ ನಿರೀಕ್ಷೆಯ ತೀರದಲಿ….
ಊರ್ಮಿಳೆಯಂತೆ …
ಶಬರಿಯಂತೆ….
ಹೂವಿಗೊಂದು ನೋವು..
ಚೂರಿಯಂತ ಒಂದು ಮಾತು
ಮುಳ್ಳಿನ ಇರಿತ…
ಘಾಸಿಗೊಂಡಿದೆ…
ರೋಸಿಹೋಗಿದೆ….
ಉಪೇಕ್ಷೆ, ಅವಮಾನ
ಅನಾದರ,.ನಿರಾಕರಣೆ
ಗೊತ್ತಿಲ್ಲ..ಏಕೆ ಕಾಯುತಿಹುದೋ
ನೋವುಂಡು ಬೇವುಂಡು
ಕಿರು ನಗುವಿಗಾಗಿ….
ಹಿಡಿ ಪ್ರೀತಿಗಾಗಿ
ಉಡಿಯೊಡ್ಡಿ
ಬೇಡುತಿಹುದು….
ಕರುಣೆಯಿಲ್ಲದ
ಹೆಪ್ಪುಗಟ್ಟಿದ ಹೃದಯದಲ್ಲಿ
ಕಿರು ಸ್ನೇಹ ತೊರೆಯಾಗಿ
ಹರಿವ ಹಂಬಲದಿ…..
ಎದೆಗೂಡ ಕತ್ತಲಲಿ
ಕಿರು ಹಣತೆಯಾಗಿ…..
ಬೆಳಕ ಚೆಲ್ಲುವ ಗಳಿಗೆಗಾಗಿ…
ಹಸನಾದ ಹೃದಯದ
ಹಾದಿಯಲಿ ಹಾಡಾಗುವ
ಹಂಬಲದಿ…..
ಮೌನದ ಬೆಟ್ಟದಲ್ಲಿ
ಸವಿ ಪಿಸು ಮಾತಾಗುವ
ಅಳಿಲ ಆಸೆಯಲಿ…..
ನಸು ನಗುತ
ತುಸು ನೋವಲಿ
ಹಸು ಮಗುವಾಗಿ…..


ಇಂದಿರಾ ಮೋಟೆಬೆನ್ನೂರ.

Leave a Reply

Back To Top