ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ನಿನಗೆ ಮಾತ್ರ
ಬರೆಯಬೇಕಾಗಿದೆ
ನನಗೂ…
ನಿನ್ನಂತೆಯೇ..,.
ಕವಿತೆಯೊಂದನು
ಎಲ್ಲರೂ ಓದಿದರೂ…
ಅರ್ಥ ನಿನಗೆ ಮಾತ್ರ
ಆಗುವಂತೆ ….
ನುಡಿಯಬೇಕಾಗಿದೆ
ನನಗೂ
ನಿನ್ನಂತೆಯೇ…
ಮಾತೊಂದನು
ಎಲ್ಲರೂ ಕೇಳಿದರೂ
ಅರ್ಥ ನಿನಗೆ ಮಾತ್ರ
ವೇದ್ಯವಾಗುವಂತೆ….
ಹಾಡಬೇಕಾಗಿದೆ
ಹಾಡೊಂದನ್ನು
ನನಗೂ
ನಿನ್ನಂತೆಯೇ..
ಎಲ್ಲರೂ ಆಲಿಸಿ
ಭಾವ ನಿನಗೆ ಮಾತ್ರ
ತಾಕುವಂತೆ…..
ಮುಚ್ಚಿ ತೆರೆಯಬೇಕಾಗಿದೆ
ಎದೆಕದವ
ನಿನ್ನಂತೆಯೇ..
ನನಗೂ
ಎಲ್ಲರೂ ನೋಡಿದರೂ
ನೋವು ಮಾತ್ರ ನಿನಗೇ
ತಾಗುವಂತೆ…
ಮುನಿಸಿಕೊಳ್ಳಬೇಕಾಗಿದೆ
ಎದೆಸುಡುವ ಪ್ರೀತಿಸ್ನೇಹದಿ
ನಿನ್ನಂತೆಯೇ..
ನನಗೂ
ಎಲ್ಲರೂ ತಿಳಿದರೂ
ಕಾವು ಮಾತ್ರ ನಿನಗೆ
ತಟ್ಟುವಂತೆ….
ಮಗುಮನ ನಿರಪರಾಧಿ
ದಂಡಿಸಿ ಬಳಲಿಸಬೇಕಿದೆ
ನಿನ್ನಂತೆಯೇ…
ನನಗೂ
ಎಲ್ಲರೂ ಅರಿತರೂ
ಬೆಂದ ಬೇಗೆ ಮಾತ್ರ
ನಿನ್ನೆದೆಯ ಸುಡುವಂತೆ…
ಪುಟ್ಟ ಹೃದಯ ಹೂವು…
ಕನಲಿ ನುಡಿಯಿತು.
ಕ್ಷಮಿಸು ಬಿಡು…
ನೀಡಲಾರೆ ನೋವು…
ಮೌನವಾಗಿ ಸಹಿಸೆಲ್ಲ
ಪ್ರೀತಿಸುವುದೊಂದೆ
ನನಗೆ ಗೊತ್ತು…..
ಇಂದಿರಾ ಮೋಟೆಬೆನ್ನೂರ.