ರಾಜ ಶೇಖರ್. ಕೆ
ಎಲ್ಲಿಗೆ ಬಂತು.!
ಯಾರಿಗೆ ಬಂತು.!
ನಲವತ್ತೇಳರ ಸ್ವಾತಂತ್ರ್ಯ..!?
ದಲಿತ ಕವಿ ಸಿದ್ದಲಿಂಗಯ್ಯನವರ ಈ ಕವಿತೆ ಇಂದಿಗೂ ಸಹ ಪ್ರಸ್ತುತವೇ.. ಆಗಿದೆ, ನಿಜವಾದ ಸ್ವಾತಂತ್ರ್ಯದ ಅರ್ಥ ಏನು..! ಅದು ಯಾರಿಗೆ ಸಿಕ್ಕಿದೆ ಎಂದು ಯೋಚಿಸಬೇಕಾಗಿದೆ,
ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಹೀಗೊಂದು ಪ್ರಶ್ನೆ ನಮ್ಮ ಮನಗಳಲ್ಲಿ ಮೂಡುತ್ತದೆ.. ಭಾವೈಕ್ಯತೆಯ ಸಂಗಮ, ಸತ್ಯ, ಅಹಿಂಸೆ, ನಮ್ಮ ಸಂಪ್ರದಾಯ, ಸಂಸ್ಕೃತಿ, ಭಿನ್ನತೆಯಲ್ಲಿ ಐಕ್ಯತೆ, ಅದುವೇ ನಮ್ಮ ಭಾರತ ದೇಶದ ಶಕ್ತಿ ಎನ್ನುವ ನಾವು
“ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ..” ಎಂದು ಹಾಡಿ ನಲಿಯುತ್ತೇವೆ, ನಾವು ಶಾಂತಿಪ್ರಿಯರು ಮೂರು ಬಣ್ಣದ ಬಾವುಟ ಹಿಡಿದು ಹಾಡುತ್ತಾ ಕುಣಿಯುವ ನಮಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದೆಯೇ.!
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ದಾಟಿ ಸಾಗುತ್ತಿರುವ ನಮ್ಮ ಹಾದಿಯಲ್ಲಿ ನಿಜವಾದ ಸ್ವಾತಂತ್ರ್ಯದ ಅನುಭವ ನಮಗೆ ಆಗಿದೆಯೇ.!?
ದೇಶದ ಸಮಸ್ಯೆಗಳು ಇನ್ನೂ ತೀರಿಲ್ಲ..! ಸ್ವಾತಂತ್ರ್ಯದ ನಿಜವಾದ ಅರ್ಥವೂ ಆಗುತ್ತಿಲ್ಲ..! ಈಗಲು ಮೇಲು ಕೀಳು, ಅಸಹಾಯಕ ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಿಂತಿಲ್ಲ ಸಾಮಾಜಿಕ ಜಾಲತಾಣಗಳ ದುರುಪಯೋಗ, ಪ್ರಬುದ್ಧತೆ ಮರೆತ ನಾಯಕರ ಆರೋಪ, ಪ್ರತ್ಯಾರೋಪಗಳು ತಮ್ಮ ರಾಜಕೀಯ ಲಾಭಕ್ಕಾಗಿಯೇ ನಡೆಯುವ ಗಲಭೆಗಳು ಪರಿಹಾರ ಸಿಗದಿದ್ದಾಗ ರಾಜಕೀಯ ಪ್ರೇರಿತ
ದ್ವೇಷ ಭಾಷಣಗಳು, ಬಹುಕೋಟಿ ಹಗರಣಗಳು, ಲಂಚ ಕೋರತನಗಳು
76 ನೇ ಸ್ವಾತಂತ್ರ್ಯೋತ್ಸವದ ಈ ಸಮಯದಲ್ಲಿಯೂ ಸಹ ಎದ್ದು ಕಾಣುತ್ತಿದೆ, ಮಣಿಪುರದ ಹಿಂಸಾಚಾರ ಇನ್ನೂ ಜೀವಂತವಾಗಿದೆ, ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದು ಸಾಮೂಹಿಕ ಅತ್ಯಾಚಾರ, ಹಲ್ಲೆ ಬೆಂಕಿ, ಸಾವು ನೋವುಗಳು, ಗಲಬೆಗಳು ಸಾಮಾನ್ಯವಾಗಿದೆ, ಇಲ್ಲಿ ಸಾಮಾನ್ಯ ಜನರಾದ ನಾವು ನಮ್ಮ ಅಭಿಪ್ರಾಯಗಳನ್ನು ಬರಹ, ಅಥವಾ ಮಾತುಗಳ ಮೂಲಕ ವ್ಯಕ್ತಪಡಿಸಬಹುದು, ಆದರೆ ಅದು ಆಳುವ ಸರಕಾರದ ವೈಪಲ್ಯ ಎನ್ನಬಹುದಲ್ಲವೇ., ಅಧಿಕಾರದ ಸ್ಥಾನದಲ್ಲಿ ಇರುವವರು ಸಹ ಅಸಹಾಯಕರಾದರೆ ಇಲ್ಲಿ ಅಧಿಕಾರ ನಿಷ್ಪ್ರಯೋಜನೆ..! ಇನ್ನೆಲ್ಲಿಯ ಸ್ವಾತಂತ್ರ್ಯದ ಮಾತು..
ರಾಜಕೀಯವಾಗಿ ಹಿಂಸಾಚಾರ, ಚುನಾವಣೆಗಳಲ್ಲಿ ಹೊಡೆದಾಟ, ಅಧಿಕಾರ ದುರುಪಯೋಗ, ದೇಶದ ಭವಿಷ್ಯಕ್ಕೆ ಹಾನಿಕಾರಿಯಾದರೆ ಆ ದೇಶದ ಭವಿಷ್ಯ ಏನು?
ಮೇಲ್ನೋಟಕ್ಕೆ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಕೊಂಡರು ಜನಜೀವನದ ಸುಧಾರಣಾ ಮಟ್ಟ ಕುಸಿಯುತ್ತಿದೆ..
ಕೆಟ್ಟ ಚುನಾವಣಾ ವ್ಯವಸ್ಥೆ, ರಾಜಕೀಯ, ಪ್ರಜಾಪ್ರಭುತ್ವದ ನಿಜವಾದ ಆಶಯಗಳ ಒಡೆದು ಹಾಕುತ್ತಿದೆ, ಸೂಕ್ಷ್ಮ ಹಾಗು ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸ್ವಾತಂತ್ರ್ಯ ಪಡೆದ ಕಳೆದ 75 ವರ್ಷಗಳಲ್ಲಿ ನಮಗೆ ಸಿಕ್ಕ ನಿಜವಾದ ಸ್ವಾತಂತ್ರ್ಯದ ಅರ್ಥ ನಮಗೆ ಅರ್ಥ ಆಗಿದೆಯೇ.! ಸಾಮಾನ್ಯ ಜನರಾದ ನಾವು ಯಾವುದು ಸರಿ ಯಾವುದು ತಪ್ಪು ಎಂದು ನಮ್ಮ ಬದುಕಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ನಿರ್ಧರಿಸುವ ವಿವೇಚನೆ ನಮಗೆ ಸೇರಿರುತ್ತದೆ ಅಲ್ಲವೇ.! ಹಾಗಾದರೆ ಸ್ವಾತಂತ್ರ್ಯದ ನಿಜವಾದ ಸವಿ, ಆ ಅನುಭೂತಿಯನ್ನು ನಾವೆಲ್ಲಾ ಅನುಭವಿಸಬೇಕಲ್ಲವೆ.!
ರಾಜಶೇಖರ್. ಕೆ