ಅಂಕಣ ಬರಹ

ವತ್ಸಲಾ ಶ್ರೀಶ

ನಾವುಮರೆತ ಮಹಿಳಾ

ಸ್ವಾತಂತ್ರ್ಯ ಹೋರಾಟಗಾರರು

ಅಜ಼ೀಜುನ್ನೀಸಾ ಅಜ಼ೀಜ಼ುನ್ ಬಾಯಿ

ಅಜೀ಼ಜುನ್ನೀಸಾ ಅಥವಾ ಅಜೀಜುನ್ ಬಾಯಿ  ಉತ್ತರ ಪ್ರದೇಶದ ಕಾನ್ಪುರದ ಅತ್ಯಂತ ಸೌಂದರ್ಯವತಿಯಾದ ಹಾಗೂ ಪ್ರತಿಭಾವಂತ ತವಾಯಫ್‌ ಆ ಗಿದ್ದಳು.ತವಾಯಫ್ ಎಂದರೆ ನರ್ತಕಿ ಎಂದರ್ಥ.ಇವಳು ನೃತ್ಯದ ಜೊತೆಗೆ ಹಾಡನ್ನೂ ಕೂಡಾ ಹಾಡುತ್ತಿದ್ದಳು.  ಅಜೀ಼ಜುನ್ನೀಸಾ 1832 ರಲ್ಲಿ
ಲಕ್ನೋದಲ್ಲಿ ಜನಿಸಿದಳು. ಅವಳ ತಾಯಿ ಒಬ್ಬ ತವಾಯಫ್ ಆಗಿರುತ್ತಾಳೆ. ತಂದೆ ಹಾಡುಗಾರರಾಗಿರುತ್ತಾರೆ, ಅವಳು ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾಳೆ.  ತವಾಯಫ್ ಒಬ್ಬರ ಮನೆಯಲ್ಲಿ ಅವಳ ಪಾಲನೆ ಪೋಷಣೆ ನಡೆಯುತ್ತದೆ.. ಆಗ ನವಾಬರ ಆಡಳಿತ ಕುಸಿದಿತ್ತು .ಹಾಗೆಯೇ ತವಾಯಫ್ ಗಳ ಬದುಕೂ ದಿಕ್ಕೆಟ್ಟು ಹೋಗಿತ್ತು. ಹಾಗೆ ಅವರು ದೆಹಲಿಯಿಂದ ಅವಧ್ ಗೆ ಬರುತ್ತಾರೆ. ಅಲ್ಲಿ ಸಿಪಾಯಿಗಳನ್ನು ತಮ್ಮ ನಾಟ್ಯ ಹಾಗೂ ಸಂಗೀತದಿಂದ  ರಂಜಿಸಿ ತಮ್ಮ ಕೋಠಿಗಳನ್ನು ನಡೆಸುತ್ತಿದ್ದರು…      ಇಂದಿಗೆ ಎರಡು ನೂರು ವರ್ಷಗಳ ಹಿಂದೆ ತವಾಯಫ್ ಗಳು  ಎಂದರೆ ಉರ್ದು ಶಾಯರಿಗಳು, ನೃತ್ಯ ಕಲೆ, ಗಜಲ್ ಮುಂತಾದವುಗಳನ್ನು ಬಲ್ಲವರಾಗಿದ್ದರು. ತವಾಯಫ್ ಗಳ ಕೋಠಿಗಳು ಕಲೆಗಳ ಕೇಂದ್ರವಾಗಿತ್ತು.ಸಾಹಿತ್ಯಗಳೂ ರಚನೆಯಾಗುತ್ತಿದ್ದವು.ಮಾತುಕತೆ, ಉತ್ತಮ ವಿಚಾರಗಳ ಸಂವಾದಗಳಿರುತ್ತಿದ್ದವು.  ಅಜೀ಼ಜುನ್ನೀಸಾ ಹಲವು ಕಲೆಗಳನ್ನು ಬಲ್ಲವಳಾಗಿದ್ದಳು….,ರಾಜ ಮಹಾರಾಜರು, ನವಾಬರು ಜಮೀನ್ದಾರರು,ಅಂತಹ ತವಾಯಫ್ ಆಗಿದ್ದ ಅಜೀ಼ಜುನ್ನಿಸಾಳ ಆರಾಧಕರಾಗಿದ್ದರು. ಅವಳ ಮುಜರ ಕಥಕ್ ಅಲ್ಲದೆ ಹಲವಾರು ನೃತ್ಯ ಕಲೆಗಳಿಗೆ ಎಲ್ಲರೂ ಬೆರಗಾಗಿದ್ದರು.. ಆಗಿನ ಕಾಲದಲ್ಲಿ ತವಾಯಫ್ ಎಂದರೆ ಜನರು ಉನ್ನತ ಸ್ಥಾನದಲ್ಲಿ ನೋಡುತ್ತಿದ್ದರು. ತವಾಯಫ್ ಗಳು  ಶ್ರೀಮಂತ ವರ್ಗವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದರು.ಹಾಗೂ ಅವರ ಮಾತುಗಳಿಗೂ ಆಯಾಯ ಪ್ರದೇಶಗಳಲ್ಲಿ ಬೆಲೆ ಇರುತ್ತಿತ್ತು. ಆಗಿನ ಕಾಲದಲ್ಲಿ ಯಾರೂ ಅವರನ್ನು ಕೆಟ್ಟ ರೀತಿಯಿಂದ ಸಮಾಜದಲ್ಲಿ ಗುರುತಿಸುತ್ತಿರಲಿಲ್ಲ. ಇಂತಹ ತವಾಯಫ್ ಗಳು  ಹಿಂದುಸ್ಥಾನದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತಕ್ಕೆ ಕೊಡುಗೆ ಮಾತ್ರ ನೀಡುತ್ತಿದ್ದುದಲ್ಲದೆ ಸಮಯ ಬಂದಾಗ ದೇಶಕ್ಕಾಗಿ ತಮ್ಮಲ್ಲಿರುವ ಸಂಪತ್ತನ್ನೆಲ್ಲ ಧಾರೆ
ಎರೆದಿದ್ದಾರೆ. ಅದೂ ಅಲ್ಲದೆ ತಮ್ಮ ಪ್ರಾಣವನ್ನು ಕೂಡಾ ಬಲಿದಾನ ಮಾಡಿದ್ದಾರೆ. ಅಂತಹವರಲ್ಲಿ ಲಕ್ನೋದಿಂದ ಬಂದು ಕಾನ್ಪುರದಲ್ಲಿ ನೆಲೆಸಿ ತನ್ನ ಸೌಂದರ್ಯದಿಂದ, ಕಲೆಯಿಂದ, ದೇಶ ಭಕ್ತಿಯಿಂದ ಹೆಸರು ಮಾಡಿದ ಹೆಣ್ಣುಮಗಳು ಅಜೀ಼ಜುನ್ನಿಸಾ  ಅಥವಾ ಅಜೀಜುನ್ ಬಾಯಿ.. ಅವಳು ಎಷ್ಟು ಸುಂದರವಾಗಿ ಹಾಡುತ್ತಿದ್ದಳೋ ಅಷ್ಟೇ ಸುಂದರವಾಗಿ ನಾಟ್ಯವನ್ನೂ ಮಾಡುತ್ತಿದ್ದಳು. ಅವಳು ನೃತ್ಯ ಮಾಡುತ್ತಿದ್ದರೆ ಚಂದಿರನೇ ಧರೆಗಿಳಿದು  ಬಂದಂತೆನಿಸುತ್ತಿತ್ತು.ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಜೀಜುನ್ನೀಸಾಳಿಗೆ ನವಾಬರ ಅಥವಾ ಇಂಗ್ಲೀಷರ ಗುಲಾಮಳಾಗಿ ಇರಲು ಇಷ್ಟವಿರಲಿಲ್ಲ. ಆಗ ಅಲ್ಲಿ ವಾಜಿದ್ ಅಲಿ ಎಂಬ ನವಾಬನಿದ್ದ. ಅಜೀಜುನ್ನೀಸಾಳಿಗೆ ಬೇಕಿದ್ದರೆ ಅಲ್ಲಿ ಆಶ್ರಯ ಪಡೆದು ಮಹಾರಾಣಿಯಂತೆ ಬದುಕಬಹುದಿತ್ತು. ಆದರೆ ಅವಳಿಗೆ ಸ್ವತಂತ್ರವಾಗಿ ತನ್ನದೇ ಆದ ಕೋಠಿಯನ್ನು ನಡೆಸಬೇಕೆಂದಿತ್ತು. ಅದಕ್ಕಾಗಿ ಕಾನ್ಪುರಕ್ಕೆ ಬಂದು ನೆಲೆಸುತ್ತಾಳೆ. ಅಲ್ಲಿ ಭಾರತೀಯ ಸಿಪಾಯಿಗಳು ಬ್ರಿಟಿಷ್  ಸಿಪಾಯಿಗಳೆಲ್ಲರೂ ಮನರಂಜನೆಗಾಗಿ ಅವಳ ಕೋಠಿಗೆ ಬರುತ್ತಿದ್ದರು. ಅದೊಂದು ಸ್ವರ್ಗದಂತಹ ಜಾಗವಾಗಿತ್ತು.. ಆದರೆ ಅದೊಂದು ದಿನ ಅವಳು ಖಡ್ಗವನ್ನು ಹಿಡಿದು ಸಿಪಾಯಿಯಾಗುವ ಕಾಲ ಬಂದಿತು. ಕಾನ್ಪುರದ ಹಲವಾರು ಕೋಠಿಗಳು ಸ್ವಾತಂತ್ರ್ಯ ಹೋರಾಟಗಾರರು ಒಬ್ಬರನ್ನೊಬ್ಬರು ಸಂಧಿಸುವ ಜಾಗವಾಯಿತು. ಬ್ರಿಟಿಷರಿಗೆ ಅದೆಷ್ಟು ಇವರ ಸಂಗೀತ ನೃತ್ಯ ಕಲೆಗಳು ಅರ್ಥವಾಗುತ್ತಿತ್ತೋ ಅವಳಿಗೆ ಗೊತ್ತಿರಲಿಲ್ಲ..ಅವಳಿಗೆ ಅದು ಬೇಕಾಗೂ ಇರಲಿಲ್ಲ…ಇಂಗ್ಲಿಷರು ಕೋಠಿಗೆ ಬರುವಾಗ ಹಲವಾರು ವಿಷಯಗಳನ್ನು ಹೊತ್ತು ತರುತ್ತಿದ್ದರು.ಅಲ್ಲಿ ಅವರವರೊಳಗೆ ಅದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು..   ಅವಳಿಗೆ ಎಲ್ಲವೂ ಅರ್ಥವಾಗದಿದ್ದರೂ ಅವರ ಚಟುವಟಿಕೆಗಳಿಂದ ಅವರ ಹಾವಭಾವ ನಡವಳಿಕೆಗಳಿಂದ ಏನು‌ ನಡೆಯುತ್ತಿರಬಹುದು ಎಂದು ತಿಳಿದುಕೊಳ್ಳುವ ಚಾಣಾಕ್ಷಳಾಗಿದ್ದಳು.ಅದನ್ನು ತನ್ನವರಿಗೆ ತಿಳಿಸುತ್ತಿದ್ದಳು.  1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಗಳು ಇಂತಹ ಶ್ರೀಮಂತವಾದ ಕೋಠಿಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ನಿಶ್ಚಯಿಸಿದರು.  ಪ್ರತಿ ತಿಂಗಳೂ ಸರ್ಕಾರಕ್ಕೆ ತೆರಿಗೆ ಕಟ್ಟಬೇಕೆಂಬ ಶರತ್ತು ವಿಧಿಸಿದರು…ಮುಂದೆ ಬ್ರಿಟಿಷರ ಆಡಳಿತದಲ್ಲಿ ಕೋಠಿಗಳು  ಗೌರವವನ್ನು ಕಳೆದುಕೊಂಡವು…ನವಾಬರೂ ತಮ್ಮ  ನೆಲೆಗಳನ್ನು ಕಳೆದುಕೊಂಡರು.ಅಷ್ಟು ದಿನ ಅವರನ್ನೆಲ್ಲಾ ರಂಜಿಸಿದ  ಗೌರವಯುತವಾದ ಕೋಠಿಗಳಿಗೆ ಆಂಗ್ಲರು ಯಾವಾಗ ಬೇಕಾದರೂ ನುಗ್ಗಿ ಕ್ರಾಂತಿಕಾರಿಗಳು ಬಚ್ಚಿಡಲ್ಪಟ್ಟಿದ್ದಾರೆಯೇ ಎಂದು ಹುಡುಕಾಡುತ್ತಿದ್ದರು.. ಅವರು ಅಪ್ಪಣೆಯಿಲ್ಲದೆ ಯಾವಾಗಬೇಕಾದರೂ ಪ್ರವೇಶಿಸಿ ತಮ್ಮ ದರ್ಪ ತೋರಿಸುತ್ತಿದ್ದಾಗ, ಯಾರ ದಬ್ಬಾಳಿಕೆಯನ್ನೂ ಸಹಿಸದ ಅಜೀಜುನ್ನೀಸಾಳ ಮೈಯೆಲ್ಲಾ ಉರಿಯುತ್ತಿತ್ತು.ಒಮ್ಮೆ ಅವಳು ಅವರನ್ನು ವಿರೋಧಿಸಿದಾಗ ಒಬ್ಬ ಅಧಿಕಾರಿ ಅವಳ ಬಗ್ಗೆ, ಕೋಠಿಯ ಬಗ್ಗೆ, ಅವಳ ಕಲೆಯ ಬಗ್ಗೆ ಕೇವಲವಾಗಿ ಮಾತನಾಡುತ್ತಾನೆ.ಎಲ್ಲವನ್ನೂ ಸಹಿಸುತ್ತಿದ್ದ ಅವಳು ತನ್ನ ಕಲೆಯ ಬಗ್ಗೆ ಇಂಗ್ಲಿಷ್ ಅಧಿಕಾರಿಗಳು ಅಷ್ಟು ಕೀಳಾಗಿ ಮಾತನಾಡಿದಾಗ ಕುಸಿದುಹೋದಳು…ಒಳಗೊಳಗೇ ಕುದಿಯತೊಡಗಿದಳು..ಇದಕ್ಕೆ ಏನಾದರೂ ಉತ್ತರ ನೀಡಲೇ ಬೇಕೆಂದು ತನ್ನೊಳಗೆ ಸಂಕಲ್ಪ ತೊಡುತ್ತಾಳೆ..ಹಾಗೂ ಮುಂದೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾಳೆ.  ಅಜೀ಼ಜುನ್ನೀಸಾ ಮಾತ್ರವಲ್ಲದೆ ಆಶಾದೇವಿ,  ಭಗವತಿ ದೇವಿ, ಭಕ್ತಾವರಿ ದೇವಿ, ಇಂದರ್ ಕೌರ್, ಝಮೀಲ ಖಾನ್, ರಹಿಮಿ, ಮನುಕೌರ್, ರಾಜ್ ಕೌರ್, ಶೋಭನಾ ದೇವಿ, ಉಂಗಾ ಇವರೆಲ್ಲಾ ಕೈಯಲ್ಲಿ ಖಡ್ಗ ಹಿಡಿದು ರಣಭೂಮಿಗೆ ಇಳಿದು ಪ್ರಾಣ ತೊರೆದ ತವಾಯಫ್ ಗಳಾಗಿದ್ದರು. ಇದರಲ್ಲಿ ಅಸ್ ಗರಿ ಬೇಗಂ ಅವರನ್ನು ಬಿಟ್ಟು ಉಳಿದವರೆಲ್ಲರೂ ಮೂವತ್ತರ ಆಸು ಪಾಸಿನಲ್ಲಿ ನೇಣು ಶಿಕ್ಷೆಗೆ ಒಳಪಟ್ಟವರು.1821ಲ್ಲಿ ಜನಿಸಿದ ಅಸ್ಗರೀ ಬೇಗo ಅವರನ್ನು ಸೆರೆ ಹಿಡಿದು 1857ರಲ್ಲಿ ಜೀವಂತವಾಗಿ ದಹನ ಮಾಡುತ್ತಾರೆ. ಅಲ್ಲದೆ 1857ರಲ್ಲಿ ಹಬೀಬಾ ಬೇಗಮ್ ಜೊತೆಗೆ 11 ಜನ ಇತರ ಹೆಂಗಸರನ್ನು ಇಂಗ್ಲೀಷರು ನೇಣಿಗೆ ಹಾಕುತ್ತಾರೆ..  ಬ್ರಿಟಿಷರನ್ನು ಭಾರತದಿಂದ ಓಡಿಸಬೇಕೆಂಬ ಕಿಚ್ಚು ಆಗ ಎಲ್ಲೆಡೆಲೆಯಲ್ಲೂ ಹಬ್ಬಿತ್ತು. ಹಾಗೆಯೇ ಕೋಠಿಗಳೂ ಕೂಡ ಬ್ರಿಟಿಷರನ್ನು ಹೊಡೆದೋಡಿಸಲು ತಂತ್ರ ರೂಪಿಸುವ ಕೇಂದ್ರಗಳಾಗಿದ್ದವು.. ಕ್ಯಾಪ್ಟನ್ ಮೌಂಟ್ ಬ್ರೇಕಿ ಬರೆದ ಪುಸ್ತಕದಲ್ಲಿ ಅಜೀಜುನ್ನೀಸಾಳ ಮನೆಯಲ್ಲಿ ಕ್ರಾಂತಿಕಾರಿಗಳ ಸಭೆ ನಡೆಯುತ್ತಿತ್ತು ಎಂಬ ಉಲ್ಲೇಖವಿದೆ. ಅಲ್ಲದೆ ಕೋಠಿಗಳು  ಕ್ರಾಂತಿಕಾರಿಗಳ ಅಡಗುದಾಣವಾಗಿತ್ತು. ಕುದುರೆ ಸವಾರಿಯ ಸಿಪಾಯಿಗಳ ಒಂದು ತಂಡವಿತ್ತು. ಅದು ಯಾವಾಗಲೂ ಇವಳ ಕೋಠಿಗೆ ಬರುತ್ತಿತ್ತು. ಅದರಲ್ಲಿ ಒಬ್ಬ ಶಂಸುದ್ದೀನ್ ಎನ್ನುವವನ ಮೇಲೆ ಅಜೀ಼ಜ್ ನ್ನೀಸಾಳಿಗೆ ಪ್ರೇಮ ಉಂಟಾಗಿತ್ತು. ಅವಳು ಅವರಿಗೆಲ್ಲಾ ಬ್ರಿಟಿಷರ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಿದ್ದಳು.. ಅವಳ ಗೂಢಚರ್ಯೆ ಕೆಲಸ ಅಪಾಯದ್ದಾಗಿತ್ತು. ರಣರಂಗದಲ್ಲಿಯಾದರೆ ಹೋರಾಡಲು ಜೊತೆಗೆ ಸೈನಿಕರ ದಂಡು ಇರುತ್ತದೆ. ಶರೀರ ಗಳಿಗೆ ಕವಚಗಳು ಇರುತ್ತದೆ. ಆತ್ಮ ರಕ್ಷಣೆಗೆ ಆಯುಧವಿರುತ್ತದೆ.  ಆದರೆ ಅಜೀಜುನ್ನೀಸಾ ಮಾಡುತ್ತಿದ್ದ ಕೆಲಸ ತುಂಬಾ ಅಪಾಯಕಾರಿಯದ್ದಾಗಿತ್ತು.ಇವಳು ನಿರಾಯುಧಳಾಗಿ ಬ್ರಿಟಿಷರ ಕಚೇರಿಗಳಿಗೆ ಯಾವುದಾದರೂ ನೆಪದೊಂದಿಗೆ ಹೋಗಿ ಅವರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಳು. ಹಾಗೆಯೇ ಒಮ್ಮೆ ಅವಳಿಗೆ ಬ್ರಿಟಿಷರ ಕ್ಲಬ್ ನಿಂದ ಕರೆ ಬರುತ್ತದೆ. ಏಕೆಂದರೆ ಹಿಂದಿನ ವರ್ಷ ಅವಳ ಕಾರ್ಯಕ್ರಮ ತುಂಬಾ ಅಧಿಕಾರಿಗಳನ್ನು ಸೆಳೆದಿತ್ತು. ಅವಳು ಅಲ್ಲಿಗೆ ಹೋಗಲು ನಿರ್ಧರಿಸಲಾಗುತ್ತಾಳೆ.ತನ್ನ ಸೌಂದರ್ಯವನ್ನು ದೇಶಕ್ಕಾಗಿ ಅಸ್ತ್ರ ಮಾಡಿಕೊಂಡಳು. ಇಂಗ್ಲಿಷ್ ಅಧಿಕಾರಿಯೊಬ್ಬನನ್ನು  ಕಣ್ಣಿನಿಂದಲೇ ಸೆಳೆದು ಕ್ಲಬ್ಬಿನ ಹೊರಗೆ ಬರುವಂತೆ ಸನ್ನೆ ಮಾಡುತ್ತಾಳೆ. ಅವಳನ್ನು ಹಿಂಬಾಲಿಸಿದ ಬ್ರಿಟಿಷ್ ಅಧಿಕಾರಿ ಹೊರಗೆ ಬಂದ ಕೂಡಲೇ ಶಂಸುದ್ದೀನ್ ಅವನನ್ನು ಮುಗಿಸಿ ಬಿಡುತ್ತಾನೆ. ಕ್ರಾಂತಿಕಾರಿಗಳು ತಮ್ಮ ಆಸುಪಾಸಿಗೇ ತಲುಪಿದ್ದಾರೆ ಎಂದು ಬ್ರಿಟಿಷರಿಗೆ ಆಗ ಮನದಟ್ಟಾಯಿತು.. ಆದರೆ ಇದರ ಹಿಂದೆ ಅಝೀಜುನ್ನಿಸಳ ಕೈವಾಡವಿದೆಯೆಂದು  ಅವರಿಗೆ ಗೊತ್ತಾಗಲಿಲ್ಲ. ಶಂಸುದ್ದೀನ್ ಹಾಗೂ ಅಜೀ಼ಜುನ್ನೀಸಾ ಆಗಾಗ ಭೇಟಿಯಾಗುತ್ತಿದ್ದರು.ಅವರಿಬ್ಬರ  ಪ್ರೇಮ ಕಥೆ ಆಗಿನ ಕಾಲದಲ್ಲಿ ಎಲ್ಲರ ಬಾಯಿಯಲ್ಲಿಯೂ ಸುಂದರ ಪ್ರೇಮ ಕಥೆಯಾಗಿ ಓಡಾಡುತ್ತಿತ್ತು.

ಜೂನ್ 1 ,1857ರಂದು ನಾನಾ ಸಾಹೇಬನ ನೇತೃತ್ವದಲ್ಲಿ ಗಂಗಾ ನದಿಯ ಮಧ್ಯದಲ್ಲಿ ದೋಣಿಗಳಲ್ಲಿ ಕುಳಿತು ಒಂದು ಸಭೆ(ಮಾತುಕತೆ) ನಡೆಯುತ್ತದೆ. ಮಾತುಕತೆಯ ನಂತರ ಗಂಗೆಯ ನೀರನ್ನು ಹಿಡಿದು ಅವರೆಲ್ಲರೂ ಬ್ರಿಟಿಷರನ್ನು ಹೊಡೆದೋಡಿಸುವ ಪ್ರತಿಜ್ಞೆ ಮಾಡುತ್ತಾರೆ. ಆ ಸಭೆಯಲ್ಲಿ ಅಜೀ಼ಜುನ್ನೀಸಾ ಕೂಡ ಇದ್ದಳು ಎನ್ನಲಾಗಿದೆ. ಅಂದು ಅಜೀಜುನ್ನೀಸಾಳನ್ನು ಭೇಟಿಯಾದ ಶಂಸುದ್ದೀನ್ ಅವಳೊಡನೆ ಇನ್ನು ಕೆಲವೇ  ದಿನಗಳಲ್ಲಿ ಬ್ರಿಟಿಷರು ಇಲ್ಲಿಂದ ಓಡುತ್ತಾರೆ ಎನ್ನುತ್ತಾನೆ. ಅವಳು ತಾತ್ಯಾ ಟೋಪೆ ಹಾಗೂ ನಾನಾ ಸಾಹೇಬ ನ ಶೌರ್ಯದ ಕಥೆಗಳನ್ನು ಶಂಸುದ್ದೀನ ನಿಂದ ಕೇಳಿದ್ದಳು . ಅವರಿಂದ ಪ್ರಭಾವಿತಳಾಗಿದ್ದಳು.ಅವಳೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗುತ್ತಾಳೆ. ಬ್ರಿಟಿಷರೊಂದಿಗೆ ಹಾಗೆಯೇ ನೇರವಾಗಿ ಹೋರಾಡಿ ಗೆಲ್ಲಲು ಸಾಧ್ಯವಿಲ್ಲವೆಂದು ಯೋಚಿಸಿದ ಅವಳು ತವಾಯಫ್ ಗಳನ್ನೆಲ್ಲಾ  ಸೇರಿಸಿ ಒಂದು ಗುಂಪು ಕಟ್ಟುತ್ತಾಳೆ.. ಅದಕ್ಕೆ ಮಸ್ತಾನಿ ಟ್ರೂಪ್ ಎಂದು ಹೆಸರಿಡುತ್ತಾಳೆ.. ಅವರೆಲ್ಲರೂ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು. ಗೂಢಚರ್ಯೆ ಕೆಲಸ ಮಾಡುತ್ತಿದ್ದರು.   ಅಜೀಜುನ್ನೀಸಾ ಗಾಯಗೊಂಡ ಸಿಪಾಯಿಗಳಿಗೆ ತನ್ನ ಸಂಗಡಿಗರೊಂದಿಗೆ ಶುಶ್ರೂಷೆ ಮಾಡುತ್ತಿದ್ದರು..  ಅವರಿಗೆ ಧೈರ್ಯ ತುಂಬುತ್ತಿದ್ದಳು. ನಂತರ ಅವಳು ಸ್ವತಃ ಕತ್ತಿ  ವರಸೆ ಕಲಿಯುತ್ತಾಳೆ. ಹಾಗೂ ತನ್ನ ಗುಂಪಿನ ಎಲ್ಲಾ ತವಾಯಫ್ ಗಳಿಗೂ ಕತ್ತಿವರಸೆಯ ತರಬೇತಿ ಕೊಡುತ್ತಾಳೆ. ನಾನಾ ಸಾಹೇಬನ ಸೈನ್ಯ ಮೇಜರ್ ಜನರಲ್ ಮಿಲರ್ ನ ಕಚೇರಿಗೆ ಮುತ್ತಿಗೆ ಹಾಕುವಾಗ ಮೊದಲ ದಿನದಿಂದಲೇ ಅಜೀಜ್ ನ್ನೀಸಾ ಅವನ‌ ಸೈನ್ಯ ದ ಜೊತೆ  ಇದ್ದಳು ಎನ್ನಲಾಗುತ್ತದೆ. 21 ದಿನಗಳ ಕಾಲ ನಡೆದ ಯುದ್ಧದಲ್ಲಿ ಅಜೀಜುನ್ನೀಸಾ ಸೈನಿಕರ ಪೋಷಾಕಿನಲ್ಲಿ ಶತ್ರುಗಳೊಡನೆ ಸೆಣಸಾಡಿದಳು. ಟ್ರೆವಿಲೆನ್ಸ್ ರೆಕಾರ್ಡ್,ನಾನಕ್ ಚಂದ್ ರೆಕಾರ್ಡ್ ಜಾನಕಿ ಪ್ರಸಾದ್ ರೆಕಾರ್ಡ್ , ವಿ.ಡಿ. ಸಾವರ್ಕರ್ ರೆಕಾರ್ಡ್,ಅರ್ಕಾವಿಸ್ ಡೆಪಾಸಿಟ್ ನಲ್ಲಿ ಅವಳು ನಾನಾ ಸಾಹೇಬನ ಜೊತೆ ಹೋರಾಟದಲ್ಲಿ ಭಾವಹಿಸಿದ್ದಳು ಎಂಬುದಕ್ಕೆ ದಾಖಲೆಗಳು ಸಿಗುತ್ತವೆ… ಮೊದಲ ವಿಜಯದ ವಿಜಯೋತ್ಸವ ದ ಸಂದರ್ಭದಲ್ಲಿ ನಾನಾಸಾಹೇಬನ ಸೈನದೊಂದಿಗೆ ಅಜೀ ಜುನ್ನೀಸಾ ಕೂಡ ಇದ್ದಳು. ಅವಳು ಒಬ್ಬ ನರ್ತಕಿಯಾಗಿದ್ದರೂ ಅವಳನ್ನು ಸೈನ್ಯದ ಪ್ರತಿಯೊಬ್ಬ ಸಿಪಾಯಿಯೂ ಪ್ರೀತಿ ಗೌರವದಿಂದ ಕಾಣುತ್ತಿದ್ದರು‌. ಏಕೆಂದರೆ ಅವಳು ತನ್ನ ಸೌಂದರ್ಯ, ಪ್ರೀತಿ,ಕಲೆ, ಮಮತೆಯನ್ನು ಶ್ರೀಮಂತಿಕೆಕೆ ಪಡೆಯಲು ಮಾರಾಟಕ್ಕಿಟ್ಟಿರಲಿಲ್ಲ. ಅಂದಿನ ಸಮಯದಲ್ಲಿ ತವಾಯಫ್ ಗಳಿಗೆ ಹಾಗೂ ಸಿಪಾಯಿಗಳಿಗೆ ಲಾಭ ಪಡೆಯುವುದಾದರೆ ಇಂಗ್ಲಿಷರಿಂದ ತುಂಬಾ ಲಾಭ ಪಡೆಯಬಹುದಿತ್ತು. ಆದರೆ ಅವರೆಲ್ಲರೂ ಅದನ್ನು ತೊರೆದು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಲು ಎದೆ ತಟ್ಟಿ ನಿಂತರು. ಬಿಸಿಲ‌ಬೇಗೆ, ಗುಂಡಿನ ಮಳೆ ಹಾಗೂ ಭಾರತೀಯರ ಕಿಚ್ಚು ಇವುಗಳನ್ನು ಬ್ರಿಟಿಷ್ ಸೈನ್ಯ ಎಷ್ಟು ದಿನವಾದರೂ ಸಹಿಸೀತು… ಕೊನೆಗೊಮ್ಮೆ  ಮೇಜರ್ ಜನರಲ್ ಹ್ಯೂ ವ್ ವೀಲರ್ ಗೆ
ಬಿಳಿ ಬಾವುಟ ಹಿಡಿಯಬೇಕಾದ ಪರಿಸ್ಥಿತಿ ಬಂದೊದಗಿತು. ನಾನಾ ಸಾಹೇಬ್ ಅವರಿಗೆ ಕಾನ್ಪುರ ಪಟ್ಟಣ ಬಿಟ್ಟು ಓಡುವ ಅವಕಾಶ ಮಾತ್ರ ಉಳಿಸಿದ. ಅವಮಾನದಿಂದ ಬಾಗಿದ ತಲೆ ಹಾಗೂ ಸೋತ ಕಾಲುಗಳಿಂದ ಗಂಗಾ ನದಿ ತೀರದ ಕಡೆಯಿಂದ ಬ್ರಿಟಿಷರು ಓಡುತ್ತಿದ್ದರೆ ಆ ದೃಶ್ಯವನ್ನು ನೋಡಲು ಇಡೀ ಕಾನ್ಪುರದ ಜನತೆ ಹೆಮ್ಮೆಯಿಂದ ಬೀದಿಯಲ್ಲಿ ನೆರೆದಿತ್ತು. ಅಂದು ಬ್ರಿಟಿಷರನ್ನು ಓಡಿಸುವ ಆ ರಣರಂಗದಲ್ಲಿ ಅಜೀಜುನ್ ಬಾಯಿ ಒಂದು ಕೈಯಲ್ಲಿ ಕುದುರೆಯ ಹಗ್ಗವನ್ನು ಹಿಡಿದು ಇನ್ನೊಂದು ಕೈಯಲ್ಲಿ ಕತ್ತಿ ಜಳಪಿಸುತ್ತಾ ರಣರಂಗ ತುಂಬಾ ಓಡಾಡುತ್ತಿದ್ದಳು. ಆ ಯುದ್ಧವು ಜೂನ್ 5 ರಿಂದ ಹಿಡಿದು ಜೂನ್ 25 ರವರೆಗೆ ನಡೆಯಿತು. ಆದರೆ ಪಡೆದಿದ್ದ ಆ ವಿಜಯ ತುಂಬಾ ದಿನಗಳ ಕಾಲ ಇರಲಿಲ್ಲ. ಈಸ್ಟ್ ಇಂಡಿಯಾ ಕಂಪನಿ ದೊಡ್ಡ ಸೈನ್ಯದೊಂದಿಗೆ ಬಂದು ಪುನಃ ಯುದ್ಧ ಮಾಡಿ ಸೋತ ಜಾಗವನ್ನು ವಶಪಡಿಸಿಕೊಳ್ಳುತ್ತದೆ. ಆಗ ನಾನಾ ಸಾಹೇಬ ನೇಪಾಳಕ್ಕೆ ಓಡಿ ಹೋಗುತ್ತಾನೆ. ತಾತ್ಯಾ ಟೋಪಿ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಜೊತೆ ಸೇರಿಕೊಳ್ಳುತ್ತಾನೆ. ಬ್ರಿಟಿಷ್ ಸೈನ್ಯವು ಆ ಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ಕ್ರಾಂತಿಕಾರಿಗಳಿಗಾಗಿ ಮನೆ ಮನೆ ಹುಡುಕಾಡುತ್ತಾರೆ. ಸಿಕ್ಕಿದವರಿಗೆ ಅಮಾನುಷ ಹಿಂಸೆ ನೀಡಲಾಗುತ್ತಿತ್ತು. ಸಾವಿರಾರು ಜನರು ಸಾವಿನ ಮನೆ ಸೇರಿದರು. ಕೊನೆಗೂ ಒಂದು ದಿನ ಅಜೀ಼ ಜುನ್ನೀಸಾ ಸೆರೆ ಸಿಕ್ಕಿದಳು. ಅವಳನ್ನು ಮೇಜರ್ ಹೆನ್ರಿ ಹೆವ್ ಲಾಕ್ ಮುಂದೆ ನಿಲ್ಲಿಸಲಾಯಿತು. ಅವಳ ಸೌಂದರ್ಯ ಹಾಗೂ ಪರಾಕ್ರಮವನ್ನು ಕಂಡು ಹೆನ್ರಿ ಮಂತ್ರ ಮುಗ್ಧನಾಗುತ್ತಾನೆ. ತಪ್ಪೊಪ್ಪಿಕೊಳ್ಳುವಂತೆ, ಹಾಗೂ ಹೋರಾಟದಲ್ಲಿ ಇದ್ದವರು ಯಾರೆಂದು ತಿಳಿಸಿದರೆ ಬಿಡುಗಡೆಗೊಳಿಸಲಾಗುವುದು ಎನ್ನುತ್ತಾನೆ. ಹಾಗೂ ಅವಳ ಕೋಟಿಯನ್ನು ನಡೆಸಲೂ ಅನುಮತಿ ನೀಡುತ್ತೇನೆ ಎಂಬುದಾಗಿಯೂ ಹೇಳುತ್ತಾನೆ. ಅವಳು ನಗುತ್ತಾ ನೀನು ನನ್ನ ನಾಲಿಗೆಯನ್ನು ಸೀಳಿದರೂ, ಕಿವಿಯನ್ನು ತುಂಡರಿಸಿದರೂ, ಶರೀರವನ್ನು ಛಿದ್ರಗೊಳಿಸಿದರೂ ನಾನು ಅವರ ಹೆಸರುಗಳನ್ನು ಹೇಳಲಾರೆ ಎನ್ನುತ್ತಾಳೆ. ಕೋಪಗೊಂಡ ಹೆನ್ರಿ ಹ ವ್ಲಾಕ್ ಅವಳನ್ನು ಬಂದೂಕಿನ ಬಾಯಿಗೆ ಕಟ್ಟಲು ಹೇಳುತ್ತಾನೆ. ಹಾಗೆ ಬಂದೂಕಿಗೆ ಬಂಧಿಸಲ್ಪಟ್ಟ ಅಜೀ಼ಜುನ್ನೀಸಾಳ ಕೆನ್ನೆಗೆ ಹೊಡೆಯುತ್ತಾನೆ. ಹಾಗೂ ಭಾರತದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಕೂಡಲೇ ಅವಳನ್ನು ಬಂದೂಕಿನಿಂದ ಸಿಡಿಸಲಾಗುತ್ತದೆ (ಕೆಲವು ಮೂಲಗಳ ಪ್ರಕಾರ  ಅವಳು ಕಾನ್ಪುರ ಬಿಟ್ಟು ಹೋದಳು ಎಂಬ ಉಲ್ಲೇಖವೂ ಇದೆ)…ಈಗಲೂ ಕಾನ್ಪುರದಲ್ಲಿ  ಅವಳ ಹೋರಾಟ, ಪರಾಕ್ರಮದ ಬಗೆಗಿನ ಸಾಲುಗಳು ಹಲವರ ಬಾಯಿಯಲ್ಲಿ ಓಡಾಡುತ್ತಿದೆ..ಸ್ವಾತಂತ್ರ್ಯ ಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿದ ದೇಶಪ್ರೇಮಿಗಳೆಂಬ ನಕ್ಷತ್ರಗಳ  ಸಾಲಿನಲ್ಲಿ ಅಜೀಜುನ್ನೀಸಾ ಕೂಡಾ ನಕ್ಷತ್ರವಾದಳು…
(ಆಧಾರ:ಎಪಿಕ್ ಚಾನಲ್ & ಅಂತರ್ಜಾಲ)


ವತ್ಸಲಾ ಶ್ರೀಶ

ಶ್ರೀಮತಿ ವತ್ಸಲಾ ಶ್ರೀಶ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಎಂಬಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ಇವರ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು.ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ಸರ್ವೋದಯ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ಈಗ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೊಡಗಿನ ಶ್ರೀಶಕುಮಾರ್ ಅವರನ್ನು ವಿವಾಹವಾದ ನಂತರ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ವತ್ಸಲಾ ಶ್ರೀಶರವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ ,ಕವನ, ಲೇಖನ, ಷಟ್ಪದಿಗಳು,ಇತರ ಛಂದೋಬದ್ಧ ರಚನೆಗಳು, ವಿಮರ್ಶೆ,ಹಾಯ್ಕು,ಗಝಲ್ ಮುಂತಾದವುಗಳನ್ನು ರಚಿಸುತ್ತಾರೆ. ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ,೨೦೨೩ ರ ಬನವಾಸಿಯ ಕದಂಬೋತ್ಸವ ಸೇರಿ ಹೊರಜಿಲ್ಲೆಗಳ ಹಾಗೂ ಜಿಲ್ಲೆಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ.೨೦೨೧ ರಲ್ಲಿ ಇವರ ಕವನ ಸಂಕಲನ ಭ್ರಾಜಿತ – “ಬೆಳಕಿನಕಡೆಗೊಂದು ಪಯಣ” ಬಿಡುಗಡೆಯಾಗಿದ್ದು ಜನಮನ್ನಣೆ ಪಡೆದಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.ಇವರು ಬರೆಯುವ ನ್ಯಾನೋ ಕತೆಗಳು ಜನಪ್ರಿಯತೆ ಗಳಿಸಿವೆ.ವತ್ಸಲಾ ಶ್ರೀಶ ಇವರು ‘ವಿಶ್ರುತಾತ್ಮ’ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಹಾಗೂ ‘ತಪಸ್ಯಾ’ ಕಾವ್ಯನಾಮದೊಂದಿಗೆ ಗಝಲ್ ಗಳನ್ನು ರಚಿಸುತ್ತಾರೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಗಜ಼ಲ್ ಕೃತಿಯು ಕೊಡಗಿನ‌ ಮೊದಲ‌ ಗಜ಼ಲ್ ಕೃತಿಯಾಗಿ ಹೊರಬಂದಿದೆ.

Leave a Reply

Back To Top