ಕೆ. ಎನ್. ಚಿದಾನಂದ ಕ್ವಿಟ್ ಇಂಡಿಯಾ ಚಳುವಳಿ : ಒಂದು ಅಪರೂಪದ ಅಧ್ಯಾಯ

ಕೆ. ಎನ್. ಚಿದಾನಂದ

ಕ್ವಿಟ್ ಇಂಡಿಯಾ ಚಳುವಳಿ :

ಒಂದು ಅಪರೂಪದ ಅಧ್ಯಾಯ

ಭಾರತವೆಂದರೆ ಬರಿ ನೆಲವಲ್ಲ ಇದು ಪುಣ್ಯದ ಭೂಮಿ. ಇದು ಕರ್ಮಭೂಮಿ. ಸಿಂಧೂವಿನಿಂದ ಸೇತುವಿನ ವರೆಗೆ ಹರಡಿರುವ ವಿಶಾಲ ಭೂಮಿ ಭಾರತ. ವಿಶ್ವದಲ್ಲಿ ಬೇರೆಲ್ಲಿಯೂ ಕಾಣಲಾಗದ ವಿದ್ವತ್ಪೂರ್ಣ ನೆಲ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ದೇವಾನು ದೇವತೆಗಳು ಜನಿಸಲು ಇಚ್ಚಿಸುವ ದೈವನೆಲ ನಮ್ಮ ಭಾರತ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಾಡು ಭಾರತ. ಅನಾದಿ ಕಾಲದ ವಿಶ್ವದ ಸಿರಿವಂತ ನಾಡು ನಮ್ಮ ಭಾರತ. ಈ ಕಾರಣದಿಂದಾಗಿಯೇ ನಮ್ಮ ದೇಶವು ಪರಕೀಯರ ದಾಳಿಗೆ ಪದೇ ಪದೇ ತುತ್ತಾಯಿತು. ಮುನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಭಾರತವನ್ನು ಆಳ್ವಿಕೆ ಮಾಡಲು ದಕ್ಕಿಸಿಕೊಂಡ ಯಾರೋಪಿಯನ್ನರು ಪ್ರಮುಖರಾಗಿದ್ದು ಅದರಲ್ಲಿ ಬ್ರಿಟೀಷರ ಪಾತ್ರವೇ ಸಿಂಹಪಾಲು.

ನಮ್ಮದು ಭಾರತ ದೇಶವೆಂಬುದೇ ನಮ್ಮ ಹೆಮ್ಮೆ. ನಮ್ಮ ತಾಯಿ ಭಾರತ ಮಾತೆಯನ್ನು ಬ್ರಿಟೀಷರ ಸಂಕೋಲೆಯಿಂದ ಬಿಡಿಸಲು ಭಾರತೀಯರು ವಿಧವಿಧವಾದ ಪ್ರಯತ್ನಗಳನ್ನು ನಡೆಸಿದರು. ಮಹತ್ವಪೂರ್ಣ ಚಾರಿತ್ರಿಕ ಘಟನೆಗಳು ನಡೆದಿವೆ. ಅಂತಹ ಘಟನೆಗಳಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿ ಅತಿ ಮುಖ್ಯ ಘಟ್ಟವಾಗಿದ್ದು , ಅದರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಅತೀ ಪ್ರಮುಖ ಘಟನೆಯಾಗಿದೆ.

1942 ರ ಆಗಸ್ಟ್ 8 ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸವ ನಿರ್ಣಯವನ್ನು ಕೈಗೊಂಡಿತು. ಬ್ರಿಟಿಷರು ಭಾರತವನ್ನು ಬಿಟ್ಟುತೊಲಗುವುದು ಅತೀ ತುರ್ತಾಗಿ ನಡೆಯಬೇಕಾದ ಕಾರ್ಯ ಎಂದು ಘೋಷಣೆ ಮಾಡಲಾಯಿತು. ಗಾಂಧೀಜಿಯವರು “ಮಾಡು ಇಲ್ಲವೆ ಮಡಿ ” ಎಂಬ ಧೈಯವಾಕ್ಯವನ್ನು ಜನತೆಯ ಮುಂದಿಟ್ಟರು. ಇದನ್ನು ಒಪ್ಪಿಕೊಂಡ ಸಹಸ್ರ ಸಹಸ್ರ ಜನರು ಬ್ರಿಟೀಷರ ವಿರುದ್ಧ ಕಾರ್ಯತತ್ಪರರಾದರು.

ಈ ಕಾರಣದಿಂದಾಗಿ ಕಾಂಗ್ರೆಸ್‌ನ ನಾಯಕರಾದ ರಾಷ್ಟ್ರಪಿತ ಮಹಾತ್ಮಾಗಾಂಧೀಜಿ, ಜವಾಹರಲಾಲ್‌ ನೆಹರೂ, ಮೌಲಾನಾ ಅಬುಲ್ ಕಲಾಂ ಆಜಾದ್, ಸರ್ದಾರ್ ವಲ್ಲಭ ಭಾಯಿ ಪಟೇಲ್, ಡಾII ಬಾಬುರಾಜೇಂದ್ರ ಪ್ರಸಾದ್ ಮುಂತಾದವರನ್ನು ಬ್ರಿಟಿಷ್ ಸರಕಾರ ಬಂಧಿಸಿ ಜೈಲಿನಲ್ಲಿಟ್ಟಿತು. ಬ್ರಿಟೀಷ್ ಸರ್ಕಾರದ ಈ ರೀತಿಯ ನಡವಳಿಕೆಯಿಂದ ಮತ್ತು ಮಹಾನ್ ನಾಯಕರ ಬಂಧನದಿಂದಾಗಿ ಜನರು ಆಘಾತಗೊಂಡರು. ಎಲ್ಲ ನಾಯಕರನ್ನು ಮುನ್ಸೂಚನೆ ಇಲ್ಲದೆ ಅನಿರೀಕ್ಷಿತವಾಗಿ ಬಂಧಿಸಿ ಸೆರೆಮನೆಯಲ್ಲಿರಿಸಿದ್ದರಿಂದ ಚಳುವಳಿಗಾರರು ಅತಂತ್ರರಾದರು. ಮುಂದೇನು ಮಾಡಬೇಕೆಂದು ದಾರಿಕಾಣದಾದರು. ಚಳುವಳಿಯನ್ನು ಯಾವ ರೀತಿ ಮುನ್ನಡೆಸಬೇಕೆಂದು ಅವರಿಗೆ ತಿಳಿಯಲಿಲ್ಲ. ಇದರ ಫಲವಾಗಿ ತಮಗೆ ತಿಳಿದಂತೆ ಚಳುವಳಿಯನ್ನು ನಡೆಸಿದರು. ಎಲ್ಲೆಂದರಲ್ಲಿ ಉಗ್ರ ಹೋರಾಟಗಳು ಪ್ರಾರಂಭವಾದವು. ದೇಶದಾದ್ಯಂತ ಹರತಾಳ ನಡೆಯಿತು. ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳನ್ನು ಬಿಟ್ಟು ಹೊರಬಂದರು ಮತ್ತು ಭಾರತೀಯ ಕಾರ್ಮಿಕರು ಕಾರ್ಖಾನೆಗಳನ್ನು ಬಿಟ್ಟು ಹೊರಬಂದರು. ಪರಿಣಾಮವಾಗಿ ಬ್ರಿಟೀಷರ ವಿರುದ್ಧ ಮುಷ್ಕರಗಳು ನಡೆದವು. ಸಾರ್ವಜನಿಕ ಪ್ರತಿಭಟನೆ ಪ್ರಾರಂಭವಾಯಿತು. ಅನೇಕ ಕಡೆ ಚಳುವಳಿ ಹಿಂಸಾತ್ಮಕ ಸ್ವರೂಪವನ್ನು ಪಡೆಯಿತು. ಜನರು ಪೊಲೀಸ್‌ ಠಾಣೆಗಳಿಗೆ ದಾಳಿ ನಡೆಸಿದರು. ಪೋಸ್ಟ್ ಆಫೀಸು, ರೈಲ್ವೇ ಸ್ಟೇಷನ್ನುಗಳಿಗೆ ಮುತ್ತಿಗೆ ಹಾಕಿದರು. ಸರಕಾರೀ ಕಟ್ಟಡಗಳಿಗೆ ಬೆಂಕಿ ಹಚ್ಚಿದರು. ಟೆಲಿಗ್ರಾಫ್ ಮತ್ತು ಟೆಲಿಪೋನ್ ತಂತಿಗಳನ್ನು ಕತ್ತರಿಸಿದರು. ರೈಲು ಬೋಗಿಗಳನ್ನು ಸುಟ್ಟುಹಾಕಿದರು.

ದೇಶದ ಹಲವು ಕಡೆಗಳಲ್ಲಿ ಜನರು ಗ್ರಾಮಗಳ ಮತ್ತು ಪಟ್ಟಣಗಳ ಮೇಲೆ ನಿಯಂತ್ರಣ ಸಾಧಿಸಿದರು. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಈಸೂರು ಎಂಬ ಗ್ರಾಮದಲ್ಲಿ ಹಳ್ಳಿಯ ಯುವಕರೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಸ್ವತಂತ್ರ ಸರಕಾರವನ್ನು ಸ್ಥಾಪಿಸಿಕೊಂಡರು. ಇದು ಭಾರತದಲ್ಲಿ ಮೊಟ್ಟಮೊದಲು ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಗ್ರಾಮವೇ ಕರ್ನಾಟಕದ ಈಸೂರು ಎಂಬುದು ನಮಗೆ ಹೆಮ್ಮೆಯ ವಿಚಾರವೆನಿಸಿದೆ. ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ , ಪಶ್ಚಿಮ ಬಂಗಾಲ, ಮಹಾರಾಷ್ಟ್ರ ಮತ್ತು ಆಂಧ್ರದ ಕೆಲವು ಪ್ರದೇಶಗಳಲ್ಲಿ ಬ್ರಿಟಿಷ್ ಅಧಿಕಾರ ಕೊನೆಯಾಯಿತು. ಸಮಾನಾಂತರ ಸರ್ಕಾರಗಳ ರಚನೆಯಾಯಿತು. ಬ್ರಿಟಿಷ್ ಸರ್ಕಾರವು ಈ ಚಳುವಳಿಯನ್ನು ಹತ್ತಿಕ್ಕಲು ದಮನಕಾರೀ ಕ್ರಮಗಳನ್ನು ಕೈಗೊಂಡಿತು. 60,000 ಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಿತು. ಇದರಲ್ಲಿ 18,000 ಮಂದಿಯನ್ನು ವಿಚಾರಣೆಯಿಲ್ಲದೆ ಜೈಲಿನಲ್ಲಿಟ್ಟಿತು. 940 ಮಂದಿ ಪೊಲೀಸರ ಗುಂಡಿಗೆ ಆಹುತಿಯಾದರು. 1,630 ಜನರು ತೀವ್ರಗಾಯಗೊಂಡರು ಎಂಬೆಲ್ಲಾ ಅಂಶಗಳೂ ಭಾರತದ ಇತಿಹಾಸದ ಅಧ್ಯಯನದಿಂದ ತಿಳಿದು ಬರುತ್ತದೆ.

ಇದೇ ಸಮಯದಲ್ಲಿ ಬ್ರಿಟಿಷ್ ಸರಕಾರಕ್ಕೆ ಇನ್ನೊಂದು ಗಂಭೀರವಾದ ಆಪತ್ತು ಎದುರಾಯಿತು. 1941 ರಲ್ಲಿ ಭಾರತದಿಂದ ತಪ್ಪಿಸಿಕೊಂಡು ಜರ್ಮನಿ ಸೇರಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರು ಅಲ್ಲಿಂದ ಜಪಾನಿಗೆ ತೆರಳಿ “ಆಜಾದ್ ಹಿಂದ್ ಫೌಜನ್ನು ಕಟ್ಟಿದ್ದರು. ಭಾರತದ ಗಡಿಯವರೆಗೂ ಆಜಾದ್ ಹಿಂದ್ ಫೌಜಿನ ಸೈನಿಕರು ಮುನ್ನುಗ್ಗಿದರು. ಆದರೆ ದುರದೃಷ್ಟವಶಾತ್ ಸುಭಾಷ್ ಚಂದ್ರಬೋಸರು ವಿಮಾನ ದುರಂತದಲ್ಲಿ ಮಡಿದರು.

1944 ರಲ್ಲಿ ಸರಕಾರ ಗಾಂಧೀಜಿಯವರನ್ನು ಜೈಲಿನಿಂದ ಬಿಡುಗಡೆ ಮಾಡಿತು. ವೈಸರಾಯ್ ಲಾರ್ಡ್ ವೇವೆಲ್ 1945 ರಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ ನ ನಾಯಕರೊಡನೆ ಮಾತುಕತೆ ನಡೆಸಿದರು. ಲಾರ್ಡ್ ಪೆಥಿಕ್ ಲಾರೆನ್ಸ್‌ , ಸರ್ ಸ್ಟಾಫರ್ಡ್ ಕ್ರಿಪ್ಸ್ ಮತ್ತು ಎ.ವಿ. ಅಲೆಕ್ಸಾಂಡರ್ ಈ ಮೂವರನ್ನು ಒಳಗೊಂಡ “ಕ್ಯಾಬಿನೆಟ್ ಮಿಶನ್” 1945ರಲ್ಲಿ ಭಾರತಕ್ಕೆ ಭೇಟಿ ನೀಡಿತು. ಪ್ರತ್ಯೇಕ ಪಾಕಿಸ್ತಾನ ರಚನೆಯ ಪ್ರಸ್ತಾಪವನ್ನು ಈ ಕ್ಯಾಬಿನೆಟ್ ಆಯೋಗ ತಳ್ಳಿ ಹಾಕಿತು. ಮುಸ್ಲಿಂ ಲೀಗಿನ ಸ್ಥಾಪಕ ಮಹಮದಾಲಿ ಜಿನ್ನಾರಿಗೆ ಕ್ಯಾಬಿನೆಟ್ ಆಯೋಗದ ಯೋಜನೆ ಒಪ್ಪಿಗೆಯಾಗಲಿಲ್ಲ 1946 ಆಗಸ್ಟ್ 16 ನ್ನು ನೇರ ಕಾರ್ಯಾಚರಣೆಯ [ DIRECT ACTION DAY ] ದಿನವನ್ನಾಗಿ ಮುಸ್ಲಿಂ ಲೀಗ್ ಆಚರಿಸಿತು. ಅದು ಬಂಗಾಲದಲ್ಲಿ ಪ್ರಚೋದಿಸಿದ ಕೋಮು ಗಲಭೆ ಕ್ರಮೇಣ ಭಾರತದಾದ್ಯಂತ ಹರಡತೊಡಗಿತು.

1947 ಫೆಬ್ರವರಿಯಲ್ಲಿ ಬ್ರಿಟನ್ನಿನ ಪ್ರಧಾನಿ ಕ್ಲಮೆಂಟ್ ಆಟ್ಸ್, 1947 ಜೂನ್ 30ರೊಳಗೆ ಭಾರತ ಸರಕಾರವನ್ನು ಭಾರತೀಯರಿಗೆ ಒಪ್ಪಿಸುವ ತೀರ್ಮಾನವನ್ನು ಸಾಮಾನ್ಯ ಸಭೆಯಲ್ಲಿ (House of Commons) ಪ್ರಕಟಿಸಿದರು. ಮಾರ್ಚ್ 1947ರಲ್ಲಿ ಲಾರ್ಡ್ ವೇವೆಲ್ಲರ ನಂತರ ವೈಸರಾಯ್ ಆಗಿ ಲಾರ್ಡ್ ಮೌಂಟ್ ಬ್ಯಾಟನ್ ಭಾರತಕ್ಕೆ ಬಂದರು. ಭಾರತವನ್ನು ವಿಭಾಗಿಸುವುದೇ ಕಾಂಗ್ರೆಸ್‌ ಮತ್ತು ಮುಸ್ಲಿಂ ಲೀಗ್‌ ಗಳ ವೈಷಮ್ಯಕ್ಕೆ ಏಕೈಕ ಪರಿಹಾರ ಎಂದು ಅವರು ನಿರ್ಧರಿಸಿದರು. 1947ರ ಭಾರತ ಸ್ವಾತಂತ್ರ್ಯ ಕಾಯಿದೆಯಂತೆ, 1947 ಆಗಸ್ಟ್ 15 ರಂದು ಭಾರತ ಮತ್ತು ಪಾಕಿಸ್ತಾನಗಳು ಸ್ವತಂತ್ರ ದೇಶಗಳಾದವು.

ಇಂದು ಭಾರತ ಸ್ವತಂತ್ರ ರಾಷ್ಟವಾಗಿ ಅಮೃತ ಮಹೋತ್ಸವವನ್ನು ಆಚರಿಸಿಕೊಂಡು 77ನೇ ವರ್ಷಕ್ಕೆ ಕಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಐತಿಹಾಸಿಕ ಘಟನೆಗಳನ್ನು ಮೆಲುಕು ಹಾಕುತ್ತಾ ಮತ್ತೆಂದೂ ನಮ್ಮ ದೇಶ ಅನ್ಯರ ಪಾಲಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಏಕೆಂದರೆ ಕಳೆದ ಒಂದು ಸಾವಿರ ವರ್ಷಗಳಲ್ಲಿ ಭಾರತದ ಮೇಲೆ ಅನೇಕ ದಾಳಿಗಳು ಉಂಟಾಗಿ ಅನೇಕ ಬಾರಿ ನಮ್ಮ ನೆಲದಲ್ಲಿ ನಾವೇ ಸ್ವಾತಂತ್ರ್ಯವನ್ನು ಕಳೆದುಕೊಂಡು ಮತ್ತೊಬ್ಬರ ಅಧೀನದಲ್ಲಿದ್ದುದು ಇತಿಹಾಸದ ಅಧ್ಯಯನದಿಂದ ತಿಳಿದು ಬರುತ್ತದೆ. ಮತ್ತೊಮ್ಮೆ ನಾವು ಪರಕೀಯರ ಅಧೀನಕ್ಕೆ ಒಳಗಾಗಬಾರದು ಎನ್ನುವುದಾದರೆ, ನಾವು ಭಾರತೀಯರು : ನಾವೆಲ್ಲರೂ ಒಂದೇ ಎಂಬ ಮನೋಭಾವ ಎಲ್ಲರಲ್ಲಿಯೂ ಮೂಡಿಬರಲಿ.

———————————————
ಕೆ. ಎನ್. ಚಿದಾನಂದ 

Leave a Reply

Back To Top